-->
ಸಂಚಾರಿಯ ಡೈರಿ : ಸಂಚಿಕೆ - 30

ಸಂಚಾರಿಯ ಡೈರಿ : ಸಂಚಿಕೆ - 30

ಸಂಚಾರಿಯ ಡೈರಿ : ಸಂಚಿಕೆ - 30

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ

              ಈಶಾನ್ಯ ರಾಜ್ಯಗಳಲ್ಲಿ ಅಸ್ಸಾಂ ಹೊರತುಪಡಿಸಿದರೆ ಅತ್ಯಂತ ಹೆಚ್ಚು ನಗರೀಕರಣಗೊಂಡ ರಾಜ್ಯ ತ್ರಿಪುರಾ.  ಮಾತಾ ತ್ರಿಪುರಸುಂದರಿ ಹಾಗೂ ಕೊಕ್ಬೊರಾಕ್ ಬುಡಕಟ್ಟು ಜನಾಂಗದಿಂದಾಗಿ ತಿಪ್ರಸಾ ಎಂದು ಕರೆಯಲ್ಪಡುವ ಈ ರಾಜ್ಯ ಭಾರತದ ಮೂರನೇ ಸಣ್ಣ ರಾಜ್ಯ (ಗೋವಾ, ಸಿಕ್ಕಿಂ ನ ನಂತರದ ಸ್ಥಾನ)ಕ್ಕೆ ಭೇಟಿ ನೀಡುವ ಮನಸಿತ್ತಾದರೂ ಅವಕಾಶ ಕೂಡಿಬಂದಿರಲಿಲ್ಲ. ಹೀಗೇ ಅಸ್ಸಾಂನ ಬೊಂಙಾಯಿಗಾಂವ್‌ಗೆ ತೆರಳಿದ್ದಾಗ, ತ್ರಿಪುರಾ ತೆರಳುವ ಯೋಚನೆ ಮಾಡಿದ್ದೆ. ಬಹುತೇಕ ತ್ರಿಪುರಾ ತೆರಳುವ ರೈಲುಗಳು ನಿಲುಗಡೆ ಆಗಿದ್ದ ಸಮಯ ಕಾರಣ ಪ್ರವಾಹದಿಂದ ತತ್ತರಿಸಿದ್ದ ಅಸ್ಸಾಂನಲ್ಲಿ ಒಂದಿಡೀ ರೈಲ್ವೆ ನಿಲ್ದಾಣವೇ ಕೊಚ್ಚಿ ಹೋಗಿತ್ತು. ನಾ ತೆರಳೋ ಸಮಯಕ್ಕೆ ಅದನ್ನೆಲ್ಲಾ ಸರಿಪಡಿಸಿದ್ದರು. ತ್ರಿಪುರಾದ ಧರ್ಮನಗರ್ ಎಂಬ ರೈಲ್ವೇ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಕೈಲಾಶ್‌ಶಹರ್ ತೆರಳಬೇಕಾಗಿತ್ತು. ಬೆಟ್ಟ ಗುಡ್ಡಗಳಿಂದ ತುಂಬಿದ ತ್ರಿಪುರಾದ ರಸ್ತೆಗಳೂ ಅದೇ ಥರಾ ಇದ್ದವು. ಕೆಸರು ತುಂಬಿದ ಮಣ್ಣಿನ ರಸ್ತೆಗಳಲ್ಲಿ ಬಾಗುತ್ತಾ, ಬಳುಕುತ್ತಾ, ಉಳುಕಿನಲ್ಲಿ ಹಾಗೋ ಹೀಗೋ ಕೈಲಾಶ್‌ಶಹರ್ ತಲುಪಿದೆ. ಅಲ್ಲಿಂದ ರಂಗಾವಟಿ ಎಂಬ ಸಣ್ಣ ಹಳ್ಳಿಗೆ ತೆರಳಿ ಕುರ್ಚಿಯ ಮೇಲೆ ಕುಳಿತಾಗ ರಾತ್ರಿ ಗಂಟೆ ಭರ್ತಿ ಒಂಭತ್ತಾಗಿತ್ತು.
      ತ್ರಿಪುರಾದ ಹಳ್ಳಿಗಳೂ ತುಂಬಾ ಸರಳವಾದ ಮನೆಗಳಿಂದ ಕೂಡಿರುತ್ತವೆ. ಮಣ್ಣಿನ ಮನೆಗಳು ಅಥವಾ ಚಿಕ್ಕ ಇಟ್ಟಿಗೆಯ ಮನೆಗಳು, ಛಾವಣಿಯ ಮೇಲೆ ತಗಡು ಶೀಟ್‌ಗಳು. ಇನ್ನೊಂದು ವಿಚಾರ ಹೇಳಲು ಮರೆತಿದ್ದೆ ತ್ರಿಪುರಾ ಮೂಲತಃ ಕೊಕ್ಬೊರಾಕ್ ಎನ್ನುವ ಬುಡಕಟ್ಟು ಜನಾಂಗದವರ ರಾಜ್ಯ, ಅವರು ಅಲ್ಲಿಯ ಬುಡಕಟ್ಟು ರಾಜವಂಶಸ್ಥರು. 
       ನೂರಾರು ವರ್ಷಗಳ ಹಿಂದೆ ಬಾಂಗ್ಲಾದೇಶದ ಗಡಿಯಿಂದ ಸಾವಿರಾರು ಜನರು ವಲಸೆ ಬಂದಾಗ ರಾಜ ಆಶ್ರಯ ನೀಡಿದ್ದ. ಅದ್ಯಾವ ಮಾಯೆಯೋ ಏನೋ ಇಂದು ಇಡೀ ತ್ರಿಪುರಾ ರಾಜ್ಯದಲ್ಲಿ ಮೂಲ ಕೊಕ್ಬೊರಾಕ್ ಜನಾಂಗಕ್ಕಿಂತಲೂ ಅಧಿಕವಾಗಿ ಬಂಗಾಳಿಗಳೇ ಇದ್ದಾರೆ. ಹೀಗಾಗಿ ಇಲ್ಲಿಯ ಮನೆಗಳ ಮುಂದೆ ಠಾಕೂರ್‌ಬರಿ ಇರುತ್ತವೆ. ಠಾಕೂರ್ ಬರಿ ಎಂದರೆ ದೇವರ ಮನೆ, ನಮ್ಮಲ್ಲೆಲ್ಲಾ ಮನೆಯೊಳಗಿದ್ದರೆ ಇವರು ಮನೆಯ ಹೊರಗೆ, ಚಿಕ್ಕ ಗುಡಿಯ ತರಹ ಮಾಡಿ, ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಉತ್ತರ ತ್ರಿಪುರಾದಲ್ಲಿ ಕೆರೆಗಳನ್ನ ಕಟ್ಟಿಸಿ, ಅಲ್ಲಿ ಮೀನುಸಾಕಣೆ ಮಾಡಿ ಧನಿಕರಾದವರು ಬಹಳಷ್ಟು ಜನರಿದ್ದಾರೆ. 
     ಕಾಡು ಕಡಿದು ರಬ್ಬರ್ ಬೆಳೆದವರೂ ಸಾಕಷ್ಟು ಜನರಿದ್ದಾರೆ. ಭತ್ತ ಮುಖ್ಯ ಬೆಳೆ. ಸುತ್ತಲೂ ಸುತ್ತುವರಿದ ಬಾಂಗ್ಲಾದೇಶದಿಂದಾಗಿ ಬಹುತೇಕರಿಗೆ ಸಮಸ್ಯೆಗಳ‌ ಸುರಿಮಳೆಯೇ! ಅವರು ಹೇಳೋ‌ ಪ್ರಕಾರ 'ನಮ್ಮ ರಾಜ್ಯದ ಸುತ್ತಾ ಯಾವುದಾದರೂ ತುಂಬಾ ಅಭಿವೃದ್ಧಿ ಹೊಂದಿದ ದೇಶ ಇರುತ್ತಿದ್ದರೆ ನಮ್ಮ ಪ್ರದೇಶವೂ ವಿಕಾಸ ಹೊಂದುತ್ತಿತ್ತೇನೋ ಆದರೆ ಈ ಬಡದೇಶದಿಂದಾಗಿ ನಮ್ಮ ಸ್ಥಿತಿ ಇತ್ತ ದರಿ, ಅತ್ತ ಪುಲಿ ಎಂಬಂತಾಗಿದೆ'.
(ಮುಂದುವರಿಯುವುದು.....)
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************

Ads on article

Advertise in articles 1

advertising articles 2

Advertise under the article