-->
ಓ ಮುದ್ದು ಮನಸೇ ...…...! ಸಂಚಿಕೆ - 27

ಓ ಮುದ್ದು ಮನಸೇ ...…...! ಸಂಚಿಕೆ - 27

ಓ ಮುದ್ದು ಮನಸೇ ...…...! ಸಂಚಿಕೆ - 27
                              
               ಒಂದೂರಲ್ಲಿ ಮೂವರು ಶ್ರೀಮಂತ ಕುಟುಂಬದ ಅಣ್ಣ ತಮ್ಮಂದಿರಿದ್ದರು. ಅವರಪ್ಪ ಸಾಕಷ್ಟು ಆಸ್ತಿ-ಅಂತಸ್ತು ಸಂಪಾದಿಸಿದ್ದ. ದುಡ್ಡು, ಬಂಗಾರ, ಅರಮನೆಯಂತಹ ಮನೆ ಎಲ್ಲಾ ಸುಖ ಸೌಕರ್ಯಗಳೂ ಅವರದ್ದು. ಕೂತಲ್ಲಿ ನಿಂತಲ್ಲಿಗೆ ಸಹಾಯ ಮಾಡೋದಕ್ಕೆ ಆಳುಗಳು, ಅಡುಗೆ ಮಾಡೋದರಿಂದ ಹಿಡಿದು ಇವರ ಬಟ್ಟೆ ಬರೆ ತೊಳೆಯೋದಕ್ಕೂ ಜನ. ಇಂತಹ ಸುಖವಿರುವಾಗ ಓದಿ ನಾನೇನು ಮಾಡೋಕಿದೆ ಎಂದು ಯೋಚಿಸಿದ ಹಿರಿಯ ಮಗ ಶಾಲೆ ಬಿಟ್ಟು ಆರಾಮವಾಗಿ ಜೀವನ ಕಳೆಯಲಾರಂಭಿಸಿದ. ಲೇಟಾಗಿ ಏಳೋದು, ಮಾಡಿಟ್ಟ ತಿಂಡಿ ತಿನ್ನೋದು, ಬೈಕು ಕಾರುಗಳಲ್ಲಿ ಸುತ್ತೋದು, ಗೆಳೆಯರೊಂದಿಗೆ ಮಜಾ ಮಸ್ತಿ ಇವನ ಶೋಕಿ. 
      ಎರಡನೆಯವನು ಹಾಗಲ್ಲ ಓದಿನ ಜೊತೆ-ಜೊತೆಗೆ ಬೇರೆಲ್ಲಾ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲನಾಗಿ ಬಾಗವಹಿಸೋದು ಇವನಿಗೆ ಇಷ್ಟ. ಆಕಳು ನೋಡಿಕೊಳ್ಳೋದು, ತೋಟ, ಗದ್ದೆಗೆ ಹೋಗಿ ಕೆಲಸಗಾರರೊಟ್ಟಿಗೆ ಬೆರೆಯೋದು, ಅಪ್ಪನೊಟ್ಟಿಗೆ ಅವರ ಅಂಗಡಿಗೆ ಹೋಗಿ ಅಲ್ಲಿನ ಗಿರಾಕಿಗಳೊಟ್ಟಿಗೆ ಮಾತಾಡೋದು ಇವನ ದಿನಚರಿ. 
      ಇನ್ನು ಮೂರನೆಯವ ಇವರಿಬ್ಬರಿಗಿಂತ ಭಿನ್ನ. ಓದಿನಲ್ಲಂತೂ ತುಂಬಾ ಚುರುಕು. ಯಾವಾಗ ನೋಡಿದರೂ ಪುಸ್ತಕದ ಹುಳು ಇವನು. ಅದೆಷ್ಟರ ಮಟ್ಟಿಗೆ ಅಂದರೆ ಪುಸ್ತಕದ ಮುಂದೆ ಕೂತರೆ ಊಟವೂ ಮರೆಯುವಷ್ಟು ಓದಿನಲ್ಲಿ ಆಸಕ್ತಿ. ಶಾಲೆಗೇ ರ್ಯಾಂಕ್ ಈತ. ಓದೋದಕ್ಕೆ ಡಿಸ್ಟರ್ಬ್ ಆಗುತ್ತೆ ಅಂತ ಯಾವ ಕಾರ್ಯಕ್ರಮಗಳಲ್ಲೂ ಭಾಗವಹಿಸೋದಿಲ್ಲ. ಮನೆ ಬಿಟ್ಟು ಹೊರಗೇ ಬರೋದಿಲ್ಲ. ಊರಿನಲ್ಲಿ ಇವನನ್ನು ನೋಡದ ಮಂದಿಯೇ ಹೆಚ್ಚು. ಇವನಿಗೆ ಅಪ್ಪನ ಅಂಗಡಿ, ತಮ್ಮ ಜಮೀನು ಎಲ್ಲಿದೆ ಅಂತ ಇನ್ನೂ ಗೊತ್ತಿಲ್ಲ. 
      ಮೂರೂ ಮಕ್ಕಳು ದೊಡ್ಡವರಾದ ಮೇಲೆ ಅಪ್ಪ ಅವರಿಗೆ ಮದುವೆ ಮಾಡಿ ಎಲ್ಲರಿಗೂ ಒಂದೊಂದು ಮನೆಮಾಡಿಕೊಟ್ಟ. ಮೊದಲನೆಯ ಮಗ ಅಪ್ಪನ ಆಸ್ತಿಯಿಂದ ಬಂದ ಹಣದಲ್ಲಿ ಮಜಾ ಮಾಡುತಿದ್ದ. ಎರಡನೆಯವನು ಕಡಿಮೆ ಅಂಕ ಪಡೆದರೂ ಡಿಗ್ರೀ ಮುಗಿಸಿ ಅಪ್ಪನ ಆಂಗಡಿ ಮತ್ತು ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ. ಇನ್ನು ಮೂರನೆಯವನು ಉತ್ತಮ ರ್ಯಾಂಕ್ ನೊಂದಿಗೆ ಉನ್ನತ ಪದವಿಪಡೆದು ದೊಡ್ದದೊಂದು ಕಂಪನಿಯಲ್ಲಿ ಕೆಲಸಗಿಟ್ಟಿಸಿಕೊಂಡಿದ್ದ.          ದಿನಗಳೆದಂತೆ ಅಪ್ಪನಿಗೆ ವಯಸ್ಸಾಯಿತು. ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಎರಡನೇ ಮಗನ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಇರಲಾರಂಭಿಸಿದ್ದರು. ಎಲ್ಲರಿಗೂ ಮಕ್ಕಳಾದವು ಆಗ ಕುಟುಂಬ ಪೋಷಣೆಗೆ ಹಣದ ಕೊರತೆ ಎದುರಾಯಿತೆಂದು ಮೊದಲನೆ ಮಗ ಅಪ್ಪನ ಬಳಿ ಬಂದು ಆಸ್ತಿಯಲ್ಲಿ ಪಾಲು ಕೇಳಿದ. ಕೋಪಗೊಂಡ ಅಪ್ಪ ಇದು ನಿನ್ನ ಆಸ್ತಿಯಲ್ಲ, ನಾನು ಕಷ್ಟಪಟ್ಟು ಸಂಪಾದಿಸಿದ ಆಸ್ತಿ. ನಾನು ಬದುಕಿರೋ ವರೆಗೂ ಈ ಆಸ್ತಿಯನ್ನು ಯಾರಿಗೂ ಕೊಡೋದಿಲ್ಲ ಅಂದುಬಿಟ್ಟ. ಕೋಪಗೊಂಡ ಮಗ ಆಸ್ತಿಗಾಗಿ ಕೋರ್ಟ್ ನಲ್ಲಿ ದಾವೆ ಹೂಡಿದ. ವಿಚಾರಣೆ ಕೈಗೊಂಡ ನ್ಯಾಯಾಲಯ ಇದು ಮುಗಿಯೋ ವರೆಗೂ ಯಾವ ಆಸ್ತಿಯನ್ನೂ ಯಾರೂ ಬಳಸಬಾರದು ಅಂತ ತೀರ್ಪು ನೀಡಿತು. ಅದೇ ಸಮಯಕ್ಕೆ ಸರಿಯಾಗಿ ಕೋವಿಡ್ ಮಹಾಮಾರಿ ವಕ್ಕರಿಸಿಕೊಂಡಿತು. ಜನ ಮನೆಯಿಂದ ಹೊರಬರೋ ಹಾಗಿಲ್ಲ. ಅಂಗಡಿ ಮುಂಗಟ್ಟುಗಳು ಕ್ಲೋಸ್ ಆದವು. ಮನೆಯಲ್ಲಿ ಕೆಲಸಕ್ಕಿದ್ದ ಆಳುಗಳೂ ಕೆಲಸಬಿಟ್ಟು ತಮ್ಮ ತಮ್ಮ ಮನೆ ಸೇರಿಕೊಂಡರು.
      ಅತೀವ ಆರ್ಥಿಕ ಸಂಕಷ್ಟದಿಂದ ಮೂರನೆಯ ಮಗ ಕೆಲಸ ಮಾಡುತ್ತಿದ್ದ ಕಂಪನಿಯೂ ಮುಚ್ಚಲ್ಪಟ್ಟಿತು. ಕೆಲಸ ಕಳೆದುಕೊಂಡ ಮಗ ಮನೆಗೆ ಹಿಂತಿರುಗಿದ. ಇದ್ದ ಅಲ್ಪ ಸ್ವಲ್ಪ ಹಣದಲ್ಲಿ ಒಂದಿಷ್ಟು ದಿನ ಜೀವನ ಸಾಗಿಸಿದ. ಬದುಕು ಕಷ್ಟವಾಯಿತು. ಅವನು ಪಡೆದುಕೊಂಡಿದ್ದ ಡಿಗ್ರಿ ಈ ಹಳ್ಳಿಯಲ್ಲಿ ಉಪಯೋಗಕ್ಕೆ ಬರಲಿಲ್ಲ ಬೇರೆ ಕೆಲಸ ಗೊತ್ತಿಲ್ಲ. 
       ಇತ್ತ ಮೊದಲನೇ ಮಗನ ಗತಿ ಕೊನೆಯವನಿಗಿಂತ ಭಿನ್ನ. ಉಂಡಾಡಿ ಗುಂಡನಂತಿದ್ದವನಿಗೆ ಕೋವಿಡ್ ತುಸು ಹೆಚ್ಚಾಗಿಯೇ ಮಾರಕವಾಯಿತು. ದುಡಿಮೆ ಗೊತ್ತಿಲ್ಲ, ಯಾವ ಕೆಲಸವನ್ನೂ ಕಲಿತಿಲ್ಲ. ಕೆಲಸಮಾಡುವ ಆಳುಗಳೂ ಇಲ್ಲ. ಹೆಂಡತಿ ಮಕ್ಕಳ ಜೊತೆ ಜೀವನ ನಡೆಸೋದಕ್ಕೆ ಸಹಕಾರಿಯಾಗಿದ್ದ ಅಪ್ಪನ ಆಸ್ತಿಯ ಆಸೆಗೆ ಬಿದ್ದು ಅದನ್ನೂ ಕೋರ್ಟ್ ಮೆಟ್ಟಿಲು ಹತ್ತಿಸಿ ಪ್ರಯೋಜನಕ್ಕೆ ಇಲ್ಲದಂತೆ ಮಾಡಿದ್ದಾಗಿದೆ.
        ಆದರೆ ಎರಡನೆಯ ಮಗ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕೊಟ್ಟಿಗೆಯಲ್ಲಿದ್ದ ನಾಲ್ಕು ಆಕಳುಗಳ ಸದ್ಬಳಕೆಗೆ ಮುಂದಾದ. ಅವನು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರು ಕಲಿಸಿದ್ದ ಪಾಠಗಳು ಮತ್ತು ಪ್ರತಿನಿತ್ಯ ಅಂಗಡಿಯಲ್ಲಿ ವ್ಯವಹಾರದ ಮೂಲಕ, ಹೊಲದಲ್ಲಿನ ಕೆಲಸದ ಮೂಲಕ ಸಂಪಾದಿಸಿದ್ದ ಜ್ಞಾನ ಮತ್ತು ಅನುಭವಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಿದ. ಆಕಳುಗಳು ಕೊಡುತ್ತಿದ್ದ ಸಗಣಿಯನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಲು ಶುರು ಮಾಡಿದ. ಪ್ರತಿದಿನ ಕೊಟ್ಟಿಗೆಯಿಂದ ಸಗಣಿಯನ್ನು ಆರಿಸಿ ಅದನ್ನು ಒಂದು ಸಿಮೆಂಟಿನಿಂದ ತಯಾರಿಸಿದ್ದ ತೊಟ್ಟಿಯಲ್ಲಿ ಸಂಗ್ರಹಿಸಿದ. ಮನೆಯ ಹೊರಾಂಗಣದಲ್ಲಿ ಹೇರಳವಾಗಿ ಬೆಳೆದು ನಿಂತಿದ್ದ ವಿವಿಧ ಮೃದು ಜಾತಿಯ ಮರದ ಸೊಪ್ಪನ್ನು ಕಡಿದು ತಂದ. ಮನೆಯ ಹಿತ್ತಲಲ್ಲಿ ಹದಿನೈದು ಅಡಿ ಅಗಲ ಮತ್ತು ಮೂರಡಿ ಆಳದ ಗುಂಡಿ ತೆಗೆದು ಅದರಲ್ಲಿ ಸೊಪ್ಪನ್ನು ಸರಿಯಾಗಿ ಹರಡಿ ಅದರ ಮೇಲೆ ಆರಿಸಿಟ್ಟಿದ್ದ ಸಗಣಿಯನ್ನು ನೀರಿನಲ್ಲಿ ಕದಡಿ ಸರಿಯಾಗಿ ಹರಡಿದ. ಇಂತಹದ್ದೊಂದು ಪ್ರಯತ್ನ ನಿರಂತರವಾಗಿ ನಡೆಯಿತು. 
         ನಾಲ್ಕರಲ್ಲಿ ಎರಡು ಆಕಳುಗಳು ಹಾಲು ಕೊಡುತ್ತಿದ್ದವು. ಹಾಲನ್ನು ಸಂಪೂರ್ಣವಾಗಿ ಮನೆ ಬಳಕೆಗೆ ಉಪಯೋಗಿಸುವ ಬದಲು ಅದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ದಿನಬಳಕೆಯ ಸಾಮಗ್ರಿ ಖರೀದಿಸಲು ಯೋಚಿಸಿದ. ಶಿಕ್ಷಕರು ಕಲಿಸಿದ್ದ ಹಾಲಿನ ಬಹುಪಯೋಗಗಳನ್ನು ನೆನಪಿಸಿಕೊಂಡು ಅದರ ಕೆಲವು ಉತ್ಪನ್ನಗಳನ್ನು ತಯಾರಿಸಿ ಮಾರಿದರೆ ಹೇಗೆ...? ಎಂದು ಯೋಚಿಸಿದ. ಸ್ವಲ್ಪ ಹಾಲನ್ನು ಮಾರಾಟ ಮಾಡಿ ಇನ್ನು ಸ್ವಲ್ಪ ಹಾಲನ್ನು ದಿನಬಳಕೆಗೆ ಮತ್ತು ಉಳಿದ ಹಾಲನ್ನು ಮೊಸರು ಮಾಡಲು ಶುರುಮಾಡಿದ. ಮೊಸರಿನಿಂದ ಬೆಣ್ಣೆ ತೆಗೆದ, ಬೆಣ್ಣೆಯಿಂದ ತುಪ್ಪ, ತುಪ್ಪದಿಂದ ಸಿಹಿತಿಂಡಿ ತಯಾರಿಸಿದ. ಅಷ್ಟರಲ್ಲಾಗಲೇ ದಿನಸಿ ಅಂಗಡಿಯನ್ನು ಮುಂಜಾನೆ ಆರರಿಂದ ಹನ್ನೊಂದರ ವರೆಗೆ ತೆರೆಯಲು ಸರಕಾರ ಅನುಮತಿ ನೀಡಿತು. ಆಗ ತಾನು ತಯಾರಿಸಿದ್ದ ಮೊಸರು, ತುಪ್ಪ, ಮತ್ತು ಸಿಹಿ ತಿನಿಸನ್ನು ತನ್ನ ಅಂಗಡಿಯಲ್ಲಿಟ್ಟು ಮಾರಾಟ ಮಾಡಿದ. ಒಳ್ಳೆಯ ವ್ಯಾಪಾರವಾಗಿ ಲಾಭವೂ ಬಂತು. ಇತ್ತ ಸಗಣಿಯಿಂದ ಉತ್ತಮ ಸಾವಯವ ಗೊಬ್ಬರವೂ ತಯಾರಾಗಿತ್ತು. ಅರ್ಧದಷ್ಟು ಗೊಬ್ಬರದಲ್ಲಿದ್ದ ಸೊಪ್ಪಿನ ದಂಟುಗಳನ್ನು ತೆಗೆದು ಉಳಿದ ಹುಡಿಗೊಬ್ಬರವನ್ನು ಸರಿಯಾಗಿ ತೂಗಿ ಸಣ್ಣ ಪೊಟ್ಟಣಗಳಲ್ಲಿ ಕಟ್ಟಿ ತನ್ನ ಅಂಗಡಿಯಲ್ಲಿಟ್ಟು ಕೃಷಿಕರಿಗೆ ಮಾರಾಟ ಮಾಡಿದ. ಗೊಬ್ಬರವೂ ಕೂಡ ಉತ್ತಮ ಆದಾಯ ತಂದು ಕೊಟ್ಟಿತು. ಇನ್ನುಳಿದ ಅರ್ಧದಷ್ಟು ಗೊಬ್ಬರವನ್ನು ತನ್ನ ಮನೆಯ ಹಿತ್ತಲಿನಲ್ಲಿ ನೆಲವನ್ನು ಸಮತಟ್ಟು ಮಾಡಿ ವಿವಿಧ ತರಕಾರಿ ಗಿಡಗಳನ್ನು ಬೆಳೆಸಲು ಬಳಸಿದ. ಹಸಿಮೆಣಸು, ಬದನೆ, ಮುಳ್ಳು ಸೌತೆ, ಬೆಂಡೆ, ತೊಂಡೆ, ಹರಿವೆ, ಹೀರೆ, ಹಾಗಲ ದಂತಹ ವಿವಿಧ ತರಕಾರಿಗಳು ಸಾವಯವ ಗೊಬ್ಬರದ ಪೌಷ್ಟಿಕತೆಗೆ ಸಮೃದ್ಧವಾಗಿ ಬೆಳೆದು ನಿಂತವು. ಅವುಗಳನ್ನೂ ತನ್ನ ದಿನಸಿ ಅಂಗಡಿಯಲ್ಲಿಟ್ಟು ಮಾರಲು ಆರಂಭಿಸಿದ. ಕೋವಿಡ್ ಕಾರಣದಿಂದ ಬೇಡಿಕೆ ತುಸು ಹೆಚ್ಚಾಯಿತು, ವ್ಯಾಪಾರ ಜೋರಾಯಿತು. ಅಪ್ಪನ ಜೊತೆ ಅಂಗಡಿಯಲ್ಲಿ ಇರುತ್ತಿದ್ದಾಗ ವ್ಯವಹಾರದಲ್ಲಿ ಎದುರಾಗುತ್ತಿದ್ದ ಸವಾಲುಗಳನ್ನು ಎದುರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಇವನು ವ್ಯಾಪಾರದಲ್ಲಿ ತೋರುತ್ತಿದ್ದ ಪ್ರಾಮಾಣಿಕತೆ ಹೆಚ್ಚು ಗ್ರಾಹಕರನ್ನು ಆಕರ್ಷಿಸಿತ್ತು. ಜನರೊಂದಿಗೆ ಬೆರೆಯುವ ಮತ್ತು ವ್ಯಾಪಾರಕ್ಕೆ ಬೇಕಾದ ಮಾತುಗಾರಿಕೆಯನ್ನೂ ಕಲಿತಿದ್ದ. ಇವನಿಗೆ ತಾನು ತಯಾರಿಸಿದ್ದ ಉತ್ಪನ್ನಗಳನ್ನು ಮಾರುವುದು ಇನ್ನೂ ಸುಲಭವಾಯಿತು. 
       ಕಾಲೇಜಿನಲ್ಲಿ ಕಲಿತ ವಿಜ್ಞಾನದ ಪಾಠಗಳು, ತೋಟದಲ್ಲಿ ಕೆಲಸಗಾರರೊಟ್ಟಿಗೆ ಬೆರೆತು ಕಲಿತ ಕೆಲಸ ಕೋವಿಡ್ ಕಾಲದಲ್ಲೂ ಎದೆಗುಂದದೆ ಪಡೆದಿದ್ದ ಜ್ಞಾನ ಮತ್ತು ಅನುಭವದ ಲಾಭಪಡೆದು ಬದುಕು ಕಟ್ಟಿಕೊಳ್ಳೋದಕ್ಕೆ ಸಹಕಾರಿಯಾಯಿತು. ಹಾಲು, ತುಪ್ಪ, ಮೊಸರಿನ ಜೊತೆ ಸಾವಯವ ಗೊಬ್ಬರದಿಂದ ಬೆಳೆದಿದ್ದ ತರಕಾರಿಗಳನ್ನು ತಿಂದು ಮನೆಮಂದಿಗೆ ಉತ್ತಮ ಆರೋಗ್ಯವೂ ಸಿಕ್ಕಿತು. 
       ಸುಖ ಬಂದಾಗ ಹಿಗ್ಗದೆ, ದುಖಃ ಬಂದಾಗ ಕುಗ್ಗದೆ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ನಿರಂತರ ಪ್ರಯತ್ನಶೀಲರಾಗುವುದರಿಂದ ಸವಾಲುಗಳನ್ನು ಎದುರಿಸುವುದು ಸುಲಭವಾಗುತ್ತದೆ. ಅಪ್ಪ ಮಾಡಿಟ್ಟ ಸಂಪತ್ತು ಇದೆ ಎಂದು ಕೈಕಟ್ಟಿ ಕೂರುವ ಅಥವಾ ಶಾಲಾ ಶಿಕ್ಷಣವನ್ನು ಮಾತ್ರ ಅವಲಂಬಿಸಿ ಬದುಕು ಕಟ್ಟಿಕೊಳ್ಳುವ ಬದಲು ಲಭ್ಯವಿರುವ ಎಲ್ಲಾ ಮೂಲಗಳಿಂದ ಜ್ಞಾನಾನುಭವಗಳನ್ನು ಪಡೆದುಕೊಂಡಾಗ ವ್ಯಕ್ತಿಯು ಸರ್ವ ಸಮರ್ಥನಾಗುತ್ತಾನೆ. ಹೀಗೆ ಗಳಿಸಿದ ಸಾಮರ್ಥ್ಯವು ಎಂದೂ ಕರಗದ ಸಂಪತ್ತಾಗಿ ವ್ಯಕ್ತಿಯ ಬದುಕಿಗೆ ಆಸರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
          ಅಪ್ಪ ಮಾಡಿಟ್ಟಿದ್ದ ಸಂಪತ್ತಿಗೆ ಜೋತು ಬೀಳದೆ, ಜ್ಞಾನ ಸಂಪಾದನೆಯ ಪ್ರಯತ್ನವನ್ನು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತ ಮಾಡದೆ ಲಭ್ಯವಿದ್ದ ಎಲ್ಲಾ ಮೂಲಗಳಿಂದ ಜ್ಞಾನಾನುಭವವನ್ನು ಸಂಪಾದಿಸಿದ್ದ ಎರಡನೇ ಮಗ ಕೋವಿಡ್ ಕಾಲದ ಕಠಿಣ ಸಂದರ್ಭದಲ್ಲೂ ದೃತಿಗೆಡದೆ ಲಭ್ಯವಿದ್ದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಬದುಕು ನಿಭಾಯಿಸಿದ ನೈಪುಣ್ಯತೆ ನಮಗೂ ಲಭಿಸಲಿ. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಶೀಲರಾಗೋಣವೇ? ಎನಂತೀರಾ? 
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
********************************************


Ads on article

Advertise in articles 1

advertising articles 2

Advertise under the article