ಪ್ರತಿಫಲನ : ಸಂಚಿಕೆ - 14
Friday, February 17, 2023
Edit
ಪ್ರತಿಫಲನ : ಸಂಚಿಕೆ - 14
ಮಕ್ಕಳಿಗಾಗಿ ಲೇಖನ ಸರಣಿ
ತರಗತಿಗೆ ಹೋದ ಗುರುಗಳು ಎಂದಿನಂತೆ ಹಾಜರಿ ಕರೆದು ತಕ್ಷಣ ಒಬ್ಬ ಹುಡುಗನ ಬ್ಯಾಗ್ ಅನ್ನು ತರಿಸಿ ಅದನ್ನು ಪೂರ್ಣವಾಗಿ ಖಾಲಿ ಮಾಡು ಎಂದರು. ಆ ವಿದ್ಯಾರ್ಥಿಗಾದರೋ ಮುಜುಗರ. ಆದರೂ ಗುರುಗಳ ಮಾತು ಕೇಳದಿರಲಾದೀತೇ ? ಬ್ಯಾಗಿನೊಳಗಿರುವ ಎಲ್ಲಾ ವಸ್ತುಗಳನ್ನು ಹೊರತೆಗೆದು ಖಾಲಿ ಮಾಡುತ್ತಾ ಸಾಗಿದ. ಏನೇನಿದ್ದಿರಬಹುದು ಆ ಚೀಲದೊಳಗೆ ಬಲ್ಲಿರಾ…? ಪಾಠ ಪುಸ್ತಕಗಳು, ನೋಟ್ಸ್ ಪುಸ್ತಕಗಳು, ಕಂಪಾಸ್ ಪೆಟ್ಟಿಗೆ, ಸ್ಕೇಲ್, ಪೆನ್, ಪೆನ್ಸಿಲ್ ಇಷ್ಟೇ… ಅಥವಾ ಇನ್ನೂ ಏನಾದರೂ… ವಸ್ತುಗಳನ್ನು ಖಾಲಿಮಾಡುತ್ತಾ ಹೋದಂತೆ ಆ ಚೀಲವೆಂಬ ಗಣಿಯೊಳಗೆ ದೊರೆತ ವಸ್ತುಗಳ ಪಟ್ಟಿಯಂತೂ ಅತ್ಯದ್ಭುತ. ಏನೇನೆಂದು ನೀವೂ ತಿಳಿಯಬೇಕೇ… ಕೇಳಿ, ಬಾಚಣಿಗೆ, ಬ್ಲೇಡ್, ಕತ್ತರಿ, ಟೂತ್ ಬ್ರಷ್, ಸ್ಟಾಂಪ್, ಚಾಕಲೇಟ್ ಕಾಗದ, ಪ್ಲಾಸ್ಟಿಕ್ ಚೂರು, ರಬ್ಬರ್ ತುಂಡುಗಳು ರಬ್ಬರ್ ಬ್ಯಾಂಡ್, ಹಳೆಯ ನ್ಯೂಸ್ ಪೇಪರ್, ಬಣ್ಣದ ಕಾಗದ, ಬಣ್ಣದ ಚಾಕ್ ತುಂಡುಗಳು, ಬೇರೆ ಬೇರೆ ಮರಗಳ ಕಾಯಿಗಳು ಇನ್ನೂ ಏನೇನೋ…. ಹೌದು ಒಂದಷ್ಟು ಬೀಜ ಹಾಕಿ ನೀರು ಹನಿಸಿದರೆ ಗೊಬ್ಬರವಾಗಿ ಗಿಡಗಳು ಬೆಳೆಯಬಹುದಿತ್ತೇನೋ.. ಅಂತಹ ಕಾಂಪೋಸ್ಟ್ ಹೊಂಡದಂತಿತ್ತು ಆ ಚೀಲ ಆಶ್ಚರ್ಯವಾಯಿತೇ….? ಇದನ್ನೆಲ್ಲ ನೋಡಿದ ಗುರುಗಳಿಗೂ ಪರಮಾಶ್ಚರ್ಯ !
ವಿದ್ಯಾರ್ಥಿ ಮಿತ್ರರೇ ನಿಮ್ಮ ಚೀಲಗಳೂ ಹೀಗೇ ಇವೆಯೇ? ವಿದ್ಯಾರ್ಥಿಗಳೇ ಕಲಿಕೆಯ ಪ್ರಕ್ರಿಯೆಯಲ್ಲಿ ಬೆನ್ನಿನ ಚೀಲವು ಬಹು ಮುಖ್ಯ ಪಾತ್ರ ವಹಿಸುತ್ತದೆ. ಬೆನ್ನಿಗೆ ಹಾಕಿ ಮುಂದೆ ಮುಂದೆ ಸಾಗುತ್ತಿದ್ದರೆ ನಿಮ್ಮ ನೆರಳಾಗಿ ಜೊತೆ ಸಾಗುತ್ತದೆ ಚೀಲವೆಂಬ ಗೆಳೆಯ. ಆದುದರಿಂದಲೇ ಚೀಲದೊಳಗೆ ಅವಶ್ಯವಿಲ್ಲದ ವಸ್ತುಗಳನ್ನು, ಕಸಕಡ್ಡಿಗಳನ್ನು ಹೊತ್ತೊಯ್ಯಬಾರದು. ಹಾಗಾದರೆ ನಾವೇನು ಮಾಡಬೇಕು? ಏನದು ಈ ಬಗ್ಗೆ ನಮ್ಮ ಮುಂದಿನ ನಡೆ ಎನ್ನುವಿರಾ…
ವಾರಕ್ಕೆ ಒಂದು ಬಾರಿಯಾದರೂ ನಿಮ್ಮ ಬೆನ್ನ ಚೀಲಕ್ಕೊಂದು ಕಾಯಕಲ್ಪ ನೀಡಬೇಕು. ಹೇಗೆ? … ಅದರಲ್ಲಿರುವ ವಸ್ತುಗಳನ್ನೆಲ್ಲ ತೆಗೆದು ಹೊರಗಿಟ್ಟು ಅವಶ್ಯ ವಸ್ತುಗಳನ್ನೆಲ್ಲ ಒಂದೆಡೆ ಜೋಡಿಸಿ ಕೆಲಸಕ್ಕೆ ಬಾರದ ಅನಾವಶ್ಯಕ ವಸ್ತುಗಳು, ಕಸ ಕಡ್ಡಿಗಳನ್ನು ಹೊರ ಚೆಲ್ಲಿಬಿಡಿ. ಹಾಗೆಯೇ ಪುಸ್ತಕಗಳನ್ನೆಲ್ಲ ತಿರುವಿಹಾಕಿ. ಅವುಗಳ ಒಳಗೆ ಅಲ್ಲಲ್ಲಿ ಇರುವಂತಹ ಚೀಟಿಗಳನ್ನು ಹೊರತೆಗೆಯಿರಿ. ಮೊನೆಯಿಲ್ಲದ ಮುರಿದ ಪೆನ್ಸಿಲ್ ಗಳು ಪೆನ್ನುಗಳು ಖಾಲಿಯಾದ ರಿಫಿಲ್ಗಳು ಇವೆಲ್ಲವೂ ಚೀಲದೊಳಗೆ ಬೇಡ. ಕಂಪಾಸ್ ಪೆಟ್ಟಿಗೆ ಅಥವಾ ಪೌಚ್ ಎಂಬ ಪರ್ಸನ್ನು ತೆಗೆದು ಅದರಲ್ಲೂ ಅನವಶ್ಯಕ ವಸ್ತುಗಳಿದ್ದರೆ ಬಿಸಾಡಿಬಿಡಿ. ಈ ರೀತಿ ಮಾಡುವುದರಿಂದ ನೀವು ಕೈ ಹಾಕಿದ ಕೂಡಲೇ ಅನವಶ್ಯ ವಸ್ತುಗಳು ಚುಚ್ಚುವ ಪ್ರಶ್ನೆ ಇಲ್ಲ. ಪುಸ್ತಕಗಳೆಂಬ ನಿಮ್ಮ ಮಿತ್ರರು ಬ್ಯಾಗ್ ಒಳಗಡೆ ಸಂತಸದಿಂದ ಇರಬೇಕೇ.. ಕಸಕಡ್ಡಿಗಳಿಗೆ ಬ್ಯಾಗಿನಿಂದ ವಿದಾಯ ಹೇಳಿ. ಮುರಿದ ಪೆನ್ನು ಪೆನ್ಸಿಲು ಸ್ಕೇಲು ರಬ್ಬರು ಇವೆಲ್ಲ ನಕಾರಾತ್ಮಕ ಭಾವಕ್ಕೆ ಕಾರಣ. ಅವುಗಳಿಂದ ದೂರವಿರಿ.
ಅಮ್ಮ ಮನೆಯನ್ನೆಲ್ಲ ಗುಡಿಸಿ ಒರೆಸಿ ಸ್ವಚ್ಛ ಮಾಡಿದಾಗ ಏನೋ ಸೌಂದರ್ಯ ನಿರಾಳ ಭಾವನೆ ಖುಷಿ ತೋರುವುದಿಲ್ಲವೇ.. ಅಂತೆಯೇ ನಿಮ್ಮ ಕಲಿಕಾ ಚೀಲದಲ್ಲಿ ಅವಶ್ಯಕ ವಸ್ತುಗಳು ಮಾತ್ರ ತುಂಬಿದ್ದರೆ ಮನಸ್ಸಿಗೆ ನೆಮ್ಮದಿ ಸಂತಸ ಜೊತೆಗೆ ಕಲಿಕಾ ಪ್ರೇರಕ ವಾತಾವರಣ ನಿರ್ಮಾಣವಾಗುತ್ತದೆ. ಹಾಗಾದರೆ ಚೀಲವೆಂಬ ಗೆಳೆಯನನ್ನು ಬೆನ್ನಿಗೇರಿಸುವ ಮುನ್ನ ಪ್ರೀತಿಯಿಂದ ಮೈ ಸವರೋಣ. ಅನವಶ್ಯಕ ವಸ್ತುಗಳು ದೂರಾದಾಗ ಸ್ವಚ್ಛತೆ ಮನೆ ಮಾಡುತ್ತದೆ. ಸ್ವಚ್ಛತೆ ಎಂಬುದು ಕಲಿಕಾ ಪ್ರಕ್ರಿಯೆಗೆ ಕನ್ನಡಿ.
ಕಲಿಕೆಯ ಪ್ರತಿಫಲನಕ್ಕೆ ಸ್ವಚ್ಛತೆಯು ಜೊತೆಯಾದಾಗ ಪ್ರಫುಲ್ಲಿತ ಕಲಿಕೆ ನಿಮ್ಮದಾಗುತ್ತದೆ. ಇದು ವಿದ್ಯಾಧಿದೇವತೆಗೂ ಮುದ ನೀಡುತ್ತದೆ ಎಂದರೆ ನಂಬುವಿರಾ.. ಬೆನ್ನಚೀಲ ತುಂಬಿದ ಕಲಿಕಾ ಸಾಮಗ್ರಿಗಳಿಂದ ಜತೆಯಾದ ಶೈಕ್ಷಣಿಕ ಪ್ರಕ್ರಿಯೆಯು ನಿಮ್ಮ ಉಜ್ವಲ ಭವಿಷ್ಯದ ಮೆಟ್ಟಿಲಾಗಲಿ.... ಶುಭವಾಗಲಿ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************