ಪ್ರತಿಫಲನ : ಸಂಚಿಕೆ - 13
Friday, February 10, 2023
Edit
ಪ್ರತಿಫಲನ : ಸಂಚಿಕೆ - 13
ಮಕ್ಕಳಿಗಾಗಿ ಲೇಖನ ಸರಣಿ
'ಮಾತು ಆಡಿದರೆ ಆಯಿತು, ಮುತ್ತು ಒಡೆದರೆ ಹೋಯಿತು' 'ಮಾತೇ ಮಾಣಿಕ್ಯ' 'ಮಾತು ಬೆಳ್ಳಿ ಮೌನ ಚಿನ್ನ'…. ಹೌದು ವಿದ್ಯಾರ್ಥಿ ಮಿತ್ರರೇ ಮಾತಿನ ಬಗ್ಗೆ ಅದೆಷ್ಟೋ ನುಡಿಮುತ್ತುಗಳನ್ನು ನೀವು ಕೇಳಿದ್ದೀರಿ. ಅಧ್ಯಾಪಕರ ಸೂಚನೆಯಂತೆ ಇವುಗಳ ಅರ್ಥ ವ್ಯಾಖ್ಯಾನಗಳನ್ನು ಬರೆದಿರಲೂಬಹುದು. ಆದರೆ ಎಂದಾದರೂ ನಾವು ಆಡುವ ಮಾತುಗಳನ್ನು ಕೃತಿಯಾಗಿಸಲೇಬೇಕೆಂಬ ಕಲ್ಪನೆ ಬಂದಿದೆಯೇ?
ತರಗತಿಗೆ ಬಂದ ಅಧ್ಯಾಪಕರು ಹಲವಾರು ವಿಷಯಗಳ ಬಗ್ಗೆ ಮಾತನಾಡುವುದಿದೆ. ಪಠ್ಯದೊಳಗಿನಿಂದ ಹೊರಬಂದು ಸ್ಥಳೀಯ ಆಗುಹೋಗುಗಳ ಬಗ್ಗೆಯಾಗಲಿ, ಪರಿಸರದ ಬಗ್ಗೆ ಆಗಲಿ ಮಾತು ಮುಂದುವರೆಯುತ್ತದೆ. ತಾವೆಲ್ಲರೂ ಇಂತಹ ವಿಷಯಗಳಿಗೆ ಕಿವಿಗೊಟ್ಟು ಆನಂದಿಸಿರುತ್ತೀರಿ. ಪಠ್ಯಪೂರಕ ವಿಷಯಗಳ ಜೊತೆಗೆ ನಿಮ್ಮ ಗುರುಗಳು ನಿಮ್ಮ ಮುಂದಿನ ಜೀವನದ ಗುರಿಯೇನು ನೀವೇನು ಆಗಬೇಕೆಂದು ಬಯಸುವಿರಿ ಎಂದು ಕೇಳಿರುತ್ತಾರೆ ಅಲ್ಲವೇ? ಅದರಲ್ಲೂ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆಯುವುದು ನಿಮ್ಮ ಗುರಿ ಎಂಬುದಾಗಿ ತರಗತಿ ಸನ್ನಿವೇಶದಲ್ಲಿ ನಿಮ್ಮೊಡನೆ ಖಂಡಿತವಾಗಿಯೂ ಕೇಳಿರುತ್ತಾರೆ. ಅಂತಹ ಸಂದರ್ಭದಲ್ಲಿ ಬಣ್ಣ ಕಟ್ಟಿ ಹೇಳಿದ ಮಾತುಗಳ ನೆನಪಿದೆಯೇ? ನಾನು ಇಷ್ಟು ಅಂಕಗಳನ್ನು ಪಡೆಯುತ್ತೇನೆ ಎಂದು ಎದೆಯುಬ್ಬಿಸಿ ಗುರುಗಳಿಗೆ ಮಾತು ನೀಡಿದ ತರಗತಿ ಸನ್ನಿವೇಶ ನೆನಪಿದೆಯೇ? ವಿಶೇಷ ಗುರಿಗಳನ್ನು ಹೊಂದಿ ಹೆಚ್ಚಿನ ಸಾಧನೆಗೈವ ಬಯಕೆಯನ್ನು ವ್ಯಕ್ತಪಡಿಸಿ ನೀವಾಡಿದ ಮಾತುಗಳು ವ್ಯರ್ಥವಾಗಬಾರದು. ಬದಲಾಗಿ ಆ ಮಾತುಗಳು ನಿಜಾರ್ಥದಲ್ಲಿ ಕೃತಿಯಾಗಿ ಆವಿರ್ಭಾವಗೊಳ್ಳಬೇಕು. ಅದಕ್ಕಾಗಿ ನಾವೇನು ಮಾಡಬಹುದು ?
ವಿದ್ಯಾರ್ಥಿ ಜೀವನವೆಂಬುದು ಅತ್ಯಂತ ಸುಂದರವೂ ಸ್ಮರಣೀಯವೂ ಆದ ಕ್ಷಣ! ರೈತನೊಬ್ಬ ಬಿತ್ತಿದ ಬೆಳೆಯಂತೆ. ಶಿಕ್ಷಣದ ಮೇರು ಸಂದರ್ಭಗಳಲ್ಲಿ ಒಂದಾದ ಎಸ್ ಎಸ್ ಎಲ್ ಸಿ ಶಿಕ್ಷಣವು ಮುಂದಿನ ಬೃಹತ್ ಪಯಣವನ್ನು ಪೂರೈಸಲಿರುವ ನಿರ್ಣಾಯಕಘಟ್ಟ. ಗುರಿಗಳನ್ನು ನಿರ್ಧರಿಸುವ ಮತ್ತು ಆ ಕಡೆ ಪಯಣಿಸುವ ಕನಸು ನನಸಾಗಿಸುವ ಸಮಯ. ಹಾಗಾದರೆ ಗುರುಗಳಿಗೆ ಕೊಟ್ಟ ಮಾತು ನಿಮ್ಮೊಳಗೆ ನೀವು ಕಲ್ಪಿಸಿಕೊಂಡ ಕನಸಗೋಪುರ ನನಸಾಗಿ ಸಾಕಾರಗೊಳ್ಳಲು ಇರುವ ಏಕೈಕ ದಾರಿ ಆಡಿದ ಮಾತುಗಳನ್ನು ಕೃತಿಯಾಗಿಸುವುದು.
ನಿರಂತರ ಆತ್ಮವಿಶ್ವಾಸದಿಂದ ಪ್ರತಿದಿನ ಓದುವುದು, ಅಧ್ಯಯನ ಶೀಲತೆಯನ್ನು ಅವಿಭಾಜ್ಯ ಅಂಗವಾಗಿಸಿಕೊಳ್ಳುವ ಮೂಲಕ ಮಾತುಗಳಿಗೆ ಕೃತಿಯ ರೂಪ ತರಲು ಪ್ರಯತ್ನಿಸುವಿರಾ? ನಿರೀಕ್ಷಿತ ಅಂಕಗಳ ಸಾಧನೆಯೆಡೆಗೆ ಪಯಣಿಸಿ ಯಶಸ್ಸು ಕಾಣುವಿರಾ ? ತನ್ಮೂಲಕ ಮಾತುಗಳನ್ನು ಕೃತಿಯಾಗಿಸುವಿರಾ?
ಹೌದು ಈ ಕಾಯಕಕ್ಕೆ ತಮಗೆ ಬೇಕಾದ ಸಲಕರಣೆಗಳು ನಿಷ್ಠೆ, ಪ್ರಾಮಾಣಿಕತೆ, ನಿರಂತರ ಕಠಿಣ ಪ್ರಯತ್ನ. ಪರಿಶ್ರಮದ ಪ್ರತಿಫಲನ ಸದಾ ಸಿಹಿ ಇರುತ್ತದೆ. ಪರೀಕ್ಷಾ ಸಮಯವಿದು ಶುಭವಾಗಲಿ........
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************