-->
ಕಲಿಕಾ ಹಬ್ಬದ ಬಗ್ಗೆ ಶಿಕ್ಷಕರ ಅನಿಸಿಕೆ - 4

ಕಲಿಕಾ ಹಬ್ಬದ ಬಗ್ಗೆ ಶಿಕ್ಷಕರ ಅನಿಸಿಕೆ - 4

ಲೇಖಕರು : ಶುಭ ಕೆ
ಪದವೀಧರ ಪ್ರಾಥಮಿಕ ಶಿಕ್ಷಕಿ (ಜಿಪಿಟಿ)
ಸ.ಉ.ಪ್ರಾ. ಶಾಲೆ ಪೆರೋಡಿತ್ತಾಯಕಟ್ಟೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
   
              ಯಾರು ಹೇಳಿದ್ದು ಕಲಿಕೆ ಮಕ್ಕಳ ಆಟವಲ್ಲವೆಂದು...? ಕಲಿಕೆ ಒಂದು ಬಗೆಯಲ್ಲಿ ಮಕ್ಕಳಾಟವೆ. ಕಲಿಕೆ ಯಾವತ್ತು ಒಂದೇ ಬಗೆಯ ಚೌಕಟ್ಟನ್ನು ಹಾಕಿಕೊಂಡು ಇರದೆ ನಾನಾ ಬಗೆ ಇದ್ದರೆ ಚಂದ.
        ಕಲಿಕಾ ಹಬ್ಬದ ಬಗ್ಗೆ ನನ್ನ ದೃಷ್ಟಿಕೋನ ಮತ್ತು ಅನುಭವಗಳು :
      ಮೊದಲನೆಯದಾಗಿ ಮುಲ್ಲಕಾಡು ಶಾಲೆಯಲ್ಲಿ ತರಬೇತು ತರಬೇತಿ ಪಡೆಯಲು ಹೋದಾಗ ಚೌಕಟ್ಟುಗಳನ್ನ ಹಾಕಿಕೊಂಡು ಔಪಚಾರಿಕವಾಗಿ ನೀಡುತ್ತಿದ್ದ ಇತರ ತರಬೇತಿಗಳಿಗೆ ಹೋಲಿಸಿದರೆ ಇದು ಭಿನ್ನ ಎಂಬುದು ಮೊದಲ ನೋಟದಲ್ಲಿ ತಿಳಿಯುವಂತಹ ವಾತಾವರಣವನ್ನು ತರಬೇತುದಾರರು ಆಗಲೇ ನಿರ್ಮಿಸಿಯಾಗಿತ್ತು. ವೇದಿಕೆಯ ಕಾರ್ಯಕ್ರಮದಿಂದ ಹಿಡಿದು ನಾಲ್ಕು ಕಾರ್ನರ್ ಗಳಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ತನಕ ಹೊಸತನವಿತ್ತು. ಸಾಮಾನ್ಯವಾಗಿ ನಾನು ವಿಜ್ಞಾನವನ್ನಾಗಲಿ, ಕ್ರಾಫ್ಟ್ ನಂತಹ ವಿಷಯಗಳನ್ನಾಗಲಿ ಉಳಿದ ಸಮಯದಲ್ಲಿ ನನ್ನ ವಿಷಯಗಳಂತೆ ಭಾವಿಸಿಕೊಳ್ಳುವುದು ಬಹಳ ಕಡಿಮೆ. ಆದರಿಲ್ಲಿ ನಾಲ್ಕು ಕಾರ್ನರ್ ನಲ್ಲಿ ಸಹ ಎಷ್ಟು ತೊಡಗಿಸಿ ಕೊಂಡಿದ್ದೆ ಎಂದರೆ ಕೆಲ ವೇಳೆ ಅಧಿಕಾರಿ ವರ್ಗದವರು ಬಂದಿದ್ದೂ ತಿಳಿಯುತ್ತಿರಲಿಲ್ಲ. ಎಲ್ಲಾ ಕಾರ್ನರ್ ಗಳಲ್ಲಿಯೂ ಸಮಾನ ಆಸಕ್ತಿಯಿಂದ ಭಾಗವಹಿಸಲು ಸಾಧ್ಯವಾಗಿದ್ದು ಇಲ್ಲಿ. ಒಟ್ಟಾರೆ ಮೂರು ದಿನಗಳಲ್ಲಿ ಕಲಿಕೆ ಲವಲವಿಕೆಯಿಂದ ಕೂಡಿದ್ದು ಬೇಸರದ ಲವಶೇಷವೂ ಇಲ್ಲಿ ಕಾಣಲಿಲ್ಲ. ಇದಕ್ಕೆಲ್ಲ ಕಾರಣ ತರಬೇತಿಯನ್ನು ನೀಡಿದವರು ಎಂದರೆ ತಪ್ಪಾಗಲಾರದು.
      ಇನ್ನು ತಾಲೂಕು ಹಂತದಲ್ಲಿ ತರಬೇತಿಯನ್ನು ನೀಡುವ ವೇಳೆ 95 ಜನ ಪ್ರತಿಭಾವಂತ ಶಿಕ್ಷಕರ ಮುಂದೆ ನಿಲ್ಲುವುದೇ ಮೊದಲ ಸವಾಲಾಗಿತ್ತು. ಏಕೆಂದರೆ ಅದರಲ್ಲಿ ಎಷ್ಟೋ ಜನರಿಂದ ಕಲಿತಿದ್ದೆ. ಹಿರಿಯರ ಮುಂದೆ ನಿಂತು ವಿಷಯ ಹೇಳಬೇಕೆಂದರೆ ನಾನು ಅಷ್ಟು ತಯಾರಾಗಬೇಕಿತ್ತು. ಅದಕ್ಕಾಗಿ ಹಿಂದಿನ ದಿನವೇ ನನ್ನ ಶಾಲೆಯ 4 ರಿಂದ 8ನೇ ತರಗತಿ ಮಕ್ಕಳಿಗೆ ಗುಂಪುಗಳನ್ನ ಮಾಡಿ ಪ್ರಾಯೋಗಿಕ ತರಬೇತಿಯನ್ನು ನೀಡುವ ಮೂಲಕ ನನ್ನ ಕಾರ್ನರ್ ಆದ ಹಾಡು- ಆಡು ಕಾರ್ನರ್ ನ ವಿಷಯಗಳನ್ನ ಅಭ್ಯಾಸಮಾಡಿ ನೋಡಿದೆ. ಆದಕಾರಣ ಉತ್ತರ ನೀಡುವ ಆತ್ಮವಿಶ್ವಾಸ ಮೂಡಿತ್ತು. ಎರಡು ದಿನದ ತರಬೇತಿಯಂತೂ ಅದ್ಭುತ. ವಯಸ್ಸಿನ ಅಂತರವಿಲ್ಲದೆ ಕೆಲಸಕ್ಕೆ ಸೇರಿ ಎರಡು ವರ್ಷ ಆದವರಿಂದ ಹಿಡಿದು ಇನ್ನೇನು ನಿವೃತ್ತಿಗೆ ಎರಡು ತಿಂಗಳಿದೆ ಎನ್ನುವಂತವರು ಕೂಡ ಅಷ್ಟೇ ಉತ್ಸಾಹ, ಆಸಕ್ತಿ ಹಾಗೂ ಮುಕ್ತ ಮನಸ್ಸಿನಿಂದ ಭಾಗವಹಿಸಿದ್ದರು ಎಂದರೆ ತರಬೇತಿಯ ಕಂಟೆಂಟ್ ಆಸಕ್ತಿದಾಯಕವಾಗಿತ್ತು ಎಂದರೆ ತಪ್ಪಾಗಲಾರದೇನೋ. ಭಾಷಾ ಆಟಗಳ ಮೂಲಕ ನಾನು ಕುಣಿದಿದ್ದಲ್ಲದೆ ಅವರನ್ನು ಕುಣಿಸಿದ್ದೆ. ದೃಶ್ಯ ಕಟ್ಟುವುದು, ಮಾತಿಗೆ ಮಾತು, ಪದ ಏಣಿ ಇವೆಲ್ಲದರ ಮೂಲಕ ಕಲಿತಿದ್ದೆಷ್ಟೋ.. ಒಟ್ಟಿನಲ್ಲಿ ಬಂದವರೆಲ್ಲ ತರಬೇತಿಯ ಬಗ್ಗೆ ಸಂತಸ, ಸಮಾಧಾನದಿಂದ ಹೋಗುವುದರ ಜೊತೆಗೆ ಕ್ಲಸ್ಟರ್ನಲ್ಲಿಯೂ ಸಹ ಅದ್ಭುತವಾಗಿ ನಡೆಸಿದಾಗ ತರಬೇತಿಯ ಬಗ್ಗೆ ಸಾರ್ಥಕ ಭಾವ ಮೂಡಿತು.
        ಇನ್ನು ನನ್ನ ಕ್ಲಸ್ಟರ್ನಲ್ಲಿ ಸಂಪನ್ಮೂಲ ವ್ಯಕ್ತಿಗಳ ಜೊತೆ ಊರು ತಿಳಿಯೋಣ ಕಾರ್ನರ್ ಆಯ್ದುಕೊಂಡಿದ್ದೆ. ತರಗತಿಯ ಒಳಗೆ ಕುಳಿತು ಪೆನ್ನು ಪುಸ್ತಕವನ್ನು ತೆಗೆದುಕೊಂಡು ಊರಿನ ಬಗ್ಗೆ ತಿಳಿಸುತ್ತೇನೆಂದರೆ ಅದು ಅಷ್ಟು ನಿರೀಕ್ಷೆಯ ಮಟ್ಟಕ್ಕೆ ತಲುಪುವುದು ಕಷ್ಟವಿತ್ತು. ಆದ ಕಾರಣವೇ ನಾಲ್ಕೂ ಅವಧಿಗಳಲ್ಲಿ ಬೇರೆ ಬೇರೆ ವಿಷಯಗಳು ಅಂದರೆ ನರ್ಸರಿ ಭೇಟಿ, ಹೈನುಗಾರಿಕೆಯ ಬಗ್ಗೆ ತಿಳಿಯುವುದು, ತ್ಯಾಜ್ಯ ವಿಲೇವಾರಿ ಘಟಕದ ಭೇಟಿ, ಗ್ರಾಮ ಪಂಚಾಯಿತಿಯ ಸಂದರ್ಶನ ಹೀಗೆ ಊರ ಒಳ ಹೊರಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿದ್ದರಿಂದ ಅವರಿಗೆ ಹೆಚ್ಚಿನ ಜ್ಞಾನ ಸಿಕ್ಕಂತಾಯಿತು. ಸಾವಿರಾರು ಬಗೆಯ ದೇಶಿ - ವಿದೇಶಿ ಹಣ್ಣುಗಳ ಬಗ್ಗೆ, ಹೈನುಗಾರಿಕೆಯ ಕಷ್ಟ ನಷ್ಟಗಳ ಬಗ್ಗೆ, ತ್ಯಾಜ್ಯ ವಿಲೇವಾರಿ ಎಂಬುವ ಅಂತರಾಷ್ಟ್ರೀಯ ಮಟ್ಟದಲ್ಲೂ ತಲೆ ನೋವಾಗಿರುವ ಸಮಸ್ಯೆಯ ಬಗ್ಗೆ, ಸ್ಥಳೀಯ ಸರ್ಕಾರದ ಆಡಳಿತದ ಬಗ್ಗೆ ಹೀಗೆ ಸೀಮಿತ ಸಮಯದಲ್ಲಿ ನಾನಾ ದೃಷ್ಟಿಕೋನದಲ್ಲಿ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಲು ತರಬೇತಿ ಸಹಕಾರಿಯಾಯಿತು. ಇದರ ಜೊತೆಗೆ ಸ್ಥಳೀಯವಾಗಿ ಇರುವ ಸಾಧಕರನ್ನ ಗುರುತಿಸುವಲ್ಲಿ, ಸ್ಥಳೀಯ ಆಹಾರದ ರುಚಿ ಸವಿಯುವಲ್ಲಿ ಮಕ್ಕಳು ಒಂದಷ್ಟು ಜ್ಞಾನದ ಜೊತೆಗೆ ಸಂತಸವನ್ನ ಸಹ ಪಡೆದರು. 
       ಹೀಗೆ ಕಲಿಕಾ ಹಬ್ಬವೆನ್ನುವುದು ಅಕ್ಷರಶಃ ಸಂತಸದ ಹಬ್ಬವೇ ಆಗಿದ್ದು ಕಲಿಸಿದ್ದಕ್ಕಿಂತ ಕಲಿತಿದ್ದೆ ಜಾಸ್ತಿ. ಕೇವಲ ವಿಷಯಧಾರಿತ ತರಬೇತಿಗಳು ಮಾತ್ರ ತರಬೇತಿಯ ಗತ್ತನ್ನು ಹೆಚ್ಚಿಸುತ್ತದೆ ಎಂಬ ಭ್ರಮೆಯಿಂದ ಹೊರಬಂದ ನಾನು ನಾನಾ ವಿಷಯಗಳನ್ನ ಕಲಿಯುವುದರಲ್ಲೂ ಸಹ ಒಂದು ಖುಷಿ ಇದೆ. ಇವು ಸಹ ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಎಂಬುದನ್ನು ಈ ತರಬೇತಿಯಿಂದ ಅರಿತುಕೊಂಡೆ. 
................................................... ಶುಭ ಕೆ
ಪದವೀಧರ ಪ್ರಾಥಮಿಕ ಶಿಕ್ಷಕಿ (ಜಿಪಿಟಿ)
ಸ.ಉ.ಪ್ರಾ. ಶಾಲೆ ಪೆರೋಡಿತ್ತಾಯಕಟ್ಟೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*****************************************

Ads on article

Advertise in articles 1

advertising articles 2

Advertise under the article