-->
ಕಲಿಕಾಹಬ್ಬ : ಶಿಕ್ಷಕರ ಅನಿಸಿಕೆ - 1

ಕಲಿಕಾಹಬ್ಬ : ಶಿಕ್ಷಕರ ಅನಿಸಿಕೆ - 1

ಲೇಖಕರು : ನಾರಾಯಣ ರೈ ಕುಕ್ಕುವಳ್ಳಿ
ನಿವೃತ್ತ ಪದವೀಧರ ಶಿಕ್ಷಕರು.
ಮಧುಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ      

          "ಮಳೆಯ ನೀರು ಭೂಮಿಗೆ ಬಿದ್ದು ಹದಗೊಂಡಾಗ ಬಿತ್ತಿದ ಬೀಜ ಮೊಳಕೆಯೊಡೆದು ಅನ್ನ ನೀಡಿದರೆ...ನೆಟ್ಟ ಗಿಡ ಹೆಮ್ಮರವಾಗಿ ಹಸಿರು ಉಸಿರನ್ನು ನೀಡಿದಂತೆ ಎದೆಯೊಳಗೆ ಬಿತ್ತಿದ ಅಕ್ಷರ ಬೀಜ ಬದುಕಿಗೇ ಸಂಸ್ಕಾರ-ಸಂಸ್ಕೃತಿ ಮೌಲ್ಯಗಳನ್ನು ನೀಡುತ್ತವೆ.
        ಇಂದು ಶಿಕ್ಷಣ ಬಹಳ ಅಗತ್ಯವಾದ ವಿಷಯ.ಶಿಕ್ಷಣ ಕ್ಷೇತ್ರದಲ್ಲೂ ಆಗಾಗ ಬದಲಾವಣೆಗಳಾಗು ತ್ತಿರುವುದನ್ನು ನಾವು ಧನಾತ್ಮಕವಾಗಿ ಸ್ವೀಕರಿಸ ಬೇಕಾಗಿದೆ.ಗಳಿಕೆಗಾಗಿ ಕಲಿಕೆ ಅಲ್ಲ..ಬದುಕಿಗಾಗಿ ಶಿಕ್ಷಣ-ಕಲಿಕೆ ಎಂಬುದನ್ನು ನಾವು ಮರೆಯಲೇ ಬಾರದು.
        "ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ಮೇಲೆ ಎಲ್ಲಾ ಸರಕಾರಿ ಶಾಲೆಗಳಲ್ಲೂ ಎಲ್ ಕೆ ಜಿ, ಯುಕೆಜಿ ಸೇರಿದಂತೆ ಐದು ಹಂತದ ಮೂಲಶಿಕ್ಷಣ ಕಲಿಕೆ ಬರಲಿದೆ.ಎಲ್ಲಾ ರೀತಿಯ ಸೌಲಭ್ಯಗಳು ಸರಕಾರಿ ಶಾಲೆಗಳಿಗೆ ಒದಗುವುದರ ಮೂಲಕ ,ಮಕ್ಕಳ ಕಲರವ ಮತ್ತೆ ಮೊದಲಿನಂತೆ ಕೇಳಿ ಬರಲಿದೆ.ಸರಕಾರಿ ಶಾಲೆಗಳು ಸದೃಢವಾಗಲಿವೆ..." ಎಂಬುದು ನಮ್ಮ ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರ ನಿರೀಕ್ಷೆ- ಭರವಸೆಯ ನುಡಿಗಳು.                 ಢಂ...ಢಂ...ಭೋಂ...ಭೋಂ... ನಿನಾದದೊಂದಿಗೆ ಕುಣಿದು ಕುಪ್ಪಳಿಸುತ್ತಾ.. ನಾನು ಹಿಂದೆ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದ ಗಡಿನಾಡು ಪ್ರದೇಶವಾಗಿರುವ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು ಇಲ್ಲಿ ಜನವರಿ 30 ಸೋಮವಾರ ಮತ್ತು 31 ಮಂಗಳವಾರದಂದು ಜರುಗಿ ಕಲಿಕಾಹಬ್ಬದ ಸಂಭ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಅಮೂಲ್ಯ ಕ್ಷಣಗಳ ನೆನಪು.
        ಕಲಿಕಾ ಹಬ್ಬ-23, ಒಂದು ವಿನೂತನ ಶೈಕ್ಷಣಿಕ ಕಾರ್ಯಕ್ರಮವಾಗಿ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಏಕಕಾಲದಲ್ಲಿ12, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 120 ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದಲ್ಲಿ ಅತ್ಯಂತ ಕುತೂಹಲ ಸಂತೋಷದಿಂದ ಸಂಭ್ರಮಿಸಿದ ಕ್ಷಣಗಳು ನನ್ನ ಬಾಲ್ಯವನ್ನು ಮತ್ತೆ ನೆನಪಿಸಿತು.
       ಕಲಿಕಾ ಹಬ್ಬವು ಊರಿನ ಒಂದು ಜಾತ್ರೆಯೋ.... ಎಂಬ ರೀತಿಯಲ್ಲಿ ಹಬ್ಬದ ಮೆರವಣಿಗೆಯೊಂದಿಗೆ ಮಕ್ಕಳ ಜೊತೆಗೆ ಹೆತ್ತವರು, ಪೋಷಕರು, ಸಂಪನ್ಮೂಲರು, ದಾನಿಗಳು ವಿದ್ಯಾಭಿಮಾನಿಗಳು, ಜನಪ್ರತಿನಿಧಿಗಳು, ಹೆಜ್ಜೆಹಾಕಿ ಸಂತೋಷಪಟ್ಟ ಕ್ಷಣಗಳು ವರ್ಣನಾತೀತ...
        4 ಕಾರ್ನರ್ ಗಳಲ್ಲಿ ನಡೆದ ಕಲಿಕಾ ಕಾರ್ಯಕ್ರಮ ಉತ್ತಮ ಶೈಕ್ಷಣಿಕ ಯೋಚನೆ-ಯೋಜನೆಗಳಿಗೆ ಸಾಕ್ಷಿಯಾಯಿತು.
▪️ಏಕಾಗ್ರತೆ ಕಲಿಯಲು 'ಕಾಗದ-ಕತ್ತರಿ' ಕಾರ್ನರ್
▪️ವಿಜ್ಞಾನದ ಆಟಿಕೆಗಳೊಂದಿಗೆ 'ಪ್ರಶ್ನೆಯನ್ನು- ಪ್ರಜ್ಞೆಯನ್ನಾಗಿಸುವ' ಮಾಡು-ಹಾಡು' ಕಾರ್ನರ್
▪️ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳನ್ನು ಪ್ರದರ್ಶಿಸುವ,ಅಭಿನಯ ಸಂವಾದ 'ಹಾಡು-ಹಾಡು' ಕಾರ್ನರ್
▪️ಮರದ ಅಧ್ಯಯನ, ಮರದ ಎತ್ತರ-ಅಳತೆ, ಪರಿಸರ ಸಂದರ್ಶನ ಜೀವ-ಭಾವ ವಿಚಾರಗಳ ಕಲಿಯುವ 'ಊರು ತಿಳಿಯೋಣ' ಕಾರ್ನರ್ .     
     ಈ ಮೂಲಕ ಕಲಿಕಾಹಬ್ಬ ಸೃಜನಾತ್ಮಕವಾಗಿ 'ಕಲಿಕೆ ಎಂದರೆ ಹೀಗಿರಬೇಕೆಂಬ ರೀತಿಯಲ್ಲಿ ಎರಡು ದಿನಗಳ ಕಾಲ ಕರ್ನಾಟಕ ಸರಕಾರ, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಬೆಟ್ಟಂಪಾಡಿ, ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು-1, ಇವರ ಜಂಟಿ ಆಶ್ರಯದಲ್ಲಿ ಜನವರಿ 30 ಸೋಮವಾರ ಮತ್ತು 31 ಮಂಗಳವಾರದಂದು ಜರುಗಿ ತನ್ನದೇ ಆದ ಹೆಜ್ಜೆಗುರುತುಗಳನ್ನು ಮೂಡಿಸಿತು.
        ಎಲ್ಲೆಲ್ಲೂ ಬಣ್ಣ-ಬಣ್ಣದ ತಳಿರು ತೋರಣಗಳು... ಚಿತ್ತಾಕರ್ಷಕ ಬರಹಗಳ ಭಿತ್ತಿ ಪತ್ರಗಳು, ವಿನ್ಯಾಸ ಪೂರಿತ ಚಿತ್ರ-ಚಿತ್ತಾರಗಳಿಂದ ನಮ್ಮ ಚಿತ್ತ ಸೆಳೆದು ಶಾಲಾವಾತಾವರಣವೇ ಶೃಂಗಾರಮಯವಾಗಿ ಕಂಗೊಳಿಸುವಂತಿತ್ತು.
       ಅತಿಥೇಯ ಮುಂಡೂರು-1, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ ಕರ್ಕೇರ, ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಆಶಾ ಮುಂಡೂರು, ಕಲಿಕಾಹಬ್ಬದ ನೋಡೆಲ್ ಅಧ್ಯಾಪಕ, ಬೆಟ್ಟಂಪಾಡಿ ಸರಕಾರಿ ಪ್ರೌಢ ಶಾಲಾ ಮುಖ್ಯಗುರು ವಿಜಯಕುಮಾರ್, ಬೆಟ್ಟಂಪಾಡಿ ಕ್ಲಸ್ಟರ್ ಸಿಆರ್ ಪಿ ಶ್ರೀಮತಿ ಪರಮೇಶ್ವರಿ, ಹಾಗೂ ಬೇರೆ ಬೇರೆ ಸಂಘ-ಸಂಸ್ಥೆಗಳ ಅಧ್ಯಕ್ಷರು, ಸದಸ್ಯರ ಸಹಕಾರದೊಂದಿಗೆ ಗಣ್ಯರ ಪಾಲ್ಗೊಳ್ಳುವಿಕೆಯೊಂದಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ, ಉಚಿತ ಬಿ.ಪಿ-ಶುಗರ್ ಪರೀಕ್ಷೆ, ಸ್ಮಾರ್ಟ್ ಕ್ಲಾಸ್ ಮತ್ತು ಕುಡಿಯುವ ನೀರಿನ ಘಟಕ ಉದ್ಘಾಟನೆಯೊಂದಿಗೆ ಕಲಿಕಾಹಬ್ಬ ಹಲವು ಹೊಸತನಗಳಿಗೆ ಸಾಕ್ಷಿಯಾಯಿತು. ವಿದ್ಯಾರ್ಥಿಗಳೇ ತಯಾರಿಸಿದ ಅತಿಥಿಗಳಿಗೆ ಬ್ಯಾಡ್ಜ್ ಹಾಗೂ ಕಲಿಕಾ ಹಬ್ಬದ ವಿಶೇಷ ಪೇಟ, ಪ್ರಾಣಿ-ಪಕ್ಷಿಗಳ, ಹೂವುಗಳ, ಹಾರಗಳ ಕ್ರಾಫ್ಟ್ , ಮಿನಿ ಶಾಲಾ ವಾಹನದ ಮಾದರಿ... ಹೀಗೆ ಎಲ್ಲವೂ.. ಎಲ್ಲರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾಯಿತು. ಮಕ್ಕಳ ಚಿಂತನೆಗಳನ್ನು ಬದಲಿಸಲು ನಾಂದಿಹಾಡಿರುವ ಈ ಕಲಿಕಾ ಹಬ್ಬ ಕಾರ್ಯಕ್ರಮ.. ಶೈಕ್ಷಣಿಕ ವರ್ಷದಲ್ಲಿ ಕನಿಷ್ಟ ಎರಡು ಬಾರಿ ತಾಲೂಕು ಮಟ್ಟದಲ್ಲಿ ಪ್ರತಿಭಾಕಾರಂಜಿಯ ಜೊತೆಗೆ ಹಾಗೂ ಶಾಲೆಗಳಲ್ಲಿ ಪ್ರತಿವಾರ ನಡೆಯಲೆಂಬುದೇ ನಮ್ಮೆಲ್ಲರ ಹಾರೈಕೆ. ಸರಕಾರ-ಇಲಾಖೆ ಈ ಕುರಿತು ಚಿಂತಿಸಬೇಕಾಗಿದೆ.
............................ ನಾರಾಯಣ ರೈ ಕುಕ್ಕುವಳ್ಳಿ
ನಿವೃತ್ತ ಪದವೀಧರ ಶಿಕ್ಷಕರು.
ಮಧುಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************Ads on article

Advertise in articles 1

advertising articles 2

Advertise under the article