-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು
                    
          ಯೋಗ್ಯ ಅಯೋಗ್ಯ ಪರಸ್ಪರ ವಿರುದ್ಧಾರ್ಥ ಪದಗಳು. ಆದರೆ ವ್ಯಕ್ತಿಯ ಶ್ರೇಷ್ಠತೆ ಮತ್ತು ಜ್ಯೇಷ್ಠತೆಯ ಮಾಪಕಗಳೂ ಹೌದು. ಯೋಗ್ಯನೆನ್ನುವಾಗ ಸಜ್ಜನಿಕೆಯು ಗೋಚರವಾದರೆ, ಅಯೋಗ್ಯನೆನ್ನುವಾಗ ದುರ್ಜನಿಕೆ ಮಾರ್ದನಿಸುತ್ತದೆ. “ನಿನ್ನ ಯೋಗ್ಯತೆಯನ್ನು ನಾನರಿಯೆನೇ?” ಎಂಬ ಪ್ರಶ್ನೆಯಲ್ಲಿ ನೀನು ಅಯೋಗ್ಯನೆಂಬ ಗೂಢಾರ್ಥವಿದೆ. ಒಬ್ಬನ ಯೋಗ್ಯತೆಯನ್ನು ತೂಗಿ ನೋಡಲು ಅವನ ಬಾಯಿಯಿಂದ ಹೊಮ್ಮುವ ಮಾತುಗಳೂ ಆಧಾರ. ಯೋಗ್ಯರು ಎದುರಿಗಿರುವವನ ಅರ್ಹತೆ, ಜನಪ್ರಿಯತೆ, ಗುಣಗಳನ್ನು ಅರ್ಥಮಾಡಿ ಮಾತನಾಡುತ್ತಾರೆ. ಅಯೋಗ್ಯರಿಗೆ ಎದುರಿಗಿರುವವನ ಅರ್ಹತೆಗಳು ಗೌರವಾದರಗಳು ಗೌಣವಾಗಿದ್ದು ತಮ್ಮೊಳಗಿರುವ ಅವರ ಅಹಂಕಾರವೇ ಮಾತನಾಡುತ್ತದೆ. ಯೋಗ್ಯತೆಯೂ ಒಂದು ಸುಯೋಗವೇ ಆಗಿದೆ. ‘ಯೋಗ’ ವಿಲ್ಲದವನಿಗೆ ‘ಅಯೋಗ್ಯ’ ಎಂಬ ಬಿರುದೇ ಶಾಶ್ವತ. ಹೆಸರಿನ ಜೊತೆಗೆ ಯೋಗಿ ಎಂಬ ಉಪನಾಮವಿರುವುದನ್ನು ಗಮನಿಸಿದ್ದೇವೆ. ಅಯೋಗಿ ಎಂಬ ಉಪನಾಮಧೇಯವನ್ನು ಯಾರೂ ಇರಿಸುವುದಿಲ್ಲ. ಯೋಗಿ ಇದು ಯೋಗ್ಯ ಎಂಬುದರ ಉತ್ಪನ್ನ. “ರಾಗಿ ತಂದೀರಾ ರಾಗಿ ತಂದೀರಾ? ರಾಮ ನಾಮ ಜಪಿಸಿ ಯೋಗ್ಯರಾಗಲು.....” ಎಂಬ ದಾಸವಾಣಿಯಿದೆ. ರಾಮ ನಾಮವು ಯೋಗ್ಯರ ಬಾಯಿಯಿಂದ ಮಾತ್ರ ಧ್ವನಿಸಲು ಸಾಧ್ಯ. ಪ್ರಾಚೇತಸ ಎಂಬ ದರೋಡೆಕೋರನಿಗೆ ರಾಮನ ಹೆಸರನ್ನು ಹೇಳಲಾಗಲಿಲ್ಲ. ಸಪ್ತ ಋಷಿಗಳು ಮರ ಮರ ಎಂದು ಉಪದೇಶಿಸಿ ಅವನ ಬಾಯಿಯಿಂದ ರಾಮನಾಮ ಪಠಣ ಮಾಡಿಸಿದರು. ಮುಂದೆ ಆತ ಯೋಗ್ಯನೂ ಪರಮಶ್ರೇಷ್ಠ ಋಷಿಯೂ ಆಗಿ ಪರಿವರ್ತನೆಯಾದನು. ರಾಮಾಯಣದ ಕರ್ತೃ ವಾಲ್ಮೀಕಿಯಾದನು ಎಂಬ ಪುರಾಣ ಕಥನವಿದೆ. ಅಯೋಗ್ಯನೂ ಸುಕೃತಗಳಿಂದ ಸ್ವಭಾವ ಪರಿವರ್ತನೆಯಾಗಿ ಯೋಗ್ಯನಾಗಲು ಸಾಧ್ಯವಿದೆಯಲ್ಲವೇ?. ಯೋಗ್ಯನೂ ಸಾಂಗತ್ಯದೋಷದಿಂದ ಭಾವವಿಮುಖನಾಗಿ ಅಯೋಗ್ಯನೂ ಆಗಬಹುದು. ವಿನಯವು ಯೋಗ್ಯನನ್ನು ಸೃಷ್ಟಿಸುತ್ತದೆ. ಅಹಂಕಾರವು ಅಯೋಗ್ಯನ ಹುಟ್ಟಿಗೆ ಕಾರಣವಾಗುತ್ತದೆ. ಅಯೋಗ್ಯನ ಬತ್ತಳಿಕೆಯೊಳಗೆ ಷಡ್ವೈರಿಗಳೇ ವಿರಾಜಿಸುತ್ತವೆ. ಯೋಗ್ಯನ ಭಾವನೆಯಲ್ಲಿ ಕರುಣೆ, ಪ್ರೀತಿ, ಶಾಂತಿ ಮತ್ತು ನೀತಿಗಳೇ ಸಂಭ್ರಮಿಸುತ್ತಿರುತ್ತವೆ. ಯೋಗ್ಯರಾಗ ಬೇಕೆಂಬ ಬಯಕೆಯುಳ್ಳವರು ಮನೋಶುದ್ಧರಾಗಿರಬೇಕು. ಕಾಯಾ ವಾಚಾ ಮನಸಾ ಪರಹಿತ ಪೋಷಕನಾಗಿರಬೇಕು. ನಾಣ್ಯದ ಮುಖಗಳಂತೆ ಪ್ರತಿಯಬ್ಬನಲ್ಲೂ ಯೋಗ್ಯತೆ ಮತ್ತು ಅಯೋಗ್ಯತೆಗಳಿರುತ್ತವೆ. ಆದರೆ ಅಯೋಗ್ಯತೆಯನ್ನು ಸೋಲಿಸಿ ಯೋಗ್ಯತೆಯನ್ನು ವಿಜೃಂಭಿಸುವಂತೆ ಮಾಡುವುದು ವೈಯಕ್ತಿಕ ಸಂಕಲ್ಪವಾಗಬೇಕು..
     ‘ಅಧಿಕ ಪ್ರಸಂಗಿ’ ಎಂಬುದು ಅಯೋಗ್ಯನಿಗೆ ಮೀಸಲಾದ ಬಿರುದು. ಹಾಗೆಯೇ ‘ಕಪಟಿ’, ‘ಮೋಸಗಾರ’, ‘ತಲೆಹರಟೆ’, ‘ಕಿರಿಕಿರಿ ಮನುಷ್ಯ’, ‘ವಿತಂಡವಾದಿ’, ‘ಹಿತ್ತಳೆ ಕಿವಿ’, ‘ ಚಾಡಿ’, ‘ ಸುಳ್ಳ’, ‘ಜಿಪುಣ’. ‘ಸೋಮಾರಿ’, ‘ಉಂಡಾಡಿಗುಂಡ’, ‘ಪೋಲಿ’, ‘ಕುತಂತ್ರಿ’ ‘ಸಿಡುಕ’, ‘ಉಪದ್ರವಿ’, ‘ ಭಾಷೆಯಿಲ್ಲದವನು’, ‘ ದ್ರೋಹಿ’, ‘ಲಜ್ಜೆಗೇಡಿ’, ‘ಕೆಟ್ಟವನು’, ‘ಜಗಳಗಂಟ’ ಮೊದಲಾದ ಬಿರುದುಗಳು ಅಯೋಗ್ಯನಿಗೆ ಅರ್ಹವಾಗಿಯೇ ದಕ್ಕುತ್ತವೆ. ಇಲ್ಲಿ ಲಿಂಗ ಭೇದವಿಲ್ಲದೆ ಅಯೋಗ್ಯರಿಗೆ ಈ ಬಿರುದುಗಳು ಬಹಳ ಸುಲಭವಾಗಿಯೇ ಒದಗಿ ಬರುತ್ತವೆ. ಆದರೆ ಯೋಗ್ಯನಾದವನಿಗೆ ಯಾವುದೇ ಉತ್ತಮ ಬಿರುದುಗಳು ಒಲಿಯಬೇಕಾದರೆ ಶ್ರಮವಿದೆ. ತಾಳ್ಮೆ, ಶಿಸ್ತು, ಪ್ರಾಮಾಣಿಕತೆ, ನಿಯಮ ಬದ್ಧತೆ, ವಾಕ್ಪಾಲನೆ, ಸಹಿಷ್ಣುತೆ, ಭಾವ ಶ್ರೀಮಂತಿಕೆ, ಮೃದು ಭಾಷಿತ್ವ, ವಿನಯವಂತಿಕೆ, ಹಸನ್ಮುಖ ಮುಂತಾದ ಉತ್ತಮಾಂಶಗಳ ‘ಕಣಜ’ ವನ್ನು ಹೊಂದಿರಬೇಕು. ನಾವು ಯೋಗ್ಯರೇ? ಅಥವಾ ಅಯೋಗ್ಯರೇ? ಅಯೋಗ್ಯರಾಗಿದ್ದರೆ ಯೋಗ್ಯತೆಯ ದಾರಿಗೆ ಸರಿಯೋಣ. ಯೋಗ್ಯರಾಗಿದ್ದರೆ ಅದೇ ದಾರಿಯಲ್ಲಿ ಬೆಳಗೋಣ. ‘ಯೋಗ್ಯ’ ಎಂಬ ಪಟ್ಟದರಸರಾಗಿ ಸುಖವಾಗಿರೋಣ. ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************

Ads on article

Advertise in articles 1

advertising articles 2

Advertise under the article