ಹಕ್ಕಿ ಕಥೆ : ಸಂಚಿಕೆ - 81
Tuesday, January 10, 2023
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಕೆಲವು ವರ್ಷಗಳ ಹಿಂದೆ ಬೇಸಗೆ ರಜೆಯಲ್ಲಿ ಮಡದಿಯ ಊರು ಸಾಗರಕ್ಕೆ ಹೋಗಿದ್ದೆ. ಅಲ್ಲಿಗೆ ಹೋದಾಗಲೆಲ್ಲ ಬೆಳಗ್ಗೆ ಎದ್ದು ಒಂದು ವಾಕಿಂಗ್ ಹೋಗಿ ಬರುವುದು ನನ್ನ ಪದ್ಧತಿ. ಅವತ್ತು ಹಾಗೇ ಬೆಳಗ್ಗೆ ಎದ್ದು ನಡೆದುಕೊಂಡು ಆಸುಪಾಸಿನ ಗದ್ದೆಗಳ ಕಡೆಗೆ ಹೋದೆ. ಬೇಸಗೆಯಾದ್ದರಿಂದ ಗದ್ದೆ ಕೆಲಸಗಳೆಲ್ಲ ಮುಗಿದು ಕಟಾವು ಆಗಿತ್ತು. ಹೊಲಗಳು ಒಣಗಿ ಕಂದುಬಣ್ಣಕ್ಕೆ ತಿರುಗಿತ್ತು. ಪಕ್ಕದಲ್ಲೇ ಹರಿಯುವ ವರದಾ ನದಿಯಲ್ಲಿ ಸಣ್ಣಗೆ ನೀರು ಹರಿಯುತ್ತಿತ್ತು. ಮುಂದೆ ಹೋಗುತ್ತಾ ಊರಿನ ಗಣಪತಿ ದೇವಸ್ಥಾನದ ಹತ್ತಿರ ಕೆರೆಯ ಬಳಿಗೆ ಬಂದೆ. ಕರಾವಳಿ ಜಿಲ್ಲೆಯವರಾದ ನಾವು ಅದರಲ್ಲೂ ಮಲೆನಾಡಿನ ಆಸುಪಾಸಿನಲ್ಲಿರುವವರು ಕೆರೆ ಎಂದು ಕರೆಯುವ ನೀರಿನ ಮೂಲಕ್ಕೂ ಈ ಕೆರೆಗೂ ಬಹಳ ಅಂತರ ಇದೆ. ಕೆರೆಯ ಸುತ್ತ ಒಂದು ಸುತ್ತು ನಡೆಯಬೇಕಾದರೆ ಎರಡು ಕಿಲೋಮೀಟರ್ ದೂರವೇ ಆಗಬಹುದು. ಅದರ ಆಸುಪಾಸಿನಲ್ಲಿ ಓಡಾಡಿ ಒಂದು ಕಡೆ ಕಟ್ಟೆಯ ಮೇಲೆ ಕುಳಿತುಕೊಂಡೆ. ಉದಯಿಸುವ ಸೂರ್ಯನ ಕೆಂಪು ಬಣ್ಣ ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗಿ ಕೆರೆಯ ನೀರಿನ ಮೇಲೆಲ್ಲ ಚಿನ್ನದ ಬಣ್ಣದ ಸೀರೆಯನ್ನು ಹರಡಿದಂತಿತ್ತು. ಅದನ್ನೇ ನೋಡುತ್ತಾ ಸ್ವಲ್ಪ ಹೊತ್ತು ಅಲ್ಲೇ ಕುಳಿತೆ. ನಿಧಾನವಾಗಿ ಬಿಸಿಲು ಮೇಲೇರಿ ಹೊರಡಬೇಕು ಎನ್ನುವಷ್ಟರಲ್ಲಿ ಕೆರೆಯ ಮೇಲೆ ನೀರಿನಿಂದ ಕೆಲವು ಅಡಿ ಎತ್ತರದಲ್ಲಿ ಹಕ್ಕಿಯೊಂದು ಹಾರುವುದು ಕಾಣಿಸಿತು. ದೇಹ ಮತ್ತು ರೆಕ್ಕೆಯೆಲ್ಲ ಬಿಳೀ ಬಣ್ಣ, ಕೆಂಪು ಬಣ್ಣದ ಕಾಲುಗಳು, ಗಾಢ ಹಳದಿ ಬಣ್ಣದ ಕೊಕ್ಕು, ಬಿಸಿಲಿನಿಂದ ರಕ್ಷಣೆಗೋ ಅಥವಾ ಚಂದ ಕಾಣಲಿಕ್ಕೋ ಎಂಬಂತೆ ಕರೀ ಬಣ್ಣದ ಟೋಪಿ ಹಾಕಿಕೊಂಡ ಹಾಗೆ ಕಾಣುವ ತಲೆ, ಎರಡು ಸೀಳಾಗಿ ಇಂಗ್ಲೀಷ್ ನ v ಅಕ್ಷರ ಬರೆದಂತೆ ಕಾಣುವ ಬಾಲ, ಚೂಪಾದ ಬಾಲ ಮತ್ತು ರೆಕ್ಕೆಯ ತುದಿಗಳು. ನೀರಿನಿಂದ ಕೆಲವು ಅಡಿಗಳ ಅಂತರದಲ್ಲಿ ಹಾರಾಡುತ್ತಾ ನೀರನ್ನೆಲ್ಲ ಗಮನಿಸುತ್ತಾ ಹಾರುತ್ತಿತ್ತು. ಕೆರೆಯ ಒಂದು ತುದಿ ತಲುಪಿದರೆ ತಿರುಗಿ ಮತ್ತೆ ಇನ್ನೊಂದು ತುದಿಯವರೆಗೆ ಹಾರುವುದು. ಇನ್ನೊಂದು ತುದಿಯಿಂದ ಮತ್ತೆ ತಿರುಗಿ ಆ ತುದಿಗೆ ಹಾರುವುದು. ನದಿ ಮತ್ತು ಹಿನ್ನೀರಿನ ಪ್ರದೇಶಗಳಲ್ಲಿ ಬೇಕೆನಿಸುವಷ್ಟು ದೂರಕ್ಕೆ ಹಾರುವುದನ್ನು ನೋಡುವುದೇ ಚಂದ. ಹಾರುತ್ತಾ ಮೀನುಕಂಡರೆ ನೀರಿಗೆ ಅನಾಮತ್ತಾಗಿ ಹಾರಿ ಮೀನು ಹಿಡಿದುಕೊಂಡು ನುಂಗಿಬಿಡುತ್ತಿತ್ತು.
ಮಾರ್ಚ್ ತಿಂಗಳಿನಿಂದ ಮೇ ತಿಂಗಳ ನಡುವೆ ನದಿಗಳು ಒಣಗಿರುವಾಗ ನದೀ ಬದಿಯ ಮರಳಿನಮೇಲೆ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಗುಂಪಾಗಿ ನೂರಾರು ಹಕ್ಕಿಗಳು ಒಟ್ಟಾಗಿ ಮೊಟ್ಟೆ ಇಡುವುದರಿಂದ ಆ ಜಾಗ ದೊಡ್ಡದೊಂದು ಕಾಲೊನಿಯಂತೆ ಕಾಣುತ್ತದೆ. ಜೊತೆಗೆ ಶತ್ರುಗಳಿಂದ ರಕ್ಷಣೆಗೂ ಸಹಾಯವಾಗುತ್ತದೆ. ನಿಮ್ಮೂರಿನಲ್ಲಿ ನದಿ, ಹಿನ್ನೀರು ಅಥವಾ ದೊಡ್ಡ ಕೆರೆ ಇದ್ದರೆ ಅದರ ಆಸುಪಾಸಿನಲ್ಲಿ ಈ ಹಕ್ಕಿ ನೋಡಲು ಸಿಗಬಹುದು. ಹುಡುಕ್ತೀರಲ್ಲ.
ಇಂಗ್ಲೀಷ್ ಹೆಸರು: River Tern
ವೈಜ್ಞಾನಿಕ ಹೆಸರು: Sterna aurantia
ಚಿತ್ರ ಕೃಪೆ : ಅಂತರ್ಜಾಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************