ಜೀವನ ಸಂಭ್ರಮ : ಸಂಚಿಕೆ - 67
Sunday, January 8, 2023
Edit
ಜೀವನ ಸಂಭ್ರಮ : ಸಂಚಿಕೆ - 67
ಮಕ್ಕಳೇ, ನಾವು ಇಂದು ಸಂತೋಷದ ಮಹತ್ವ ತಿಳಿದುಕೊಳ್ಳೋಣ. ಸಂತೋಷ ಯಾವಾಗ ಆಗುತ್ತದೆ ಎಂದರೆ ನಾವು ಅನುಭವಿಸಿದಾಗ. ಸಂತೋಷಪಡುವ ವಸ್ತು ನಮ್ಮ ದೇಹದಲ್ಲಿದೆ. ಅದೇ ನಮ್ಮ ಮನಸ್ಸು. ಕೆಲವರು ನಮ್ಮನ್ನು ಪ್ರಶ್ನಿಸುತ್ತಾರೆ, ದೇವರು ನಮಗೆ ಏನು ಕೊಟ್ಟಿದ್ದಾನೆ ಎಂದು. ನಿಸರ್ಗ ದೇವತೆ ನಮಗೆ ಉಸಿರಾಡಲು ಗಾಳಿ ನೀಡಿದೆ. ನಾವು ಗಾಳಿ ತಯಾರು ಮಾಡಲು ಆಗುವುದಿಲ್ಲ. ನಿಸರ್ಗ ದೇವತೆ ನೀರು ನೀಡಿದೆ. ನಾವು ನೀರನ್ನು ಅಷ್ಟು ಪ್ರಾಣಿ ಪಕ್ಷಿ ಗಿಡಗಳಿಗಾಗುವಷ್ಟು ತಯಾರು ಮಾಡಲು ಸಾಧ್ಯವಿಲ್ಲ. ನಿಸರ್ಗ ದೇವತೆ ನಮಗೆ ಕಾಳು ಕಡ್ಡಿ ಹಣ್ಣು ಮತ್ತು ತರಕಾರಿ ನೀಡಿದೆ. ಇದನ್ನು ಕೂಡ ನಾವು ತಯಾರು ಮಾಡಲು ಆಗುವುದಿಲ್ಲ. ಇಡೀ ಭೂಮಿಗೆ ಬೆಳಕನ್ನು ಮತ್ತು ಶಾಖವನ್ನು ನೀಡುವ ಸೂರ್ಯನನ್ನು ನಿಸರ್ಗ ದೇವತೆ ನೀಡಿದೆ. ಅಷ್ಟು ಪ್ರಮಾಣದಲ್ಲಿ ಬೆಳಕು ಮತ್ತು ಶಾಖ ನೀಡಲು ಸಾಧ್ಯವಿಲ್ಲ. ಗಾಳಿ ನೀರು ಆಹಾರ ಮತ್ತು ಬೆಳಕು ಇಲ್ಲದಿದ್ದರೆ ನಾವಷ್ಟೇ ಅಲ್ಲ, ಜಗತ್ತಿನ ಯಾವುದೇ ಸಸ್ಯ ಮತ್ತು ಪ್ರಾಣಿ ಬದುಕುವುದಿಲ್ಲ. ಸಸ್ಯ ಮತ್ತು ಪ್ರಾಣಿ ಬದುಕಲು, ನಿಸರ್ಗ ಇಷ್ಟೆಲ್ಲ ಉಚಿತವಾಗಿ ನೀಡಿರುವಾಗ, ಇನ್ನೇನು ನೀಡಬೇಕು?. ನಾವು ಜಗತ್ತಿನಲ್ಲಿ ವಿಕಾಸವಾಗುವ ಹೊತ್ತಿಗೆ, ಜಗತ್ತಿನಲ್ಲಿ ಸೂರ್ಯನ ಬೆಳಕು, ಗಾಳಿ, ಗಿಡ, ಮರ ಪ್ರಾಣಿ, ಪಕ್ಷಿ ಎಲ್ಲಾ ಇದ್ದವು. ಇವೆಲ್ಲ ವಿಕಾಸ ಆದ ಮೇಲೆ ಅಂತಿಮವಾಗಿ ಮಾನವ ವಿಕಾಸವಾಗಿ ಬಂದನು. ಇವನ್ನೆಲ್ಲಾ ಮಾನವ ಸೃಷ್ಟಿಸಲಿಲ್ಲ. ಸೃಷ್ಟಿಯಾಗಿರುವಲ್ಲಿ ಮಾನವ ವಿಕಾಸವಾದ. ಮಾನವನಿಗೆ ಬೇರೆ ಪ್ರಾಣಿ ಪಕ್ಷಿಗಳಿಗಿಂತ ವಿಶೇಷವಾದ ಅವಯವಗಳು ಇದೆ. ಕೈಯಿದೆ, ಮನಸ್ಸು ಮತ್ತು ಬುದ್ಧಿ ಇವು ಇತರ ಪ್ರಾಣಿಗಳಿಗಿಂತ ವಿಶೇಷವಾಗಿದೆ.
ನಿಸರ್ಗ ನಮಗೆ ಸುಂದರವಾದ ಕಣ್ಣು, ಕಿವಿ, ನಾಲಿಗೆ, ಮೂಗು, ಕೈ ಮತ್ತು ಕಾಲು ನೀಡಿದೆ. ಇವುಗಳನ್ನು ಬಳಸಿ ಆನಂದ ಪಡಲಿ ಎಂದು. ಈ ಜಗತ್ತಿನಲ್ಲಿರುವ ಗಿಡ, ಮರ, ಪ್ರಾಣಿ, ಪಕ್ಷಿ ಮತ್ತು ವಸ್ತುಗಳನ್ನು ಬಳಸಿ ಅನುಭವಿಸಿ ಆನಂದ ಪಡಲೆಂದು, ನಿಸರ್ಗ ಬಗೆ ಬಗೆಯ ಗಿಡ, ಮರ, ಹೂವು, ಹಣ್ಣು, ಪ್ರಾಣಿ, ಪಕ್ಷಿ ಗಳನ್ನು ನೀಡಿದೆ. ಪ್ರತಿಯೊಂದಕ್ಕೂ ವಿಶೇಷವಾದ ಬಗೆ ಬಗೆಯ ವರ್ಣಿಸಲು ಸಾಧ್ಯವಿಲ್ಲದ ಬಣ್ಣಗಳನ್ನು ಬಳಿದಿದೆ. ಇಲ್ಲಿರುವ ವಸ್ತುಗಳೆಲ್ಲ ಇರುವುದು ಅನುಭವಿಸಲು. ಅನುಭವಿಸದ ವಸ್ತು ಸಾವಿರ ಕೋಟಿ ಇದ್ದರೇನು?. ಇಲ್ಲಿರುವ ವಸ್ತುವನ್ನು ಅನುಭವಿಸಿ ಆನಂದಿಸಲೆಂದು ನಿಸರ್ಗ ಬೇಕಾದ ಅವಯವಗಳನ್ನು ಮತ್ತು ವಸ್ತುಗಳನ್ನು ನೀಡಿದೆ.
ಇಲ್ಲಿ ಒಂದು ಸುಂದರ ಗುಲಾಬಿ ಹೂವಿದೆ. ಆ ಗುಲಾಬಿ ಹೂವನ್ನು ಕಣ್ಣು ನೋಡುತ್ತದೆ. ಮನಸ್ಸು ಅದರ ಬಣ್ಣ, ಆಕಾರ, ಗಾತ್ರ ಮತ್ತು ವಾಸನೆಯ ಜ್ಞಾನ ಮಾಡಿಕೊಳ್ಳುತ್ತದೆ. ಈ ಜ್ಞಾನದೊಂದಿಗೆ ಮಧುರ ಪ್ರೀತಿ ಭಾವನೆ ಬೆರೆತಾಗ, ಅದು ನಮಗೆ ಸಂತೋಷದ ಅನುಭವವಾಗುತ್ತದೆ. ಜ್ಞಾನ+ ಭಾವನೆ= ಅನುಭವ. ಭಾವನೆ ಸೇರದಿದ್ದಲ್ಲಿ ಜ್ಞಾನ ಯಾಂತ್ರಿಕವಾಗುತ್ತದೆ. ಅನುಭವವಾಗುವುದಿಲ್ಲ. ಇದೆಲ್ಲ ಮನಸ್ಸಿನ ವಿವಿಧ ಕ್ರಿಯೆಗಳು. ಜ್ಞಾನ ಪಡೆಯುವುದು ಮನಸ್ಸು, ಅನುಭವಿಸುವುದು ಮನಸ್ಸೆ. ಹಾಗಾಗಿ ಪ್ರೀತಿ ಭಾವ ಬೆರೆತರೆ ಮನಸ್ಸು ಸಂತೋಷ ಪಡುತ್ತದೆ. ದುಃಖದ ಭಾವ ದೊರೆತರೆ ದುಃಖವಾಗುತ್ತದೆ. ವಸ್ತುವಿನಲ್ಲಿ ಸುಖವಿಲ್ಲ, ದುಃಖವು ಇಲ್ಲ. ನಮಗೆ ಸುಖ ದುಃಖವನ್ನು ಅನುಭವಿಸುವಿಸಲು ಸಹಾಯ ಮಾಡುವುದು ನಮ್ಮ ಭಾವನೆ. ಆದ್ದರಿಂದ ನಾವು ಸುಂದರ ಮನಸ್ಸನ್ನು ರೂಪಿಸಿಕೊಂಡರೆ, ಒಳ್ಳೆಯ ಪ್ರೀತಿ ಪ್ರೇಮದ ಭಾವನೆ ಬೆಳೆಸಿಕೊಂಡರೆ, ನಮ್ಮ ಅನುಭವ ಸಂತೋಷವನ್ನು ನೀಡುತ್ತದೆ. ಜೀವನ ಎಂದರೆ ಅನುಭವ, ಅನುಭವವೇ ಜೀವನ. ಆ ಅನುಭವ ಸಂತೋಷ ನೀಡಿದರೆ ಜೀವನ ಆನಂದ.
ಹಣ ಗಳಿಸುವುದು, ಅಧಿಕಾರ ಪಡೆಯುವುದು, ಒಡವೆ, ವಸ್ತ್ರ ಮತ್ತು ವಸ್ತುಗಳನ್ನು ಗಳಿಸುವುದು, ಸಂತೋಷ ನೀಡುವುದಿಲ್ಲ. ಅವುಗಳನ್ನು ಬಳಸಿ ಅನುಭವಿಸಿದಾಗ ಪಡುವ ಸಂತೋಷವೇ ಜೀವನ. ಜೀವನದ ಉದ್ದೇಶ ಸತ್ಯಂ, ಶಿವಂ ಮತ್ತು ಸುಂದರಂ. ಸತ್ಯಂ ಎಂದರೆ ಸತ್ಯ. ಸದಾ ಯಾವಾಗಲೂ ಇರುವುದೇ ಸತ್ಯ. ನಿಸರ್ಗ ಇದೆ ಅದೇ ಸತ್ಯ. ಶಿವಂ ಎಂದರೆ ಶಾಂತಿ. ನಿಸರ್ಗ ಯಾರಿಗೂ ದ್ವೇಷ ಬಗೆಯುವುದಿಲ್ಲ. ಸೂರ್ಯ, ನಿಸರ್ಗ ಮತ್ತು ಈ ಭೂಮಿ ಯಾರಿಗೂ ತಾರತಮ್ಯ ಮಾಡುವುದಿಲ್ಲ ಅಥವಾ ಇಷ್ಟು ಹಣ ನೀಡಿದರೆ ಇದು ದೊರಕುತ್ತದೆ ಎಂದು ಹೇಳುವುದಿಲ್ಲ. ಎಲ್ಲರಿಗೂ ಸಂತೋಷವನ್ನೇ ನೀಡುವುದರಿಂದ, ಇದು ಶಾಂತ ಸ್ವರೂಪ. ಇಡೀ ನಿಸರ್ಗವೇ ಸುಂದರ. ಇದರಲ್ಲಿ ಗಿರಿ, ಶಿಖರ, ಬೆಟ್ಟ, ಹಳ್ಳ ಕೊಳ್ಳ, ನದಿ, ಸಾಗರ ಬಗೆ ಬಗೆಯ ಸಸ್ಯ, ಬಗೆ ಬಗೆಯ ಹೂವು ಹಣ್ಣು, ವಿವಿಧ ಬಣ್ಣಗಳ ಪಕ್ಷಿ, ಅವುಗಳ ಗಾನ, ವೈವಿಧ್ಯಮಯ ಪ್ರಾಣಿಗಳು, ಆಕಾಶ, ನಕ್ಷತ್ರ, ಗ್ರಹ ಮತ್ತು ಉಪಗ್ರಹ ಇವೆಲ್ಲ ನಮ್ಮ ಕಣ್ಣು ತುಂಬಿ ನಮ್ಮ ಮನಸ್ಸನ್ನು ಶ್ರೀಮಂತ ಗೊಳಿಸಿದೆ. ಯಾವುದೇ ಗಿಡ ಪ್ರಾಣಿ, ಪಕ್ಷಿ, ಆಕಾಶ, ನಕ್ಷತ್ರ ನಮ್ಮನ್ನು ನೋಡಬೇಡ ಎಂದಿಲ್ಲ. ಹಾಗಾಗಿ ಒಬ್ಬ ವ್ಯಕ್ತಿ ಒಂದು ಮನೆ ನಿರ್ಮಿಸಿ, ಇದು ನನ್ನ ಮನೆ, ಯಾರಿಗೂ ಪ್ರವೇಶವಿಲ್ಲ ಅನ್ನಬಹುದು ಆದರೆ ಅದು ಸಣ್ಣ ಜಾಗ. ಅದೇ ಜಗತ್ತು ಹಾಗೆ ಹೇಳುವುದಿಲ್ಲ. ಈ ಜಗತ್ತು ಯಾರೊಬ್ಬರ ಸ್ವತ್ತಲ್ಲ. ನಮ್ಮೆಲ್ಲರ ಸ್ವತ್ತು. ಜೀವನವೆಂದರೆ ಸ್ವತಂತ್ರವಾಗಿ , ಶಾಂತಿಯಿಂದ ಮತ್ತು ಸಂತೋಷದಿಂದ ಬಾಳುವುದು. ನಮ್ಮ ಮನಸ್ಸೆ ಸ್ವತಂತ್ರವಾದಾಗ ಶಾಂತಿ ಮತ್ತು ಸಂತೋಷ ದೊರಕುತ್ತದೆ. ಹಾಗೆ ಮನಸ್ಸು ಸ್ವತಂತ್ರವಾಗಲು ಯಾವುದಕ್ಕೂ ಮನಸ್ಸು ಬಂಧಿಸಬಾರದು. ಉದಾರಣೆ ಗಂಡ, ಹೆಂಡತಿ, ಮಕ್ಕಳು, ಒಡವೆ, ಆಸ್ತಿ, ಅಧಿಕಾರ, ಜಾತಿ, ಮತ ಮತ್ತು ಧರ್ಮ ಹೀಗೆ ಯಾವುದಕ್ಕೂ ಬಂದಿಯಾಗದಿರುವುದು. ಪ್ರತಿ ಪಾತ್ರವನ್ನು ಹಿತಮಿತವಾಗಿ ಚೆನ್ನಾಗಿ ನಿರ್ವಹಿಸುವುದು. ಯಾವುದು ಅತಿಯಾಗದಂತೆ ನೋಡಿಕೊಳ್ಳುವುದು. ಪ್ರತಿಯೊಂದರಲ್ಲೂ ಮಿತಿಯನ್ನು ಅಳವಡಿಸಿದರೆ ಮನಸ್ಸು ಸಾಧ್ಯವಾದಷ್ಟು ಮಟ್ಟಿಗೆ ಸ್ವತಂತ್ರವಾಗುತ್ತದೆ. ನಿಸರ್ಗದ ವಸ್ತು ಬಳಸಿ ಅನುಭವ ಪಡೆದು ಆನಂದ ಪಡೆಯುವುದು ಜೀವನ. ಗಳಿಸೋದು ಮಹತ್ವವಲ್ಲ, ಗಳಿಸಿದ್ದನ್ನು ಬಳಸಿ ಅನುಭವ ಪಡೆದು ಆನಂದಿಸುವುದು ಜೀವನ. ಮಕ್ಕಳೇ, ಜೀವನ ಅತ್ಯುತ್ತಮ ಸಂಪತ್ತು. ನಿಸರ್ಗ ನಮಗೆ ಯಾವುದೋ ಒಂದು ಸಾಮರ್ಥ್ಯ ನೀಡಿದೆ. ಅದರಲ್ಲಿ ಜ್ಞಾನ ಸಂಪಾದಿಸಿ, ಶ್ರೀಮಂತರಾಗುವುದು. ಉಳಿದಂತೆ ಬಡವರಾಗುವುದು ಬೇಡ ಎಂದು, ನಿಸರ್ಗ ನಮ್ಮಲ್ಲಿ ಪಂಚೇಂದ್ರಿಯಗಳನ್ನು ಮನಸ್ಸು ಮತ್ತು ಬುದ್ಧಿಯನ್ನು ಇಟ್ಟಿದೆ. ಇವುಗಳನ್ನು ಬಳಸಿ ಅನುಭವಿಸಿ ಆನಂದ ಪಡೋದು. ಉದಾಹರಣೆಗೆ ನಿಸರ್ಗ ನಮಗೆ ನಟನೆಯಲ್ಲಿ ಸಾಮರ್ಥ್ಯ ಇಟ್ಟಿದೆ ಎಂದರೆ, ಅದರ ಜ್ಞಾನ ಪಡೆದು ನಟನೆಯಲ್ಲಿ ಶ್ರೀಮಂತರಾಗುವುದು. ಉಳಿದಂತೆ ನಾವೆಲ್ಲ ಬಡವರು. ಬಡವರಾಗಬಾರದು ಎಂದು ನಿಸರ್ಗ ನಮ್ಮಲ್ಲಿ ಅವಯವ ಇಟ್ಟಿದೆ. ಒಬ್ಬ ಧನಿಕ ಸುಂದರ ಮನೆ ನಿರ್ಮಿಸಿದರೆ, ಆತನು ಅದರಲ್ಲಿ ಶ್ರೀಮಂತ. ನಾವು ನಟನೆಯಲ್ಲಿ ಶ್ರೀಮಂತರು. ನಾವು ಹಾಗೆ ಮನೆ ನಿರ್ಮಿಸಲು ಆಗುವುದಿಲ್ಲ. ಆಗ ನಿಸರ್ಗ ನೀಡಿರುವ ಕಣ್ಣನ್ನು ಬಳಸಿ ನೋಡಿ ಆನಂದ ಅನುಭವಿಸುವುದು, ಸಂಗೀತಜ್ಞರ ಗಾಯನವನ್ನು ನಮ್ಮ ಕಿವಿ ಬಳಸಿ ಆನಂದ ಅನುಭವಿಸುವುದು. ನಮ್ಮ ನಾಲಿಗೆ ಬಳಸಿ ಬಗೆ ಬಗೆಯ ರುಚಿಯನ್ನು ಅನುಭವಿಸುವುದು ಮತ್ತು ಸಂತೋಷ ಪಡುವುದು. ಮನೆ ಕಟ್ಟಿದ ಮಾಲಕನಿಗೆ ಸುಮಧುರ ಗಾನ ನೀಡಿದ ಗಾಯಕನಿಗೆ ಸುಂದರ ಪದಗಳಿಂದ ಒಳ್ಳೆ ಮಾತನಾಡುವುದು. ನಾನು ನೋಡಿ ಅನುಭವಿಸಿ ಆನಂದಿಸಲು ನಾನು ಕೇಳಿ ಅನುಭವಿಸಿ ಆನಂದಿಸಲು ಕಾರಣರಾದವರಿಗೆ ಧನ್ಯವಾದಗಳು ಹೇಳುವುದು. ಇದರಿಂದ ನಮಗೂ ಸಂತೋಷ ನಿರ್ಮಿಸಿದ ಮಾಲೀಕನಿಗೆ, ಗಾಯನ ಮಾಡುವವರಿಗೂ ಸಂತೋಷ. ಹೀಗೆ ಜೀವನವನ್ನು ಅನುಭವಿಸುವುದೇ ಜೀವನ. ಸಂತೋಷವೂ ವಸ್ತು , ಒಡವೆ, ಅಧಿಕಾರ ಸಂಪತ್ತಿನಲ್ಲಿ ಇಲ್ಲ. ಸಂತೋಷ ಇರುವುದು. ಅನುಭವಿಸುವುದರಲ್ಲಿ. ಅನುಭವಿಸುವುದು ಮನಸ್ಸು ಮತ್ತು ಮನಸ್ಸಿನಲ್ಲಿರುವ ಭಾವನೆ. ನಾವು ಸುಂದರ ಮನಸ್ಸು ಮಧುರ ಭಾವನೆ ಬೆಳೆಸಿಕೊಂಡರೆ, ಸಂತೋಷವಂತರಾಗುವೆವು. ಅಧಿಕಾರ ಸಂಪತ್ತು ಇರಲಿ ಅಥವಾ ಬಿಡಲಿ, ನಾವು ಮಾತ್ರ ಸಂತೋಷವಂತರೆ. ಅದಕ್ಕಾಗಿ ನಮಗೆ ಏನೂ ದೊರಕುತ್ತದೆಯೋ, ನಿಸರ್ಗ ನಮಗೆ ಏನು ಅಳವಡಿಸಿದಿಯೋ ಅದನ್ನು ಬಳಸಿ ಅನುಭವಿಸಿ ಸಂತೋಷ ಪಡೋಣ. ಸಂತೋಷ ಕೊಡಬೇಕಾದರೆ ನಮ್ಮನ್ನು ನಾವು ಮರೆಯಬೇಕು. ಯಾವುದನ್ನು ಅನುಭವಿಸುತ್ತೇವೆಯೋ ಅದರಲ್ಲಿ ಮನಸ್ಸು ತಲ್ಲಿನವಾಗಬೇಕು. ಸಂಗ್ರಹಕ್ಕಾಗಿ ಜೀವನವಲ್ಲ, ಬಳಕೆಗಾಗಿ ಜೀವನ, ಬಳಸಿ ಸಂತೋಷ ಪಡುವುದೇ ಜೀವನ. ಇದಕ್ಕಾಗಿ ಸುಂದರವಾಗಿ ಕೆಲಸ ಮಾಡುವುದು. ಜಗತ್ತನ್ನು ಮತ್ತು ಜಗತ್ತಿನಲ್ಲಿರುವ ಎಲ್ಲಾ ವಸ್ತುಗಳನ್ನು ಪ್ರೀತಿಸುವುದು, ಜಗತ್ತು ವೈವಿಧ್ಯ. ಒಂದು ವಸ್ತುವಿನಂತೆ ಮತ್ತೊಂದಿಲ್ಲ. ರೂಪದಲ್ಲಿ, ಬಣ್ಣದಲ್ಲಿ, ಗಾತ್ರದಲ್ಲಿ, ಮತ್ತು ಆಕಾರದಲ್ಲಿ ಪ್ರತಿಯೊಂದು ಭಿನ್ನ-ಭಿನ್ನವಾಗಿದೆ. ಹಾಗೆ ಶಬ್ದ ಕೂಡ ವೈವಿಧ್ಯಮಯವಾಗಿದೆ. ಒಂದರಂತೆ ಮತ್ತೊಂದಿಲ್ಲ. ವಾಸನೆಯಲ್ಲೂ ಅನೇಕ ಬಗೆಯನ್ನು ಕಾಣುತ್ತೇವೆ. ರುಚಿಯಲ್ಲೂ ಅನೇಕ ಬಗೆಯನ್ನು ಕಾಣುತ್ತೇವೆ. ಈ ವೈವಿಧ್ಯತೆಯೇ ಜಗತ್ತಿನ ಸೌಂದರ್ಯ. ಇದು ಇದ್ದ ಹಾಗೆ ಇರುವುದಿಲ್ಲ. ಪ್ರತಿ ಕ್ಷಣ ಬದಲಾವಣೆ ಹೊಂದುತ್ತಲೇ ಇರುತ್ತದೆ. ಹಾಗಾಗಿ ಅದನ್ನು ಆ ಕ್ಷಣವೇ, ನಾವು ನಮ್ಮ ಅಂಗಗಳನ್ನ ಬಳಸಿ ಅದರ ಸೌಂದರ್ಯ ಸವಿಯಬೇಕು. ಅಂದರೆ ವಸ್ತುವಿನ ವಿಶೇಷ ಸಂತೋಷ ಕೊಡುವ ಗುಣಲಕ್ಷಣಗಳನ್ನು ಅನುಭವಿಸಬೇಕು ವಸ್ತುವನ್ನಲ್ಲ... ಅಲ್ಲವೇ ಮಕ್ಕಳೇ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************