-->
ಜೀವನ ಸಂಭ್ರಮ : ಸಂಚಿಕೆ - 70

ಜೀವನ ಸಂಭ್ರಮ : ಸಂಚಿಕೆ - 70

ಜೀವನ ಸಂಭ್ರಮ : ಸಂಚಿಕೆ - 70                
                      
      ಮಕ್ಕಳೇ, ಇಂದು ರಸ್ತೆ ಪ್ರಯಾಣ ಜೀವನಕ್ಕೊಂದು ಪಾಠ ನೀಡುತ್ತಿದೆ. ಹೇಗೆ ಎಂಬುದನ್ನು ನೋಡೋಣ. ಈ ಎರಡು ಘಟನೆ ಓದಿ.....
        ನಾನು ಪ್ರೌಢಶಾಲೆ ಓದಬೇಕಾದರೆ, ನನ್ನೂರಿನಲ್ಲಿ ಪ್ರೌಢಶಾಲೆ ಇರಲಿಲ್ಲ. ನಾನು 9ನೇ ತರಗತಿ ಓದುವಾಗ ನನ್ನೂರಿನಲ್ಲಿ 8ನೇ ತರಗತಿ ಪ್ರಾರಂಭವಾಯಿತು. ಒಂದು ದೃಷ್ಟಿಯಲ್ಲಿ ನತದೃಷ್ಟ. ಇನ್ನೊಂದು ದೃಷ್ಟಿಯಲ್ಲಿ ಅದೃಷ್ಟವಂತ. ನಾನು ಓದುತ್ತಿದ್ದ ಶಾಲೆಯಲ್ಲಿ ಪಾಪಣ್ಣ ಗೌಡರು ಮುಖ್ಯ ಶಿಕ್ಷಕರಾಗಿದ್ದರು. ಅದು ಸರ್ಕಾರಿ ಪ್ರೌಢಶಾಲೆ. ಈಗಾಗಲೇ ಅದರ ಬಗ್ಗೆ ಪಾಪಣ್ಣ ಗೌಡ ಶಾಲೆ ಎನ್ನುವ ಲೇಖನದಲ್ಲಿ ವಿವರಿಸಿದ್ದೇನೆ. ಈ ಶಾಲೆಯಿಂದ ನನ್ನ ಊರಿಗೆ ಐದು ಕಿಲೋಮೀಟರ್. ರಸ್ತೆ ಮಣ್ಣು ಕಲ್ಲುಗಳಿಂದ ಕೂಡಿತ್ತು. ಕೆಲವು ಕಡೆ ಕಾಲುದಾರಿಯಲ್ಲಿ ಸಾಗಬೇಕಿತ್ತು. ನಮಗೆ ಆಗ ಶೂ ಚಪ್ಪಲಿ ಇರಲಿಲ್ಲ. ಬರಿಗಾಲಿನಲ್ಲಿ ನಡೆಯಬೇಕಿತ್ತು. ಕಾಲು ದಾರಿ ಎಂದರೆ ಜನರು ಓಡಾಡಿ ಮಾಡಿಕೊಂಡಿದ್ದ ಕಿರುದಾರಿ. ಕಾಲುದಾರಿ ಎಂದ ಮೇಲೆ ಕಲ್ಲು ಮುಳ್ಳು ಇದ್ದೇ ಇರುತ್ತದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹೋಗಿ ಬರುವಾಗ ನಮ್ಮ ತಂದೆ ತಾಯಿ, ಹಿರಿಯರು ಹೇಳುತ್ತಿದ್ದಿದ್ದು, ದಾರಿಯಲ್ಲಿ ಹೋಗುವಾಗ ಜೋಪಾನವಾಗಿ ನಡೆ, ಕಲ್ಲು ಮುಳ್ಳು ಇದೆ. ಅವು ಇರುವ ಕಡೆ ಪಾದ ಇಡಬೇಡ. ಕಾಲಿಗೆ ಮುಳ್ಳು ಚುಚ್ಚಬಹುದು, ಕಲ್ಲು ಒತ್ತಬಹುದು. ನೋಡಿಕೊಂಡು ಹೆಜ್ಜೆ ಹಾಕು ಎನ್ನುತ್ತಿದ್ದರು. ನಾವು ಹಾಗೇ ನಡೆದು ಹೋಗುತ್ತಿದ್ದೆವು.
     ಇನ್ನೊಂದು ಪ್ರಸಂಗ ಈಗ ನಮ್ಮಲ್ಲಿ ಕಾರಿದೆ. ನಾವು ಊರಿಗೆ ಹೋಗಬೇಕಾದರೆ ನಾವೆಲ್ಲರೂ ಕಾರನ್ನು ಬಳಸುತ್ತೇವೆ. ನನ್ನ ಮಗನಿಗೆ ಕಾರು ಓಡಿಸುವುದೆಂದರೆ ಇಷ್ಟ. ಆತನೇ ಚಾಲನೆ ಮಾಡುತ್ತಾನೆ. ಮಂಗಳೂರಿನಿಂದ ನಮ್ಮ ಊರಿಗೆ ಸುಮಾರು 310 ಕಿ.ಮೀ. ಚಾಲನೆ ಮಾಡುವಾಗ ನನ್ನ ಮಗನನ್ನು ಗಮನಿಸುತ್ತೇನೆ. ರಸ್ತೆಯೆಂದ ಮೇಲೆ ಗುಂಡಿಗಳು ಇರುವುದೇ. ಆದರೆ ಗುಂಡಿ ಸಿಕ್ಕಿದರೆ, ಹುಬ್ಬು ಸಿಕ್ಕಿದರೆ, ನನ್ನ ಮಗನ ಮುಖ ನೋಡಬೇಕು. ಕೋಪ ನೆತ್ತಿಗೇರಿರುತ್ತದೆ. ಬೇರೆಯವರು ಸರಿಯಾಗಿ ಗಾಡಿ ಓಡಿಸದೆ, ಬೇಕಾಬಿಟ್ಟಿ ಓಡಿಸಿದರೆ, ಈತನ ಕೋಪ ಇನ್ನೂ ಹೆಚ್ಚು. ಬೈಕ್ ಓಡಿಸುವವರು, ಕಾರು ಓಡಿಸುವವರು, ಇವರಿಗೆ ಎಲ್ಲಿ ಜಾಗ ಸಿಗುತ್ತೋ ಅಲ್ಲಿ ಓವರ್ ಟೇಕ್ ಮಾಡುತ್ತಾರೆ. ಎಡಗಡೆಯಾದರೂ ಸರಿ, ಬಲಬದಿಯಾದರೂ ಸರಿ, ಅವಕಾಶ ಸಿಕ್ಕಿದರೆ ಮೇಲಾದರೂ ಸರಿ, ಓವರ್ ಟೆಕ್ ಮಾಡುವವರು. ಇನ್ನು ಕೆಲವರು ಬೇರೆಯವರಿಗೆ ಕೋಪ ಬರಲಿ ಎಂದು, ಕೋಪ ಬರುವಂತೆ ದಾರಿ ಬಿಡದಿರುವುದು ಇರುತ್ತೆ. ಆಗ ನನ್ನ ಮಗನಿಗೆ ಹೇಳುತ್ತೇನೆ, ಗುಂಡಿ ಕಡೆ ಗಮನ ಹರಿಸಬೇಡ. ಸರಿಯಾದ ರಸ್ತೆ ಕಡೆ ಗಮನ ಹರಿಸು. ಉಬ್ಬಿರುವಲ್ಲಿ ನಿಧಾನವಾಗಿ ಚಲಿಸು. ನಿಯಮ ಸರಿಯಾಗಿ ಪಾಲಿಸದಿರುವ ಕಡೆ ಗಮನಹರಿಸಬೇಡ ಎಂದು. ಆದರೂ ಕೇಳದ ವಯಸ್ಸು, ಕೋಪ ನೆತ್ತಿಗೆ ಏರಿರುತ್ತದೆ.
      ಇವೆರಡು ಪ್ರಸಂಗಗಳನ್ನು ಜೀವನಕ್ಕೆ ಹೋಲಿಸೋಣ. ಕಾಲುದಾರಿಯಲ್ಲಿ ಇರುವ ಕಲ್ಲು, ಮುಳ್ಳು ಮತ್ತು ಸರಿಯಾದ ದಾರಿಯಂತೆ, ಜೀವನದಲ್ಲಿ ಕಲ್ಲುಗಳೆಂಬ ಕಷ್ಟ , ಮುಳ್ಳುಗಳೆಂಬ ದುಃಖ-ನೋವು ಮತ್ತು ಸರಿಯಾದ ದಾರಿ ಎಂಬ ಸುಖ ಇರುತ್ತವೆ. ಹಾಗೆ ರಸ್ತೆಯಲ್ಲಿನ ಗುಂಡಿ ಉಬ್ಬುಗಳು ಕಷ್ಟ ಇದ್ದಂತೆ, ನಿಯಮ ಪಾಲಿಸಿದವರು, ಕಷ್ಟ ದುಃಖ ನೋವುಗಳಿದ್ದಂತೆ. ಒಳ್ಳೆಯ ರಸ್ತೆ ಸುಖ ಸಂತೋಷ ಇದ್ದಂತೆ. ರಸ್ತೆಯಲ್ಲಿರುವ ಕಲ್ಲು ಮುಳ್ಳು ಪೂರ್ತಿ ತೆಗೆಯಲು ಸಾಧ್ಯವೇ?. ರಸ್ತೆಯ ಗುಂಡಿ ಉಬ್ಬುಗಳನ್ನು ಪೂರ್ಣ ತೆಗೆಯಲು ಸಾಧ್ಯವೇ?. ಸರಿಯಾಗಿ ಚಾಲನೆ ಮಾಡುವಂತೆ ಎಲ್ಲರಲ್ಲೂ ಸರಿಪಡಿಸಲು ಸಾಧ್ಯವೇ.?. ಇಲ್ಲ. ಎಲ್ಲಾ ಕಲ್ಲು , ಮುಳ್ಳು, ಗುಂಡಿ, ಉಬ್ಬು ಹಾಗೆಯೇ ಚಾಲನೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಹಾಗೆ ಜೀವನದಲ್ಲಿ ಕಷ್ಟ, ದುಃಖ , ಕೋಪ, ತಾಪ, ಸುಖ, ಸಂತೋಷ ಎಲ್ಲ ಇರುತ್ತದೆ. ಇಡೀ ಜೀವನದಿಂದ ಕಷ್ಟ , ದುಃಖ, ಕೋಪ, ತಾಪ ತೆಗೆಯಲು ಸಾಧ್ಯವಿಲ್ಲ. ಕಷ್ಟಗಳು ಕಲ್ಲು, ಮುಳ್ಳು, ಗುಂಡಿ ಉಬ್ಬುಗಳಂತೆ ಕ್ಷಣಿಕವಾಗಿರುತ್ತದೆ. ಹಾಗಾಗಿ ಸುಖವಾಗಲಿ ದುಃಖವಾಗಲಿ ಕ್ಷಣಿಕ ಎಂಬುದನ್ನು ಮರೆಯಬಾರದು. ಬುದ್ಧ ಹೇಳಿದಂತೆ "ಸುಖ-ದುಃಖ ವಸ್ತುವಿನಲ್ಲಿ ಇಲ್ಲ, ಅದು ನಾವು ಮಾಡುವ ಆಲೋಚನೆ ಅವಲಂಬಿಸಿದೆ. ನಾವು ಸಂತೋಷ ಕೊಡುವ ವಸ್ತುಗಳ, ವ್ಯಕ್ತಿಗಳ ಮತ್ತು ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತಿದ್ದರೆ, ಸಂತೋಷ ಉಂಟಾಗುತ್ತದೆ. ದುಃಖ, ನೋವು , ಸಂಕಟ ಮತ್ತು ಕೋಪ ಕೊಡುವ ವಸ್ತುಗಳು, ವ್ಯಕ್ತಿಗಳು ಮತ್ತು ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತಿದ್ದರೆ, ದುಃಖ ಉಂಟಾಗುತ್ತದೆ." ಸಾವು ಯಾರಿಗೆ ದುಃಖ ಆಗಲ್ಲ ಹೇಳಿ. ಆದರೆ ಎಲ್ಲರಿಗೂ ದುಃಖ ಆಗೋದಿಲ್ಲ. ಆತನ ವೈರಿಗೆ ಸಂತೋಷವಾಗುತ್ತದೆ. ಅಂದರೆ ಸುಖ-ದುಃಖ ವು ಆಲೋಚನೆ ಕ್ರಮವೇ ವಿನಹ ವಸ್ತು, ಹಣ ಮತ್ತು ಸಂಪತ್ತಿನಲ್ಲಿ ಇಲ್ಲ ಅಲ್ಲವೇ ಮಕ್ಕಳೆ ಒಳ್ಳೆಯ ಆಲೋಚನೆ ಮಾಡೋಣ, ಸುಖವಾಗಿರೋಣ.
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article