-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                        
              ‘ಎಲ್ಲೆ’ ಎಂಬುದನ್ನು ಸೀಮಾ ರೇಖೆ, ಗಡಿ ರೇಖೆ ಅಥವಾ ಮಿತಿ ಎಂಬುದಾಗಿ ಅರ್ಥ ಮಾಡುತ್ತೇವೆ. ಎಲ್ಲೆ ಎಂಬುದು ಶಿಸ್ತು ಮತ್ತು ಮೌಲ್ಯಗಳ ಚೌಕಟ್ಟು. ಎಲ್ಲೆಯೊಳಗೆ ಬದುಕಿ ಜನಮನ್ನಣೆ ಗಳಿಸುವುದೇ ವ್ಯಕ್ತಿಯ ಪ್ರಧಾನ ಉದ್ದೇಶವಾಗಿರುತ್ತದೆ. ಎಲ್ಲೆ ಎಂಬುದು ಮಾತು, ಆಹಾರ, ಕೆಲಸ, ಅಧಿಕಾರ, ಭಾವನೆ ಹೀಗೆ ಎಲ್ಲ ಭಾಗಗಳಿಗೂ ಅನ್ವಯಿಸುತ್ತದೆ. ಎಲ್ಲೆಯೊಳಗಿದ್ದರೆ ಆನಂದ. ಎಲ್ಲೆ ಮೀರಿದರೆ ದುಗುಡ ಖಂಡಿತ.
          ಎರಡು ದೇಶಗಳ ನಡುವೆ ಒಂದು ‘ಎಲ್ಲೆ’ ಇರುತ್ತದೆ. ದೇಶವಾಸಿಗಳು ಆ ಎಲ್ಲೆಯೊಳಗೆ ತಮ್ಮ ವ್ಯವಹಾರ ನಡೆಸಬೇಕು. ಇದು ವಿಶ್ವ ನಿಯಮ. ಎಲ್ಲಿಯಾದರೂ ‘ಎಲ್ಲೆ’ ಮೀರುವ ಘಟನೆಗಳು ನಡೆದರೆ ಸಂಘರ್ಷಗಳು, ಯುದ್ಧಗಳು ಜರಗಿ ಕ್ಷೋಬೆಯುಂಟಾಗುತ್ತದೆ. ನಮಗೆ ನಿರ್ದಿಷ್ಟವಾದ ಜಮೀನು ಇದೆ. ಆ ಜಮೀನಿನ ಎಲ್ಲೆಯಿಂದ ಹೊರಗೆ ಇತರರ ಜಮೀನು ಇರುತ್ತದೆ. ನಮ್ಮ ಜಮೀನನ್ನು ಮಾತ್ರ ಬಳಸಿದರೆ ನ್ಯಾಯ. ಎಲ್ಲೆ ಮೀರಿ ಪಕ್ಕದವರ ಜಮೀನಿನಲ್ಲಿ ನಮ್ಮ ಹಕ್ಕು ಅಥವಾ ವ್ಯವಹಾರ ಸ್ಥಾಪನೆಗೆ ಹೊರಟರೆ ದುಗ್ಧ ವಾತಾವರಣ ಉಂಟಾಗುವುದಲ್ಲವೇ?
        ಕಾರ್ಖಾನೆಗಳಲ್ಲಿ ಮಾಲಕರು, ಚಾಲಕರು, ಕಾರ್ಮಿಕರು, ಪ್ರವರ್ತಕರು, ಹೂಡಿಕೆದಾರರು, ಪೂರೈಕೆದಾರರು, ಗ್ರಾಹಕರು ಮುಂತಾದ ಸ್ಥರಗಳಿವೆ. ಮಾಲಕನಿಗೆ ಪರಮೋಚ್ಛ ಎಲ್ಲೆಗಳಿವೆಯಾದರೂ ಆತನು ಉಳಿದ ಸ್ಥರಗಳನ್ನು ಧಿಕ್ಕರಿಸುವಂತಿಲ್ಲ. ಧಿಕ್ಕರಿಸಿದರೆ ಆತ ಮಾಲಕನಾದರೂ ಎಲ್ಲೆ ಮೀರಿದವನೆಂದೇ ಪರಿಗಣಿಸಲ್ಪಡುತ್ತಾನೆ. ಕಾರ್ಖಾನೆಯ ಇತರ ಎಲ್ಲ ಅಂಗಗಳೂ ಅದರ ಉತ್ಕರ್ಷದ ಭಾಗೇದಾರಿಗಳು. ಹಾಗಾಗಿ ಕಾರ್ಖಾನೆಗಳ ಗ್ರಾಹಕನೂ ಪ್ರಮುಖನಾಗಿಯೇ ಇರುತ್ತಾನೆ. ಆದುದರಿಂದಲೇ ಮಾಲಕನಾದರೂ ಗ್ರಾಹಕನ ತನಕ ಆತನಿಗೂ ಹಲವಾರು ಎಲ್ಲೆಗಳಿವೆ. ಈ ಎಲ್ಲೆಗಳಿರುವುದರಿಂದಲೇ ಜನಜೀವನ ಸುಖದಾಯಕವಾಗಲು ಸಾಧ್ಯವಾಗಿದೆ.
        ‘ಮಿತಿ’ ಮೀರಿದ ಮಾತು, ಮಿತಿ ಮೀರಿದ ಸೇವನೆ, ಮಿತಿ ಮಿರಿದ ನಿದ್ದೆ, ಮಿತಿ ಮೀರಿದ ತಿರುಗಾಟ, ಮಿತಿ ಮೀರಿದ ದುಡಿಮೆ, ಮಿತಿ ಮೀರಿದ ಓದು, ಮೀತಿ ಮೀರಿದ ಆಟ ಮುಂತಾದ ಪದ ಸರಣಿಗಳನ್ನು ಕೇಳಿದ್ದೇವೆ, ಓದಿದ್ದೇವೆ ಮತ್ತು ಕೆಲವು ಸಂದರ್ಭಗಳಲ್ಲಿ ನಾವೇ ಬಳಕೆಯನ್ನೂ ಮಾಡಿದ್ದೇವೆ. ಇತ್ತೀಚೆಗೆ ಟಿ.ವಿ.ಯ ಮಿತಿ ಮೀರಿದ ವೀಕ್ಷಣೆ, ಮೊಬೈಲಿನ ಮಿತಿ ಮೀರಿದ ಬಳಕೆ, ಜಾಲ ತಾಣಗಳನ್ನು ಬಳಸುವುದರಲ್ಲಿ ಎಲ್ಲೆ ಮೀರಿ ಹೋಗಿದೆ... ಹೀಗೆ ಎಲ್ಲೆ ಮೀರುತ್ತಿರುವ ಸಂಗತಿಗಳು ಸೇರ್ಪಡೆಗೊಳ್ಳುತ್ತಿರುತ್ತವೆ,
ಎಲ್ಲೆ ಮೀರಿದರೆ ಸಮಸ್ಯೆ ಇದೆಯೇ? ಹೌದು ನಾವು ನಮ್ಮ ಅಜ್ಜಿಯನ್ನು, “ನಾಲಿಗೆಯಿದೆಯೆಂದು ಏನೇನೋ ಬೊಗಳಬೇಡ“ ಎಂದೋ ಅಪ್ಪನನ್ನು, “ನಿನ್ನದೆಲ್ಲ ನನಗೆ ಗೊತ್ತು, ನಿನಗೆ ನಾನು ಕಲಿಸುತ್ತೇನೆ.” ಎಂದೋ ಹೇಳಿದರೆ ಏನಾಗಬಹುದು ಎಂದು ಯೋಚಿಸೋಣ. ಅವರು ಕೇಳಿಸಿಯೂ ಕೇಳಿಸದವರಂತಿರಬಹುದು. ಅದು ಅವರ ದೊಡ್ಡ ಗುಣ ಎಂದರಿಯೋಣ. ಆದರೆ ಕೇಳಿಸಿದ ಮೂರನೇಯವರು ನಮ್ಮನ್ನು ಎಲ್ಲೆ ಮೀರಿದವನೆಂದು ಹೇಳುತ್ತಾರೆ. ನಮ್ಮ ಗೌರವ ಮಣ್ಣಾಗುತ್ತದೆ. ಮಾತಿಗೂ ಎಲ್ಲೆಯಿದೆ. ಎಲ್ಲೆ ಮೀರಿದ ಮಾತುಗಳು ನಮ್ಮ ಹಲ್ಲುಗಳನ್ನು ಕೀಳಬಹುದು, ನಮಗೆ “ಕೆಟ್ಟವನು” ಎಂಬ ಪದವಿ ಪ್ರದಾನ ಮಾಡಬಹುದು.
     ಮಕ್ಕಳೇ, ನಾವು ಎಲ್ಲೂ ‘ಎಲ್ಲೆ’ ಮೀರದೆ ಶಿಸ್ತು, ನಿಯಮ ಮತ್ತು ಗೌರವದ ಚೌಕಟ್ಟಿನೊಳಗೆ ಇರೋಣ. ನಮಸ್ಕಾರ.....
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************

Ads on article

Advertise in articles 1

advertising articles 2

Advertise under the article