-->
ಜೀವನ ಸಂಭ್ರಮ : ಸಂಚಿಕೆ - 68

ಜೀವನ ಸಂಭ್ರಮ : ಸಂಚಿಕೆ - 68

ಜೀವನ ಸಂಭ್ರಮ : ಸಂಚಿಕೆ - 68
                                  
           ಮಕ್ಕಳೇ, ಇಂದು ಬಡವರು ಯಾರು ಎನ್ನುವ ಬಗ್ಗೆ ತಿಳಿದುಕೊಳ್ಳೋಣ. ಈ ಕಥೆ ಓದಿ.
ಒಂದು ಊರಿನಲ್ಲಿ ಒಬ್ಬ ಬಡ ರೈತನಿದ್ದನು. ಆತನಿಗೆ ಸ್ವಲ್ಪ ಜಮೀನು ಇತ್ತು. ಒಂದು ಗುಡಿಸಲಿನಲ್ಲಿ ತನ್ನ ಪತ್ನಿಯೊಂದಿಗೆ ವಾಸವಾಗಿದ್ದನು. ಆತನ ಬಳಿ ಕಾಮಧೇನು ಇತ್ತು. ಕಾಮಧೇನು ಎಂದರೆ ಹಸು. ಈ ಕಾಮಧೇನು ಬೇಡಿದನ್ನೆಲ್ಲ ನೀಡುತ್ತಿತ್ತು. ಇದರ ಪ್ರಭಾವ ಎಲ್ಲಾ ಕಡೆ ಹರಡಿತ್ತು. ಜನ ತಂಡೋಪ ತಂಡವಾಗಿ ಬಂದು ಬೇಡಿಕೊಳ್ಳುತ್ತಿದ್ದರು. ಬಂದವರು ಹಣ, ಆಸ್ತಿ ಮತ್ತು ಒಡವೆ ಹೀಗೆ ಬೇಡಿ ಪಡೆದುಕೊಂಡು ಹೋಗುತ್ತಿದ್ದರು. ಹೀಗೆ ಬರುವವರಲ್ಲಿ ಒಬ್ಬನು ಇದರ ಮಾಲೀಕನನ್ನು ನೋಡಬೇಕು, ಮಾತನಾಡಿಸಬೇಕೆಂದು ವಿಚಾರ ಮಾಡಿದ. ಆ ರೈತ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಆತನ ಬಳಿಗೆ ಬಂದು, ಕ್ಷೇಮ ಸಮಾಚಾರ ವಿಚಾರಿಸಿ, ನಂತರ ವ್ಯಕ್ತಿ ರೈತನನ್ನು ಕೇಳಿದ. "ಇಷ್ಟೊಂದು ಜನ ಬಂದು ಬೇಡಿಕೊಂಡು ಶ್ರೀಮಂತರಾಗಿದ್ದಾರೆ. ನೀನೇಕೆ ಕೇಳಿಕೊಳ್ಳುತ್ತಿಲ್ಲ?. ನೀನೇಕೆ ಬಡತನದಲ್ಲಿ ಬದುಕುತ್ತಿದ್ದೀಯೇ...?" ಎಂದು ಪ್ರಶ್ನಿಸಿದ. ಅದಕ್ಕೆ ರೈತ ಹೇಳಿದ. "ನಾನು ಈ ಕಾಮಧೇನುವಿನ ಮಾಲೀಕ. ನಾನು ಬೇಡಿದರೆ ಭಿಕ್ಷುಕನಾಗುತ್ತೇನೆ. ಆಗ ನಾನು ಹೇಗೆ ಇದರ ಮಾಲೀಕನಾಗುತ್ತೇನೆ..? ಬೇಡಿ ಪಡೆದವರು ಪದೇ ಪದೇ ಬಂದು, ಪುನಃ ಪುನಃ ಬೇಡುತ್ತಿದ್ದಾರೆ. ಅಂದಮೇಲೆ ಇದುವರೆಗೂ ಪಡೆದ ವಸ್ತು ಏನಾಯಿತು..? ಅದು ಶಾಶ್ವತವಲ್ಲ ಎಂದು ತಿಳಿದ ಮೇಲೆ, ನಾನೇಕೆ ಬೇಡಲಿ. ನಾನು ಅದು ಕೊಡುವ ವಸ್ತುವನ್ನು ಪ್ರೀತಿಸುತ್ತಿಲ್ಲ. ನಾನು ಹಸುವನ್ನೇ ಪ್ರೀತಿಸುತ್ತಿದ್ದೇನೆ. ಎಲ್ಲಾ ಆಸೆ ಈಡೇರಿಸುವ ಹಸುವೇ ನನ್ನ ಬಳಿ ಇರುವಾಗ, ನಾನೇ ಮಾಲೀಕನಾಗಿರುವಾಗ, ನಾನೇಕೆ ಬಡವ.....?
ನಾವಿರುವ ಜಗತ್ತೇ ಕಾಮಧೇನು, ನಾವು ತಿನ್ನಲು, ಉಣ್ಣಲು, ಕುಡಿಯಲು, ನೋಡಲು ಕೇಳಲು ಮತ್ತು ಸ್ಪರ್ಶಿಸಲು ಯಾವುದು ಕೊರತೆ ಇದೆ..? ಇಂತಹ ಜಗತ್ತಿನಲ್ಲಿರುವ ನಾವೇಕೆ ಬಡವರು." ಎಂದನು.
      ಇನ್ನೊಂದು ಪ್ರಸಂಗ ಒಬ್ಬ ಸಿರಿವಂತ ವ್ಯಾಪಾರಿ ಇದ್ದನು. ಈತನಿಗೆ ಪತ್ನಿ ಮತ್ತು ಎರಡು ಮಕ್ಕಳು ಇದ್ದರು. ಹೀಗೆ ಜೀವನ ಸಾಗಿಸುತ್ತಿರಬೇಕಾದರೆ, ವ್ಯಾಪಾರ ನಷ್ಟವಾಗಿ, ಎಲ್ಲಾ ಕಳೆದುಕೊಂಡನು. ಇದ್ದ ಮನೆ ಕೂಡ ಮಾರಾಟ ಮಾಡಿದನು. ನಂತರ ಬಾಡಿಗೆ ಮನೆಗೆ ಹೆಂಡತಿ ಮಕ್ಕಳೊಂದಿಗೆ ಬಂದನು. ಕಣ್ಣಲ್ಲಿ ದುಃಖ ತುಂಬಿತ್ತು. ಹೆಂಡತಿಗೆ ಹೇಳಿದ "ಎಲ್ಲಾ ಹೋಯಿತು, ಏನಿಲ್ಲ" ಎಂದ. ಆಗ ಹೆಂಡ್ತಿ ಹೇಳಿದಳು, "ಹೌದು ಎಲ್ಲಾ ಹೋಯ್ತು, ಹೋಗಲಿ, ನೀವಿದ್ದೀರಲ್ಲ ಸಾಕು ಎಂದಳು. ಈ ಆಸ್ತಿ ಸಂಪಾದಿಸಿದ್ದು ನೀವೇ ಅಲ್ಲವೇ. ನೀವೇ ಸಂಪತ್ತಾಗಿರುವಾಗ ಅದಕ್ಕೇಕೆ ಕೊರಗುತ್ತೀರಿ...? ಎಂದಳು. ಆಗ ಗಂಡನಿಗೆ ಏನೋ ಉಮ್ಮಸ್ಸು ಬಂದಂತಾಯಿತು. ಒಂದು ಪೇಪರ್ ತೆಗೆದುಕೊಂಡು ಉಳಿದಿರುವುದನ್ನು ಪಟ್ಟಿ ಮಾಡತೊಡಗಿದನು. ನಾನಿದ್ದೀನಿ, ನಾನು ಸಂಪತ್ತು. ನನಗೆ ಬೆನ್ನಲುವಾಗಿರುವ ನೀನು ಸಂಪತ್ತು. ನಮಗೆ ಸಂತೋಷ ಕೊಡುವ ಎರಡು ಮಕ್ಕಳು ಸಂಪತ್ತು. ನನಗೀಗ 30 ವರ್ಷ ವಯಸ್ಸಾಗಿದೆ. ದುಡಿಯುವ ಶಕ್ತಿ ಇದೆ, ಆ ಶಕ್ತಿಯು ಸಂಪತ್ತು. ವಯಸ್ಸಿದೆ ದುಡಿಯಲು, ಹಾಗಾಗಿ ವಯಸ್ಸು ಸಂಪತ್ತು. ವ್ಯಾಪಾರ ಮಾಡಲು ಜನರ ಸಹಕಾರ ಬೇಕು. ಜನರನ್ನು ಪ್ರೀತಿಸುವ ಮಧುರ ಭಾವ ನನ್ನಲ್ಲಿದೆ. ಆ ಭಾವವು ಸಂಪತ್ತು. ವ್ಯಾಪಾರ ಮಾಡುವ ಜ್ಞಾನವಿದೆ. ಆ ಜ್ಞಾನವೇ ಸಂಪತ್ತು. ಕೆಲಸ ಮಾಡಲು ಬೇಕಾದ ಸುಂದರ ಮನಸ್ಸಿದೆ, ಮನಸೇ ಸಂಪತ್ತು. ಇಷ್ಟೆಲ್ಲ ಸಂಪತ್ತು ಇದೆಯಲ್ಲ ಹೋಗಿದ್ದೇನು? ಎಂದು ಆಗ ಪತ್ನಿ ಹೇಳಿದಳು, "ಸಾಲ ಪಡೆದು ನಾಳೆಯಿಂದ ವ್ಯಾಪಾರ ಪ್ರಾರಂಭಿಸಿ. ಏನೂ ಹೋಗಿಲ್ಲ." ಹೀಗೆ ವ್ಯಾಪಾರ ಪ್ರಾರಂಭಿಸಿ ಮತ್ತೆ ಉತ್ಕೃಷ್ಟ ಜೀವನ ಸಾಗಿಸಿದನು.
      ಈ ಉದಾಹರಣೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಒಬ್ಬ ಹುಡುಗ ಸೂಟು ಧರಿಸಿದ್ದಾನೆ. ಮೈಮೇಲೆ ಆಭರಣ ಧರಿಸಿದ್ದಾನೆ. ಆತನ ಪಕ್ಕದಲ್ಲಿ ಒಬ್ಬ ಬಡ ಹುಡುಗ ನಿಂತಿದ್ದಾನೆ. ಚೆನ್ನಾಗಿ ದುಡಿದ ದೇಹವದು, ಹರಿದ ಬಟ್ಟೆ ಧರಿಸಿದ್ದಾನೆ. ಇವರಿಬ್ಬರಲ್ಲಿ ಶ್ರೀಮಂತಿಕೆ ಯಾರೆಂದರೆ ನಾವೆಲ್ಲ ಸ್ಪಷ್ಟವಾಗಿ ಸೂಟು, ಒಡವೆ ಧರಿಸಿದ ಹುಡುಗ ಎಂದು ಹೇಳುತ್ತೇವೆ. ಈಗ ಇವರ ಮೇಲಿರುವ ವಸ್ತ್ರ, ಒಡವೆ ತೆಗೆದು ಬಿಡೋಣ. ಈ ಎರಡು ದೇಹದಲ್ಲಿ ಶ್ರೀಮಂತ ದೇಹ ಯಾವುದು?. ಆಗ ಗಟ್ಟಿಮುಟ್ಟಾದ, ಹರಿದ ಬಟ್ಟೆ ಧರಿಸಿರುವವನು, ಎಂದು ಹೇಳುತ್ತೇವೆ. ಏಕೆಂದರೆ ನೈಸರ್ಗಿಕವಾಗಿ ದೊರಕಿದ ಅನ್ನ, ರೊಟ್ಟಿ, ತರಕಾರಿ, ಹಣ್ಣು ಮತ್ತು ಹಂಪಲು ತಿಂದು, ಚೆನ್ನಾಗಿ ಕೆಲಸ ಮಾಡಿ ದೇಹ ಗಟ್ಟಿ ಮಾಡಿಕೊಂಡಿದ್ದಾನೆ. ಇನ್ನೊಬ್ಬ ಬೇಕರಿ ತಿಂಡಿ, ಪಿಜ್ಜಾ, ಬರ್ಗರ್, ಫ್ರೆಂಚ್ ಡಿಶ್, ಚೈನೀಸ್ ಡಿಶ್, ಎಂದು ಯಾವುದೇ ಕೆಲಸವಿಲ್ಲದೆ ಇದ್ದಾನೆ. ಆದರೆ ನಾವೆಲ್ಲ ತೋರಿಕೆಯನ್ನು ಮೆಚ್ಚಿ ಶ್ರೀಮಂತಿಕೆಯನ್ನು ಗುರುತಿಸುತ್ತಿದ್ದೇವೆ. ನಮ್ಮ ದೇಹವು ಬಡವ ಅಲ್ಲ, ಶ್ರೀಮಂತವೂ ಅಲ್ಲ. ಅದರ ಮೇಲೆ ಧರಿಸುವ ಬಟ್ಟೆ ಆಭರಣ ನಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಆದರೆ ಯೋಚಿಸಿ ಆಭರಣ, ಬಟ್ಟೆ ಶ್ರೀಮಂತವೇ...? ದೇಹ ಶ್ರೀಮಂತವೆ...? ಒಬ್ಬ ವಿದೇಶದಿಂದ 10 ಡಾಲರ್ ಕೊಟ್ಟು ಶೂ ತರಿಸಿದ. ಆ ಶೂ ಧರಿಸಿ 5 km ನಡೆಯಲು ಆತನಿಗೆ ಸಾಧ್ಯವಿಲ್ಲ. ನಮ್ಮ ಹಳ್ಳಿಯ ಮಕ್ಕಳು ಬರಿಗಾಲಲ್ಲಿ ಹತ್ತು ಕಿಲೋಮೀಟರ್ ಉಲ್ಲಾಸದಿಂದ ನಡೆಯುತ್ತಾರೆ. ಹಾಗಾದರೆ ಕಾಲು ಶ್ರೀಮಂತವೆ..? ಶೂ ಶ್ರೀಮಂತವೆ..?
      ಇಷ್ಟೆಲ್ಲಾ ಓದಿದ ಮೇಲೆ ಹೇಳಿ ಬಡವ ಯಾರು...? ಶ್ರೀಮಂತರು ಯಾರು...? ಎಂದು. ನಮ್ಮ ದೇಹವೇ ಶ್ರೀಮಂತ. ನಮ್ಮ ಅವಯವಗಳು ಶ್ರೀಮಂತ. ನಮ್ಮ ಮಧುರ ಭಾವನೆಗಳು, ಸುಂದರ ಮನಸ್ಸು ಶ್ರೀಮಂತ. ಇವುಗಳು ಇಲ್ಲದೆ ಕೋಟಿ ಕೋಟಿ ಆಸ್ತಿ ಇದ್ದರೇನು...? ಅದನ್ನು ಬಳಸಿ ಆನಂದಿಸಲು ದೇಹ, ಅವಯವಗಳು, ಭಾವ ಮತ್ತು ಮನಸ್ಸು ಇಲ್ಲದಿದ್ದರೆ ಏನು ಪ್ರಯೋಜನ...? ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article