-->
ಬೆಂಗಳೂರಿನ ಚಿತ್ರಸಂತೆಗೆ : 20ನೇ ವರ್ಷದ ಸಂಭ್ರಮ

ಬೆಂಗಳೂರಿನ ಚಿತ್ರಸಂತೆಗೆ : 20ನೇ ವರ್ಷದ ಸಂಭ್ರಮ

ಸಚಿತ್ರ ವರದಿ 
ಬಿ ವಿ ಎ ಫೌಂಡೇಶನ್ ವಿದ್ಯಾರ್ಥಿನಿ
ಪ್ರತೀಕ್ಷಾ ಮರಕಿಣಿ 
ಇವರು ಬರೆದಿರುವ ವಿಶೇಷ ಲೇಖನ
        
            "ದೇಶದಲ್ಲಿರೋ ಏಕಮಾತ್ರ ಚಿತ್ರಕಲಾ ಪರಿಷತ್ ಬೆಂಗಳೂರು ಬಿಟ್ಟು ಹೊರಗೆ ಬರಬೇಕು. ಎಲ್ಲೆಡೆ ಕಲಾವಿದರಿದ್ದಾರೆ. ಚಿತ್ರಕಲೆ ಎಂಬುದು ಡೈಮಂಡ್ ಇದ್ದಂಗೆ . ಡೈಮಂಡ್ ಬಗ್ಗೆ ಗೊತ್ತಿದ್ದವರಿಗೆ ಅದರ ಬೆಲೆ ಗೊತ್ತಿರುತ್ತದೆ. ಗೊತ್ತಿಲ್ಲದವರಿಗೆ ಅದು ಕಲ್ಲು ಮಾತ್ರ." ಬೆಂಗಳೂರಿನಲ್ಲಿ ಚಿತ್ರಸಂತೆಯನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಹೇಳಿದ ಮಾತಿದು.
        ಕಲಾವಿದರು, ಕಲಾ ಪ್ರೇಮಿಗಳ ಸಡಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಬೆಂಗಳೂರಿನ ಚಿತ್ರ ಸಂತೆಗೆ ಭಾನುವಾರ ಜನವರಿ 8ನೇ ತಾರೀಖಿನಂದು 20ನೇ ವರ್ಷದ ಸಂಭ್ರಮ. ಈ ಬಾರಿಯ ಚಿತ್ರ ಸಂತೆಯನ್ನು ಕಲಾವಿದರಿಗೆ ಅರ್ಪಣೆ ಮಾಡಲಾಗಿತ್ತು. 
     ಬೆಂಗಳೂರಿನ ಕುಮಾರಕೃಪಾ ರಸ್ತೆಯುದ್ದಕ್ಕೂ ಚಿತ್ರಗಳದ್ದೇ ಕಾರುಬಾರು. ಕಣ್ಣು ಹಾಯಿಸಿದಲ್ಲೆಲ್ಲಾ ಕಲಾಕೃತಿಗಳು ಜೊತೆಗೆ ಕಲಾ ಪ್ರೇಮಿಗಳು ಕೂಡಾ. ಕಲಾವಿದರ ಪ್ರತಿಭೆ ಅನಾವರಣದ ಜೊತೆಗೆ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೆ ಸೂಕ್ತ ವೇದಿಕೆ ಇದಾಗಿತ್ತು.
         ಕರ್ನಾಟಕದ ಜೊತೆಗೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಗೋವಾ, ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳ ಹೀಗೆ ವಿವಿಧ ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದರು. ದೇಶದ ವಿವಿಧ ಭಾಗಗಳ ಸುಮಾರು 1200 ಕಲಾವಿದರು ಭಾಗವಹಿಸಿದ್ದ ಚಿತ್ರಸಂತೆಗೆ ಸುಮಾರು 5 ಲಕ್ಷ ಜನರು ಭೇಟಿ ನೀಡಿರುವ ಅಂದಾಜು.
       100 ರೂ.ಗಳ ಕಲಾಕೃತಿಗಳಿಂದ ಹಿಡಿದು 10 ಲಕ್ಷ ರೂ. ಮೌಲ್ಯದ ಕಲಾಕೃತಿಗಳೂ ಕಲಾವಿದರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದ್ದವು.‌ ಕುಂಚ ಹಾಗೂ ಪೆನ್ಸಿಲ್‌ಗಳಿಂದ ಕಲಾಪ್ರೇಮಿಗಳ ಭಾವಚಿತ್ರಗಳನ್ನು ಸ್ಥಳದಲ್ಲೇ ರಚಿಸಿ ಕೊಡುವ ಕಲಾವಿದರೂ ಗಮನ ಸೆಳೆಯುತ್ತಿದ್ದರು.
       ಚಿತ್ರಸಂತೆ ಬೇರೆ ಬೇರೆ ಕಲಾವಿದರನ್ನೂ ಭೇಟಿಯಾಗುವ ಅವಕಾಶಗಳನ್ನು ಕಲ್ಪಿಸಿಕೊಡ್ತಾ ಇದೆ. ಜೊತೆಗೆ ಹೊಸದನ್ನ ತಿಳಿದುಕೊಳ್ಳುವ ಕುತೂಹಲವೂ ಅಲ್ಲಿತ್ತು. ಮೈಸೂರು ಸಾಂಪ್ರದಾಯಿಕ ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿ, ತೈಲ ಮತ್ತು ಜಲವರ್ಣದ ಕಲಾ ಕೃತಿಗಳು, ಅಕ್ರ್ಯಾಲಿಕ್, ಲಿಥೊ ಗ್ರಾಫ್ ಹೀಗೆ ವಿವಿಧ ಪ್ರಕಾರಗಳ ಕಲಾಕೃತಿಗಳು ಚಿತ್ರಸಂತೆಯಲ್ಲಿ ಗಮನ ಸೆಳೆಯುತ್ತಿದ್ದವು. ನೋಡು ನೋಡುತ್ತಿದ್ದಂತೆಯೇ ಕೊಯಂಬತ್ತೂರು ಕಲಾವಿದರೊಬ್ಬರ 'ಫೇಮಸ್ ವರ್ಲ್ಡ್' ಎಂಬ ಶೀರ್ಷಿಕೆಯ ಕಲಾಕೃತಿಯೊಂದು 2ಲಕ್ಷ ರೂಪಾಯಿಗೆ ಮಾರಾಟವಾಯಿತು. 
      ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಗಳಲ್ಲಿ ಪಶಸ್ತಿ ಪುರಸ್ಕೃತ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಂಡವು. ಕರ್ನಾಟಕ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ದಿನವಿಡೀ ನೃತ್ಯ, ಸಂಗೀತ, ನಾಟಕ, ಯಕ್ಷಗಾನ ಸೇರಿದಂತೆ ವಿವಿಧ ಪ್ರಾಕಾರಗಳ ಕಲಾ ಪ್ರದರ್ಶನವೂ ಇತ್ತು. 
     ಪಕ್ಕದಲ್ಲಿಯೇ ಇದ್ದ ಫುಡ್ ಕೋರ್ಟ್ ಎಲ್ಲರಿಗೂ ಹಾಯ್ ಹೇಳುತ್ತಿತ್ತು. ಬಂದ ಪುಟ್ಟ ಮಕ್ಕಳಿಗೆ ಅಪ್ಪನ ಹೆಗಲೇರಿ ಕುಳಿತು ಸುತ್ತಾಡುವ ಸಂಭ್ರಮ. ಅಂತೂ ಒಟ್ಟು ಹಬ್ಬದ ವಾತಾವರಣವೇ ತುಂಬಿತ್ತು.
      ಕೆಲವು ವರ್ಷಗಳಿಂದ ನೋಡುಗಳಾಗಿ ಚಿತ್ರಸಂತೆಗೆ ಭೇಟಿ ಕೊಡುತ್ತಿದ್ದರೂ ನನಗೆ ಈ ವರ್ಷದ ಚಿತ್ರಸಂತೆ ವಿಶೇಷವಾಗಿತ್ತು. ಈ ವರ್ಷ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿ, ಚಿತ್ರಸಂತೆಯಲ್ಲಿ ಕಾರ್ಯಕರ್ತೆಯಾಗಿಯೂ ಭಾಗವಹಿಸಿದ್ದು ನನಗೆ ಹೊಸ ಅನುಭವ ನೀಡಿದ್ದು ಸುಳ್ಳೇನಲ್ಲ‌.
...................................... ಪ್ರತೀಕ್ಷಾ ಮರಕಿಣಿ 
ಬಿ ವಿ ಎ ಫೌಂಡೇಶನ್
ಕಾಲೇಜ್ ಆಫ್ ಫೈನಾರ್ಟ್ಸ್
ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು
********************************************


Ads on article

Advertise in articles 1

advertising articles 2

Advertise under the article