-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ  ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com

  

           ಭಾರತವು ಭಾವ, ರಸ ಮತ್ತು ತತ್ವ ಪ್ರಧಾನವಾದ ರಾಷ್ಟ್ರ. ಪ್ರೀತಿ, ಶಾಂತಿ, ದಯೆ, ಗೌರವ, ಸೇವೆ ಮುಂತಾದ ಹಲವು ಅಂಶಗಳ ಗೊಂಚಲು ಭಾವನೆ. ಹೃದಯ ಅಥವಾ ಮನಸ್ಸಿನಲ್ಲಿ ಭಾವನೆಯು ಚಿಮ್ಮುವುದು.  ನವರಸಗಳನ್ನೊಳಗೊಂಡಂತೆ ಕಲೆ, ಶಿಕ್ಷಣ ಮುಂತಾದ ಹಲವು ಕ್ಷೇತ್ರಗಳನ್ನು ‘ರಸ’ ಎಂದು ಹೇಳಲಾಗಿದೆ. ತತ್ವವು ಬದುಕಿನ ಸಿದ್ಧಾಂತಗಳಾದ ಮೌಲ್ಯಗಳನ್ನು ಒಳಗೊಂಡಿದೆ. ಬಹಳ ವಿಶಾಲ ವ್ಯಾಪ್ತಿಯ “ಭಾವ, ರಸ ಮತ್ತು ತತ್ವ” ಈ ವಿಚಾರಗಳನ್ನು ಅತೀ ಪುಟ್ಟದಾಗಿ ನೆನಪಿಸುವ ಪ್ರಯತ್ನವಿದು.
      ದೇಶದ ಅತ್ಯಂತ ಬಲವಾದ ಸಂಪನ್ಮೂಲ ಎಂದರೆ ಮಾನವ ಸಂಪನ್ಮೂಲ. ಮಾನವ ಸಂಪನ್ಮೂಲ ಭಾವ, ರಸ ಮತ್ತು ತತ್ವಗಳಿಂದ ಮಿಳಿತವಾಗಿದ್ದರೆ ದೇಶದ ಎಲ್ಲ ರಾಷ್ಟ್ರೀಯ ಅಂಗಗಳೂ ವ್ಯವಸ್ಥಿತ ಮತ್ತು ಸಂಪದ್ಭರಿತವಾಗಿರುತ್ತವೆ. ಅದಕ್ಕಾಗಿಯೇ ಪ್ರಜೆಗಳನ್ನು ದೇಶದ ‘ಅಡಿಪಾಯ’ ಎನ್ನುವರು. ಅಡಿಪಾಯದಿಂದ ‘ಡಿ’ ಜಾರಿದರೆ ಅಪಾಯವೇ ಖಂಡಿತ. ‘ಡಿ’ ಯಾವುದು ಎಂಬ ಪ್ರಶ್ನೆಗೆ ಸುಲಭದಲ್ಲಿ ನೀಡಬಹುದಾದ ಉತ್ತರವೇ, “ಭಾವನೆ, ರಸ ಮತ್ತು ತತ್ವ”ಗಳು.
        ದೇಶ ಮೊದಲು, ದೇಹ  ಆ ಮೇಲೆ ಎನ್ನುವರು.  ದೇಹವೇ ಭಾವ, ರಸ ಮತ್ತು ತತ್ವಗಳ ಉತ್ಪಾದನಾ  ಕ್ಷೇತ್ರ. ಹಾಗಾಗಿ ದೇಹ ಸರಿಯಾದರೆ ದೇಶದ ಉತ್ಥಾನವಾಗುತ್ತದೆ. ಮಾನವ ಸಹಜವಾದ ಸ್ವಾರ್ಥವು ಭಾವನೆಯನ್ನು ಸ್ವಲ್ಪ ತಾಳ ತಪ್ಪಿಸುತ್ತದೆ. “ಯಾರಲ್ಲೂ ಇರದ್ದು ನನ್ನಲ್ಲಿರಬೇಕು, ನನ್ನಲ್ಲಿ ಇರದ್ದು ಯಾರಲ್ಲೂ ಇರಬಾರದು, ನನಗೆ ಹೆಸರು ಬರಬೇಕು, ನನಗೆ ಪ್ರಚಾರ ಸಿಗಬೇಕು, ನನಗೇ ಸಂಪತ್ತು ಹೆಚ್ಚುತ್ತಿರಬೇಕು” ಎಂಬ ಅಸಂಖ್ಯ ಅತ್ಯಾಸೆಗಳು ಭಾವ ಮತ್ತು ತತ್ವದಿಂದ ಮನುಷ್ಯರನ್ನು ವಿಮುಖಗೊಳಿಸುತ್ತವೆ.
ನಾವು ಬುದ್ಧಿವಂತರ ನಾಡಿನವರು. ನಮ್ಮಲ್ಲಿ ಅವಿದ್ಯಾವಂತರು ಬಹಳ ಕಡಿಮೆ. ವಕೀಲರು, ವೈದ್ಯರು, ಉಪನ್ಯಾಸಕರು, ‘ಡಾಕ್ಟರೇಟ್’ ಪಡೆದವರು, ಬಹು ಪದವಿಗಳನ್ನು ಪಡೆದವರು, ಸಾಹಿತಿಗಳು ಹೀಗೆ ಎಲ್ಲ ವಿಭಾಗಗಳಲ್ಲೂ ನಿಪುಣರಾದವರು ನಮ್ಮ ನಾಡು ತುಂಬ ವಾಸವಾಗಿದ್ದಾರೆ. ಆದರೆ ನಮ್ಮಲ್ಲಿ ಕಳ್ಳತನ, ಲಂಚ, ಲೂಟಿ, ಕೊಲೆ, ದ್ವೇಷ, ವಿಚ್ಛೇದನ, ವಿಧ್ವಂಸಕತೆ ಮೊದಲಾದ ವಿಕೃತಗಳೂ ಹೇರಳವಿವೆ. ಇದಕ್ಕೇನು ಕಾರಣ? ನಾವೆಲ್ಲಿ ಎಡವಿದ್ದೇವೆ. ಅಲ್ಪಸಂಖ್ಯೆಯಲ್ಲಿ ಇರಬಹುದಾದ ಅನಕ್ಷರಸ್ಥರತ್ತ ಬೆಟ್ಟು ಮಾಡಿದರೆ ಅವರು ಅತ್ಯಂತ ಪ್ರಾಮಾಣಿಕರೇ ಆಗಿರುತ್ತಾರೆ ಮತ್ತು ಅವರು  ಸಂಯಮಿಗಳಾಗಿದ್ದಾರೆ ಎಂಬುದು ದೃಢ.  ಹಾಗಾದರೆ ಅತಿ ಬೌದ್ಧಿಕತೆ ಗಂಡಾಂತರಕಾರಿಯೇ?
ಹೃದಯವಂತರಲ್ಲಿರುವ ಅತಿ ಬೌದ್ಧಿಕತೆ ಗಂಡಾಂತರಕಾರಿಯಲ್ಲ. ಬೌದ್ಧಿಕ ವಿಕಾಸದ ಜೊತೆಗೆ ಹೃದಯವೂ ವಿಕಾಸವಾಗಬೇಕು. ಆ ಹೃದಯದಲ್ಲಿ ಕರುಣೆ, ಶಾಂತಿ ಮತ್ತು ಪ್ರೀತಿಗೆ ವಿಶಾಲವಾದ ಸ್ಥಳಾವಕಾಶವಿರಬೇಕು. ಹೃದಯದಲ್ಲಿ ಸಂಕುಚಿತತೆ ತುಂಬಿ ತುಳುಕಿದರೆ ಅಂತಹ ಬೌದ್ಧಿಕತೆ ಸಮಾಜಕ್ಕೆ ಕಿಲುಬು. ಕಿಲುಬು ತುಂಬದ ರೀತಿಯಲ್ಲಿ ಹೃದಯವನ್ನು ಸ್ವಚ್ಚವಾಗಿ ಕಾಪಾಡುವುದು ದೇಶದ ಹಿತದಿಂದ ಅತೀ ಅಗತ್ಯ. ದೇವರು ಮತ್ತು  ಹಿರಿಯರ ಅನುಗ್ರಹದಿಂದ ನಮ್ಮ ಬಹಳಷ್ಟು ವಿದ್ಯಾವಂತರು ಭಾವ ರಸ ಮತ್ತು ತತ್ವಗಳಿಂದ ತುಂಬಿರುವುದು ಹೆಮ್ಮಯ ಸಂಗತಿ.
      ಭಾರತದ ಉದ್ದಗಲದಲ್ಲಿ ಅಲ್ಲಲ್ಲಿ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಆಶ್ರಮಗಳು, ಪೂಜಾ ಕೇಂದ್ರಗಳು, ಪ್ರೇಕ್ಷಣೀಯ ಸ್ಥಳಗಳು, ರಸ್ತೆಗಳು, ಸಂಚಾರ ವ್ಯವಸ್ಥೆಗಳು, ವ್ಯವಹಾರ ಕೇಂದ್ರಗಳು, ಕೈಗಾರಿಕೆಗಳು, ನ್ಯಾಯಾಲಯಗಳು, ಸರಕಾರ ಮುಂತಾದ ಎಲ್ಲ ವ್ಯವಸ್ಥೆಗಳೂ ಇವೆ. ಬಹಳ ಉತ್ತಮವಾಗಿ ಮತ್ತು ವ್ಯವಸ್ಥಿತವಾಗಿ ಇವೆಲ್ಲವೂ ಕಾರ್ಯಾಚರಿಸುತ್ತಿವೆ. ಭಾವ ರಸ ಮತ್ತು ತತ್ವಗಳಿಗೆ ಮಹತ್ವ ನೀಡುವ ಅಸಂಖ್ಯ ಜನರಿಂದಾಗಿ ಈ ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅವರು ದೇಶಕ್ಕೆ ಆಧಾರ ನೀಡುವ ಬಲಶಾಲಿ ಕಂಬಗಳು. ಸತ್ಸಂಗ, ಸದ್ ಸಾಹಿತ್ಯಗಳ ವಾಚನ, ಸದ್ವಿಚಾರ ಶ್ರವಣ, ಆತ್ಮಾವಲೋಕನ, ಬದುಕಿನ ಸಿಂಹಾವಲೋಕನ, ಹಿರಿಯರ ಅನುಭವಗಳ ಅನುಸರಣೆ ಮೊದಲಾದ ಅನೇಕ ಸಂಗತಿಗಳು  ನಮ್ಮಲ್ಲಿ ಭಾವ, ರಸ ಮತ್ತು ತತ್ವಗಳನ್ನು ಭರಿಸ ಬಲ್ಲವು. ಮಕ್ಕಳೇ, ನಮ್ಮ ನಾಳೆಗಳು ಸುಂದರವಾಗಿರಲು ದೇಶವೂ ಸುಂದರವಾಗಿ ಉಳಿಯಬೇಕಲ್ಲವೇ? ದೇಶದ ಭವ್ಯತೆಯೇ ನಮ್ಮ ಧ್ಯೇಯವಾಗಿರಲಿ. ನಮಸ್ಕಾರ.
........ರಮೇಶ  ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************




Ads on article

Advertise in articles 1

advertising articles 2

Advertise under the article