ಹಕ್ಕಿ ಕಥೆ : ಸಂಚಿಕೆ - 80
Tuesday, January 3, 2023
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಈಗಷ್ಟೇ ಜನವರಿ ತಿಂಗಳು ಬಂದಿದೆ. ಹೊಸವರ್ಷ ಆರಂಭವಾಗಿದೆ. ಎಲ್ಲ ಕಿರಿಯ ಹಿರಿಯ ಮಿತ್ರರಿಗೂ ಹೊಸವರ್ಷದ ಶುಭಾಶಯಗಳು. ಜನವರಿ ತಿಂಗಳು ಬಂದರೆ ಹಲವಾರು ಕಡೆ ಆಸಕ್ತ ಪಕ್ಷಿವೀಕ್ಷಕ ಮಿತ್ರರು ಸೇರಿ ಹಕ್ಕಿ ಸಮೀಕ್ಷೆ ಕಾರ್ಯ ಮಾಡುತ್ತಾರೆ. ಮಣಿಪಾಲ ಎಂಬ ಪುಟ್ಟ ಊರಿನಲ್ಲಿ ಪಕ್ಷಿಯ ಬಗ್ಗೆ ಆಸಕ್ತ ವಿದ್ಯಾರ್ಥಿಗಳು ಸೇರಿ ಒಂದು ಪಕ್ಷಿವೀಕ್ಷಕರ ಗುಂಪು ರಚಿಸಿಕೊಂಡು ಪ್ರತಿವಾರ ಪಕ್ಷಿವೀಕ್ಷಣೆ ಮಾಡುತ್ತಾರೆ. ವರ್ಷದಲ್ಲಿ ಒಂದು ಬಾರಿ ಇತರೆ ಆಸಕ್ತರನ್ನೂ ಆಹ್ವಾನಿಸಿ ಪಕ್ಷಿಗಣತಿ ಕಾರ್ಯವನ್ನು ಮಾಡುತ್ತಾರೆ. ಆ ಮೂಲಕ ಪರಸ್ಪರರಿಂದ ಹಲವಾರು ವಿಷಯಗಳನ್ನು ಕಲಿಯುತ್ತಾರೆ. ಪಕ್ಷಿಗಳ ಸ್ವಭಾವ, ಅವುಗಳ ಆಹಾರ, ಫೋಟೋಗ್ರಫಿ ಮಾಡುವ ವಿಧಾನ, ಇವೆಲ್ಲ ಮಾಡುವಾಗ ಹಕ್ಕಿಗೆ ತೊಂದರೆಯಾಗದಂತೆ ನಾವು ಹೇಗೆ ಎಚ್ಚರಿಕೆ ವಹಿಸಬೇಕು, ಮಾನವನ ಅಭಿವೃದ್ಧಿ ಕಾರ್ಯಗಳು ಹೇಗೆ ಹಕ್ಕಿಯ ಬದುಕಿನ ಮೇಲೆ ಪರಿಣಾಮ ಬೀರುತ್ತವೆ ಎಂಬ ಹಲವಾರು ವಿಚಾರಗಳನ್ನು ಸ್ವಂತ ಅನುಭವಗಳ ಮೂಲಕ ಮತ್ತು ಸಂಶೋಧನೆಗಳ ಬಗ್ಗೆ ಕೇಳಿ ತಿಳಿಯುವ ಮೂಲಕ ನಾವು ಕಲಿಯುತ್ತಿದ್ದೆವು. ಈಗಲೂ ಕಲಿಯುತ್ತಲೇ ಇದ್ದೇವೆ.
ಆ ಬಾರಿ ಮಣಿಪಾಲದ ಕೆರೆಯ ಸುತ್ತ ಹಕ್ಕಿ ಗಣತಿ ಮಾಡುವ ತಂಡದಲ್ಲಿ ನಾನೂ ಇದ್ದೆ. ಕೆರೆಯ ದಂಡೆಯಲ್ಲಿ ಕುಳಿತು ನಮ್ಮ ಕ್ಯಾಮರಾ ಮತ್ತು ಬೈನಾಕ್ಯುಲಾರ್ ಬಳಸಿ ನಾವು ಹಕ್ಕಿಗಳನ್ನು ಗಮನಿಸಿ ದಾಖಲು ಮಾಡುತ್ತಿದ್ದೆವು. ಕೆರೆಯ ನಡುವೆ ಒಂದು ಪುಟ್ಟ ಹಕ್ಕಿ ಈಜುತ್ತಿತ್ತು. ಗಲ್ಲ ಮತ್ತು ಕುತ್ತಿಗೆಯ ಸುತ್ತ ಕಾಫಿಪುಡಿಯಂಥ ಹೊಳೆಯುವ ಕಂದು ಬಣ್ಣ, ಮೈ, ತಲೆ ಎಲ್ಲ ಕಡೆ ಬೂದುಮಿಶ್ರಿತ ಕಪ್ಪು ಬಣ್ಣ, ತಿಳಿಕಂದು ಬಣ್ಣದ ನಡುವೆ ಕಪ್ಪು ಚುಕ್ಕಿ ಇಟ್ಟಂತಹ ಕಣ್ಣು, ಕೊಕ್ಕು ಮತ್ತು ಕಣ್ಣಿನ ನಡುವೆ ತಿಳಿ ಬಿಳಿ ಬಣ್ಣದ ಮಚ್ಚೆ. ಕ್ಯಾಮರಾದಿಂದ ಚಿತ್ರ ತೆಗೆಯಲು ಕಷ್ಟವಾಗುವಷ್ಟು ದೂರ ನೀರಿನ ಮಧ್ಯದಲ್ಲಿ ಇತ್ತು. ಕ್ಯಾಮರಾ ಫೋಕಸ್ ಮಾಡಿ ಫೋಟೋ ತೆಗೆಯಬೇಕು ಎನ್ನುವಾಗ ಹಕ್ಕಿ ಬುಳುಕ್ಕನೇ ನೀರಿನ ಒಳಗೆ ಮುಳುಗಿ ಸ್ವಲ್ಪ ಹೊತ್ತಿನ ನಂತರ ಇನ್ನೆಲ್ಲಿಂದಲೋ ಪ್ರತ್ಯಕ್ಷವಾಗಿ ಬಿಡುತ್ತಿತ್ತು. ನೀರಿನಿಂದ ಹೊರಗೆ ಬರುವಾಗ ನೀರೊಳಗಿನ ಜಲಚರಗಳನ್ನು ಹಿಡಿದು ತಿನ್ನುತ್ತಿತ್ತು. ನೀರಿನ ಮೇಲೆ ಈಜುವುದರಲ್ಲೂ ಮುಳುಗುವುದರಲ್ಲೂ ಬಹಳ ನಿಸ್ಸೀಮ. ಗಂಟೆಗಟ್ಟಲೇ ಹೀಗೇ ನೀರಿನಲ್ಲಿ ಈಜುತ್ತಾ ಆಹಾರ ಅರಸುತ್ತಾ ಆಟವಾಡುತ್ತಾ ಇರುತ್ತಿತ್ತು. ನೀರಿನಲ್ಲಿ ಬೆಳೆಯುವ ಜಲಸಸ್ಯಗಳನ್ನು ಬಳಸಿ ನೀರಿನಲ್ಲಿ ಬೆಳೆದ ಪೊದೆಗಳ ನಡುವೆ ಬುಟ್ಟಿಯಂತಹ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಮರಿಗಳೂ ನೀರಿನಲ್ಲಿ ಈಜುತ್ತಾ ತಂದೆ ತಾಯಿಯನ್ನು ಹಿಂಬಾಲಿಸುತ್ತಾ ಬದುಕುವುದನ್ನು ಕಲಿಯುತ್ತವೆ. ನಿಮ್ಮ ಊರಿನ ಆಸುಪಾಸಿನ ಕೆರೆಗಳಲ್ಲಿ ಖಂಡಿತಾ ನೀವು ಈ ಹಕ್ಕಿಯನ್ನು ನೋಡಬಹುದು.
ಕನ್ನಡ ಹೆಸರು: ಗುಳುಮುಳುಕ
ಇಂಗೀಷ್ ಹೆಸರು: Little Grebe
ವೈಜ್ಞಾನಿಕ ಹೆಸರು: Tachybaptus ruficollis
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************