ಜೀವನ ಸಂಭ್ರಮ : ಸಂಚಿಕೆ - 66
Sunday, January 1, 2023
Edit
ಜೀವನ ಸಂಭ್ರಮ : ಸಂಚಿಕೆ - 66
ಮಕ್ಕಳೇ, ಇಂದು ನೀತಿಯ ಬಗ್ಗೆ ತಿಳಿದುಕೊಳ್ಳೋಣ. ವಿದ್ಯಾವಂತ ಎನ್ನಬೇಕಾದರೆ ನೈತಿಕ ಬೆಳವಣಿಗೆ ಆಗಬೇಕು. ನೈತಿಕತೆ ಇಲ್ಲದಿದ್ದರೆ ವಿದ್ಯಾವಂತ ಅಲ್ಲ ಅಕ್ಷರವಂತ. ನಾವು ಪ್ರಕೃತಿ ನೋಡಿದಾಗ ವೈವಿಧ್ಯಮಯ ಗಿಡ ಮರ ನೋಡುತ್ತೇವೆ. ಆ ಗಿಡ ಮರ ಹೂವು ಹಣ್ಣುಗಳಿಂದ ತುಂಬಿದ್ದರೆ ಆ ಗಿಡ ಮರ ಶ್ರೀಮಂತವಾಗಿದೆ ಎನ್ನುತ್ತೇವೆ. ಹೂವು ಹಣ್ಣು ಬಿಡದಿದ್ದರೂ ಗಿಡ ಜೀವಂತವಾಗಿ ಇರಬೇಕಾದರೆ ಬೇರು ಬೇಕೇ ಬೇಕು. ಬೇರು ಇಲ್ಲದಿದ್ದರೆ ಗಿಡ ಸಾಯುತ್ತದೆ. ಹಾಗೆ ಜೀವನ ಸುಂದರವಾಗಿ ಸಂತೋಷವಾಗಿರ ಬೇಕಾದರೆ ನೀತಿ ಬೇಕು. ನೀತಿ ಬೇರು ಇದ್ದಂತೆ. ಧರ್ಮ ಹಲವಾರು ಇರಬಹುದು ಆದರೆ ನೀತಿ ಮಾತ್ರ ಒಂದೇ. ನೀತಿ ಎಂದರೆ ಮಾರ್ಗ ಎಂದರ್ಥ. ಯಾವ ಮಾರ್ಗದಲ್ಲಿ ಹೋದರೆ, ಯಾವ ಮಾರ್ಗ ಅನುಸರಿಸಿದರೆ, ಜೀವನ ಸುಂದರವೂ, ಸಂತೋಷವೂ ಆಗುತ್ತದೆಯೋ ಆ ಮಾರ್ಗಕ್ಕೆ ನೀತಿ ಎನ್ನುತ್ತೇವೆ. ನಾವು ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುತ್ತೇವೆ. ವೇಳಾಪಟ್ಟಿಯಂತೆ ಆಟ ಪಾಠ ನಡೆಯುತ್ತದೆ. ಅದು ಶಾಲಾ ನೀತಿ. ಅದು ಅನುಸರಿಸದಿದ್ದರೆ ವಿದ್ಯಾಭ್ಯಾಸ ಹಾಳಾಗುತ್ತದೆ. ಇದು ಶಾಲಾ ನೀತಿ.
ನಮ್ಮ ಜೀವನ ಸುಂದರವೂ, ಸಂತೋಷವೂ ಆಗಿರಬೇಕಾದರೆ, ಪ್ರತಿಯೊಂದರಲ್ಲೂ ನೀತಿ ಬೇಕಾಗುತ್ತದೆ. ನಮಗೆ ಜ್ಞಾನ ಬರುವುದು, ಸಂತೋಷಪಡಲು ಸಹಕರಿಸುವುದು, ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಕೈ ಮತ್ತು ಕಾಲುಗಳು. ನಮ್ಮ ಕಣ್ಣಿಗೂ ನೀತಿ ಬೇಕು. ವಸ್ತುವನ್ನು ಹೇಗೆ ನೋಡಿದರೆ ನಮಗೆ ಆನಂದವಾಗುತ್ತದೆಯೋ, ಜ್ಞಾನ ಬರುತ್ತದೆಯೋ, ಹಾಗೆ ನೋಡಬೇಕು. ನಮಗೆ ಜ್ಞಾನ ಮತ್ತು ಸಂತೋಷವೂ ಶಬ್ದ ಮಾಧುರ್ಯದಿಂದ ದೊರಕುತ್ತದೆ. ಅದಕ್ಕೂ ನೀತಿ ಬೇಕು. ಏನನ್ನು ಕೇಳಬೇಕು ಮತ್ತು ಹೇಗೆ ಕೇಳಿದರೆ, ನಮಗೆ ಜ್ಞಾನ ಮತ್ತು ಸಂತೋಷ ಉಂಟಾಗುತ್ತದೆ, ಅದನ್ನು ಹಾಗೆ ಕೇಳಬೇಕು. ಹಾಗೆಯೇ ವಾಸನೆ, ರುಚಿ ಮತ್ತು ಸ್ಪರ್ಶ ಇರಬಹುದು. ಇವೆಲ್ಲವಕ್ಕೂ ನೀತಿ ಬೇಕಾಗುತ್ತದೆ. ನೀತಿ ಇಲ್ಲದೆ ಹೋದರೆ ಜ್ಞಾನದ ಬದಲು, ಅಜ್ಞಾನ. ಸಂತೋಷದ ಬದಲು, ದುಃಖ ಉಂಟಾಗುತ್ತದೆ. ನೀತಿ ಇಲ್ಲದೆ ಹೋದರೆ ಮನಸ್ಸು ಹೊಲಸಾಗುತ್ತದೆ. ಮನಸ್ಸು ಹೊಲಸಾದರೆ ಜೀವನವು ದುಃಖಕರವೂ, ಕುರೂಪವಾಗುತ್ತದೆ. ಉದಾಹರಣೆಗೆ, ಕಣ್ಣಿನ ಬಳಕೆಯ ಬಗ್ಗೆ ನೋಡೋಣ. ಸಂತೋಷಕ್ಕಾಗಿ ನೋಡಿದರೆ ಆನಂದವಾಗುತ್ತದೆ. ಇದು ನೀತಿ. ಆಸೆಯಿಂದ, ಮೋಹದಿಂದ, ನನ್ನದಾಗಬೇಕೆಂದು ನೋಡಿದರೆ, ಅದು ಅನೀತಿ. ಹೇಗೆ ಸಂತೋಷಕ್ಕಾಗಿ ನೋಡೋದು?. ಸಂತೋಷಕ್ಕಾಗಿ ಕೇಳೋದು, ಸಂತೋಷಕ್ಕಾಗಿ ವಾಸನೆಯನ್ನು, ಆಘ್ರಾಣಿಸುವುದು, ಸಂತೋಷಕ್ಕಾಗಿ ರುಚಿ ನೋಡೋದು ಮತ್ತು ಸಂತೋಷಕ್ಕಾಗಿ ಮುಟ್ಟೋದು ನೀತಿ. ಇದರಲ್ಲಿ ಆಶೆ ಮತ್ತು ಮೋಹ ಬೆರೆತರೆ ಅನೀತಿ, ಮನಸ್ಸಿಗೂ ನೀತಿಯಿದೆ. ಬುದ್ಧಿ ಬಳಸುವಲ್ಲಿಯೂ ನೀತಿಯಿದೆ. ಬುದ್ಧಿ ಸರಿಯಾಗಿ ಬಳಸಿದ್ದಲ್ಲಿ ಜೀವನ ಸುಂದರವೂ, ಸಂತೋಷವೂ ಆಗುತ್ತದೆ. ಮಾತಿಗೂ ನೀತಿಯಿದೆ. ಏನನ್ನು ಮತ್ತು ಹೇಗೆ ಮಾತನಾಡಬೇಕು ಎಂದು ತಿಳಿದಿದ್ದರೆ, ನಾವಿರುವ ಜಾಗ ಸ್ವರ್ಗವಾಗುತ್ತದೆ. ಇಲ್ಲದಿದ್ದರೆ ನರಕವಾಗುತ್ತದೆ. ಅದೇ ರೀತಿ ಬರವಣಿಗೆಗೂ ನೀತಿ ಇದೆ. ಒಬ್ಬನ ಬರವಣಿಗೆ ಸಂತೋಷವನ್ನು ಉಂಟು ಮಾಡಿದರೆ, ಮತ್ತೊಬ್ಬರ ಬರವಣಿಗೆ ಜಗಳಕ್ಕೆ ಕಾರಣವಾಗುತ್ತದೆ. ಹಾಗಾಗಿ ಬರವಣಿಗೆಯಲ್ಲಿ ನೀತಿ ಬಳಸಿದರೆ, ಸಂತೋಷ ಉಂಟು ಮಾಡುತ್ತದೆ. ನಮ್ಮ ಕೈಗಳಿಗೂ ನೀತಿ ಉಂಟು. ಹೇಗೆ ಕೈಯನ್ನು ಬಳಸಿದರೆ ಸುಂದರವಾಗಿ ಕೆಲಸವಾಗುತ್ತದೆ ಅನ್ನುವುದನ್ನು ತಿಳಿದು ಬಳಸಬೇಕು. ಕೈಗಳು ಇರುವುದು ಸುಂದರ ಕೆಲಸ ಮಾಡಲು. ನೀತಿ ಇಲ್ಲದಿದ್ದರೆ ಆ ಕೈ ಹೊಡೆದಾಟಕ್ಕೆ ಬಳಕೆ ಆಗುತ್ತದೆ. ನಾವು ಧರಿಸುವ ಬಟ್ಟೆಯಲ್ಲೂ ನೀತಿ ಇರಬೇಕು. ಏನನ್ನು ಮತ್ತು ಹೇಗೆ ಧರಿಸಿದರೆ ನಾನು ಸುಂದರವಾಗಿ ಕಾಣುತ್ತೇನೆ ಮತ್ತು ನನಗೆ ಸುಂದರವಾಗುತ್ತದೆ ಎನ್ನುವುದು ನೀತಿ ಅವಲಂಬಿಸಿದೆ. ಪ್ರತಿಯೊಂದು ವೃತ್ತಿಗೂ ನೀತಿ ಇದೆ. ಶಿಕ್ಷಕ ವೃತ್ತಿಯಾಗಲಿ, ವೈದ್ಯ ವೃತ್ತಿಯಾಗಲಿ, ಇಂಜಿನಿಯರ್ ವೃತ್ತಿ ಆಗಲಿ, ವ್ಯಾಪಾರವಾಗಲಿ, ಅಧಿಕಾರಿಯಾಗಲಿ ಮತ್ತು ರೈತನಾಗಲಿ, ಪ್ರತಿ ವೃತ್ತಿಗೂ ನೀತಿಯಿದೆ. ನೀತಿ ತಪ್ಪಿದರೆ ಅದರಿಂದ ಅನಾಹುತವೇ ಆಗುತ್ತದೆ. ಕುಟುಂಬದಲ್ಲಿ ಸಂತೋಷವಾಗಿರಲು, ನೀತಿ ಅಗತ್ಯ. ಸಮಾಜದಲ್ಲಿ ಹೇಗೆ ವರ್ತಿಸಿದರೆ ಸಮಾಜ ಅಭಿವೃದ್ಧಿಯಾಗುತ್ತದೆ ಅನ್ನುವುದು ನೀತಿಯನ್ನು ಅವಲಂಬಿಸಿದೆ. ನಾವು ಪ್ರಕೃತಿ ಜೊತೆ ವರ್ತಿಸಲು ನೀತಿಯ ಅಗತ್ಯ ಇದೆ. ನೀತಿ ತಪ್ಪಿದರೆ ಪ್ರಕೃತಿ ಅಸಮತೋಲನವಾಗಿ ನಮ್ಮ ನಾಶ ನಾವೇ ಮಾಡಿಕೊಳ್ಳುತ್ತೇವೆ. ನಾವು ನಿಸರ್ಗದ ಒಂದು ಭಾಗ. ನಾವು ನಿಸರ್ಗದಲ್ಲೇ ಬದುಕಬೇಕಾಗಿರುವುದರಿಂದ ನೀತಿಯ ಅಗತ್ಯವಿದೆ. ನಿಸರ್ಗ ಎಂದೊಡನೆ ಗಿಡ ಮರ ಮತ್ತು ಮಾನವ ಒಬ್ಬನೇ ಅಲ್ಲ. ಇತರ ಪ್ರಾಣಿ-ಪಕ್ಷಿ, ಕೀಟ ಸೇರಿದಂತೆ ವೈವಿಧ್ಯಮಯ ಜೀವಿಗಳಿವೆ. ಅವುಗಳ ಜೊತೆ ವರ್ತಿಸಲು ನೀತಿ ಬೇಕು. ನೀತಿ ತಪ್ಪಿದರೆ ಅಸಮತೋಲನವಾಗುತ್ತದೆ. ಆಹಾರದ ಪಿರಮಿಡ್ ನಲ್ಲಿ ವ್ಯತ್ಯಾಸವಾಗಿ, ನಮ್ಮ ನಾಶ ನಾವೇ ಮಾಡಿಕೊಂಡಂತಾಗುತ್ತದೆ. ಹೇಗೆ ಬೇಕೋ ಹಾಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಆಹಾರ ಮತ್ತು ವ್ಯಾಯಾಮದಲ್ಲೂ ನೀತಿ ಬೇಕು. ನೀತಿ ತಪ್ಪಿದರೆ ಅನಾರೋಗ್ಯ ಉಂಟಾಗಿ, ದೇಹಕ್ಕೆ ಅಪಾಯವಾಗಬಹುದು. ಗಳಿಸಿದ ಹಣವಾಗಲಿ, ವಸ್ತುವಾಗಲಿ, ಬಳಸುವಾಗ ನೀತಿ ಬೇಕು. ತಪ್ಪಿದರೆ ಹಣಕಾಸಿನ ಕೊರತೆಯಾಗಿ ಜೀವನ ಕಷ್ಟ ಪಡುತ್ತದೆ. ಹಾಗಾಗಿ ನೋಡಿದಿರಲ್ಲ ಮಕ್ಕಳೇ, ನೈತಿಕತೆ ಎಷ್ಟು ಮುಖ್ಯ ಅನ್ನುವುದನ್ನು. ಹಾಗಾಗಿ ಜೀವನದಲ್ಲಿ ನೀತಿ ಅತಿ ಅಮೂಲ್ಯ ಸಂಪತ್ತು. ಹಾಗಾಗಿ ಪ್ರತಿಯೊಂದಕ್ಕೂ ನೀತಿ ಅನುಸರಿಸಿ ಮಾಡಿದರೆ ಜೀವನ ಸುಂದರವಾಗುತ್ತದೆ ಮತ್ತು ಸಂತೋಷವಾಗುತ್ತದೆ. ಅದಕ್ಕಾಗಿ ಜ್ಞಾನ ಬೇಕಾಗಿದೆ. ಜ್ಞಾನಕ್ಕಾಗಿ ಗುರುಗಳು ಬೇಕಾಗಿದ್ದಾರೆ ಮತ್ತು ಹಿರಿಯರು ತಿಳಿದವರು ಬೇಕಾಗುತ್ತದೆ. ಅಲ್ಲವೇ ಮಕ್ಕಳೆ.....
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************