ಹಕ್ಕಿ ಕಥೆ : ಸಂಚಿಕೆ - 83
Tuesday, January 24, 2023
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ನಾನು ಮತ್ತು ಮಗಳು ಒಂದು ದಿನ ನಮ್ಮ ಬೈನಾಕುಲರ್ ಹಿಡಿದುಕೊಂಡು ವಾಕಿಂಗ್ ಹೋಗಿದ್ದೆವು. ಸಂಜೆಯ ಹೊತ್ತಾದ್ದರಿಂದ ಬಿಸಿಲು ಇರಲಿಲ್ಲ. ಅವಳಿಗೂ ಹಕ್ಕಿಗಳೆಂದರೆ ಇಷ್ಟ. ಅಪ್ಪಾ ಅಲ್ಲೊಂದು ಹಕ್ಕಿ ಹಾರ್ತಾ ಇದೆ, ಅದು ಯಾವ ಹಕ್ಕಿ ಎಂದು ನನ್ನನ್ನು ಪ್ರಶ್ನೆ ಮಾಡುತ್ತಾಳೆ. ಮನೆಯ ಆಸುಪಾಸಿನಲ್ಲಿ ಕಾಣಸಿಗುವ ಹಲವಾರು ಹಕ್ಕಿಗಳನ್ನು ಗುರುತಿಸುತ್ತಾಳೆ. ಹೀಗೆ ಬೇರೆಬೇರೆ ಹಕ್ಕಿಗಳನ್ನು ನೋಡುತ್ತಾ ಮನೆಗೆ ವಾಪಾಸ್ ಬರುವಾಗ ಪಕ್ಕದ ಮನೆಯವರು ಸಾಕಿದ ದನವನ್ನು ಸಂಜೆ ಹಟ್ಟಿಗೆ ಕರೆದುಕೊಂಡು ಹೋಗುತ್ತಿದ್ದರು. ದನಕ್ಕೆ ತಿನ್ನಲಿಕ್ಕಾಗಿ ಅವರ ತೋಟದಲ್ಲಿ ಹುಲ್ಲು ಬೆಳೆಸಿದ್ದರು. ಅದನ್ನು ಬೇಕಾದಷ್ಟೇ ಕೊಯ್ದು ದನಕ್ಕೆ ತಿನ್ನಲು ಹಾಕುತ್ತಿದ್ದರು. ಒಂದು ಕಡೆ ಈ ಹುಲ್ಲು ಸೊಂಪಾಗಿ ಬೆಳೆದಿತ್ತು. ಸೊಂಪಾಗಿ ಬೆಳೆದ ಹುಲ್ಲಿನ ನಡುವಿನಿಂದ ಯಾವುದೋ ಹಕ್ಕಿಯ ಸ್ವರ ಕೇಳಿಸುತ್ತಿತ್ತು. ಮಗಳು ಕುತೂಹಲದಿಂದ ಅಪ್ಪ ಟುವ್ವಿ ಟುವ್ವಿ ಅಂತ ಸ್ವರ ಕೇಳ್ತಾ ಇದೆ ಆದರೆ ಹಕ್ಕಿ ಕಾಣ್ತಾ ಇಲ್ಲ ಅಂತ ಹುಡುಕ್ತಾ ಇದ್ದಳು. ಎತ್ತರವಾಗಿ ಬೆಳೆದ ಹುಲ್ಲಿನ ನಡುವೆ ಪುಟಾಣಿ ಹಕ್ಕಿಯೊಂದು ಈಕಡೆ ಆಕಡೆ ಕುಪ್ಪಳಿಸುತ್ತಾ ಇರುವುದು ಕಾಣಿಸಿತು. ಮಗಳು ಕೂಡಲೇ ಟೈಲರ್ ಬರ್ಡ್ ಇರಬೇಕು ಅಂದಳು. ಗಾತ್ರ ಮತ್ತು ಆಕಾರ ನೋಡಲು ಅದೇ ರೀತಿ ಇತ್ತು. ಆದರೆ ಬಣ್ಣ ಮಾತ್ರ ದರ್ಜಿ ಹಕ್ಕಿಯ ಹಾಗೆ ಇರಲಿಲ್ಲ. ಬೂದು ಮೈಬಣ್ಣ ಪದೇ ಪದೇ ಎತ್ತುವ ಬಾಲ, ಹುಲ್ಲು ಕಡ್ಡಿಯ ಮೇಲೆ ಜಬರ್ದಸ್ತಾಗಿ ಕೂತು ಯಾರನ್ನೋ ಕೂಗಿ ಕರೆಯುವಂತೆ ದೊಡ್ಡದಾಗಿ ಬಾಯಿ ತೆರೆದುಕೊಂಡು ಕೂಗುತ್ತದೆ. ಮತ್ತೆ ಇನ್ನೊಂದು ಹುಲ್ಲು ಕಡ್ಡಿಯ ಮೇಲೆ ನೆಗೆದು ಮತ್ತೆ ಕೂಗುತ್ತದೆ. ಚುರುಕಾಗಿ ಈ ಕಡೆ ಆಕಡೆ ಓಡಾಡುತ್ತದೆ. ಕೆಲವೊಮ್ಮೆ ಹುಲ್ಲು ಪೊದೆಗಳ ನಡುವೆ ಜಿಗಿದು ಯಾವುದೋ ಕಂಬಳಿಹುಳುವನ್ನು ಹಿಡಿದು ತಂದು ತಿನ್ನುತ್ತದೆ.
ಮಗಳು ಬೈನಾಕುಲರ್ ನಲ್ಲಿ ಹಕ್ಕಿ ನೋಡಿ ಇದರ ಫೋಟೋ ತೆಗೆಯೋಣ ಅಂತ ಮನೆಗೆ ಹೋಗಿ ಕ್ಯಾಮರಾ ತೆಗೆದುಕೊಂಡು ಬಂದಳು. ಆದರೆ ಆಗಲೇ ಕತ್ತಲಾಗುತ್ತಿತ್ತು ಹಾಗಾಗಿ ಹಕ್ಕಿ ನಮ್ಮ ಕಣ್ಣಿಗೆ ಕಂಡರೂ ಕ್ಯಾಮರಾದಲ್ಲಿ ಫೋಟೋ ತೆಗೆಯಲು ಆಗಲಿಲ್ಲ. ಆಮೇಲೆ ಹಲವಾರು ಕಡೆ ಈ ಹಕ್ಕಿಯನ್ನು ನಾನು ನೋಡಿದ್ದೇನೆ. ಖಾಲಿ ನಿವೇಶನಗಳಲ್ಲಿ ಬೆಳೆದ ಹುಲ್ಲು ಮತ್ತು ಪೊದೆಗಳ ನಡುವೆ, ಅಲ್ಲೇ ಪಕ್ಕದ ವಿದ್ಯುತ್ ತಂತಿಯ ಮೇಲೆ ಈ ಹಕ್ಕಿ ಸುಲಭವಾಗಿ ನೋಡಲು ಸಿಗುತ್ತದೆ. ಮಾರ್ಚ್ ನಿಂದ ಮೇ ತಿಂಗಳ ನಡುವೆ ಇದರ ಸಂತಾನೋತ್ಪತ್ತಿ ಕಾಲ. ದರ್ಜಿ ಹಕ್ಕಿಯಂತೆಯೇ ಎಲೆಗಳನ್ನು ಸುತ್ತಿ ಗೂಡು ಮಾಡುತ್ತದೆ ಎಂದು ಪರಿಣಿತರು ಹೇಳುತ್ತಾರೆ. ನಿರಂತರವಾಗಿ ಟುವ್ವಿ ಟುವ್ವಿ ಎಂದು ಹಾಡುವ ಈ ಹಕ್ಕಿ ಮತ್ತು ಅದರ ಓಡಾಟ ನೋಡಲು ಬಹಳ ಸಂತಸದಾಯಕ.
ಕನ್ನಡದ ಹೆಸರು: ಉಲಿ ಹಕ್ಕಿ
ಇಂಗ್ಲೀಷ್ ಹೆಸರು: Grey-Breasted Prinia
ವೈಜ್ಞಾನಿಕ ಹೆಸರು: Prinia hodgsonii
ಚಿತ್ರ ಕೃಪೆ : ರಮಾಕಾಂತ ಕುಲಕರ್ಣಿ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************