ಜನವರಿ 24 : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
Tuesday, January 24, 2023
Edit
ಲೇಖಕರು : ಪ್ರಜ್ವಲಾ ಶೆಣೈ, ಕಾರ್ಕಳ
ಸಹಶಿಕ್ಷಕಿ
ದ.ಕ ಜಿ.ಪಂ. ಹಿ. ಪ್ರಾ.ಶಾಲೆ ಪದ್ಮನೂರು
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
ಜನವರಿ 24 ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಂತೆ. ಎಲ್ಲ ಪುರುಷರ ಹಾಗೂ ಮಹಿಳೆಯರ ಸ್ಟೇಟಸ್ ನಲ್ಲಿ, ಹೆಣ್ಣು ಮಗು ಇರುವ ಮನೆ ಸ್ವರ್ಗ.... ಹೆಣ್ಣು ಸಂಸಾರದ ಕಣ್ಣು..... ಇತ್ಯಾದಿ ಇತ್ಯಾದಿ ವರ್ಣನೆಗಳು. ಕೇಳಲು ಎಷ್ಟೊಂದು ಸಂತೋಷವಾಗುತ್ತದೆ ಅಲ್ವಾ. ಮದುವೆಯಾಗಲು ಹೆಣ್ಣು ಬೇಕು. ಮನೆಗೆ ಸೊಸೆಯಾಗಿ ಹೆಣ್ಣು ಬೇಕು. ಮನೆಕೆಲಸ ನಿಭಾಯಿಸಲು ಹೆಣ್ಣು ಬೇಕು. ಆದರೆ ಹುಟ್ಟುವ ಮಗು ಯಾವುದು ಬೇಕು ಎಂದು ಕೇಳಿದರೆ, ಮೊದಲೊಂದು ಗಂಡಾಗಲಿ... ಮತ್ತೆ ಎರಡನೇ ಬಾರಿ ಹೆಣ್ಣಾದರು ಅಡ್ಡಿಯಿಲ್ಲ ಎನ್ನುವ ಮಾತು ಬಹುತೇಕರ ಬಾಯಲ್ಲಿ ಹರಿದಾಡುತ್ತಿರುತ್ತದೆ.
ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೆ ಹೆಣ್ಣುಮಕ್ಕಳು ಮಾಡುವ ಕೆಲಸ ಲೆಕ್ಕವಿಲ್ಲದಷ್ಟು. ಹೊರಗೆ ದುಡಿಯುವ ಹೆಣ್ಣು ಮನೆ, ಮಕ್ಕಳು ಮತ್ತು ಕೆಲಸ ಎರಡನ್ನೂ ಸರಿದೂಗಿಸುವ ಬಹುದೊಡ್ಡ ಜವಾಬ್ದಾರಿ ಹೊರುತ್ತಾಳೆ. ಆದರೂ ಗಂಡಿಗೆ ಮೊದಲ ಪ್ರಾಶಸ್ತ್ಯ. ಗಂಡಿಗೆ ತಾನು ಮೇಲು ಎನ್ನುವ ಅಹಂಭಾವ ಜನ್ಮದತ್ತವಾಗಿ ಬರುತ್ತದೆಯೋ ಏನೋ ಅದಕ್ಕೆ ಅನುಗುಣವಾಗಿ ಗಂಡಿಗೆ ರಾಜಮರ್ಯಾದೆ ಊಟ, ಉಪಹಾರ ಎಲ್ಲವೂ ಕುಳಿತಲ್ಲಿಯೇ ಸಿಗುವಂತಹ ವ್ಯವಸ್ಥೆ. ತಾನು ತಿಂದ ಎಂಜಲು ತಟ್ಟೆಯನ್ನು ಸಹ ತನ್ನ ತಾಯಿ, ಸಹೋದರಿ, ಪತ್ನಿ ಯಾರಾದರೂ ಸರಿ ತೊಳೆಯುತ್ತಾರೆ. ಉಟ್ಟ ಬಟ್ಟೆಯನ್ನು ಕೂಡ ಒಗೆಯುವ ಕೆಲಸ ಹೆಣ್ಣಿನದೆ. ಮನೆಕೆಲಸ... ಅಡುಗೆ.. ಇತ್ಯಾದಿ ಹೆಣ್ಣಿಗೆ ಮೀಸಲು ಎಂದು ತಲತಲಾಂತರಗಳಿಂದ ರೂಢಿಗತವಾಗಿ ನಡೆದುಕೊಂಡು ಬಂದಿರುವ ಒಂದು ಸಂಪ್ರದಾಯ. ಹೆಣ್ಣಾಗಿ ಹುಟ್ಟಿದವಳು ಹೇಗಿರಬೇಕು. ಯಾವ ಕೆಲಸ ಮಾಡಬೇಕು ಎನ್ನುವ ತರಬೇತಿ ಹುಟ್ಟಿದಾಗಿನಿಂದ ಸಿಗುತ್ತದೆ. ಗಂಡು ಹೇಗೆ ಬೇಕಾದರೂ ಇರಬಹುದು. ಗಂಡು ತನ್ನ ಸಂಗಾತಿಯನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವ ಸಂಗತಿಯನ್ನು ತನ್ನ ತಂದೆಯಿಂದ ಕಲಿಯುತ್ತಾನೆ. ಹಾಗೆಯೇ ತನ್ನ ಪತಿಯನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವುದನ್ನು ತನ್ನ ತಾಯಿಯಿಂದ ಕಲಿಯುತ್ತಾಳೆ. ಗಂಡಾಗಲಿ ಹೆಣ್ಣಾಗಲಿ ಒಬ್ಬರನ್ನೊಬ್ಬರು ಗೌರವಿಸುವುದನ್ನು, ತಮ್ಮ ಅಭಿಪ್ರಾಯ ಧೋರಣೆಗೆ ಮನ್ನಣೆ ನೀಡುವುದನ್ನು ಕಲಿಯಬೇಕು. ನಾವು ಇಂದು ಹೇಗಿರುತ್ತೇವೆಯೋ ಹಾಗೆಯೇ ನಮ್ಮ ಮಕ್ಕಳು ಭವಿಷ್ಯದಲ್ಲಿ ವರ್ತಿಸುತ್ತಾರೆ ಎನ್ನುವುದು ಕಟು ಸತ್ಯ. ಹೆಣ್ಣೊಬ್ಬಳು ತನಗೆ ಗಂಡು ಮಗು ಆಗಲಿ ಎಂದು ಬಯಸುವುದು ತನ್ನಂತೆ ತನ್ನ ಮಗಳು ಕಷ್ಟ ಪಡುವುದು ಬೇಡ ಎಂದೇ ಹೊರತು ಮತ್ತೇನೂ ಅಲ್ಲ. ಆದರೆ ನೈಜವಾಗಿ ಹೆಣ್ಣುಮಕ್ಕಳನ್ನು ಹೆತ್ತವರೇ ಭಾಗ್ಯವಂತರು. ಅದೆಷ್ಟೋ ಮಂದಿ ತನಗೆ ಗಂಡು ಮಕ್ಕಳು ಇದ್ದರೂ ತನ್ನ ಹೆಣ್ಮಗಳ ಜೊತೆಗೆ ಇರುವುದನ್ನು ಕಂಡಿದ್ದೇವೆ. ಅಮ್ಮನ ಮನದ ತಲ್ಲಣಗಳು ಹೆಣ್ಣು ಮಗುವಿಗೆ ಅರ್ಥವಾದಷ್ಟು ಮತ್ತಾರಿಗೂ ಅರ್ಥವಾಗಲು ಸಾಧ್ಯವಿಲ್ಲ.
ನಮ್ಮ ಸಮಾಜದಲ್ಲಿ ಅದೆಷ್ಟೋ ಹೆಣ್ಣು ಜೀವಗಳು ತನ್ನ ಪತಿ ಹಾಗೂ ಮಕ್ಕಳಿಗಾಗಿ ತನಗೆ ಹೊರಗೆ ಹೋಗಿ ದುಡಿಯುವ ಸಾಮರ್ಥ್ಯವಿದ್ದರೂ ಸಂಸಾರಕ್ಕಾಗಿ ಮನೆಯಲ್ಲೇ ಇರುವುದನ್ನು ಕಂಡಿದ್ದೇವೆ. ಹೆಣ್ಣು ಸಂಸಾರದ ಕಣ್ಣು ಎನ್ನುವ ಮಾತು ಸುಳ್ಳಲ್ಲ. ಏಕೆಂದರೆ ಕಣ್ಣು ಕಳೆದುಕೊಂಡು ಕುರುಡಾದವರಿಗಷ್ಟೆ ಕತ್ತಲ ಅರಿವಾಗುವುದು. ಹೆಣ್ಣು ಇರುವ ಮನೆಯಲ್ಲಿ ಲಕ್ಷ್ಮಿ ಬಂದು ನೆಲೆಸುತ್ತಾಳಂತೆ. ಹೆಣ್ಣು ಮಕ್ಕಳೇ ಇರುವ ಮನೆಯವರು ಎಂದಿಗೂ ತನಗೆ ಇಬ್ಬರು ಹೆಣ್ಣು ಮಕ್ಕಳು ಎಂದು ಬೇಸರಪಡಬೇಡಿ.
ಇರುವ ಭಾಗ್ಯವ ನೆನೆದು ಬಾರನೆಂಬುದನು ಬಿಡು ಹರುಷಕ್ಕಿದೆ ದಾರಿ ಎನ್ನುವ ಡಿ.ವಿ.ಜಿ. ಯವರ ಮಾತನ್ನು ನೆನೆಯುತ್ತಾ ಇರುವುದರಲ್ಲೇ ಖುಷಿ, ಸಂತೃಪ್ತಿ ಪಡೆಯೋಣ. ಬಯಸಿದ ಭಾಗ್ಯ ಸಿಗಲಿ... ಸಿಗದಿರಲಿ.... ಇರುವುದನ್ನೇ ಬಯಸೋಣ. ಹೆಣ್ಣು ಸಂತೋಷವಾಗಿ ಇರುವ ಕಡೆ ನೆಮ್ಮದಿ, ಸಂತೋಷ ಅಕ್ಷಯವಾಗುತ್ತದೆ ಎನ್ನುವ ಮಾತಿನೊಂದಿಗೆ ಎಲ್ಲರಿಗೂ ಹೆಣ್ಣುಮಕ್ಕಳ ದಿನಾಚರಣೆಯ ಶುಭಾಶಯಗಳು.
ಸಹಶಿಕ್ಷಕಿ
ದ.ಕ ಜಿ.ಪಂ. ಹಿ. ಪ್ರಾ.ಶಾಲೆ ಪದ್ಮನೂರು
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
******************************************