-->
ಬದಲಾಗೋಣವೇ ಪ್ಲೀಸ್ - 82

ಬದಲಾಗೋಣವೇ ಪ್ಲೀಸ್ - 82

ಬದಲಾಗೋಣವೇ ಪ್ಲೀಸ್ - 82

ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
     
       "ನೀವು ಓಡುತ್ತಿದ್ದರೆ ನಿಮ್ಮ ಮಕ್ಕಳು ನಡೆಯುತ್ತಾರೆ. ನೀವು ನಡೆಯುತ್ತಿದ್ದರೆ ನಿಮ್ಮ ಮಕ್ಕಳು ಮಲಗುತ್ತಾರೆ. ನೀವು ಮಲಗಿದರೆ ನಿಮ್ಮ ಮಕ್ಕಳು ನಿದ್ರಿಸುತ್ತಾರೆ. ನೀವು ನಿದ್ರಿಸಿದರೆ ನಿಮ್ಮ ಮಕ್ಕಳು ಸಾಯುತ್ತಾರೆ... ಹಾಗಾಗಿ ಪೋಷಕರಾದ ನೀವು ಹೇಗಿರಬೇಕು ಎಂಬುದನ್ನು ನೀವೇ ನಿರ್ಧರಿಸಿ" ಎಂಬ ಗುರುಗಳ ಮಾತು "ಪೋಷಕರು ಹೇಗಿರಬೇಕು....?" ಎಂಬ ಪ್ರಶ್ನೆಗೆ ಉತ್ತರವನ್ನು ಮನದಟ್ಟು ಮಾಡಿಸಿತು.
        "ಬೆಳೆಯುವ ಸಿರಿ ಮೊಳಕೆಯಲ್ಲಿ'' ಎಂಬ ಮಾತಿನಂತೆ ನಾವು ಮಕ್ಕಳ ಬಗ್ಗೆ ಮತ್ತು ಅವರ ಲಾಲನೆ-ಪಾಲನೆಯ ಬಗ್ಗೆ ಬೆಳೆಯುವಾಗಲೇ ನಿರ್ಲಕ್ಷ್ಯ ತೋರಿದರೆ ಅವರ ಬೆಳವಣಿಗೆ ಕುಂಠಿತವಾಗುವುದು ಸಹಜ. ಅವರ ಮಾತಿನ ಸಾರಾಂಶ ಎಂದರೆ ಮಕ್ಕಳು ಯಾವಾಗಲೂ ಪೋಷಕರನ್ನು ನೋಡಿ ಕಲಿಯುತ್ತಾರೆ. ಪೋಷಕರಾದ ನಾವು ಸದಾ ಚಟುವಟಿಕೆಯಿಂದ ಕ್ರಿಯಾತ್ಮಕವಾಗಿದ್ದು ರೋಲ್ ಮಾಡೆಲ್ ಆಗಿದ್ದರೆ ಮಾತ್ರ ಮಕ್ಕಳು ಕೂಡಾ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರೋಲ್ ಮಾಡೆಲ್ ಗಳಾಗುತ್ತಾರೆ ಎಂಬುದು. 
        ಮಕ್ಕಳ ಪಾಲನೆ ಎಂಬುದು ಮಕ್ಕಳಾಟಿಕೆಯಲ್ಲ. ಮಕ್ಕಳಿಗೆ ಅವರಲ್ಲಿನ ಸ್ವ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿ ಅದರ ಬಳಕೆ ಹಾಗೂ ಬೆಳವಣಿಗೆಗೆ ಪೂರಕ ಪರಿಸರ ಮೂಡಿಸಿ ಉತ್ತಮ ವ್ಯಕ್ತಿತ್ವ ಹೊಂದಲು ಸಮರ್ಪಣೆ ಭಾವದಿಂದ ಮಾಡುವ ಪ್ರಮುಖ ಕರ್ತವ್ಯಗಳೇ ಪಾಲಕತ್ವ. ಮಕ್ಕಳಿಗೆ ಇಂದು ಸಹಜವಾದ ಪಾಲಕತ್ವ ಸಿಗುತ್ತಿಲ್ಲ. ಪ್ರಸ್ತುತ ವಿಶ್ವ ಜಾಗತೀಕರಣ, ಸಮೂಹ ಮಾಧ್ಯಮದ ಪ್ರಭಾವ, ಮಾನವೀಯ ಮೌಲ್ಯದ ಕುಸಿತ, ಸ್ಟೇಟಸ್ ಚಟ ಹಾಗೂ ಆಧುನಿಕ ಜೀವನ ಶೈಲಿಯಿಂದ ಮೂಡುವ ಒತ್ತಡ, ಅವಸರ, ಆತಂಕ ಇತ್ಯಾದಿಗಳು ಮಕ್ಕಳ ಸಹಜ ಪಾಲಕತ್ವಕ್ಕೆ ಸವಾಲಾಗಿದೆ. ಇದರಿಂದಾಗಿ ಬಹುತೇಕ ಮಕ್ಕಳು ಪಂಜರದ ಪಕ್ಷಿಗಳಂತೆ ಸಹಜ ಬಾಲ್ಯ ಕಳೆದು ಕ್ರಿಯಾ ಶೂನ್ಯರಾಗುತ್ತಿದ್ದಾರೆ. ಉತ್ತಮ ಪಾಲಕತ್ವ ದೊರೆತ ಮಕ್ಕಳು ಭಾಗ್ಯವಂತರು. ಆದರೆ ಉಳಿದವರ ಪಾಡೇನು.....?
      ಹದಿಹರೆಯದಲ್ಲಿ ಆತ್ಮಹತ್ಯೆ, ಪಾಲಕರನ್ನು ಬಿಟ್ಟು ಓಡಿ ಹೋಗುವುದು, ಅನಾರೋಗ್ಯ ಸಮಸ್ಯೆ , ಅಪ್ರಾಪ್ತ ವಯಸ್ಸಿನಲ್ಲಿಯೇ ಪ್ರೇಮ ಪ್ರಕರಣದ ಸುಳಿಯೊಳಗೆ ಸಿಲುಕಿ ಸಂಕಷ್ಟಗೊಳಗಾಗಿ ಬದುಕು ಕಳಕೊಂಡ ಘಟನೆಗಳು, ಮಕ್ಕಳಲ್ಲಿ ವಯಸ್ಸಿಗೆ ಮೀರಿದ ಅಮಾನವೀಯ ವರ್ತನೆಗಳು, ಹಿಂಸಾಪ್ರವೃತ್ತಿ, ಮಾದಕ ಚಟಗಳ ಅಭ್ಯಾಸ, ಸಮಾಜ ವಿರೋಧಿ ಭಾವನೆಗಳು.. ಹೀಗೆ ಅನೇಕ ಋಣಾತ್ಮಕ ಬೆಳವಣಿಗೆಗಳು ಅಪಾರ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಪಾಲಕತ್ವದ ವಿಫಲತೆಯನ್ನು ತೋರಿಸಲು ಸಾಕ್ಷಿಯಾಗುತ್ತಿದೆ. ಇಂದು ಕೆಲವು ಮಕ್ಕಳು ತನ್ನ ಸ್ವಸಾಮರ್ಥ್ಯದ ಸ್ವಂತಿಕೆ ಪ್ರದರ್ಶನದ ಸಹಜ ಮಗುವಾಗಿ ಬೆಳೆಯದೆ ಕೇವಲ ಮಾಧ್ಯಮದ ಕೂಸಾಗಿ ''ಸ್ಟೇಟಸ್ ಬೇಬಿ" ಯಾಗಿ ಬೆಳೆಯುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
      ಪೋಷಕರು ಮಾದರಿಯಾಗಿರುವುದೇ ಇದಕ್ಕೆಲ್ಲ ಪರಿಹಾರವಾಗಿದೆ. ಪಾಲಕರು ತಮ್ಮ ಪಾಲನಾ ಶೈಲಿಯಲ್ಲಿ ಬದಲಾದರೆ ಮಕ್ಕಳು ಕೂಡಾ ಬದಲಾಗುತ್ತಾರೆ. ತನ್ನ ಮಕ್ಕಳಿಗೆ ಸ್ವಂತಿಕೆಯ ಪರಿಸರ ಒದಗಿಸುವುದು, ಭಾವನಾತ್ಮಕವಾಗಿ ಧನಾತ್ಮಕ ಸ್ಪಂದನೆ, ಮಗುವಿನಲ್ಲಿ ಸ್ವಯಂ ಗೌರವ ಹಾಗೂ ಸ್ವಾಭಿಮಾನ ಬೆಳೆಸುವುದು, ಮಕ್ಕಳ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿ ಪ್ರೋತ್ಸಾಹಿಸುವುದು, ಮಕ್ಕಳ ಮೇಲೆ ನಂಬಿಕೆ ಇಡುವುದು, ಅತಿ ಮುದ್ದು ಬಿಟ್ಟು ಸಂದರ್ಭಕ್ಕನುಗುಣವಾಗಿ ಧನಾತ್ಮಕ ವರ್ತನೆ ತೋರಿಸುವುದು, ಅವಶ್ಯಕತೆ - ಗನುಗುಣವಾಗಿ ಶಿಸ್ತು-ದೃಢ ನಿಲುವು ತಾಳುವುದು, ಮಕ್ಕಳಿಗಾಗಿ ಅವರ ಜತೆಯಲ್ಲಿರಲು ದಿನದ ಕೆಲವು ಸಮಯಗಳನ್ನು ನಿಗದಿಗೊಳಿಸಿ ಪರಿಣಾಮಕಾರಿ ಸಂವಹನ ನಡೆಸುವುದು, ಪಾಲಕರಾದ ತನ್ನ ವೈಯಕ್ತಿಕ ಒತ್ತಡಗಳನ್ನು ಮಗುವಿನ ಮೇಲೆ ಹಾಕದಿರುವುದು. ಅತೀ ಮುಖ್ಯವಾಗಿ ಅವರತನವನ್ನು ಗೌರವಿಸುವುದು, ತನ್ನ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರದಿರುವುದು. ಇತ್ಯಾದಿ ವರ್ತನೆಗಳಿಂದ ಪರಿಣಾಮಕಾರಿ ಪಾಲಕತ್ವ ಮಾಡಬಹುದು. ಒಟ್ಟಾರೆಯಾಗಿ ರೋಲ್ ಮಾಡೆಲ್ ಆಗಿ ಪಾಲಕರು ವರ್ತಿಸಿದಲ್ಲಿ ಮಗು ಕೂಡಾ ರೋಲ್ ಮಾಡೆಲ್ ಆಗುವುದರಲ್ಲಿ ಸಂಶಯವಿಲ್ಲ. ಮಕ್ಕಳ ಬಗ್ಗೆ ಪ್ರೋತ್ಸಾಹವಿರಲಿ. ಮಕ್ಕಳೆಂಬುದು ನಿಧಿ ಇದ್ದಂತೆ. ಆ ನಿಧಿಯು ನಮ್ಮನ್ನು ನಿಧಿಯಂತೆ ಕಾಪಾಡಲು ಪರಿಣಾಮಕಾರಿ ಪಾಲಕತ್ವ ಮಾಡೋಣ. ಪಾಲಕರಾಗಿ ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article