
ಹಕ್ಕಿ ಕಥೆ : ಸಂಚಿಕೆ - 82
Tuesday, January 17, 2023
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಒಂದು ದಿನ ರಾತ್ರಿ ಸುಮಾರು ಎಂಟೂವರೆ ಗಂಟೆಯ ಹೊತ್ತಿಗೆ ಬಹಳ ಸೆಖೆ ಆಗುತ್ತಿತ್ತು ಎಂಬ ಕಾರಣಕ್ಕೆ ಹೊರಗಡೆ ಬಂದು ಕುಳಿತುಕೊಂಡೆ. ನಮ್ಮ ಮನೆಯ ಆಕಡೆಗೆ ಸಹಜವಾಗಿ ಬೆಳೆದ ಕಾಡು ಸ್ವಲ್ಪ ಇದೆ. ಅಲ್ಲೊಂದು ನಾಗಬನ ಇದೆ ಎಂಬ ಕಾರಣಕ್ಕೆ ಆ ಕಾಡನ್ನು ಯಾರೂ ಕಡಿಯಲು ಹೋಗಿಲ್ಲ. ರಾತ್ರಿಯ ಗಾಳಿಗೆ ಮೈ ಒಡ್ಡಿ ಕುಳಿತಾಗ ಸ್ವಲ್ಪ ಹಾಯೆನಿಸಿತು. ಅಷ್ಟರಲ್ಲಿ ನಾಗಬನದ ಕಡೆಯಿಂದ ಪ್ರತೀ 5-10 ಸೆಕೆಂಡುಗಳಿಗೊಮ್ಮೆ ಏನೋ ಕೂಗಿದ ಶಬ್ದ ಕೇಳಿಸಲಾರಂಭಿಸಿತು. ಬಹಳ ಹೊತ್ತಿನ ವರೆಗೆ ಆ ಶಬ್ದ ಕೇಳುತ್ತಿತ್ತು. ನಾನು ನನ್ನ ಟಾರ್ಚ್ ಹಿಡಿದುಕೊಂಡು ಏನಿರಬಹುದು ಎಂದು ನೋಡಲು ಹೋದೆ. ಬನದ ಕಡೆಯಿಂದ ಮನೆಗೆ ಬರುವ ದಾರಿಯಲ್ಲಿ ಸ್ವಲ್ಪ ದೂರ ಹುಡುಕಿದರೂ ಎಲ್ಲೂ ಏನೂ ಕಾಣಿಸಲಿಲ್ಲ. ಇನ್ನೂ ಮುಂದೆ ಹೋಗುವಾಗ ದಾರಿಯಲ್ಲಿ ನೆಲದಿಂದ ಏನೋ ಹಾರಿ ದೂರ ಹೋದ ಹಾಗೆ ಕಾಣಿಸಿತು. ಬೆಳದಿಂಗಳ ರಾತ್ರಿಯಾದ್ದರಿಂದ ಕತ್ತಲಿನಲ್ಲೂ ಅಷ್ಟನ್ನು ಗುರುತಿಸಲು ಸಾಧ್ಯವಾಯಿತು. ಕತ್ತಲಿನಲ್ಲಿ ಹಾರಿದ ರೀತಿಯಿಂದ ಅದೊಂದು ಹಕ್ಕಿ ಇರಬೇಕು ಎಂದು ಅನಿಸಿದ್ದಂತೂ ಸತ್ಯ. ಗೂಬೆ ಇರಬಹುದೇ ಅಂದುಕೊಂಡೆ. ಆದರೆ ಗೂಬೆಗಳು ಹೆಚ್ಚಾಗಿ ಮರದಲ್ಲಿ ಕುಳಿತುಕೊಳ್ಳುತ್ತವೆ ಬೇಟೆಯನ್ನು ಹಿಡಿಯಲು ಮಾತ್ರ ನೆಲಕ್ಕೆ ಬರುತ್ತವೆ. ಹಕ್ಕಿಯ ಗಾತ್ರವೂ ಗೂಬೆ ಇರಬಹುದು ಅನಿಸಲಿಲ್ಲ. ಹಾರಿ ಹೋಗಿ ಇನ್ನೊಂದು ಕಡೆ ಕುಳಿತ ಆ ಹಕ್ಕಿ ಅಲ್ಲಿ ಮತ್ತೆ ಕೂಗಲಾರಂಭಿಸಿತು. ಇಲ್ಲಿಂದ ಹಾರಿದ ಜೀವಿ ಅದೇ ಮತ್ತು ಅದೊಂದು ಹಕ್ಕಿ ಅಂತ ಖಾತ್ರಿ ಆಯಿತು. ಅಲ್ಲೇ ಸ್ವಲ್ಪ ಹೊತ್ತು ನಿಂತು ಹಕ್ಕಿಯ ಕೂಗನ್ನು ಧ್ವನಿ ಮುದ್ರಿಸಿಕೊಂಡು ಬಂದೆ. ಹಕ್ಕಿಯ ಕೂಗನ್ನು ಪರಿಣತ ಪಕ್ಷಿವೀಕ್ಷಕ ಮಿತ್ರರಿಗೆ ಕಳುಹಿಸಿ ಉತ್ತರಕ್ಕಾಗಿ ಕಾದೆ. ಮರುದಿನ ಸ್ನೇಹಿತ ರಾಧಾಕೃಷ್ಣನ ಮನೆಗೆ ಏನನ್ನೋ ತರಲಿಕ್ಕೆಂದು ಸುಮಾರು ಏಳೂವರೆ ಗಂಟೆಗೆ ಬೈಕ್ ನಲ್ಲಿ ಹೊರಟಿದ್ದೆ. ಮುಖ್ಯ ರಸ್ತೆಯಿಂದ ಅವರ ಮನೆಗೆ ಸುಮಾರು ಒಂದು ಕಿಲೋಮೀಟರ್ ನಿರ್ಜನ ಕಾಡುದಾರಿ. ನಿಧಾನವಾಗಿ ಬೈಕ್ ನಲ್ಲಿ ಹೋಗುತ್ತಿರುವಾಗ ರಸ್ತೆಯ ಮಧ್ಯದಲ್ಲಿ ನೆಲದ ಮೇಲೆ ಯಾವುದೋ ಹಕ್ಕಿ ಕುಳಿತಂತೆ ಕಾಣಿಸಿತು. ಬೈಕ್ ನಿಲ್ಲಿಸಿ ಹೆಡ್ ಲೈಟ್ ಅದರತ್ತ ಬಿಟ್ಟು ನೋಡಿದರೆ, ಮಣ್ಣು ತರಗೆಲೆಗಳ ಬಣ್ಣವನ್ನೇ ಹೋಲುವ ಹಕ್ಕಿ. ಗಿಡ್ಡ ಕೊಕ್ಕು, ಕತ್ತಿನ ಕೆಳಗೆ ಸ್ವಲ್ಪ ಬಿಳೀ ಬಣ್ಣ ಬಿಟ್ಟರೆ ದೇಹದ ತುಂಬಾ ಕಂದು ಮಿಶ್ರಿತ ಬೂದು ಬಣ್ಣ. ಕೋಳಿ ಕಾವು ಕೊಡಲು ಕುಳಿತಂತೆ ನೆಲಕ್ಕೆ ದೇಹ ತಾಗಿಸಿ ಕುಳಿತಿತ್ತು. ಮೊಬೈಲ್ ನಲ್ಲಿ ಒಂದು ಫೋಟೋ ತೆಗೆಯೋಣ ಎನ್ನುವಷ್ಟರಲ್ಲಿ ಹಕ್ಕಿ ಹಾರಿ ಹೋಗಿತ್ತು. ಹಾರುವಾಗ ರೆಕ್ಕೆಯ ಬಡಿತ ಸ್ವಲ್ಪವೂ ಕೇಳಿಸಲಿಲ್ಲ.
ಮನೆಗೆ ಹಿಂತಿರುಗಿ ಸಲೀಂ ಅಲಿಯವರ ಪುಸ್ತಕ ತೆರೆದು ಹುಡುಕಿದಾಗ ಸಿಕ್ಕಿದ ಮಾಹಿತಿ ಮತ್ತು ಪಕ್ಷಿವೀಕ್ಷಕ ಮಿತ್ರರು ಕಳುಹಿಸಿದ ಮಾಹಿತಿ ತಾಳೆಯಾಗಿತ್ತು. ರಾತ್ರೆಯಲ್ಲಿ ಹಾರುವ ಕೀಟಗಳೇ ಈ ಹಕ್ಕಿಯ ಮುಖ್ಯ ಆಹಾರ. ಮಾರ್ಚ್ ನಿಂದ ಮೇ ತಿಂಗಳ ನಡುವೆ ಕಾಡಿನ ನೆಲದ ಮೇಲೆ ಮೊಟ್ಟೆ ಇಟ್ಟು ಮರಿ ಮಾಡುತ್ತದೆಯಂತೆ. ಬೆಳದಿಂಗಳ ರಾತ್ರಿಗಳಲ್ಲಿ, ಮತ್ತು ಸಂತಾನಾಭಿವೃದ್ಧಿ ಕಾಲದಲ್ಲಿ ಹೆಚ್ಚಾಗಿ ಕೂಗುತ್ತವೆ. ಕಡಿಮೆ ವಾಹನ ಸಂಚಾರವಿರುವ ದಾರಿಗಳಲ್ಲಿ ರಸ್ತೆಯ ಮೇಲೂ ರಾತ್ರಿ ಹೊತ್ತು ಕುಳಿತಿರುತ್ತವೆ.
ಕನ್ನಡ ಹೆಸರು: ನತ್ತಿಂಗ
ಇಂಗ್ಲೀಷ್ ಹೆಸರು: Indian Nightjar
ವೈಜ್ಞಾನಿಕ ಹೆಸರು: Caprimulgus asiaticus
ಚಿತ್ರ ಕೃಪೆ: ಪೊಂಪಯ್ಯ ಮಳೀಮಠ್
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************