-->
ಬದಲಾಗೋಣವೇ ಪ್ಲೀಸ್ - 81

ಬದಲಾಗೋಣವೇ ಪ್ಲೀಸ್ - 81

ಬದಲಾಗೋಣವೇ ಪ್ಲೀಸ್ - 81

ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು                
                 ಅಡುಗೆ ಕೋಣೆಗಳಿಲ್ಲದ ಮನೆಯಿಲ್ಲ. ಅಡುಗೆ ತಯಾರಿಕೆ ಎಂಬುದು ಒಂದು ಕಲೆ. ಆ ಕೋಣೆಯೊಳಗೆ ನೀರು, ಉಪ್ಪು, ಖಾರ, ಸಿಹಿ ಹಾಗೂ ಮಸಾಲೆ ಪದಾರ್ಥಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಈ ಎಲ್ಲಾ ಅಡುಗೆ ಸಾಮಾನುಗಳನ್ನು ತನ್ನ ಅಗತ್ಯಕ್ಕನುಗುಣವಾಗಿ ಬಳಸಿ ಅಡುಗೆ ಮಾಡುವ ಕಲೆ ಯಾರಿಗಿದೆಯೋ ಅವರು ಮಾತ್ರ ಉತ್ತಮ ಬಾಣಸಿಗರಾಗಿ ಮೂಡಬಲ್ಲರು. ಅವರು ಮಾಡಿದ ಅಡುಗೆ ಮಾತ್ರ ಸುವಾಸನೆಯುಕ್ತವಾಗಿ ಎಲ್ಲರ ಗಮನವನ್ನು ದೂರದಿಂದಲೇ ಸೆಳೆಯುತ್ತದೆ. ಆದರೆ ಯಾರಿಗೆ ಈ ಕಲೆ ಇರುವುದಿಲ್ಲವೋ ಅವರು ಮಾತ್ರ ಸೋಲುತ್ತಾರೆ. ಯಾವುದೇ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಅಡುಗೆ ರುಚಿಯ ಪಾತ್ರ ಮಹತ್ತರವಾದದ್ದು. ಇದು ಅಡುಗೆ ಕಲೆಯ ಮಹತ್ವವಾಗಿದೆ
       ಹೌದಲ್ವಾ.. ಪ್ರಪಂಚ ಎಂಬ ಮನೆಯಲ್ಲಿ ಸಂತೋಷವಾಗಿ ಬದುಕಲು ಅಡುಗೆ ಕಲೆ ಕಲಿಯಬೇಕಾಗಿದೆ. ಅಡುಗೆ ಕಲೆ ಎಂದರೆ ಬದುಕುವ ಕಲೆ. ಎಲ್ಲರಿಗೂ ಇರುವಂತೆ ನಮಗೂ ಸಮಾನವಾದ ಪರಿಸರವಿದೆ. ಎಲ್ಲರಿಗೂ ಎಲ್ಲ ಕಡೆಯಲ್ಲೂ ದೊರೆಯುವುದು ಅದೇ ಉಪ್ಪು, ಹುಳಿ, ಖಾರ, ಮಸಾಲೆ ಪದಾರ್ಥಗಳು. ಇದರಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಆದರೆ ಇದನ್ನು ಬುದ್ದಿವಂತಿಕೆಯಿಂದ ಬಳಸಿ ವೈವಿಧ್ಯಮಯ ರುಚಿ ರುಚಿಯಾದ ಅಡುಗೆ ಪಾಕಗಳನ್ನು ಮಾಡಲು ಯಾರು ಯಶಸ್ಸಿಯಾಗುತ್ತಾರೋ ಅಂಥವರು ಮನೆಯಲ್ಲಿರುವವರನ್ನು ಹಾಗೂ ಮನೆಗೆ ಬಂದ ಅತಿಥಿಗಳನ್ನು ಸಂತೋಷದಿಂದ ಇರುವಂತೆ ಮಾಡಬಲ್ಲರು. ಅದೇ ರೀತಿ ನಮ್ಮ ಬದುಕಿನಲ್ಲೂ ದಿನನಿತ್ಯವೂ ಸದಾ ನೋವು - ನಲಿವು, ಸುಖ - ದುಃಖ ಸಂಬಂಧಿತ ವಿಚಾರಗಳು ನಡೆಯುತ್ತಿರುತ್ತದೆ. ಆದರೆ ಇವೆಲ್ಲವನ್ನು ಸಮಚಿತ್ತದಲ್ಲಿ ಸ್ವೀಕರಿಸಿ ತನ್ನತನದಿಂದ ಬದುಕುವ ಕಲೆ ಯಾರು ತಿಳಿದಿರುತ್ತಾರೋ ಅವರು ಮಾತ್ರ ತನ್ನನ್ನು ಹಾಗೂ ಜತೆಗಿರುವ ಎಲ್ಲರನ್ನು ಸಂತೋಷದಿಂದ ಇರುವಂತೆ ಮಾಡುತ್ತಾರೆ. ಅದಕ್ಕಾಗಿ ಬದುಕುವ ಕಲೆ ಕಲಿಯಬೇಕು. ಬದುಕು ತುಂಬಾ ಸರಳ. ಅದಕ್ಕೆ ಬೇಕಾಗಿರುವುದು ಪ್ರಾಕೃತಿಕ ಚಿಂತನೆಗಳು ಹಾಗೂ ತೃಪ್ತ ಭಾವ. ಅಡುಗೆ ರುಚಿ ಹೇಗಿದ್ದರೂ ಅದನ್ನು ಪ್ರೀತಿಯಿಂದ ಬಡಿಸಿದಾಗ ಅದರ ರುಚಿ ಇಮ್ಮಡಿಯಾಗುತ್ತದೆ. ಅದಕ್ಕಾಗಿ ಎಲ್ಲವನ್ನೂ ಪ್ರೀತಿಯಿಂದ ಹಂಚಲು ಕಲಿತಾಗ ಸಂತೋಷ ಇಮ್ಮಡಿಯಾಗುತ್ತದೆ. ಬನ್ನಿ ಪ್ರೀತಿಯಿಂದ ಬದುಕೋಣ. ಸಿಕ್ಕಿರುವ ಬದುಕಿನ ಅವಕಾಶವನ್ನು ಧನಾತ್ಮಕವಾಗಿ ಬದುಕಲು ಕಲಿಯೋಣ. ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article