-->
ಓ ಮುದ್ದು ಮನಸೇ ...…...! ಸಂಚಿಕೆ - 26

ಓ ಮುದ್ದು ಮನಸೇ ...…...! ಸಂಚಿಕೆ - 26

ಓ ಮುದ್ದು ಮನಸೇ ...…...! ಸಂಚಿಕೆ - 26
   
        ಸಾಮಾನ್ಯವಾಗಿ ಹತ್ತನೇ ತರಗತಿಗೆ ಬಂದ ಮೇಲೆ ವಿಧ್ಯಾರ್ಥಿಗಳಲ್ಲಿ ಮುಂದಿನ ಶಿಕ್ಷಣದ ಮತ್ತು ಉದ್ಯೋಗದ ಕುರಿತು ಗೊಂದಲಗಳು, ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಕೆಲವರು ತಮ್ಮ ಗೊಂದಲವನ್ನು ಪರಿಹರಿಸಿಕೊಳ್ಳಲು ಮನೆಯವರ ಮೊರೆ ಹೋದರೆ ಇನ್ನು ಕೆಲವರು ಶಿಕ್ಷಕರ, ಗೆಳೆಯರ ಅಥವಾ ವೃತ್ತಿ ಮಾರ್ಗದರ್ಶಕರ ಸಹಾಯ ಪಡೆಯುವುದು ವಾಡಿಕೆ. ಕೆಲವರಂತೂ ಗೊಂದಲಗಳಿಗೆ ಪರಿಹಾರ ಹುಡುಕುವ ಯಾವ ಪ್ರಯತ್ನವನ್ನೂ ಮಾಡುವುದೇ ಇಲ್ಲ. ಮತ್ತೆ ಕೆಲವರು ಗೊಂದಲಗಳೇ ಇಲ್ಲದೆ ತಮ್ಮ ಪಾಡಿಗೆ ತಾವು ಇದ್ದು ಬಿಡುವುದುಂಟು. ಇತ್ತೀಚಿನ ದಿನಗಳಲ್ಲಿ ಅಂತಹದ್ದೊಂದು ಸಹಾಯವನ್ನು ಅರಸಿ ನನ್ನ ಬಳಿ ಬರುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇದೆ.
     ಮೊನ್ನೆ ವೃತ್ತಿ ಮಾರ್ಗದರ್ಶನಕ್ಕಾಗಿ ಮೂವರು ವಿದ್ಯಾರ್ಥಿಗಳು ನನ್ನ ಬಳಿ ಬಂದಿದ್ದರು. ಒಬ್ಬ ವಿದ್ಯಾರ್ಥಿ ಕೇಳಿದ "ಯಾವ ಡಿಗ್ರೀ ತಗೊಂಡ್ರೆ ಹೆಚ್ಚು ಹಣ ಸಂಪಾದನೆ ಮಾಡ್ಬಹ್ದು ಸರ್?" ಇನ್ನೊಬ್ಬ "ಸರ್ ನಂಗೆ ಹೆಚ್ಚು ಜಾಬ್ ಆಪ್ಪಾರ್ಚುನಿಟೀಸ್ ಇರೋ ಡಿಗ್ರೀಸ್ ಬಗ್ಗೆ ಹೇಳಿ," ಮತ್ತೊಬ್ಬ "ನಾನು ಎಷ್ಟೇ ಓದಿದ್ರೂ ಮಾರ್ಕ್ಸ್ ಬರ್ತಿಲ್ಲ. ಓದಿದ್ದೆಲ್ಲಾ ಮರ್ತು ಹೋಗುತ್ತೆ ಇಲ್ಲಾ ಅಂದ್ರೆ ಓದೋದಕ್ಕೆ ಕಾನ್ಸಂಟ್ರೇಶನ್ ಸಿಗ್ತಿಲ್ಲ ಏನ್ಮಾಡ್ಲಿ?" ಅಂದ. ಇವತ್ತಿನ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣವನ್ನು ಅಂಕ, ಉದ್ಯೋಗ ಮತ್ತು ಹಣಸಂಪಾದನೆಯನ್ನು ಕಲಿಸುವ ವ್ಯವಸ್ಥೆಯನ್ನಾಗಿ ಬಳಸುತ್ತಿರುವುದು ಖೇದಕರ ಸಂಗತಿ. ಮೊನ್ನೆ ಇನ್ನೊಬ್ಬ ವಿದ್ಯಾರ್ಥಿನಿ ನನ್ನ ಬಳಿ ಆಪ್ತಸಮಾಲೋಚನೆಗೆ ಬಂದಾಗ ಕೇಳಿದೆ "ಯಾಕೆ ಮೊನ್ನೆ ಶಾಲೆಯಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿಲ್ಲಾ?" "ಮುಂದಿನ ತಿಂಗಳು ಪರೀಕ್ಷೆ ಸ್ಟಾರ್ಟ್ ಆಗತ್ತೆ ಸರ್. ಸುಮ್ನೆ ಡಿಸ್ಟ್ರಾಕ್ಟ್ ಆಗೋದು ಬೇಡಾ ಅಂತ ಪಾರ್ಟಿಸಿಪೇಟ್ ಮಾಡಿಲ್ಲಾ" ಅಂದಳು. ಪರೀಕ್ಷೆ ಬೌದ್ಢಿಕ ಸಾಮರ್ಥ್ಯವನ್ನು ಅಳೆಯುವ ವೇದಿಕೆಯಾದರೆ ಇತರ ಚಟುವಟಿಕೆಗಳು ಮನೋದೈಹಿಕ ಸಾಮರ್ಥ್ಯವನ್ನು ಅಳೆಯುವ ವೇದಿಕೆಗಳಲ್ಲವೇ? ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳೂ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅತ್ಯವಶ್ಯಕವಲ್ಲವೇ? ಅದಾಗ್ಯೂ ಶಿಕ್ಷಣವನ್ನು ಅತ್ಯಂತ ಸಂಕುಚಿತವಾಗಿ ನೋಡುವ ಇವತ್ತಿನ ಪೀಳಿಗೆಗೆ ಸಮಗ್ರ ಶಿಕ್ಷಣದ ಮಹತ್ವ ಮತ್ತು ಅವಶ್ಯಕತೆಯನ್ನು ಮನದಟ್ಟು ಮಾಡಿಕೊಡುವ ಜವಾಬ್ದಾರಿ ಹಿಂದೆಂದಿಗಿಂತಲೂ ತುಸು ಹೆಚ್ಚಾಗಿಯೇ ಇರುವಂತೆ ಕಾಣುತ್ತದೆ.
       "ನಿಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೊದಲು ಶಿಕ್ಷಣದ ನಿಜಾರ್ಥವನ್ನು ತಿಳ್ಕೊಳ್ಳಿ ಅಂದವನೇ ಸ್ವಾಮಿ ವಿವೇಕಾನಂದರ ಮಾತೊಂದನ್ನು ಉಲ್ಲೇಖಿಸಿದೆ, ’ಎಜುಕೇಶನ್ ಇಸ್ ಎ ಮೆನಿಫೆಸ್ಟೇಶನ್ ಆಫ್ ದಿ ಪೆರ್ಫೆಕ್ಷನ್ ಅಲ್ರೆಡಿ ಇನ್ ಎ ಮ್ಯಾನ್’ ಶಿಕ್ಷಣವು ಒಬ್ಬ ವ್ಯಕ್ತಿಯಲ್ಲಿ ಅಡಗಿರುವ ಪರಿಪೂರ್ಣತೆಯನ್ನು ಅಭಿವ್ಯಕ್ತಿ ಗೊಳಿಸುವ ಉತ್ತಮ ಮಾರ್ಗವಾಗಿದೆ. ಸರ್ವತೋಮುಖ ಬೆಳವಣಿಗೆಯೊಂದಿಗೆ ಒಬ್ಬ ವ್ಯಕ್ತಿಯನ್ನು ಸಮರ್ಥನು ಮತ್ತು ಸಮರ್ಪಕನನ್ನಾಗಿ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಪ್ರಮುಖವೆನಿಸುತ್ತದೆ. ಶಿಕ್ಷಣವು ತರಗತಿಯಲ್ಲಿ ನಡೆಯುವ ವಿಷಯಾಧ್ಯಯನಕ್ಕೆ ಮಾತ್ರ ಸೀಮಿತವಾಗಿರದೆ ವಿಷಯಾಧಾರಿತ ಜ್ಞಾನದ ಜೊತೆ-ಜೊತೆಗೆ ಕೌಶಲ್ಯ, ದೈಹಿಕ ಮತ್ತು ಮಾನಸಿಕ ಸಬಲತೆಯನ್ನು ಸಾಧಿಸುವುದೇ ಆಗಿದೆ. ಅಂದರೆ ಒಬ್ಬ ವ್ಯಕ್ತಿಯ ಸರ್ವತೋಮುಖ ಮತ್ತು ಸಕಾರಾತ್ಮಕ ಬೆಳವಣಿಗೆಯೇ ಶಿಕ್ಷಣದ ಮೂಲೋದ್ದೇಶವಾಗಿದೆ ಎಂದರ್ಥ. ಶಿಕ್ಷಣವು ಕೇವಲ ಉದ್ಯೋಗ, ಸಂಪಾದನೆ ಅಥವಾ ಅಂಕ ಕೇಂದ್ರೀಕೃತವಾಗಿದ್ದರೆ ಅದು ಅತ್ಯಂತ ಸಂಕುಚಿತ ಶಿಕ್ಷಣ ಎನಿಸಿಕೊಳ್ಳುತ್ತದೆ. ಹಾಗಾಗಿ ವಿದ್ಯಾರ್ಥಿಗಳಾದ ನೀವು ಹಣಸಂಪಾದನೆ ಕಲಿಸಿಕೊಡುವ, ಅಂಕಗಳಿಸಲು ಸಹಕರಿಸುವ ಅಥವಾ ಉದ್ಯೋಗ ಕೇಂದ್ರೀಕೃತ ಶಿಕ್ಷಣವನ್ನು ಅರಸುವ ಬದಲು ಜ್ಞಾನ ಸಂಪಾದನೆಯ ಜೊತೆ ಜೊತೆಗೆ ನಿಮ್ಮನ್ನು ಉತ್ತಮರು, ಸಬಲರು ಮತ್ತು ಜ್ಞಾನಿಗಳನ್ನಾಗಿ ರೂಪಿಸಬಲ್ಲ ಶಿಕ್ಷಣವನ್ನು ಅರಸಬೇಕಾಗಿದೆ. ಇಂತಹದ್ದೊಂದು ಶಿಕ್ಷಣವನ್ನು ನೀವು ಪಡೆದದ್ದೇ ಆದಲ್ಲಿ ಅಂಕ, ಹಣ ಅಥವಾ ಉದ್ಯೋಗದ ಹೊರತಾಗಿಯೂ ಒಂದು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
       ಈ ಅಂಕ, ಉದ್ಯೋಗ ಮತ್ತು ಹಣ ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆಯ ಪ್ರತಿಫಲವಾಗಿ ಭಾರತದ ಒಟ್ಟೂ ಪದವೀಧರರಲ್ಲಿ ಶೇಕಡಾ ಐವತ್ತಕ್ಕಿಂತ ಕಡಿಮೆ ವ್ಯಕ್ತಿಗಳಷ್ಟೇ ಉದ್ಯೋಗ ಯೋಗ್ಯರಾಗಿದ್ದಾರೆ ಎನ್ನುವ ಸತ್ಯವನ್ನು ಭಾರತೀಯ ಕೌಶಲ್ಯ ಪ್ರಾಧಿಕಾರವೂ ಇತ್ತೀಚೆಗಷ್ಟೇ ತನ್ನ ಸಮೀಕ್ಷೆಯ ಮೂಲಕ ಕಂಡುಕೊಂಡಿದೆ. ಇದರ ಪರಿಣಾಮವಾಗಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುವುದಷ್ಟೇ ಅಲ್ಲದೆ ಅವರಲ್ಲಿ ಕೆಲವರು ಹಣಕ್ಕಾಗಿ, ಭೋಗಕ್ಕಾಗಿ ಅಡ್ದದಾರಿ ಹಿಡಿಯುವ, ದುಶ್ಚಟಗಳಿಗೆ ಬಲಿಯಾಗುವ ಅಥವಾ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಹೆಚ್ಚುತ್ತಿದೆ. ಪ್ರಸ್ತುತ ಆನ್ ಲೈನ್ ವಂಚನೆ, ದರೋಡೆ, ಮೋಸದಂತಹ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಹಣ ಸಂಪಾದನೆಯ ದಾರಿ ಕೊಂಡಿರುವವರಲ್ಲಿ ಬಹುತೇಕರು ವಿದ್ಯಾವಂತರೇ ಆಗಿರೋದು ಇದಕ್ಕೊಂದು ನಿದರ್ಶನವಾಗಿದೆ. ಹೆಚ್ಚು ವಿದ್ಯಾವಂತರು ಮತ್ತು ಬುದ್ಧಿವಂತರೆನಿಸಿಕೊಂಡವರು ಬದುಕುವ ನಗರ ಪ್ರದೇಶಗಳಲ್ಲೇ ಹೆಚ್ಚುತ್ತಿರುವ ವಿಚ್ಛೇದನ, ಹೊಂದಾಣಿಕೆಯ ಬದುಕಿನ ಕೊರತೆ, ಜೀವನದ ಸವಾಲುಗಳನ್ನು ಎದುರಿಸುವಲ್ಲಿ ವಿಫಲತೆ, ಸ್ವಾರ್ಥ ಮುಂತಾದ ಸಮಸ್ಯೆಗಳು ಶಿಕ್ಷಣವನ್ನು ಕೇವಲ ಅಂಕ, ಉದ್ಯೋಗ ಮತ್ತು ಹಣಕ್ಕೆ ಸೀಮಿತ ಗೊಳಿಸಿರುವುದರ ಪ್ರತಿಫಲವೆಂದೆನಿಸುವುದಿಲ್ಲವೇ?
       ಆಸ್ತಿಗಾಗಿ ಹೆತ್ತ ಅಮ್ಮ ಅಪ್ಪನನ್ನೇ ಮನೆಯಿಂದಾಚೆ ದಬ್ಬುವ, ಕಿಂಚಿತ್ ಆಸ್ತಿಗಾಗಿ ಒಡಹುಟ್ಟಿದ ಅಣ್ಣ ತಮ್ಮಂದಿರ ನಡುವಿನ ವೈಷಮ್ಯ, ದುಡ್ಡಿಗಾಗಿ ಕಟ್ಟಿಕೊಂಡ ಹೆಂಡತಿಯನ್ನೇ ಕ್ರೌರ್ಯಕ್ಕೆ ನೂಕುವಂತಹ ಮನಸ್ಥಿತಿ ಹುಟ್ಟಿಕೊಂಡದ್ದು ಎಲ್ಲಿಂದ? ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ, ಸಂಬಂಧಗಳ ಕೊಂಡಿಯನ್ನು ಗಟ್ಟಿಗೊಳಿಸುವಲ್ಲಿ, ವ್ಯಕ್ತಿಯಲ್ಲಿನ ಕಲ್ಮಶವನ್ನು ತೊಡೆದು ಹಾಕಿ ಅವನನ್ನು ಸಮಾಜಕ್ಕೊಂದು ಉತ್ತಮ ಕೊಡುಗೆಯನ್ನಾಗಿ ರೂಪಿಸುವಲ್ಲಿ ಕಲಿಯುವವರ ಮತ್ತು ಕಲಿಸುವವರ ಜವಾಬ್ದಾರಿಯಲ್ಲವೇ? ಹೆತ್ತ ಅಪ್ಪ ಅಮ್ಮಂದಿರಿಗೆ, ಬದುಕಲು ಕಲಿಸಿದ ಗುರುವಿಗೆ ಬೆಲೆಕೊಡದ ಮಕ್ಕಳನ್ನು ಶಿಕ್ಷಿತರೆಂದು ಕರೆಯೋದು ಹೇಗೆ? ಸರಕಾರಿ ಕೆಲಸ ದೇವರಕೆಲಸವೆಂದು ಸೇವೆಗೆ ಸೇರುವ ಅಧಿಕಾರಿಯೊಬ್ಬ ಬಿಡಿಗಾಸಿಗೆ ಕೈ ಚಾಚುವಾಗ, ವೈದ್ಯನೊಬ್ಬ ನಾರ್ಮಲ್ ಡೆಲಿವರಿಯನ್ನು ಸಿಜೇರಿಯನ್ ಹೆರಿಗೆಯನ್ನಾಗಿ ಪರಿವರ್ತಿಸುವಾಗ, ವಕೀಲನೊಬ್ಬ ಅಪರಾಧಿಯೊಬ್ಬನನ್ನು ನಿರಪರಾಧಿಯನ್ನಾಗಿ ಮಾಡುವಾಗ, ಇಂಜಿನಿಯರ್ ಒಬ್ಬ ಕಡಿಮೆ ಸಿಮೇಂಟ್ ಮತ್ತು ಹೆಚ್ಚು ಮರಳನ್ನು ಬಳಸಿ ಕಟ್ಟಡ ಕಟ್ಟುವಾಗ, ರಾಜಕಾರಣಿಯೊಬ್ಬ ಅಧಿಕಾರಕ್ಕಾಗಿ ದ್ವೇಷಬಿತ್ತುವಾಗ ನನಗೆ ಅಂಕ, ಉದ್ಯೋಗ ಮತ್ತು ಹಣ ಕೇಂದ್ರೀಕೃತ ಶಿಕ್ಷಣ ಮತ್ತು ಮೌಲ್ಯಾಧಾರಿತ ಶಿಕ್ಷಣದ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಇವತ್ತಿಗೂ ಉತ್ತಮ ಶಿಕ್ಷಣದ ಜೊತೆಗೆ ತಮ್ಮ ವೃತ್ತಿ ಗೌರವವನ್ನು ಉಳಿಸಿಕೊಂಡು ಸಮಾಜಕ್ಕೆ ಒಂದು ಕೊಡುಗೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಅದೆಷ್ಟೋ ಅಧಿಕಾರಿಗಳು, ವೈದ್ಯರು, ಇಂಜಿನಿಯರ್ ಗಳು, ವಕೀಲರು, ರಾಜಕಾರಣಿಗಳು ನಮ್ಮ ಸುತ್ತಲೂ ಇದ್ದಾರೆ.
        ಭಗವತ್ ಗೀತೆಯಲ್ಲಿ ಶ್ರೀ ಕೃಷ್ಣನು ಬೋಧಿಸಿದ ಕರ್ಮ, ರಾಮಾಯಣದಲ್ಲಿ ಶ್ರೀ ರಾಮನು ಪಾಲಿಸಿದ ಧರ್ಮ ಇವೆರೆಡೂ ನಿಜವಾದ ಶಿಕ್ಷಣಕ್ಕೆ ಮಾದರಿಯಾಗಿವೆ. ಒಬ್ಬ ವ್ಯಕ್ತಿಗೆ ನೈಸರ್ಗಿಕವಾಗಿ, ಸಾಮಾಜಿಕವಾಗಿ ಮತ್ತು ಕೌಟುಂಬಿಕವಾಗಿ ಬಂದ ಜವಾಬ್ದಾರಿಗಳ ಅರಿವನ್ನು ಮೂಡಿಸಿ, ಅವುಗಳ ಸಫಲತೆಗೆ ಅಣಿಮಾಡಿ ಸಾರ್ಥಕ ಬದುಕಿನೆಡೆಗೆ ಪ್ರೋತ್ಸಾಹಿಸುವುದೇ ನನ್ನರ್ಥದಲ್ಲಿ ನಿಜವಾದ ಶಿಕ್ಷಣವಾಗಿದೆ. ಇಂತಹ ಶಿಕ್ಷಣವನ್ನು ಪಡೆಯುವ ಹಂಬಲ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ನೀಡುವ ಹಂಬಲ ಎಲ್ಲಾ ಶಿಕ್ಷಕರಿಗೂ ಉಂಟಾದರೆ ಸಮಾಜಕ್ಕೆ ಒಂದೊಳ್ಳೆ ಕೊಡುಗೆಯಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಶಿಕ್ಷಣ ಅಂದಾಗ ಯಾವ ಡಿಗ್ರೀ ಪಡೆದರೆ ಉದ್ಯೋಗಾವಕಾಶ ಹೆಚ್ಚು, ಯಾವ ಉದ್ಯೋಗದಲ್ಲಿ ಸಂಪಾದನೆ ಹೆಚ್ಚು ಅಥವಾ ಯಾವ ಡಿಗ್ರಿಯಲ್ಲಿ ಹೆಚ್ಚು ಅಂಕಗಳಿಸಬಹುದು ಎನ್ನುವ ಆಲೋಚನೆ ಬಿಟ್ಟು ಯಾವ ಡಿಗ್ರೀ ಆದರೂ ಪರವಾಗಿಲ್ಲ ಅಲ್ಲಿನ ಎಲ್ಲಾ ಚಟುವಟಿಕೆಗಳಲ್ಲಿ ಆಸಕ್ತಿಯಿಂದ, ಕ್ರಿಯಾಶೀಲತೆಯಿಂದ ಪಾಲ್ಗೊಂಡು ವಿಷಯಾಧಾರಿತ ಜ್ಞಾನದ ಜೊತೆ-ಜೊತೆಗೆ ಭಾವನಾತ್ಮಕವಾಗಿ, ಮಾನಸಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ದೈಹಿಕವಾಗಿ ಸಬಲತೆಯನ್ನು ಪಡೆದು ನನ್ನಲ್ಲಿರುವ ನಕಾರಾತ್ಮಕ ವಿಚಾರ, ಗುಣ, ನಡತೆಗಳಿಂದ ಹೊರಬಂದು ಉತ್ತಮನಾಗಿ ಸಮಾಜ ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವಂತವನಾಗಿ ಬೆಳೆಯಬೇಕೆಂಬ ಹಂಬಲದಲ್ಲಿ ಪ್ರಾಮಾಣಿಕ ಪ್ರಯತ್ನದ ಮೂಲಕ ಶಿಕ್ಷಣವನ್ನು ಅರಸಬೇಕಾಗಿದೆ.
      "ಲೀವ್ ಯ್ಯಾಸ್ ಇಫ್ ಯು ವೇರ್ ಟು ಡೈ ಟುಮಾರೋ, ಲರ್ನ್ ಯ್ಯಾಸ್ ಇಪ್ ಯು ವೇರ್ ಟು ಲೀವ್ ಫಾರ್ ಎವರ್" ಎನ್ನುವ ಮಹಾತ್ಮ ಗಾಂಧೀಜಿಯವರ ಮಾತಿನ ಅರ್ಥವೇ ಅದ್ಭುತ. ಅದು ಶಿಕ್ಷಣದ ಮಹೋನ್ನತ ಗುರಿಯನ್ನು ತೋರಿಸುತ್ತದೆ. ನಾಳೆಯೇ ನನ್ನ ಕೊನೆಯೆಂಬಂತೆ ಬದುಕು ಮತ್ತು ನನಗೆ ಕೊನೆಯೇ ಇಲ್ಲ ಎಂಬಂತೆ ಜ್ಞಾನ ಸಂಪಾದಿಸು ಎನ್ನುವ ಅವರ ಮಾತಿನಲ್ಲಿ ಕ್ಷಣಿಕ ಜೀವನಕ್ಕೂ ಶಾಶ್ವತ ಜ್ಞಾನಕ್ಕೂ ಇರುವ ವ್ಯತ್ಯಾಸವನ್ನು ಕಾಣಬಹುದಾಗಿದೆ. ಹಣ, ಆಸ್ತಿ, ಸಂಪತ್ತು, ಅಧಿಕಾರ ಮೊದಲಾದಿಗಳು ಕ್ಷಣಿಕ ಮಾತ್ರ. ಮನುಷ್ಯನ ಬದುಕು ಕೊನೆಗೊಂಡಾಗ ಅವು ಕರಗಿ ಹೋಗುತ್ತವೆ. ಆದರೆ ಪಡೆದ ಉತ್ತಮ ಶಿಕ್ಷಣವು ವ್ಯಕ್ತಿಯು ಮಾಡುವ ಕೆಲಸದ ಮೂಲಕ, ಆಡುವ ಮಾತಿನ ಮೂಲಕ, ಗುಣ, ನಡತೆಗಳ ಮೂಲಕ ಇನ್ನೊಬ್ಬರನ್ನು ಪ್ರಭಾವಿಸಿ ಅವನ ಅಂತ್ಯವಾದರೂ ಇತರರ ಮೂಲಕ ನಿರಂತರವಾಗಿ ಹರಿಯಲ್ಪಡುತ್ತದೆ. ಇವತ್ತಿನ ವಿದ್ಯಾರ್ಥಿಗಳು ಅಂತಹ ಶಾಶ್ವತ ಸಮಗ್ರ ಶಿಕ್ಷಣವನ್ನು ಪಡೆಯುವಲ್ಲಿ ಆಸಕ್ತರಾಗಬೇಕು.
        ಹಾಗಿದ್ದರೆ ಎಲ್ಲಿದೆ ಈ ಸಮಗ್ರ ಮತ್ತು ಶಾಶ್ವತ ಶಿಕ್ಷಣ? ಇಂತಹದ್ದೊಂದು ಪ್ರಶ್ನೆಗೆ ಉತ್ತರ ನಮ್ಮಲ್ಲಿಯೇ ಇದೆ. ಸಮಗ್ರ ಮತ್ತು ಶಾಶ್ವತ ಶಿಕ್ಷಣ ಎಂದಾಕ್ಷಣ ಅದನ್ನರಸಿ ಹಿಮಾಲಯಕ್ಕೋ ಅಥವಾ ಕನ್ಯಾಕುಮಾರಿಗೋ ಹೋಗಬೇಕಾಗಿಲ್ಲ. ಅಂತಹದ್ದೊಂದು ಶಿಕ್ಷಣ ಸರ್ವವ್ಯಾಪಿಯಾಗಿ ಲಭ್ಯವಿದೆ ಅದು ನಿಮ್ಮ ಮನೆಯಂಗಳದ ಹೋದೋಟದಲ್ಲಿ ನಡೆಯುವ ಪ್ರಕೃತಿ ವಿಸ್ಮಯದಲ್ಲಿ, ಅಮ್ಮನ ಅಡುಗೆ ಮನೆಯಲ್ಲಿ, ಅಪ್ಪನ ದಿನನಿತ್ಯದ ಕಾರ್ಯ ಚಟುವಟಿಕೆಯಲ್ಲಿ, ನೀವು ಶಾಲೆಗೆ ನಡೆದುಕೊಂಡು ಹೋಗುವ ರಸ್ತೆ ಬದಿಯಲ್ಲಿ, ಪೇಟೆ-ಪಟ್ಟಣ, ಬೆಟ್ಟ-ಗುಡ್ಡ, ಪ್ರಾಣಿ-ಪಕ್ಷಿ, ಕೆರೆ-ತೊರೆ ಅಥವಾ ಶಾಲೆಯ ಕೊಠಡಿಯ ಒಳಗೆ ಹೊರಗೆ ನಿಮ್ಮ ಬದುಕಿನ ಪ್ರತಿ ಗಳಿಗೆಯಲ್ಲೂ ಈ ಶಿಕ್ಷಣ ಲಭ್ಯವಿದೆ. ಇದಕ್ಕೆ ಹಣ ವ್ಯಯಿಸುವ ಅವಶ್ಯಕತೆಯಿಲ್ಲ. ಆಸಕ್ತಿ, ಉತ್ಸಾಹ, ವ್ಯಯಿಸಲೊಂದಿಷ್ಟು ಶ್ರಮ ಮತ್ತು ಸಮಯವಿದ್ದರೆ ಸಾಕು ಆಗ ಸಮಗ್ರ ಶಿಕ್ಷಣ ನಿಮ್ಮದಾಗುತ್ತದೆ. ಈ ಶಿಕ್ಷಣವು ನಿಮ್ಮ ದಿನನಿತ್ಯದ ಬದುಕಿನಲ್ಲಿ ಬಂದೊದಗುವ ಎಲ್ಲಾ ಅವಕಾಶಗಳಿಗೆ ನೀವು ಹೇಗೆ ತೆರೆದುಕೊಳ್ಳುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಇಂತಹದ್ದೊಂದು ಜ್ಞಾನ ಸಂಪಾದನೆಗೆ ನಿಮ್ಮೊಂದಿಗಿದ್ದು ಸಹಕರಿಸಬಲ್ಲ ಶಿಕ್ಷಕರೂ, ಪಾಲಕರೂ ಮತ್ತು ಉತ್ತಮ ಗೆಳೆಯರ ಪಾತ್ರವನ್ನು ಅರಿತು ಅವರೊಟ್ಟಿಗೆ ಬೆರೆತು ಸಹಕರಿಸಿದಾಗ ಈ ಮಾರ್ಗ ಸುಲಭ. ಇಂತಹ ಪ್ರಾಮಾಣಿಕ ಪ್ರಯತ್ನವು ನಿಮ್ಮನ್ನು ಸರ್ವ ಗುಣ ಸಂಪನ್ನರನ್ನಾಗಿಸಿ, ಮನೋ ದೈಹಿಕ ಬಲವನ್ನು ಹಿಗ್ಗಿಸಿ, ನ್ಯೂನ್ಯತೆಗಳನ್ನು ಕುಗ್ಗಿಸಿ ವಿಷಯಾಧಾರಿತ ಜ್ಞಾನದ ಜೊತೆ-ಜೊತೆಗೆ ಕೌಶಲ್ಯದ ಬೆಳವಣಿಗೆಗೆ ಪೂರಕವಾಗುತ್ತದೆ. ಮತ್ತದು ನೀವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರ ಯಾವುದಿದ್ದರೂ ಯಶಸ್ಸಿನೊಂದಿಗೆ ಸಾರ್ಥಕತೆಯನ್ನು ಮತ್ತು ಸಂತೃಪ್ತಿಯನ್ನು ತಂದುಕೊಡುತ್ತದೆ.
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
********************************************


Ads on article

Advertise in articles 1

advertising articles 2

Advertise under the article