-->
ನಮ್ಮ ಸಂವಿಧಾನ, ನಮ್ಮ ಹೆಮ್ಮೆ

ನಮ್ಮ ಸಂವಿಧಾನ, ನಮ್ಮ ಹೆಮ್ಮೆ

ಲೇಖಕರು : ಶಿವಕುಮಾರ ಎಂ.ಜಿ
ಕನ್ನಡ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
             
        ಭವ್ಯ ಭಾರತದ ಸತ್ಪ್ರಜೆಗಳಿಗೆಲ್ಲರಿಗೂ 74ನೇ ಗಣರಾಜ್ಯೋತ್ಸವದ ಶುಭಾಶಯಗಳು..
          1950 ಜನವರಿ 26ರಂದು ನಮ್ಮ ಸಂವಿಧಾನ ಜಾರಿಗೆ ಬಂದಿರುವುದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಹಾಗಾದರೆ ಸಂವಿಧಾನ ಎಂದರೇನು....? ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವುದಾದರೆ ಸಂವಿಧಾನವೆಂದರೆ ರಾಷ್ಟ್ರದ ಮೂಲಭೂತ ಕಾನೂನು ಅಥವಾ ಯಾವುದೇ ದೇಶದಲ್ಲಿ ಪ್ರಜೆಗಳನ್ನು ಆಳುವ, ಸರಕಾರವನ್ನು ನಿರ್ಧರಿಸುವ ಶಕ್ತಿ, ಚಕ್ರಾಧಿಪತಿ ಅಥವಾ ವಂಶಾರ್ಜಿತ ಪಟ್ಟವನ್ನು ಹೊಂದಿರುವವರ ಪಾತ್ರವಿಲ್ಲದಿರುವುದೇ ಗಣರಾಜ್ಯ. 
    "ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಆಡಳಿತ ನಡೆಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವ ವ್ಯವಸ್ಥೆ". ನಮ್ಮ ಸಂವಿಧಾನವು ಬೇರೆ ಬೇರೆ ರಾಷ್ಟ್ರಗಳ ಸಂವಿಧಾನಾತ್ಮಕ ಅಂಶಗಳಿಂದ ಪ್ರಭಾವಿತವಾಗಿದ್ದರೂ ತನ್ನದೇ ಆದ ವೈಶಿಷ್ಟ್ಯತೆ ಯಿಂದ, ಮೌಲ್ಯಗಳಿಂದ ಆದರ್ಶಗಳಿಂದ ವಿಶ್ವದಲ್ಲಿಯೇ ಅತ್ಯುತ್ತಮ ಸಂವಿಧಾನವೆಂದು ಪರಿಗಣಿಸಲ್ಪಟ್ಟಿದೆ. 'ವಿವಿಧತೆಯಲ್ಲಿ ಏಕತೆ' ಯನ್ನೊಳಗೊಂಡ ವಿಶಾಲ ರಾಷ್ಟ್ರದಲ್ಲಿ ವಿಭಿನ್ನ ಜಾತಿ, ಧರ್ಮ ಜನಾಂಗ, ಭಾಷೆ, ಸಂಸ್ಕೃತಿಯನ್ನು ಹೊಂದಿರುವ ಸರ್ವರ ಏಳಿಗೆಗಾಗಿ, ಒಳಿತಿಗಾಗಿ "ಸರ್ವೇ ಜನಾಃ ಸುಖಿನೋ ಭವಂತು" , "ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು" ಎಂಬ ಧ್ಯೇಯವನ್ನು ಒಳಗೊಂಡು ರಚಿತವಾದ ವಿಶಿಷ್ಟವಾದ ಮೂಲಭೂತ ಕಾನೂನುಗಳೇ ನಮ್ಮ ಸಂವಿಧಾನ. 
    
▪️1945ರ ಎರಡನೇ ಮಹಾಯುದ್ಧದ ನಂತರ 1946 ರಲ್ಲಿ ಬ್ರಿಟಿಷರ ಕ್ಯಾಬಿನೆಟ್ ಮಿಷನ್ ಭಾರತಕ್ಕೆ ಸಂವಿಧಾನದ ಅಗತ್ಯತೆಯನ್ನು ತಿಳಿಸಿತು. 
▪️1946 ಡಿಸೆಂಬರ್ 6 ರಂದು ದೆಹಲಿಯ ಕಾನ್ಸ್ಟಿಟ್ಯೂಷನಲ್ ಹಾಲ್ನಲ್ಲಿ ನಡೆದ ಮೊದಲ ಸಭೆಯಲ್ಲಿ 296 ಸದಸ್ಯರಲ್ಲಿ 207 ಮಂದಿ ಭಾಗವಹಿಸಿದ್ದರು.
▪️ ಡಾ. ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯ ಡಾ. ಬಿ.ಆರ್ ಅಂಬೇಡ್ಕರ್ ಅವರ ಕರಡು ಸಮಿತಿಯ ಅಧ್ಯಕ್ಷತೆಯಲ್ಲಿ ರಚಿತಗೊಂಡ ಸಮಿತಿಯು ಸುಮಾರು 2 ವರ್ಷ 11 ತಿಂಗಳು 17 ದಿನಗಳ ಕಾಲ 114 ದಿನ 11 ಸಮಾವೇಶಗಳನ್ನು ನಡೆಸಿ ಸಂವಿಧಾನದ ಕಾನೂನುಗಳನ್ನು ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
▪️1949 ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು.
▪️1950 ಜನವರಿ 26ರಂದು ಭಾರತ ದೇಶದ ಸಂವಿಧಾನವು ಜಾರಿಗೊಂಡಿತು. 
    ಅಂದಿನಿಂದ ಪ್ರತಿ ವರ್ಷ ಜನವರಿ 26 ನ್ನು ಗಣರಾಜ್ಯ ದಿನ ಎಂಬುದಾಗಿ ಆಚರಿಸಲಾಗುತ್ತಿದೆ.

▪️ವಿಶ್ವದಲ್ಲಿನ ಅತಿ ದೊಡ್ಡ ಲಿಖಿತ ಸಂವಿಧಾನ.
▪️ಟೈಪ್ ಅಥವಾ ಮುದ್ರಣ ಮಾಡಲಾಗಿಲ್ಲ ಇಂಗ್ಲಿಷ್ ಮತ್ತು ಹಿಂದಿ ಕೈಬರಹದಲ್ಲಿದೆ.
▪️ಮೂಲಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು ಸಂಸತ್ ಭವನದ ಗ್ರಂಥಾಲಯದಲ್ಲಿದೆ. 
▪️ಫ್ರಾನ್ಸ್, ರಷ್ಯ, ಅಮೇರಿಕಾ, ಐರ್ಲೆಂಡ್, ಜಪಾನ್, ಜರ್ಮನಿ, ಆಸ್ಟ್ರೇಲಿಯಾ ಮುಂತಾದ ದೇಶಗಳ ಸಂವಿಧಾನದ ಅಧ್ಯಯನದಿಂದ ಎರವಲು ಪಡೆಯಲಾಗಿದ್ದರೂ ತನ್ನದೇ ಆದ ಮಾರ್ಪಾಡುಗಳಿಂದ ಕೂಡಿದೆ. 
▪️ಪ್ರಸ್ತುತ ಸುಮಾರು 467 ವಿಧಿಗಳನ್ನೂ, 25 ಭಾಗಗಳನ್ನೂ, 12 ಅನುಚ್ಛೇದಗಳನ್ನೂ, 118 ತಿದ್ದುಪಡಿಗಳನ್ನು ಹೊಂದಿರುವ ನಮ್ಮ ಸಂವಿಧಾನವು ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ಧೀರ್ಘವಾದದ್ದು.  
▪️ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು.
▪️ರಾಜ್ಯ ನಿರ್ದೇಶಕ ತತ್ವಗಳು.
▪️ಸಂಸದೀಯ ಸರ್ಕಾರ.
▪️ಸಾರ್ವತ್ರಿಕ ವಯಸ್ಕ ಮತದಾನ ಪದ್ದತಿ. 
▪️ಏಕ ಪೌರತ್ವ
▪️ನ್ಯಾಯಿಕ ವಿಮರ್ಶೆ. 
      ಹೀಗೆ ಇನ್ನೂ ಮುಂತಾದ ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ.
         ಸ್ವಾತಂತ್ರ್ಯ ಪೂರ್ವದಲ್ಲಿ ಬಹುಸಂಖ್ಯಾತ ಜನರು ಅನುಭವಿಸಿದ ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗಳು ಕೊನೆಗೊಂಡು ಇಂದು ಜನರು ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವುದು ನಮ್ಮ ಸಂವಿಧಾನದಿಂದ ಎಂದರೆ ತಪ್ಪಾಗಲಾರದು. ಶಿಕ್ಷಣ, ಉದ್ಯೋಗ, ವ್ಯಾಪಾರ, ಸಾಮಾಜಿಕ, ಆರ್ಥಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸ್ವತಂತ್ರ ಆಯ್ಕೆ ಹಾಗೂ ನ್ಯಾಯೋಚಿತ ಸಮಾನ ಅವಕಾಶಗಳನ್ನು ಕಲ್ಪಿಸಿರುವುದು ನಮ್ಮ ಸಂವಿಧಾನದ ಹೆಮ್ಮೆ. ಸಾಮಾನ್ಯ ವ್ಯಕ್ತಿಯು ಕೂಡ ದೇಶದ ಉನ್ನತ ಪದವಿಯನ್ನು ಅಲಂಕರಿಸಲು ಸದಾವಕಾಶ ಸೃಷ್ಟಿಸಿರುವುದು ನಮ್ಮ ಸಂವಿಧಾನದ ಕೊಡುಗೆ.
         ಸಂವಿಧಾನದ ಪ್ರಸ್ತಾವನೆಯಲ್ಲಿ ಉಲ್ಲೇಖವಾಗಿರುವಂತೆ "ಭಾರತದ ಪ್ರಜೆಗಳಾದ ನಾವು" ಎಂಬ ವ್ಯಾಖ್ಯಾನವು ಭಾರತಲ್ಲಿ ಅಧಿಕಾರ ಜನರ ಕೈಯಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು ಭಾರತದ ಪ್ರತಿಯೊಬ್ಬ ನಾಗರೀಕ ಹಾಗೂ ಸರ್ಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹುಮುಖ್ಯ ರಾಷ್ಟ್ರೀಯ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಇಂತಹ ಸಂವಿಧಾನದ ಪ್ರಸ್ತಾವನೆಯೇ ನಮ್ಮ ಬದುಕಿಗೆ ದಾರಿದೀಪವಾಗಲಿ. ಸಂವಿಧಾನದ ಆಶಯಗಳು ಹಾಗೂ ಅಂಬೇಡ್ಕರ್ ಅವರ ತತ್ವಾದರ್ಶಗಳು ನಮ್ಮ ಮನೆ ಮನಗಳಲ್ಲಿ ನೆಲೆಯೂರುವಂತಾಗಲಿ. ಭವ್ಯ ಭಾರತದ ಪ್ರಜೆಗಳಾದ ನಾವು ಸಂವಿಧಾನದ ಆಶಯಗಳಿಗನುಗುಣವಾಗಿ ನವ ಭಾರತ ಕಟ್ಟಲು ಹೆಜ್ಜೆ ಇರಿಸೋಣ.     
       ಡಾ.ಬಿ.ಆರ್ ಅಂಬೇಡ್ಕರ್ ಅವರ ಸತತ ಪರಿಶ್ರಮ ಮತ್ತು ಅಪರಿಮಿತ ಜ್ಞಾನ ಭಂಡಾರದೊಂದಿಗೆ ರಚಿತವಾದ ಭಾರತದ ಸಂವಿಧಾನವನ್ನು ಕುರಿತು ಖಾಂಡೇಕರ್ ರವರು ಉಲ್ಲೇಖಿಸುವಂತೆ "ಮಾನ್ಯರೇ. ನಾವು ಅಂಬೇಡ್ಕರ್ ರಂತಹ ಪ್ರತಿಭಾಶಾಲಿ ಯಿಂದ ರೂಪಿತಗೊಂಡ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಇಂದು ಕಾರ್ಯಾಚರಣೆಗೊಳಿಸುತ್ತಿದ್ದೇವೆ. ಮನುವಿನ ಕಾನೂನಿನ ಬದಲು ಮಹರ್ ಕಾನೂನನ್ನು ಹೊಂದುತ್ತೇವೆ ಮನುವಿನ ಕಾನೂನಿನ ಅಡಿಯಲ್ಲಿ ಈ ದೇಶದಲ್ಲಿ ಸುಖ ನೆಮ್ಮದಿಯೇ ಇರಲಿಲ್ಲ ಆದರೆ ಅಂಬೇಡ್ಕರ್ ರವರ ಕಾನೂನು ಖಂಡಿತ ಈ ದೇಶವನ್ನು ಸ್ವರ್ಗವನ್ನಾಗಿ ಮಾಡುತ್ತದೆ ನನಗೆ ಆ ಭರವಸೆ ಇದೆ." ಇವರ ಭರವಸೆಯನ್ನು ಈಡೇರಿಸಲು ನಾವೆಲ್ಲರೂ ಜಾಗೃತರಾಗೋಣ.
     ಅಂಬೇಡ್ಕರ್ ಅವರು ಹೇಳುವಂತೆ "ಎಷ್ಟೇ ಶ್ರೇಷ್ಠ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುಷ್ಟರಾದರೆ ಶ್ರೇಷ್ಠ ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದುಷ್ಟ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ಶ್ರೇಷ್ಠರಾದರೆ ದುಷ್ಟ ಸಂವಿಧಾನವು ಶ್ರೇಷ್ಠ ವಾಗುತ್ತದೆ.
        ಶ್ರೇಷ್ಠರನ್ನು ಆರಿಸುವ ಮೂಲಕ ಶ್ರೇಷ್ಠ ಸಂವಿಧಾನವನ್ನು ಜಾರಿಗೊಳಿಸಲು ಭಾಗಿಗಳಾಗೋಣ. ಸಮಾಜದಲ್ಲಿನ ಒಬ್ಬ ಸಾಮಾನ್ಯ ವ್ಯಕ್ತಿಯು ಉನ್ನತ ಪದವಿಯವರೆಗಿನ ಎಲ್ಲಾ ಅವಕಾಶಗಳನ್ನು ಸರ್ವರು ಬಳಸಿಕೊಳ್ಳಲು ಅವಕಾಶ ನೀಡಿದ ಸಂವಿಧಾನಕ್ಕೆ ಮತ್ತು ಸಂವಿಧಾನ ಕರ್ತೃವಿಗೆ ಕೃತಜ್ಞರಾಗೋಣ. ಭಾರತದ ಸಂವಿಧಾನವು ನಮ್ಮೆಲ್ಲರ ಧರ್ಮ ಗ್ರಂಥವಾಗಲಿ. ಅಂಬೇಡ್ಕರ್ ಅವರ ಆದರ್ಶಗಳು ನಮ್ಮ ಬದುಕಿನ ಆದರ್ಶಗಳಾಗಲಿ. ಡಾ. ಬಿ. ಆರ್ ಅಂಬೇಡ್ಕರ್ ರವರು "ನಾನು ಕೇವಲ ಒಂದೇ ಜಾತಿ ಅಥವಾ ಜನಾಂಗೋಸ್ಕರ ಕೆಲಸ ಮಾಡಿಲ್ಲ. ಭಾರತದ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಯ ಸಲುವಾಗಿ ಜೀವ ಸವೆಸಿದ್ದೇನೆ. ಸಂಶಯವಿದ್ದರೆ ಹೋಗಿ ಸಂವಿಧಾನವನ್ನು ಓದಿಕೊಳ್ಳಿ." ಎಂಬ ಸಂದೇಶವು ನಮ್ಮೆಲ್ಲರಲ್ಲಿ ಸಂವಿಧಾನದ ಮಹತ್ವದ ಅರಿವು ಮೂಡಿಸಲಿ. 
       ಸಂವಿಧಾನವನ್ನು ಅರಿಯೋಣ.! ಜಾಗೃತರಾಗೋಣ.! ಭವ್ಯ ಭಾರತವನ್ನು ನಿರ್ಮಿಸಲು ಪಣತೊಡೋಣ.!
.................................... ಶಿವಕುಮಾರ ಎಂ.ಜಿ
ಕನ್ನಡ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : +91 99644 99583
****************************************

Ads on article

Advertise in articles 1

advertising articles 2

Advertise under the article