-->
ಓ ಮುದ್ದು ಮನಸೇ ...…...! ಸಂಚಿಕೆ - 25

ಓ ಮುದ್ದು ಮನಸೇ ...…...! ಸಂಚಿಕೆ - 25

ಓ ಮುದ್ದು ಮನಸೇ ...…...! ಸಂಚಿಕೆ - 25
                
           ಮೊನ್ನೆ ನಾನು ನನ್ನ ಆಫೀಸ್ ನಲ್ಲಿ ಕುಳಿತು ನ್ಯೂಸ್ ಪೇಪರ್ ಓದುತ್ತಿದ್ದೆ. ಸಾಮಾನ್ಯವಾಗಿ ನನ್ನ ಬಳಿ ಆಪ್ತ ಸಮಾಲೋಚನೆಗೆ ಬರುವ ಮಕ್ಕಳು ಮುಂಚಿತವಾಗಿ ತಮ್ಮ ಹೆಸರನ್ನು ನೊಂದಾಯಿಸಿರುತ್ತಾರೆ. ನನ್ನ ಲಭ್ಯತೆಯಲ್ಲಿ ಒಬ್ಬೊಬ್ಬರನ್ನೇ ಕರೆದು ಮಾತನಾಡಿಸುವುದು ದಿನನಿತ್ಯದ ರೂಢಿ. ಅಂದು ಯಾರೋ ಆಫೀಸ್ ನ ಬಾಗಿಲು ತಟ್ಟಿದ ಶಬ್ಧವಾಯಿತು. ಟೇಬಲ್ ಬೆಲ್ ಒತ್ತಿ, "ಪ್ಲೀಸ್ ಕಮ್ ಇನ್" ಎಂದೆ. ಹತ್ತನೇ ತರಗತಿಯ ಹುಡುಗನೊಬ್ಬ ನನ್ನ ಮುಂದೆ ಬಂದು ನಿಂತ. "ಗುಡ್ ಮಾರ್ನಿಂಗ್, ಪ್ಲೀಸ್ ಟೇಕ್ ಯುವರ್ ಸೀಟ್" ಎನ್ನುತ್ತ ಅವನ ಕೈ ಕುಲುಕಿದೆ. ಪೆಚ್ಚಾದ ಮೋರೆ ಹೊತ್ತ ಹುಡುಗ ಮುಖ ಕೆಳಗೆ ಮಾಡಿ ಕುಳಿತದ್ದನ್ನು ಕಂಡು ಅವನು ಯಾವುದೋ ಒತ್ತಡದಲ್ಲಿ ಇರುವುದನ್ನು ಅರ್ಥೈಸಿ ಕೊಂಡ ನಾನು "ಕಂಗ್ರಾಚುಲೇಶನ್ಸ್" ಅಂದೆ. ಅಶ್ಚರ್ಯದಿಂದ ಮುಖ ಮೇಲೆ ಮಾಡಿ ನನ್ನನ್ನು ನೋಡುತ್ತಾ "ಯಾಕೆ ಸರ್?" ಅಂದ. "ಮೊನ್ನೆ ನಡೆದ ಕ್ರೀಡಾಕೂಟದ ಗುಂಡು ಎಸೆತದಲ್ಲಿ ನಿನಗೆ ಮೊದಲ ಸ್ಥಾನ ಸಿಕ್ಕಿತೆಂದು ಕೇಳಿದೆ, ಹೌದೇ?" ಎಂದು ಪ್ರಶ್ನೆ ಎಸೆದೆ. "ಹೌದು ಸರ್" ಎಂದವನೇ ಮತ್ತೆ ಮುಖ ಕೆಳಗೆ ಮಾಡಿದ. "ಯಾಕೆ ಬಂದದ್ದು ಅಂತ ಹೇಳಲೇ ಇಲ್ಲಾ" ಅನ್ನುತ್ತ ಅವನನ್ನು ಮಾತಿಗೆಳೆಯುವ ಪ್ರಯತ್ನ ಮಾಡಿದೆ. ಅವನಲ್ಲಿ ಏನೋ ಹಿಂಜರಿಕೆ, ಹತಾಷೆ, ಒತ್ತಡ ಎದ್ದು ಕಾಣುತಿತ್ತು. "ನಿನ್ನ ಭಾವನೆಗಳು ನನಗೆ ಅರ್ಥ ಆಗುತ್ತವೆ, ಯಾಕಂದ್ರೆ ನನಗೆ ನಿನ್ನ ಬಗ್ಗೆ ಗೊತ್ತು. ನಿನ್ನ ಸಮಸ್ಯೆಯನ್ನು ನನ್ನಲ್ಲಿ ಹೇಳದೇ ಇದ್ದರೆ ನನಗೆ ಅದು ಹೇಗೆ ತಿಳಿಯುತ್ತೆ? ನಿನ್ನ ಜೊತೆ ನಾನಿದ್ದೇನೆ. ಹಿಂದೊಮ್ಮೆ ನೀನು ನನ್ನ ಬಳಿ ನಿನ್ನ ಸಮಸ್ಯೆಯನ್ನು ಹೇಳಿಕೊಂಡಾಗ ನಾನು ನಿನಗೆ ಸಪೋರ್ಟ್ ಮಾಡಿದ್ದೀನಿ ತಾನೆ?" ತಡ ಮಾಡದ ಹುಡುಗ ಮತ್ತೆ ತಲೆ ಮೇಲಕ್ಕೆ ಮಾಡಿದ "ಸರ್, ಓದಿನ ಮೇಲೆ ಮನಸ್ಸನ್ನು ಕೇಂದ್ರೀಕರಿಸೋದಕ್ಕೆ ಆಗ್ತಿಲ್ಲ. ನಾನು ಕಡಿಮೆ ಮಾರ್ಕ್ಸ್ ತೆಗ್ದ್ರೆ ಅಪ್ಪ ಅಮ್ಮ ಬೇಜಾರು ಮಾಡ್ಕೊಳ್ತಾರೆ. ಅಪ್ಪ ದುಬೈ ನಲ್ಲಿ ಕೆಲಸಕ್ಕೆ ಇದ್ರು ಅಮ್ಮಂಗೆ ಹುಶಾರಿಲ್ಲ ಅಂತ ಕೆಲಸ ಬಿಟ್ಟು ಬಂದಿದ್ದಾರೆ. ಇಲ್ಲಿ ಇನ್ನೂ ಅವರಿಗೆ ಯಾವ್ದೆ ಕೆಲಸ ಸಿಕ್ಕಿಲ್ಲ. ಪ್ರತೀ ಪರೀಕ್ಷೆಯಲ್ಲೂ ನಂಗೆ ಕಡ್ಮೆ ಮಾರ್ಕ್ಸ್ ಬರ್ತಿದೆ ಎನ್ಮಾಡ್ಬೇಕೋ ಗೊತ್ತಾಗ್ತಿಲ್ಲ" ಅಂದು ಮತ್ತೆ ತಲೆ ತಗ್ಗಿಸಿದ.     
          ಅವನ ಮಾತುಗಳ ಅಡಿಯಲ್ಲಿ ಅಡಗಿದ್ದ ಸಮಸ್ಯೆಯೊಂದರ ಸುಳಿವು ಸಿಗುವಲ್ಲಿ ನನಗೆ ತಡವಾಗಲಿಲ್ಲ. "ಓಂಟಿಯಾಗಿ ಇರಬೇಕು ಎನ್ನಿಸುತ್ತಿದೆಯೇ? ನಿದ್ರೆ ಸರಿಯಾಗಿ ಬರುತ್ತಿಲ್ಲವೇ? ನಿನ್ನ ಮೇಲೇ ನಿನಗೆ ಕೀಳರಿಮೆ ಮೂಡುತ್ತಿದೆಯೇ? ಓದು, ಆಟೋಟ ಮತ್ತು ಇತರೆ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡಿರುವಂತೆ ಅನ್ನಿಸುತ್ತಿದೆಯೇ? ಸಣ್ಣ-ಸಣ್ಣ ವಿಷಯಗಳಿಗೂ ಮುಂಗೋಪ ಉಂಟಾಗುತ್ತಿದೆಯೇ? ಇತ್ತೀಚೆಗೆ ಸರಿಯಾಗಿ ಊಟ ಸೇರುತ್ತಿಲ್ಲವೇ? ಇತರರ ಮುಂದೆ ಹೋಗೋದಕ್ಕೆ ನಾಚಿಕೆ, ಭಯ ಅಥವಾ ಹಿಂಜರಿಕೆ ಉಂಟಾಗುತ್ತಿದೆಯೇ?" ನನ್ನೆಲ್ಲಾ ಪ್ರಶ್ನೆಗಳಿಗೆ ಹೌದೆಂದು ತಲೆಯಾಡಿಸುವುದನ್ನು ಬಿಟ್ಟು ಬೇರೇನು ಮಾತಾಡಲಿಲ್ಲ ಆ ಹುಡುಗ. 
       "ಈಗ ಹೇಳು ನೀನು ದಪ್ಪಗಿದ್ದೀಯಾ ಅಂತ ನಿನ್ನ ಗೆಳೆಯರು ಹೀಯಾಳಿಸುತ್ತಾರೆಯೇ?" "ಹೀಯಾಳಿಸುವುದು ಮಾತ್ರ ಅಲ್ಲ ಸರ್ ನನ್ನ ತಲೆಯಲ್ಲಿ ಕೆಲವು ಕೂದಲುಗಳು ಬಿಳಿಯಾಗಿರುವುದರಿಂದ ನನ್ನನ್ನು ಮುದುಕ ಅಂತಲೂ ಹಾಗೂ ನಾನು ದಪ್ಪಗಿದ್ದೇನೆ ಅಂತ ನನ್ನನ್ನು ಹಂದಿ ಅಂತ ಎಲ್ಲರ ಮುಂದೆ ಮುಜುಗರಕ್ಕೀಡು ಮಾಡುತ್ತಾರೆ. ಮೊನ್ನೆ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯುವಾಗ ನನ್ನ ಪಾಡಿಗೆ ನಾನು ಹೋಗುತ್ತಿದ್ದೆ ಕೆಲವು ಹುಡುಗಿಯರು ನನ್ನ ಹಿಂದಿದ್ದರು ಆಗ ಎದುರಿನಿಂದ ಬಂದ ನನ್ನ ತರಗತಿಯ ಹುಡುಗರಿಬ್ಬರು ಜೋರಾಗಿ ನನ್ನನ್ನು ಮುದುಕ ಹಂದಿ ಎಂದು ಕರೆಯಲಾರಂಭಿಸಿದರು. ನನಗೆ ಗೊತ್ತಿದೆ ಹಿಂದೆ ಬರುತ್ತಿದ್ದ ಹುಡುಗಿಯರಿಗೆ ಕೇಳಲೆಂದೇ ಅವರು ಹಾಗೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಹುಡುಗಿಯರೂ ನಗುತ್ತ ಮುಂದೆ ಹೋದರು. ಇವರಿಂದಾಗಿ ಶಾಲೆಯ ಬಹುತೇಕ ವಿದ್ಯಾರ್ಥಿಗಳು ನನ್ನನ್ನು ಹಾಗೆಯೇ ಕರೆಯುತ್ತಾರೆ. ಮೊನ್ನೆ ಐದನೇ ತರಗತಿಯ ಹುಡುಗನೊಬ್ಬ ನನ್ನನ್ನು ಮುದುಕ ಎಂದಿದ್ದು ನನಗೆ ತುಂಬಾ ನೋವುಂಟು ಮಾಡಿದೆ. ಶಿಕ್ಷಕರಲ್ಲಿ ಕಂಪ್ಲೇಂಟ್ ಮಾಡಿದ್ರೂ ಪ್ರಯೋಜನ ಆಗಿಲ್ಲ ಇಗ್ನೋರ್ ಮಾಡು ಅಂದ್ರು" ಎಂದು ಮತ್ತೆ ಮುಖ ಕೆಳಗೆ ಮಾಡಿದ. 
         "ಸೂಸೈಡಲ್ ಥಾಟ್ಸ್ ಏನಾದ್ರೂ ಬರ್ತಿದ್ಯಾ?" ಪ್ರಶ್ನೆಮಾಡಿದೆ. "ತುಂಬಾ ಸಾರಿ ಹಾಗೆ ಅನ್ನಿಸಿದೆ ಸರ್!" ಅಂದ. ಅವನಿಗೆ ಆತ್ಮ ವಿಶ್ವಾಸ ತುಂಬಿದೆ, ಅವನಲ್ಲೇ ಹುದುಗಿದ್ದ ಅವನ ದೈಹಿಕ ಮಾನಸಿಕ ಸಾಮರ್ಥ್ಯದ ಅರಿವು ಮಾಡಿಕೊಟ್ಟೆ. ನೀನು ಒಂಟಿಯಲ್ಲಾ ಅನ್ನುವಂತಹ ವಾತಾವರಣ ಸೃಷ್ಟಿಸಿದೆ. ಇಂತಹ ಅಪ್ತ ಸಮಾಲೋಚನೆ ಒಂದು ವಾರ ಪ್ರತೀ ಎರಡು ದಿನಗಳಿಗೊಮ್ಮೆ ನಡೆಯಿತು. ಹುಡುಗ ಚೇತರಿಸಿಕೊಂಡು ಒತ್ತಡದಿಂದ ಹೊರಬಂದ. ತನ್ನ ಮೇಲೇ ತನಗಿದ್ದ ಜಿಗುಪ್ಸೆಯಿಂದ ಮುಕ್ತನಾಗಿ ಸಕಾರಾತ್ಮಕ ಯೋಚನೆಯನ್ನು ಬೆಳೆಸಿಕೊಂಡ. ನನ್ನ ಗಮನಕ್ಕೆ ಬಂದ ಇದೊಂದು ಸಮಸ್ಯೆಗೆ ಪರಿಹಾರವನ್ನೇನೋ ಕೊಟ್ಟೆ ಆದರೆ ನನ್ನ ಗಮನಕ್ಕೆ ಬಾರದ ಅದೆಷ್ಟು ಇಂತಹ ಸಮಸ್ಯೆಗಳು ಹದಿಹರೆಯದ ಮಕ್ಕಳನ್ನು ಒತ್ತಡಕ್ಕೆ ಸಿಲುಕಿಸಿವೆಯೋ ಗೊತ್ತಿಲ್ಲ. 
      ಸಾಮಾನ್ಯವಾಗಿ ಇಂತಹದ್ದೊಂದು ವಾತಾವರಣ ಮನೆಯಲ್ಲಿಯೇ ಹುಟ್ಟಿಕೊಳ್ಳುತ್ತದೆ. ಪುಟ್ಟ ಮಕ್ಕಳನ್ನು ಅವರವರ ದೇಹದಾಕಾರಕ್ಕೆ ತಕ್ಕಂತೆ ಡುಮ್ಮ, ಡುಮ್ಮಿ, ಕುಳ್ಳ, ಕುಳ್ಳಿ, ಲಂಬು, ಚೋಟು ಇತ್ಯಾದಿ ಹೆಸರುಗಳಿಂದ ಕರೆಯುತ್ತೇವೆ. ಇಂತಹ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಇತರರನ್ನೂ ಹಾಗೆಯೇ ಸಂಬೋದಿಸುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ದೇಹದ ಎತ್ತರ, ದಪ್ಪ, ಬಣ್ಣ, ಕೂದಲಿನ ಬಣ್ಣ, ಹಲ್ಲುಗಳ ಆಕಾರ, ಮೂಗು, ಇತ್ಯಾದಿಗಳನ್ನು ಕೇಂದ್ರೀಕರಿಸಿ ಹೀಯಾಳಿಸುವುದು, ನಗೆಪಾಟಲೆಗೆ ಈಡು ಮಾಡುವುದು, ಅಡ್ದ ಹೆಸರಿಟ್ಟು ಸಂಬೋದಿಸುವುದು, ಇತರರ ಮುಂದೆ ಅಪಹಾಸ್ಯಕ್ಕೆ ಎಡೆಮಾಡುವುದು, ಗೆಳೆತನ ಮತ್ತು ಆಟೋಟಗಳಿಂದ ದೂರವಿಡುವುದು ಅಥವಾ ಅದರಲ್ಲಿನ ಅವರ ಸಾಮರ್ಥ್ಯದ ಬಗ್ಗೆ ಕೊಂಕು ಮಾತಾಡುವಂತಹ ಪ್ರವೃತ್ತಿಯನ್ನು "ಬಾಡಿ ಶೇಮಿಂಗ್" ಎನ್ನುತ್ತಾರೆ. 
       ಇತ್ತೀಚೆಗೆ ಬಾಡಿ ಶೇಮಿಂಗಿಗೆ ಒಳಗಾಗಿ ತನ್ನ ದೇಹ ತೂಕದ ಆಪರೇಶನ್ನಿಗೆ ಒಳಗಾಗಿದ್ದ ಕನ್ನಡ ಕಿರುತೆರೆ ನಟಿಯೊಬ್ಬಳು ಪ್ರಾಣ ಬಿಟ್ಟಿದ್ದನ್ನು ನಾವು ನೋಡಿದ್ದೇವೆ. ಬಾಡಿ ಶೇಮಿಂಗ್ ಅನ್ನೊದು ಅದೆಷ್ಟು ಸೂಕ್ಷ್ಮ ಮತ್ತು ಅಪಾಯಕಾರಕ ಅಂದ್ರೆ ಒಬ್ಬ ವ್ಯಕ್ತಿಯನ್ನು ಮಾನಸಿಕ ಒತ್ತಡದ ಮೂಲಕ ಖಿನ್ನಥೆಗೆ ನೂಕಿ ಸಾವಿನ ಕದ ತಟ್ಟುವಂತೆ ಮಾಡಿಬಿಡಬಲ್ಲದು. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಮಾಧ್ಯಮಗಳು, ಚಲನ ಚಿತ್ರ, ಪತ್ರಿಕೆ, ಮ್ಯಾಗಜಿನ್ ಗಳಲ್ಲಿ ಅತಿಯಾಗಿ ಪ್ರಾಮುಖ್ಯತೆ ಪಡೆಯುವ ಮತ್ತು ಪ್ರದರ್ಶನಗೊಳ್ಳುವ ದೇಹಸೌಂದರ್ಯವನ್ನು ನೋಡಿ ಅದೆಷ್ಟು ಯುವಕ ಯುವತಿಯರು ತಾನು ಚೆನ್ನಾಗಿಲ್ಲ, ನಾನು ಕಪ್ಪಗಿದ್ದೇನೆ, ಬಡಕಲು ದೇಹ ನನ್ನದು, ನನಗೂ ಉದ್ದನೆಯ ನುಣುಪಾದ ತಲೆಗೂದಲಿದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು, ನಾನು ಸಿನೇಮಾ ಹೀರೋಗಳಂತೆ ಹ್ಯಾಂಡ್ಸಮ್ ಆಗಿರಬಾರದಿತ್ತೇ? ಎಂದು ಮರುಗುವುದುಂಟು. ಇನ್ನು ಕೆಲವರು ಅಂತಹ ಪ್ರಯತ್ನಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಎಡವಟ್ಟು ಮಾಡಿಕೊಂಡಿರುವ ಸಾಕಷ್ಟು ಘಟನೆಗಳು ನಡೆದು ಹೋಗಿವೆ, ನಡೆಯುತ್ತಿವೆ. ಅದು ಎಷ್ಟರ ಮಟ್ಟಿಗೆ ಅಂದರೆ, ಚಿಕ್ಕ ವಯಸ್ಸಿನ ಮಕ್ಕಳೂ ಜಿಮ್ ಗಳಿಗೆ ಹೋಗಿ ಕಸರತ್ತು ಮಾಡೋದರ ಜೊತೆ ಜೊತೆಗೆ ತೂಕ ಹೆಚ್ಚಿಸುವ ಅಥವಾ ದೇಹಕ್ಕೆ ಅಪಾಯ ತಂದೊಡ್ಡಬಲ್ಲ ರಾಸಾಯನಿಕ ಪೌಡರ್ ಗಳನ್ನು ಸೇವಿಸೋದು ಮತ್ತು ದುಶ್ಚಟಗಳಿಗೆ ಬಲಿಯಾಗುವಷ್ಟು ಬಾಡಿ ಶೇಮಿಂಗ್ ಆವರಿಸಿಕೊಂಡಿದೆ. ಇನ್ನು ಹುಡುಗಿಯರು ಊಟ ಬಿಡೋದು, ಇನ್ನಿಲ್ಲದ ಕೆಮಿಕಲ್ ಯುಕ್ತ ಕ್ರೀಮ್ ಗಳನ್ನ ಬಳಸೋದು ಅಥವಾ ತಾನು ಬೇರೆಯವರಂತೆ ನೋಡೋಕೆ ಚೆನ್ನಾಗಿಲ್ಲ ಅನ್ನುವ ಕೊರಗು ಅವರನ್ನು ಖಿನ್ನತೆಗೆ ನೂಕುವಷ್ಟು ಈ ಬಾಡಿ ಶೇಮಿಂಗ್ ಮಾರಕವಾಗಿದೆ. ಇದಕ್ಕೆ ಬಲಿಯಾಗಿ ಮಾನಸಿಕ ಮತ್ತು ದೈಹಿಕ ಯಾತನೆ ಅನುಭವಿಸುವವರ ಜೊತೆ-ಜೊತೆಗೆ ಇನ್ನೊಬ್ಬರ ದೇಹ, ರೂಪ ಮತ್ತು ಆಕಾರ-ವಿಕಾರಗಳನ್ನೂ ವಿಕೃತ ತೃಪ್ತಿಗಾಗಿ ಹೀಯಾಳಿಸುವ, ಜರಿಯುವ, ಕಿಚಾಯಿಸುವವರ ಸಂಖೆಯೂ ಹೆಚ್ಚುತ್ತಿರುವುದು ಆಘಾತಕಾರಿ ವಿಚಾರವೇ ಸರಿ. 
        ಇಂತಹ ಸಮಸ್ಯೆಗಳ ಸುಳಿಯಲ್ಲಿ ಬಳಲುತ್ತಿರುವ ಮಕ್ಕಳು ದೇಹ ಸೌಂದರ್ಯಕ್ಕಿಂತ ಬೌದ್ಧಿಕ ಸೌಂದರ್ಯ ಮಿಗಿಲು ಮತ್ತು ಶಾಶ್ವತ ಎನ್ನುವ ಅರಿವನ್ನು ಹೊಂದಬೇಕು. ಬಾಡಿ ಶೇಮಿಂಗ್ ನಂತಹ ಸಮಸ್ಯೆಗಳಿದ್ದರೆ ಅದನ್ನು ಶಿಕ್ಷಕರ ಅಥವಾ ಪಾಲಕರ ಗಮನಕ್ಕೆ ತರಬೇಕು ಮತ್ತ ಅವರಿಂದ ಸೂಕ್ತ ಮಾರ್ಗದರ್ಶನ ಪಡೆಯಬೇಕು. ನಮ್ಮ ಸಾಮರ್ಥ್ಯದ ಮೇಲೆ ನಾವು ನಂಬಿಕೆ ಬೆಳೆಸಿಕೊಳ್ಳಬೇಕು ಮತ್ತು ನಮ್ಮಲ್ಲಿರುವ ನ್ಯೂನ್ಯತೆಗಳನ್ನು ಒಪ್ಪಿಕೊಂಡು ಇರುವ ಸಾಮರ್ಥ್ಯವನ್ನು ಬಳಸಿ ಬೆಳೆಯುವ ಕಡೆಗೆ ಹೆಚ್ಚು ಗಮನ ಕೊಡಬೇಕು. ಜಗತ್ತಿನ ಸಾಧಕರ ಜೀವನಗಾತೆಗಳನ್ನು ಓದಿ ಅವರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಇವತ್ತಿಗೂ ನಾವು ಗೌರವಿಸುವ ನಮ್ಮ ಬದುಕಿನ ಶ್ರೇಷ್ಠ ವ್ಯಕ್ತಿಗಳೆಂದು ಪೂಜಿಸುವ ಸ್ವಾಮಿ ವಿವೇಕಾನಂದ, ಕಲ್ಪನಾ ಚಾವ್ಲಾ, ಡಾ. ಎ. ಪಿ. ಜೆ. ಅಬ್ದುಲ್ ಕಲಾಮ್ ರಂತಹ ಸಾಧಕರ ಬೌದ್ಧಿಕ ಸಂದರ್ಯವನ್ನು ಅರಿಯಬೇಕು. ಸ್ವಾಭಿಮಾನ, ಸ್ವ-ಗೌರವವನ್ನು ಬೆಳೆಸಿಕೊಂಡು ಸಾಧನೆಗೆ ಹೆಚ್ಚು ಗಮನ ಕೊಡಬೇಕೇ ವಿನಹ ಇನ್ನೊಬ್ಬರ ಕೀಳು ಮನಸ್ಥಿತಿಯ ಹೀಯಾಳಿಕೆಗಲ್ಲ. 
        ಇನ್ನು, ಇಂತಹ ವಾತಾವರಣದಿಂದ ಮಕ್ಕಳನ್ನು ಹೊರತರುವ ಪ್ರಯತ್ನಗಳು ಶಿಕ್ಷಕರಿಂದ ಮತ್ತು ಪಾಲಕರಿಂದ ನಡೆಯಬೇಕಾಗಿದೆ. ಮಕ್ಕಳು ಬೆಳೆಯುತ್ತ ಬಂದಂತೆ ಮನೆಯಲ್ಲಿ ಅಥವಾ ಶಾಲೆಯಲ್ಲೇ ಆಗಲಿ ಅವರನ್ನು ಅವರವರ ದೇಹಾಕಾರ ಅಥವಾ ಶೈಕ್ಷಣಿಕ ಸಾಧನೆಯ ಆಧಾರದ ಮೇಲೆ ಉಪನಾಮವಿಟ್ಟು ಕರೆಯುವ ಬದಲು ಅವರಿಗೆ ನಾವೇ ಪ್ರೀತಿಯಿಂದ ಇಟ್ಟ ಹೆಸರನ್ನು ಸಂಬೋದಿಸಿದರೆ ಅದುವೇ ಚೆಂದ. ದೇಹ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮಿಗಿಲೆನ್ನುವುದರ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು. ಆಂತರಿಕ ಸೌಂದರ್ಯವನ್ನು ಇಮ್ಮಡಿಗೊಳಿಸುವ ಜ್ಞಾನ, ಕೌಶಲ್ಯ, ಪ್ರಾಮಾಣಿಕತೆ, ಗೌರವ, ನಿಸ್ವಾರ್ಥ, ಸಮಾನತೆ, ಸಕಾರಾತ್ಮಕ ಯೋಚನೆ, ಸ್ವಾಭಿಮಾನದಂತಹ ಸದ್ಗುಣ, ಸನ್ನಡತೆಗಳನ್ನು ಅಳವಡಿಸಿಕೊಳ್ಳಲು ಉತ್ತಮ ವಾತಾವರಣವನ್ನು ಮನೆ ಮತ್ತು ಶಾಲೆ ಎರಡರಲ್ಲಿಯೂ ನಿರ್ಮಿಸಬೇಕು. ಪರಸ್ಪರ ಗೌರವಿಸಿಕೊಳ್ಳುವಂತೆ ಮಕ್ಕಳನ್ನು ಉತ್ತೇಜಿಸಬೇಕು ಮತ್ತು ಅಂತಹ ಪ್ರೋತ್ಸಾಹವನ್ನು ನೀಡಬಲ್ಲ ವಿವಿಧ ಚಟುವಟಿಕೆಗಳನ್ನು ಶಾಲೆಗಳಲ್ಲಿ ನಿರಂತರವಾಗಿ ಆಯೋಜಿಸಬೇಕು. ಮಕ್ಕಳನ್ನು ನಿರಂತರವಾಗಿ ಗಮನಿಸಬೇಕು, ಮತ್ತು ನಾವಾಗಿಯೇ ಮಾತನಾಡಿಸಿ ಅವರಿಗೆ ಅವರ ಭಾವನೆಗಳನ್ನು ಹಂಚಿಕೊಳ್ಳುವಂತಹ ವಾತಾವರಣವನ್ನು ಸೃಷ್ಠಿಸಬೇಕು. ಸಮಸ್ಯೆಗೆ ಸಿಲುಕಿಕೊಂಡಿರುವ ಮಕ್ಕಳನ್ನು ಗುರುತಿಸಿ ಅದರಿಂದ ಹೊರಬರಲು ಸಹಕರಿಸಬೇಕು. ನಾವೆಲ್ಲರೂ ಒಂದಾಗಿ ಇಂತಹ ಪ್ರಯತ್ನಗಳನ್ನು ನಿರಂತರವಾಗಿ ಮಾಡುವ ಮೂಲಕ ಬಾಡಿ ಶೇಮಿಂಗ್ ಅನ್ನುವ ಭೂತಕ್ಕೆ ಗುಡ್ ಬಾಯ್ ಹೇಳೋಣವೇ?
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 6361007190
********************************************

Ads on article

Advertise in articles 1

advertising articles 2

Advertise under the article