-->
ನಾಗಬನ : ಪರಿಸರದ ರಕ್ಷಕ - ಒಂದು ಅಧ್ಯಯನ

ನಾಗಬನ : ಪರಿಸರದ ರಕ್ಷಕ - ಒಂದು ಅಧ್ಯಯನ

ಅವನಿಕೃಷ್ಣ ಅಡ್ವೆ
10ನೇ ತರಗತಿ
ಕೇಂದ್ರೀಯ ವಿದ್ಯಾಲಯ, ಉಡುಪಿ
ಉಡುಪಿ ಜಿಲ್ಲೆ.
ನಿರೂಪಣೆ: ಶಶಿಕಲಾ ತೊಕ್ಕೊಟ್ಟು
            
               'ನಮ್ಮ ನೆಮ್ಮದಿಯ ಬದುಕಿಗೆ ಏನೆಲ್ಲ ಬೇಕೋ ಅವೆಲ್ಲವನ್ನೂ ಹಿರಿಯರು ನಮಗೆ ನಮ್ಮ ಜೀವನ ವಿಧಾನದಲ್ಲಿ ಸಿದ್ಧಪಡಿಸಿಟ್ಟು ಹೋಗಿದ್ದಾರೆ' ಎಂಬ ಈ ಮಾತನ್ನು ನಾನು ಬೇರೆ ಬೇರೆ ಕಡೆ ಬಹಳ ಸಲ ಕೇಳಿದ್ದೆ. `ಹೇಗೆ?' ಎಂದು ನಾನು ಯೋಚಿಸಿಯೂ ಇದ್ದೆ. ಯಾವಾಗ ನಾಗಬನದ ಅಧ್ಯಯನಕ್ಕೆ ತೊಡಗಿದೆನೋ ಈ ಮಾತು ಅಕ್ಷರಶಃ ಸತ್ಯವೆಂದು ನನಗೆ ಅನಿಸತೊಡಗಿತು. ಅದುವರೆಗೂ ನಾಗಬನವನ್ನು ನೋಡಿದ್ದು, ಅಲ್ಲಿಗೆ ಹೋಗಿದ್ದು ಕೇವಲ ನಾಗರಪಂಚಮಿಯ ದಿನ ಮಾತ್ರ. ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಶಾಲಾ ಮಕ್ಕಳಿಗಾಗಿ   'ನ್ಯಾಶನಲ್ ಚಿಲ್ಡ್ರನ್ಸ್‌ ಸೈನ್ಸ್ ಕಾಂಗ್ರೆಸ್' ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಈ ವರ್ಷ ಪರಿಸರ ಅಧ್ಯಯನಕ್ಕೆ ಒತ್ತು ನೀಡಲಾಗಿತ್ತು. ನಾನೂ ಇದರಲ್ಲಿ ಭಾಗವಹಿಸುವ ಇಚ್ಛೆಯಿಂದ ಸಹಪಾಠಿ ಗೌರವ್ ಕುಮಾರ್ ಪಿ.ಯೊಂದಿಗೆ `ನಾಗಬನ' ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೆ. 
      ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಿಗೆ ನಾಗಬನ ಎಂದರೆ ಏನು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ 'ದೇವರಕಾಡು', 'ದೇವರ ಬನ', 'ಭೂತದ ಬನ' ಎಂದು ದೇವರ ಹೆಸರಿನಲ್ಲಿ ಸಣ್ಣ ಕಾಡುಗಳನ್ನು ನಮ್ಮ ಪೂರ್ವಜರು ಮೀಸಲಿಟ್ಟು ಹೋಗಿದ್ದಾರೆ. ಹಾಗೆಯೇ ಕೇರಳದಲ್ಲಿ 'ಕಾವು', ತಮಿಳಿನಾಡಿನಲ್ಲಿ 'ಕೋವಿಲ್ ಕಾಡ್', ಹಿಮಾಚಲಪ್ರದೇಶದಲ್ಲಿ 'ದೇವವನ', ಮಹಾರಾಷ್ಟ್ರದಲ್ಲಿ 'ದೇವರಾಯ್', ಮಣಿಪುರದಲ್ಲಿ  'ಲೈ ಉಮಂಗ್'- ಹೀಗೆ ಭಾರತದಲ್ಲಿ ಈ ಬಗೆಯ ಪವಿತ್ರವನಗಳ ಅಸ್ತಿತ್ವದ ಬಗ್ಗೆ ತಿಳಿದಾಗ ನನ್ನ ಕುತೂಹಲ ಇನ್ನಷ್ಟು ಹೆಚ್ಚಾಯಿತು. ನಮ್ಮ ಪೂರ್ವಜರು ಏಕೆ ಈ ಪವಿತ್ರವನಗಳಿಗೆ ಅಷ್ಟೊಂದು ಮಹತ್ವ ಕೊಟ್ಟರು? ನಮ್ಮ ಪೂಜೆಪುನಸ್ಕಾರಗಳಲ್ಲಿ ಅಥವಾ ನಮ್ಮ ಸಂಸ್ಕೃತಿಯ ಆಚಾರಗಳ ಚೌಕಟ್ಟಿನೊಳಗೆ ಏಕೆ ಈ ಪವಿತ್ರವನಗಳನ್ನು ತಂದರು? ಎನ್ನುವುದು ನನ್ನನ್ನು ಕಾಡತೊಡಗಿತು. ಈ ಪ್ರಶ್ನೆಗೆ ಉತ್ತರ ತಿಳಿಯಲು 'ನಾಗಬನ' ನನ್ನ ಸರಿಯಾದ ಆಯ್ಕೆ ಎಂದುಕೊಂಡೆ.
       ಆರಂಭದಲ್ಲಿ ಉಡುಪಿ, ಮಂಗಳೂರು ವ್ಯಾಪ್ತಿಯ ಬೇರೆ ಬೇರೆ ನಾಗಬನಗಳಿಗೆ ನಾನು ಮತ್ತು ಗೌರವ್ ಭೇಟಿನೀಡಿದೆವು. ಕೊನೆಗೆ ನಮ್ಮ ಅಧ್ಯಯನಕ್ಕೆ ಸಹಕಾರಿಯಾಗುವಂತೆ ಉಡುಪಿ ನಗರದ ಪರಿಧಿಯೊಳಗೆ ಬರುವ ಕುತ್ಪಾಡಿಯ 'ಕಂಡಬರಿ' ನಾಗಬನ ಮತ್ತು ಉಡುಪಿ ಜಿಲ್ಲೆಯ ಪರಿಧಿಯೊಳಗೆ ಬರುವ ಪಡುಬಿದ್ರಿ ಸಮೀಪದ 'ನಂದಿಕೂರು' ನಾಗಬನವನ್ನು ನಮ್ಮ ಅಧ್ಯಯನ ಕ್ಷೇತ್ರಗಳನ್ನಾಗಿ ಆಯ್ಕೆಮಾಡಿಕೊಂಡೆವು. ಇವುಗಳಲ್ಲಿ ನಂದಿಕೂರು ನಾಗಬನ ಇನ್ನೂ ತನ್ನ ಪರಿಶುದ್ಧತೆಯನ್ನು ಉಳಿಸಿಕೊಂಡಿದೆ. ಎಂದರೆ ಅದು ಕಾಂಕ್ರೀಟೀಕರಣಗೊಂಡಿಲ್ಲ ಎಂದು ಹೇಳುವುದಷ್ಟೇ ನನ್ನ ಉದ್ದೇಶ. ನಾಗಬನದ ಸಂಪ್ರದಾಯದ ಪ್ರಕಾರ ಇರಲೇಬೇಕಾದ ಮರಗಳ ಸಮುಚ್ಛಯ ಅಂದರೆ ಪುಟ್ಟ ಕಾಡು ಈ ಎರಡೂ ನಾಗಬನಗಳಲ್ಲಿವೆ. ಸಾಮಾನ್ಯವಾಗಿ ನಾಗಬನದ ಕಾಡುಗಳು ಮೂರು ಸೆಂಟ್ಸ್‌ನಿಂದ ಮೂರು ಎಕರೆಯವರೆಗೂ ಹಬ್ಬಿರಬಹುದು. ನಮ್ಮ ಅಧ್ಯಯನಕ್ಕೆ ಅನುಕೂಲವಾಗುವಂತೆ ನಾವು ಆಯ್ಕೆ ಮಾಡಿಕೊಂಡ ಕಂಡಬರಿ ನಾಗಬನ ಐದು ಸೆಂಟ್ಸ್ ಪ್ರದೇಶವಾದರೆ, ನಂದಿಕೂರು ನಾಗಬನ 25 ಸೆಂಟ್ಸ್ ಪ್ರದೇಶ. 
       ನಾವಿನ್ನೂ 10ನೇ ತರಗತಿಯ ವಿದ್ಯಾರ್ಥಿಗಳಾದ್ದರಿಂದ ನಮ್ಮ ಅಧ್ಯಯನ ಹೇಗೆ ನಡೆಯಬೇಕು, ಏನೇನು ಅಂಶಗಳಿರಬೇಕೆಂದು ನಮಗೆ ರೂಪುರೇಷೆ ಹಾಕಿ ಮಾರ್ಗದರ್ಶನ ನೀಡಿದವರು ಪ್ರಸ್ತುತ ಅಜೀಂ  ಪ್ರೇಮ್‌ಜಿ ಫೌಂಡೇಶನ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿರುವ ಡಾI ನಂದಿನಿ ಶೆಟ್ಟಿಯವರು. ಇವರು ಜವಾಹರ್‌ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್, ಬೆಂಗಳೂರು ಇಲ್ಲಿ ಏಷ್ಯಾದ ಆನೆಗಳ ಬಗ್ಗೆ ಸಂಶೋಧನೆ ಮಾಡಿದವರು. ಇವರ ಮಾರ್ಗದರ್ಶನದಂತೆ ನಾಗಬನದ ಮರಗಿಡಗಳು, ಔಷಧೀಯ ಸಸ್ಯಗಳು, ಅಲ್ಲಿ ನೆಲೆಕಂಡಿರುವ ಪ್ರಾಣಿಗಳು, ಪಕ್ಷಿಗಳು, ಹಾವುಗಳು, ಚಿಟ್ಟೆಗಳು ಮತ್ತು ಸಸ್ತನಿಗಳ ಬಗ್ಗೆ ಪರಿಚಯ ಮಾಡಿಕೊಳ್ಳುವುದು, ನಾಗಬನದ ಇಂಗಾಲ ಸಂಗ್ರಹದ ಅಂದಾಜು ಮಾಡುವುದು, ನಾಗಬನದ ರಕ್ಷಣೆಗೆ ಜನರು ಕೈಗೊಂಡ ಕ್ರಮಗಳನ್ನು ತಿಳಿಯುವುದು, ನಾಗಬನದ ಕುರಿತಾಗಿ ಜನಾಭಿಪ್ರಾಯವನ್ನು ಸಂಗ್ರಹಿಸುವುದು, ಜನಜಾಗೃತಿ ಮೂಡಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ನಾವು ಹಾಕಿಕೊಂಡೆವು. ನಂದಿಕೂರು ನಾಗಬನದ ರವಿಶಂಕರ ಭಟ್ ಅಡ್ವೆ ಮತ್ತು ಕಂಡಬರಿ ನಾಗಬನದ ಶೋಭಾ ಮತ್ತು ಗಿರಿಜಾ ಅವರು ನಮ್ಮ ಸಹಾಯಕ್ಕೆ ಬಂದರು. ಸ್ಥಳೀಯರು ಮರಗಿಡಗಳನ್ನು ಅವುಗಳ ಸ್ಥಳೀಯ ನಾಮಧೇಯಗಳಿಂದ ಗುರುತಿಸುತ್ತಾರೆ. ಆದರೆ ಕೆಲವೊಮ್ಮೆ ಈ ನಾಮಧೇಯಗಳಿಂದ ಅವುಗಳ ವೈಜ್ಞಾನಿಕ ಹೆಸರುಗಳನ್ನು ಪತ್ತೆಹಚ್ಚುವುದು ತುಸು ಕಷ್ಟವೇ. ಈ ವಿಷಯದಲ್ಲಿ ಸಹಕರಿಸಿದವರು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಔಷಧೀಯ ಸಸ್ಯಗಳ ವಿಭಾಗದ ಮೇಲ್ವಿಚಾರಕ ಉದಯ ಕುಮಾರ್ ಶೆಟ್ಟಿಯವರು.
       ಕಂಡಬರಿ ನಾಗಬನದಲ್ಲಿ ನೂರಕ್ಕೂ ಹೆಚ್ಚು ಮರಗಿಡಗಳಿದ್ದರೆ, ನಂದಿಕೂರು ನಾಗಬನದಲ್ಲಿ ಏಳ್ನೂರಕ್ಕೂ ಹೆಚ್ಚು ಮರಗಿಡಗಳಿದ್ದವು. ಎರಡೂ ನಾಗಬನಗಳಲ್ಲಿ - ಕರ್ಮರ, ಜಾರಿಗೆ, ಬೋಗಿಮರ, ಗಂಧಗರಿಗೆ, ಮಾವು, ದಾರುಹರಿದ್ರಾ, ಕೇದಗೆ, ಚಂದನ, ರೆಂಜೆ, ಹಲಸು, ಹೆಬ್ಬಲಸು, ನೇರಳೆ, ಕುಂಟಲ, ತೇರೆಮರ, ಬಂದಕಾಯಿ, ಓಟೆಹುಳಿ, ಅಂಡಿಪುನರ್, ಪರೊಂಟೊಳಿಗೆ, ಗುಲಗಂಜಿ, ಮಂಜುಟ್ಟಿ, ಚೂರಿಮುಳ್ಳು, ಆಚಾರಿಬೂರು, ಉರ್ಕಿಬಳ್ಳಿ, ಜಂಗಮಸೊಪ್ಪು ಮೊದಲಾದ ಒಟ್ಟು 36 ಮರಗಿಡಬಳ್ಳಿಗಳನ್ನೂ, ಈಶ್ವರಬೇರು, ಶತಾವರಿ, ಸರ್ಪಗಂಧ, ಕೇಪುಳ, ಒಳ್ಳೆಕೊಡಿ, ಕರಂಡೆ ಮೊದಲಾದ 6 ಔಷಧೀಯ ಸಸ್ಯಗಳನ್ನೂ ನಾವು ಗುರುತಿಸಿದೆವು. ಸ್ಥಳೀಯರ ಸಹಕಾರದಿಂದ ಮಿಂಚುಳ್ಳಿ, ಕಾಜಾಣ, ಮಂಗಟೆ ಹಕ್ಕಿ, ಕಾಡುಕೋಳಿ, ಗೂಬೆ, ಮುಂಗುಸಿ ಮೊದಲಾದ 29 ಬಗೆಯ ಪ್ರಾಣಿಪಕ್ಷಿಗಳನ್ನು ಗುರುತಿಸಿದೆವು. ಒಂದು ಸಣ್ಣ ಪ್ರದೇಶದಲ್ಲಿ ಇಷ್ಟೊಂದು ಬಗೆಯ ಮರಗಿಡಗಳ ಸಮುಚ್ಛಯ ಮತ್ತು ಅವುಗಳ ನಡುವೆ ಇಷ್ಟೊಂದು ಜೀವಚರಗಳು ನೆಲೆಕಂಡಿವೆ ಎನ್ನುವುದು ತಿಳಿದಾಗ ನಮಗೆ ನಿಜಕ್ಕೂ ಅಚ್ಚರಿಯಾಗಿತ್ತು. 
            ನಾಗಬನದ ಅಸ್ತಿತ್ವವನ್ನು ಪರಿಶೀಲಿಸಲು ಹೊರಟಾಗ, ಪ್ರತಿ ನಾಗಬನವೂ ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವುದು ತಿಳಿದುಬರುತ್ತದೆ. ಪೀಳಿಗೆಯಿಂದ ಪೀಳಿಗೆಗೆ ನಾಗಬನದ ಸಂಸ್ಕೃತಿ ಹಸ್ತಾಂತರಗೊಂಡಿದೆ. ಅದರ ಜೊತೆಗೆ ನಂಬಿಕೆಗಳೂ ತಲೆತಲಾಂತರಗಳಿಂದ ಹರಿದುಬಂದಿವೆ. ನಾಗಬನಗಳೆಂದರೆ ಜೀವವೈವಿಧ್ಯದ ನಿಧಿಯಂತೆ. ಔಷಧೀಯ ಸಸ್ಯಗಳೂ ಸೇರಿದಂತೆ ಅನೇಕ ಗಿಡಮರಬಳ್ಳಿಗಳು, ಪ್ರಾಣಿಪಕ್ಷಿಗಳು, ಶ್ರೀಮಂತ ಮಣ್ಣು ಮತ್ತು ಶುದ್ಧವಾದ ಗಾಳಿಯ ತಾಣ. ಅನೇಕ ಪ್ರಾಣಿಪಕ್ಷಿಗಳಿಗೆ ಆಶ್ರಯ ನೀಡುವುದೇ ಅಲ್ಲದೆ, ಆಹಾರವನ್ನೂ ಒದಗಿಸುತ್ತದೆ. ಮರಗಳ ಕಾಂಡಗಳ ಮೇಲೆ ಬಿಳಿ ಅಥವಾ ಹಸಿರು ಬಣ್ಣದ ಮಚ್ಚೆಗಳನ್ನು ನೀವು ಕಂಡಿರಬಹುದು. ಇವನ್ನು 'ಲೈಕೆನ್ಸ್' ಎನ್ನುತ್ತಾರೆ. ಅಶುದ್ಧ ಗಾಳಿ ಇರುವಲ್ಲಿ ಇವು ಕಂಡುಬರುವುದಿಲ್ಲ. ನಾಗಬನಗಳಲ್ಲಿ ಇವು ಯಥೇಚ್ಛವಾಗಿ ಕಂಡುಬರುತ್ತವೆ.
       ನಾಗಬನಗಳು 'ಸ್ವಸ್ಥಾನ ಸಂರಕ್ಷಣೆ' (In-Situ Conservation) ಪರಿಕಲ್ಪನೆಗೆ ಒಂದು ಉತ್ತಮ ಉದಾಹರಣೆ. 'ಸ್ವಸ್ಥಾನ ಸಂರಕ್ಷಣೆ' ಎಂದರೆ, ಜೀವವೈವಿಧ್ಯವನ್ನು ಅವು ಹುಟ್ಟಿ, ಬೆಳೆದ ಮೂಲಸ್ಥಾನದಲ್ಲೇ ಉಳಿಸಿಕೊಂಡು ಸಂರಕ್ಷಿಸುವುದು. ನಾಗಬನಗಳು ಸ್ಥಳೀಯ ಸಾಂಸ್ಕೃತಿಕ ಪರಂಪರೆಯೊಂದಿಗೆ ಬೆಸೆದುಕೊಂಡಿರುವುದರಿಂದ ಈಗಲೂ ಹಲವೆಡೆ ತಮ್ಮ ಸಾಂಪ್ರದಾಯಿಕ ಕಟ್ಟುನಿಟ್ಟುಗಳನ್ನು ಉಳಿಸಿಕೊಂಡಿವೆ. ವರ್ಷದಲ್ಲಿ ಒಮ್ಮೆ ನಾಗರಪಂಚಮಿಯ ದಿನ ಮಾತ್ರ
ಪ್ರವೇಶ, ಉಳಿದಂತೆ ಯಾವುದೇ ಚಟುವಟಿಕೆಯಿಲ್ಲ. ನಾಗಬನದೊಳಗೆ ಕೃಷಿಯಾಗಲೀ, ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳಾಗಲೀ ನಿಷಿದ್ಧ. ಮರಗಿಡಗಳನ್ನು ಕಡಿಯುವಂತಿಲ್ಲ, ಬೇಟೆಯಾಡುವಂತಿಲ್ಲ. ಒಂದು ತರಗೆಲೆಯನ್ನೂ ಮುಟ್ಟುವಂತಿಲ್ಲ. ದನಕರುಗಳನ್ನು ಮೇಯಲು ಬಿಡುವಂತಿಲ್ಲ. ಈ ಬಗೆಯ ಕಟ್ಟುನಿಟ್ಟುಗಳಿಂದಾಗಿ, ನಾಗಬನದೊಳಗಿನ ಜೀವಜಾಲವು ಜನಸಂಪರ್ಕವಿಲ್ಲದೆ, ಯಾವುದೇ ಬಾಹ್ಯ ಅಡ್ಡಿಆತಂಕಗಳಿಲ್ಲದೆ 'ಸ್ವಸ್ಥಾನದಲ್ಲೇ ಸಂರಕ್ಷಣೆ' ಗೊಳ್ಳುವ ಸೌಲಭ್ಯವನ್ನು ನೈಸರ್ಗಿಕವಾಗಿಯೇ ಪಡೆದಿವೆ. ಅಲ್ಲದೆ, ಅಲ್ಲಿನ ಮಣ್ಣಿನ ಗುಣಮಟ್ಟವೂ ಅತ್ಯಂತ ಶ್ರೀಮಂತವಾಗಿದೆ. ಎರೆಹುಳದ ಅಸ್ತಿತ್ವವೇ ಇದಕ್ಕೆ ಸಾಕ್ಷಿ. ಎರೆಹುಳಗಳನ್ನು ಜೈವಿಕ ಸೂಚಕಗಳು (Bio indicators) ಎನ್ನುತ್ತಾರೆ. ಅಂದರೆ ಒಂದು ಪ್ರದೇಶದ ಮಣ್ಣಿನ ಗುಣಮಟ್ಟ ಅಥವಾ ಮಾಲಿನ್ಯದ ಪರೀಕ್ಷೆಯಲ್ಲಿ ಎರೆಹುಳಗಳು ಮಹತ್ವದ ಪಾತ್ರವಹಿಸುತ್ತವೆ. 
       ನಮಗೇನು ಬೇಕು ಎನ್ನುವದನ್ನು ನಮಗಿಂತ ಚೆನ್ನಾಗಿ ಬಲ್ಲವರಿಲ್ಲ. ಹಾಗೆಯೇ ಕಾಡಿಗೆ ಏನು ಬೇಕು ಎನ್ನುವುದು ಸ್ವತಃ ಕಾಡೇ ತಿಳಿದೇ ಇರುತ್ತದೆ. ಹಾಗಿರುವಾಗ ಹೊಸದಾಗಿ ಕಾಡು ಬೆಳೆಸುವುದಕ್ಕಿಂತ ಇರುವ ಕಾಡುಗಳನ್ನು ಉಳಿಸುವುದು ಬಹಳ ಮುಖ್ಯ. ಹಾಗೆಯೇ ಕಾಡುಗಳಿಗಾಗಿ ನಾವು ವಿಶೇಷವಾಗಿ ಏನೂ ಮಾಡಬೇಕಿಲ್ಲ. ಒಂದಷ್ಟು ಜಾಗವನ್ನು ಮೀಸಲಿಟ್ಟರೆ, ಕಾಡು ತನ್ನಿಂತಾನೇ ಬೆಳೆಯುತ್ತದೆ.
       ಕಾಡುಗಳಿದ್ದರೆ ಕಾಡುಗಳನ್ನು ನಂಬಿಕೊಂಡಿರುವ ಪ್ರಾಣಿಪಕ್ಷಿಗಳಿಗೆ ಅನುಕೂಲವಾಯಿತು. ಮನುಷ್ಯರಾದ ನಮಗೇನು ಸಹಾಯವಾಯಿತು? ಎನ್ನುಬಹುದು. ಖಂಡಿತ ಸಹಾಯವಿದೆ. ಮರಗಿಡಗಳು ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಂಡು, ಇಂಗಾಲವಾಗಿ ಪರಿವರ್ತಿಸಿ ತಮ್ಮ ಕಾಂಡದಲ್ಲಿ ಶೇಖರಿಸುತ್ತವೆ. ನಮಗೆ ಉಸಿರಾಡಲು ಆಮ್ಲಜನಕವನ್ನು ನೀಡುತ್ತವೆ. ಹೀಗೆ ಮರಗಿಡಗಳೆಂದರೆ, ಪ್ರಕೃತಿಯ 'ಇಂಗಾಲ ಸಂಗ್ರಹಾಗರ' ಗಳು. 
     ಜಾಗತಿಕ ತಾಪಮಾನದ ಏರಿಕೆಗೆ ಕಾರಣವಾಗಿರುವ ಹಸಿರು ಮನೆ ಅನಿಲಗಳ ಪೈಕಿ ಇಂಗಾಲದ ಡೈ ಆಕ್ಸೈಡ್ ಅತಿ ಮಹತ್ವದ್ದು. ಕೈಗಾರೀಕರಣ, ವಾಯುಮಾಲಿನ್ಯ ಮೊದಲಾದವುಗಳಿಂದಾಗಿ ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್‌ನ ಬಿಡುಗಡೆ ಆಗುತ್ತಲೇ ಇರುತ್ತದೆ. ಮಾತ್ರವಲ್ಲ, ಜಾಗತಿಕ ತಾಪಮಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಲೇ ಇರುತ್ತದೆ. ಇದು ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ಎಷ್ಟೊಂದು ಗಂಭೀರ ಸಮಸ್ಯೆಯಾಗಿದೆ ಎಂದರೆ, ವಿಶ್ವಸಂಸ್ಥೆಯು 2021-2030ರ ವರೆಗಿನ 10 ವರ್ಷಗಳನ್ನು 'ವಿಶ್ವಸಂಸ್ಥೆಯ ದಶಕ' (UN Decade) ಎಂದು ಘೋಷಿಸಿ, ಪರಿಸರ ಸಂರಕ್ಷಣೆಗೆ ಮೀಸಲಿಟ್ಟಿದೆ. 
         2015ರ ಪ್ಯಾರಿಸ್ ಒಪ್ಪಂದ ಮತ್ತು 2019ರ ವಿಶ್ವಸಂಸ್ಥೆಯ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾರತ ಸೇರಿದಂತೆ ಜಗತ್ತಿನ 75ಕ್ಕೂ ಹೆಚ್ಚು ರಾಷ್ಟ್ರಗಳು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡರು. ಅದೇನೆಂದರೆ, ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು 2050ರ ವೇಳೆಗೆ ನಿವ್ವಳ ಶೂನ್ಯ(Net Zero)ವಾಗಿಸುವುದು. ಇಂಥ ಹಸಿರುಮನೆ ಅನಿಲಗಳ ಪೈಕಿ ಇಂಗಾಲದ ಡೈ ಆಕ್ಸೈಡ್ ಕೂಡಾ ಒಂದು. ಈ ಶೂನ್ಯಮಟ್ಟವನ್ನು ತಲುಪಲು ಬೇರೆ ಬೇರೆ ರಾಷ್ಟ್ರಗಳು ಬೇರೆ ಬೇರೆ ಯೋಜನೆಗಳನ್ನು ಹಾಕಿಕೊಂಡಿದ್ದರೆ, ಭಾರತವು ಪಶ್ಚಿಮ ಬಂಗಾಳದ ಸುಂದರಬನ್ಸ್ ಪ್ರದೇಶದಲ್ಲಿ ಮತ್ತಷ್ಟು ಕಾಂಡ್ಲಾ ಕಾಡುಗಳನ್ನು ಬೆಳೆಸುವ ಯೋಜನೆ ಹಾಕಿಕೊಂಡಿದೆ. ನಮ್ಮ ಪೂರ್ವಜರ ದೂರದೃಷ್ಟಿಯನ್ನು ಇಲ್ಲಿ ಪರಿಗಣಿಸಬೇಕು. ನಾಗಬನ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ನಮ್ಮ ಪರಂಪರೆಯಲ್ಲಿದೆ. ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಹೀರುವ ನಾಗಬನದ ಕಾಡುಗಳು, ಇಂಗಾಲವನ್ನು ಶೇಖರಿಸಿಟ್ಟು, ಪ್ರಕೃತಿಗೆ ತಮ್ಮ ಯೋಗದಾನವನ್ನು ನೀಡುತ್ತಲೇ ಬಂದಿವೆ. ಅಷ್ಟೇ ಅಲ್ಲ, ನಾಗಬನ ಆಗಲೇ ನಮ್ಮ ನಡುವೆ ಅಸ್ತಿತ್ವದಲ್ಲಿದೆ. ಹೊಸದಾಗಿ ರೂಪಿಸುವ, ಅದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುವ ಆವಶ್ಯಕತೆಯಿಲ್ಲ. ಇರುವುದನ್ನು ಉಳಿಸಿ, ಸಂರಕ್ಷಿಸಿದರೆ ಸಾಕು. 
      ನಾವು ಭೇಟಿ ನೀಡಿದ ನಾಗಬನಗಳಲ್ಲಿ ನೂರಾರು ಮರಗಳಿದ್ದರೂ ನಾವು ಆಯ್ದ ಕೇವಲ 58 ಮರಗಳ ಇಂಗಾಲ ಸಂಗ್ರಹವನ್ನು ಅಂದಾಜಿಸಿದಾಗ, ನಮಗೆ ಒಟ್ಟು 31 ಟನ್‌ಗಳಷ್ಟು ಫಲಿತಾಂಶ ಲಭ್ಯವಾಯಿತು. ಹಾಗಾದರೆ ನಾಗಬನದ ಅಷ್ಟೂ ಮರಗಳ ಯೋಗದಾನವನ್ನು ಅಂದಾಜಿಸಬಹುದು. ಇನ್ನು ಪಶ್ಚಿಮಘಟ್ಟದಂತಹ ದೊಡ್ಡ ಮಟ್ಟದ ಕಾಡುಗಳ ಯೋಗದಾನ ಯಾವ ಮಟ್ಟದ್ದು ಎನ್ನುವುದನ್ನೂ ಅಂದಾಜಿಸಿ ನೋಡಿ. ಇತ್ತೀಚೆಗೆ ಹೊಸ ಪೀಳಿಗೆಯ ಕೃಷಿಕರು ನಾಗಬನದ ಕುರಿತಾದ ಪಾರಂಪರಿಕ ನಂಬಿಕೆಗಳನ್ನು ಕಳೆದುಕೊಂಡಿದ್ದಾರೆ. ಕೃಷಿಯ ವಿಸ್ತರಣೆ, ರಸ್ತೆಕಾಮಗಾರಿಗಾಗಿ ನಾಗಬನದ ಭೂಮಿಯ ಗಾತ್ರ ಕುಗ್ಗುತ್ತಿದೆ. ಹೆಚ್ಚುತ್ತಿರುವ ಕೈಗಾರೀಕೀಕರಣ, ನಗರೀಕರಣ, ಅರಣ್ಯನಾಶ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಬೇಡಿಕೆಗಳು ನಾಗಬನಕ್ಕೆ ಮುಳುವಾಗಿವೆ. ಸಾಮಾನ್ಯ ಜನರಿಗೆ ನಾಗಬನದ ನಿಜವಾದ ವೈಜ್ಞಾನಿಕ ಮಹತ್ವದ ಅರಿವಿಲ್ಲದೆ, ಅವುಗಳು ತಮ್ಮ ಜೊತೆಗಿನ ಕಾಡುಗಳನ್ನು ಕಳೆದುಕೊಂಡು ಕೇವಲ ಕಾಂಕ್ರೀಟ್ ಕಟ್ಟೆ ಮತ್ತು ಆವರಣಗಳನ್ನು ಪಡೆದುಕೊಂಡು, ನಾಗನಕಟ್ಟೆಗಳಾಗುತ್ತಿವೆ. ಒಂದೊಮ್ಮೆ ನಾಗಬನದ ಕಾಡುಗಳ ಮಧ್ಯೆ ನೆಲೆ ಕಂಡುಕೊಂಡಿದ್ದ ಜೀವವೈವಿಧ್ಯಗಳು ನೆಲೆಯಿಲ್ಲದೆ ಕಣ್ಮರೆಯಾಗುತ್ತಿವೆ. ಅಷ್ಟೇ ಅಲ್ಲ, ಈ ಪ್ರದೇಶಗಳಲ್ಲಿ ಮಾತ್ರ ಕಂಡುಬರುವಂತಹ (Endemic) ಕೆಲವೊಂದು ವಿಶಿಷ್ಟ ಮರಗಳು ಅಪಾಯದ ಹೊಸ್ತಿಲಲ್ಲಿವೆ. ನಾಗಬನದ ಹಿನ್ನೆಲೆಯಲ್ಲಿರುವ ವೈಜ್ಞಾನಿಕ ದೃಷ್ಟಿಕೋನ ಮಾಯವಾಗಿ ಈಗ ಅವು ಕೇವಲ ಪೂಜಾಕೇಂದ್ರಗಳಾಗಿವೆ. ಇತ್ತೀಚೆಗೆ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಭರಾಟೆಯ ಪ್ರಭಾವಕ್ಕೆ ಸಿಕ್ಕಿ, ಕೃಷಿಕರು ತಮ್ಮ ನಾಗಬನದ ಭೂಮಿಯ ವಾಣಿಜ್ಯ ಮೌಲ್ಯದ ಲೆಕ್ಕಾಚಾರ ಹಾಕಿ, ನಾಗಬನದ ಗಾತ್ರವನ್ನು ಕಾಡಿನಿಂದ ಕಟ್ಟೆಗೆ ಇಳಿಸಿ, ಕಾಡನ್ನು ರಿಯಲ್ ಎಸ್ಟೇಟ್‌ಗಾಗಿ ಮಾರಣಹೋಮ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಇದರಿಂದ ನಮ್ಮ ಪೂರ್ವಜರ ಜೀವಜಾಲದ 'ಸ್ವಸ್ಥಾನ ಸಂರಕ್ಷಣೆ' ಎಂಬ ಪರಿಕಲ್ಪನೆ ಅರ್ಥ ಕಳೆದುಕೊಂಡಿದೆ. 
      ಇದೇಕೆ ಹೀಗಾಯಿತು? ಇದಕ್ಕೆ ಕಾರಣಗಳೇನು ಎಂದು ತಿಳಿಯಲು, ಜನರ ಅಭಿಪ್ರಾಯ ಸಂಗ್ರಣೆಗಾಗಿ ನಾವೊಂದು ಸಮೀಕ್ಷೆಯನ್ನು ನಡೆಸಿದೆವು. ಆಗ ಸುಮಾರು 73% ಜನರಿಗೆ ನಾಗಬನದ ತಿಳಿವಳಿಕೆಯಿದ್ದರೆ, 15% ಜನರಿಗೆ ನಾಗಬನದ ಪರಿಚಯವಿದ್ದರೂ ಜೊತೆಗೆ ಕಾಡುಗಳು ಇರಬೇಕೋ, ಬೇಡವೋ ಎಂಬ ಕುರಿತು ಸ್ಪಷ್ಟವಾದ ಅಭಿಪ್ರಾಯವಿರಲಿಲ್ಲ. ಉಳಿದ 12% ಜನರು ನಾಗಬನ ಎಂದರೆ ಕಾಂಕ್ರೀಟ್ ಕಟ್ಟೆ ಸಾಕು, ಕಾಡಿನ ಆವಶ್ಯಕತೆ ಇಲ್ಲ ಎಂದೇ ಅಭಿಪ್ರಾಯಪಟ್ಟಿದ್ದರು. ಈ 27% ಜನರಿಗೆ ನಾಗಬನದ ಕುರಿತಾದ ಹೆಚ್ಚಿನ ತಿಳಿವಳಿಕೆಯ ಅಗತ್ಯವಿದೆ.
     ಕಾಡುಗಳು ನಮಗೆ ಏಕೆ ಬೇಕು? ಎನ್ನುವ ಸ್ಪಷ್ಟ ತಿಳಿವಳಿಕೆ ನಮಗೆ ಇದ್ದಾಗ ಮಾತ್ರ, ನಾವು ಸ್ವತಃ ಕಾಡುಗಳ ರಕ್ಷಣೆ ಮಾಡುತ್ತೇವೆ. ಜಾಗತಿಕ ತಾಪಮಾನ ಏರುತ್ತಿರುವುದರಿಂದ, ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆ, ಬಿರುಗಾಳಿ, ಚಂಡಮಾರುತ, ನೆರೆ ಮೊದಲಾದ ಪ್ರಕೃತಿ ವಿಕೋಪಗಳನ್ನು ಎದುರಿಸಬೇಕಾಗಿದೆ. ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣವನ್ನು ಇಳಿಸುವುದು ಈಗಿನ ತುರ್ತು ಆವಶ್ಯಕತೆ. ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣ ದಿನೇ ದಿನೇ ಅದೆಷ್ಟು ವೇಗದಲ್ಲಿ ಏರುತ್ತಿದೆಯೆಂದರೆ, ಸ್ವತಃ ವಿಶ್ವಸಂಸ್ಥೆಯೇ ಗಾಬರಿಯಾಗಿ, ತನ್ನ ಶೃಂಗಸಭೆಯಲ್ಲಿ ಈ ಕುರಿತು ಕ್ರಮಕೈಗೊಳ್ಳುವ ಬಗ್ಗೆ ಜಗತ್ತಿನ ರಾಷ್ಟ್ರಗಳಿಂದ ಪ್ರತಿಜ್ಞೆ ಸ್ವೀಕರಿಸುವ ಮಟ್ಟಕ್ಕೆ ಹೋಗಿದೆ. ಎಂದರೆ, ಅಪಾಯದ ಘಂಟೆ ಬಾರಿಸುತ್ತಿದೆ ಎಂದರ್ಥ.
       ಜಗತ್ತಿನ ಜೀವಜಾಲದ ವ್ಯವಸ್ಥೆಯಲ್ಲಿ ಮಾನವ ಅತ್ಯಂತ ಬುದ್ಧಿವಂತ, ಎಲ್ಲರಿಗಿಂತಲೂ ಅತಿ ಎತ್ತರದಲ್ಲಿದ್ದಾನೆ. ಹಾಗೆಂದು ಇಲ್ಲಿರುವ ಪ್ರತಿಯೊಂದೂ ತನಗಾಗಿಯೇ ಇದೆ, ತನ್ನ ಅನುಕೂಲಕ್ಕಾಗಿಯೇ ಇದೆ; ಇದರ ಬಳಕೆಗೆ ತಾನು ತನಗೆ ಬೇಕಾದಂತೆ ನಿರ್ಧಾರ ಕೈಗೊಳ್ಳುವ ಹಕ್ಕು ತನಗಿದೆ ಎಂದು ಅಂದುಕೊಂಡರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೊಂದಿಲ್ಲ. ಒಂದು ಪುಟ್ಟ ಕಾಡು ನಾಶವಾದರೆ ಮೇಲ್ನೋಟಕ್ಕೆ ನಮಗೆ ಯಾವುದೇ ನೇರ ತೊಂದರೆಯಾದಂತೆ ಕಂಡುಬರಲಿಕ್ಕಿಲ್ಲ. ಏಕೆಂದರೆ ಕಾಡು ತಾನು ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತಿದ್ದೇನೆ ಎಂದು ಡಂಗುರ ಸಾರುವುದಿಲ್ಲ. ಹಾಗಾಗಿ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ನ ಹೀರುವಿಕೆ ನಿಂತುಹೋದುದು ಬೇಗನೆ ಅರಿವಿಗೆ ಬರುವುದಿಲ್ಲವಾದುದರಿಂದ ನಮ್ಮ ನೆಮ್ಮದಿಗೆ ಭಂಗ ಬರದಿರಬಹುದು. ಆದರೆ ಆ ಕಾಡನ್ನು ನಂಬಿಕೊಂಡ ಜೀವಜಾಲದ ಅಸ್ತಿತ್ವಕ್ಕೆ, ಆ ಪ್ರದೇಶದ ಅಂತರ್ಜಲದ ಗುಣಮಟ್ಟಕ್ಕೆ ಎಷ್ಟು ದೊಡ್ಡ ಕುಂದುಂಟಾಗಿರಬಹುದು ಎಂಬುದನ್ನು ನಾವು ಲೆಕ್ಕಾಚಾರ ಹಾಕಿದರೆ, ಇಂದು ನಾವು ಸುರಕ್ಷಿತವಾಗಿದ್ದರೂ ಮುಂದೊಂದು ದಿನ ಸಮಸ್ಯೆ ನಮ್ಮ ಕಾಲಬುಡಕ್ಕೇ ಬರುವುದನ್ನು ತಪ್ಪಿಸಲಾರೆವು ಎನ್ನುವುದು ಸ್ಪಷ್ಟ. ಪರಿಸರದಲ್ಲಿ ಮನುಷ್ಯ ಮತ್ತು ಇತರ ಜೀವಜಾಲಗಳ ನಡುವೆ ಮೇಲ್ನೋಟಕ್ಕೆ ಕಾಣದ ಒಂದು ಅವಲಂಬನಾ ಜಾಲವಿದೆ. ಪ್ರಕೃತಿಯಲ್ಲಿ ಒಂದು ಜೀವಿಯ ನಿರ್ನಾಮವಾದರೂ ಈ ಜಾಲದ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಾನವ ಈ ಜೀವಜಾಲದ ಅಗತ್ಯವಿಲ್ಲದೆ ಪರಿಸರದಲ್ಲಿ ತಾನೊಬ್ಬನೇ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. 
       ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿರುವ ನಾಗಬನದ ಕಾಡುಗಳು ಒಳ್ಳೆಯ, ಆರೋಗ್ಯಕರ ಪರಿಸರಕ್ಕಾಗಿ ಆ ಕಾಲದಿಂದಲೂ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಬಂದಿವೆ. ಪರಿಸರಕ್ಕಾಗಿ ತಮ್ಮ ಕೃಷಿಭೂಮಿಯಲ್ಲೇ ಒಂದಿಷ್ಟು ಜಾಗವನ್ನು ನಾಗಬನಕ್ಕೆ ಮೀಸಲಿಡುವ ಔದಾರ್ಯವನ್ನು, ಉದಾತ್ತತೆಯನ್ನು ನಮ್ಮ ಹಿರಿಯರು ತೋರಿದ್ದಾರೆ. ಜಾಗತಿಕ ತಾಪಮಾನ ಏರುವಿಕೆಯಂತಹ ಸಮಸ್ಯೆಗಳನ್ನು ಅವರ ಕಾಲದಲ್ಲೇ ಗ್ರಹಿಸಿ, ಅದಕ್ಕೆ ಪರಿಹಾರವನ್ನು ನಮ್ಮ ಪರಂಪರೆಯಲ್ಲಿ, ಸಾಂಸ್ಕೃತಿಕ ಆಚರಣೆಯಲ್ಲಿ ಬೆಸೆದು ಹೋದ ಜಾಣರು ಅವರು. ನಾವು ಈಗ ಈ ಜಾಣತನವನ್ನು ನಮ್ಮದಾಗಿಸಿಕೊಳ್ಳಬೇಕಾಗಿದೆ. ಜಾಗತಿಕ ತಾಪಮಾನದ ಪರಿಣಾಮಗಳಾದ ಉಷ್ಣಾಂಶದ ಏರಿಕೆ, ಸಮುದ್ರಮಟ್ಟದಲ್ಲಿ ಏರಿಕೆ, ಹವಳದ ದಿಬ್ಬಗಳ ನಾಶ, ಮೇಘಸ್ಫೋಟ, ಚಂಡಮಾರುತ, ಸುನಾಮಿ, ಬರ- ಇವೆಲ್ಲವುಗಳಿಂದ ಮುಕ್ತಿಕಾಣಲು ನಮಗಿರುವ ದಾರಿಯೆಂದರೆ, ಕಾಡುಗಳ ರಕ್ಷಣೆ. 
       ಕಾಡುಗಳು ಎಂದಾಗ ದೊಡ್ಡ ದೊಡ್ಡ ರಾಷ್ಟ್ರೀಯ ಉದ್ಯಾನಗಳೇ ಆಗಬೇಕೆಂದಿಲ್ಲ. ನಾಗಬನದಂತಹ ಒಂದು ಪುಟ್ಟ ಕಾಡಿನ ಪ್ರದೇಶವೂ ಹೇಗೆ ಪ್ರಕೃತಿಯ ಸಂರಕ್ಷಣೆಗೆ ತನ್ನ ಅಳಿಲಸೇವೆಯನ್ನು ಸಲ್ಲಿಸಬಲ್ಲದು ಎಂಬುದನ್ನು ನಾವು ಈಗಾಗಲೇ ನೋಡಿದೆವು. ಹಾಗಿರುವಾಗ ನಾವು ಈ ಪುಟ್ಟ ಕಾಡುಗಳ ಸಂರಕ್ಷಣೆಗೆ ಮನಸ್ಸು ಮಾಡಬೇಕಾಗಿದೆ. ಇಡೀ ಭಾರತ ಭೂಭಾಗದ ಜೊತೆಗೆ ಅಂದಾಜಿಸಿದಾಗ, ನಾಗಬನ ತೀರಾ ಸಣ್ಣ ಭೂಭಾಗ ಎನಿಸಿದರೂ, ನಮ್ಮ ನಮ್ಮ ಊರುಗಳಲ್ಲಿರುವ ಅಂತಹ ಅನೇಕ ನಾಗಬನಗಳಿಗೆ ಸಂಬಂಧಿಸಿದ ಕಾಡುಗಳ ರಕ್ಷಣೆಯಾದರೆ, ಅದು ರಾಷ್ಟ್ರಕ್ಕೆ, ಮನುಕುಲಕ್ಕೆ ದೊಡ್ಡ ಕೊಡುಗೆಯಾಗಬಲ್ಲದು. ಸರಕಾರವೂ ಈ ಕುರಿತು ಗಮನಹರಿಸಿ, ನಾಗಬನದ ರಕ್ಷಣೆಗೆ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕಾದುದು ಈಗಿನ ತುರ್ತು ಅಗತ್ಯ. 
        ತಿಳಿವಳಿಕೆಯ ಕೊರತೆಯಿಂದ ಈಗಾಗಲೇ ಎಷ್ಟೋ ನಾಗಬನಗಳು ನಾಶವಾದವು. ಆದರೆ ಇನ್ನೂ ಬಹಳಷ್ಟು ನಾಗಬನಗಳು ತಮ್ಮ ಮೂಲರೂಪದಲ್ಲೇ ಉಳಿದುಕೊಂಡು ಪರಿಸರ ಸಂರಕ್ಷಣೆಯ ಮಹತ್ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿವೆ. ಅವುಗಳಿಗೆ ರಕ್ಷಣೆ ನೀಡಿದರೆ, 2050ರ ವೇಳೆಗೆ ಇಂಗಾಲದ ಡೈ ಆಕ್ಸೈಡ್‌ನ ಹೊರಸೂಸುವಿಕೆಯಲ್ಲಿ ನಿವ್ವಳ ಶೂನ್ಯವನ್ನು ಸಾಧಿಸುವ ಸರಕಾರದ ಯೋಜನೆಯು ಯಾವುದೇ ಖರ್ಚಿಲ್ಲದೆ ಬಹುಪಾಲು ನೆರವೇರಿದಂತೆ. ಹೊಸದಾಗಿ ಕಾಡುಗಳನ್ನು ಬೆಳೆಸುವ ಸರಕಾರದ ಯೋಜನೆಗಳೇನಿದ್ದರೂ ಅವುಗಳನ್ನು ಕಾರ್ಯರೂಪಕ್ಕೆ ತರಲು ದೊಡ್ಡ ಮಟ್ಟದ ಹಣಕಾಸಿನ ಆವಶ್ಯಕತೆಯಿದೆ ಮತ್ತು ಅದರ ಪ್ರಯೋಜನ ಪಡೆಯಲು ಕೆಲವು ವರ್ಷಗಳಾದರೂ ಕಾಯಬೇಕು. ಆದರೆ ನಾಗಬನ ಅಥವಾ ಅಂಥ ಯಾವುದೇ ದೇವರ ಕಾಡುಗಳು ಆಗಲೇ ಸಿದ್ಧರೂಪದಲ್ಲಿದ್ದು, ಸರಕಾರದ ನಿವ್ವಳ ಶೂನ್ಯವನ್ನು ಸಾಧಿಸುವ ಕಾರ್ಯವನ್ನು ಯಾರೂ ವಹಿಸಿಕೊಡದೆಯೂ ಅವು ತಮ್ಮ ಪಾಡಿಗೆ ತಾವು ನೂರಾರು ವರ್ಷಗಳ ಹಿಂದಿನಿಂದಲೇ ನಿರ್ವಹಿಸುತ್ತಾ ಬಂದಿವೆ. ಅವುಗಳ ಈ ಮಹಾತ್ಕಾರ್ಯವನ್ನು ನಾವು ಮತ್ತು ಸರಕಾರ ಗುರುತಿಸಿ, ಬೆಂಬಲಿಸುವುದು ಈಗ ಆಗಬೇಕಾದ ತುರ್ತು ಕಾರ್ಯ. 
…………………………........…………… ಅವನಿಕೃಷ್ಣ ಅಡ್ವೆ
10ನೇ ತರಗತಿ
ಕೇಂದ್ರೀಯ ವಿದ್ಯಾಲಯ, ಉಡುಪಿ
ಉಡುಪಿ ಜಿಲ್ಲೆ.
ನಿರೂಪಣೆ: ಶಶಿಕಲಾ ತೊಕ್ಕೊಟ್ಟು
******************************************

Ads on article

Advertise in articles 1

advertising articles 2

Advertise under the article