ಜೀವನ ಸಂಭ್ರಮ : ಸಂಚಿಕೆ - 69
Monday, January 23, 2023
Edit
ಜೀವನ ಸಂಭ್ರಮ : ಸಂಚಿಕೆ - 69
ಮಕ್ಕಳೇ, ಇಂದು ಕುಟುಂಬದಲ್ಲಿ ಸಂತೋಷವಾಗಿರುವುದರ ಬಗ್ಗೆ ತಿಳಿದುಕೊಳ್ಳೋಣ. ಈ ಘಟನೆ ಓದಿ. ಒಬ್ಬ 25ರ ವಯೋಮಾನದ ತರುಣ, ಸುಖರಾತ ಸಾಕ್ರೆಟಿಸ್ ನ ಬಳಿ ಬರುತ್ತಾನೆ. ಸಾಕ್ರೆಟಿಸ್ ಒಬ್ಬ ತತ್ವಜ್ಞಾನಿ. ಆತನ ಬಳಿ ಪರಿಹಾರ ಕಂಡುಕೊಳ್ಳಲು ಅನೇಕ ಜನ ಬರುತ್ತಿದ್ದರು. ಹಾಗೆಯೇ ಈ ತರುಣ ಬಂದಿದ್ದನು. ಸಾಕ್ರೆಟಿಸ್ ಆ ತರುಣನನ್ನು ವಿಚಾರಿಸಿದ. ಆ ತರುಣ ಹೇಳಿದ "ನನ್ನ ಪತ್ನಿ ಕುರೂಪಿ ಇದ್ದಾಳೆ, ನಾನು ಇಂಥವಳ ಜೊತೆ ಇನ್ನು 75 ವರ್ಷ ಬಾಳಬೇಕು. ನಾನು ಹೇಗೆ ಬಾಳೋದು" ಎಂದು ಕೇಳಿದ. ಇದಕ್ಕೆ ಸಾಕ್ರೆಟಿಸ್ ಹೇಳಿದ "ಹಾಗಾದರೆ ಇಂಥ ಕುರೂಪಿಯನ್ನು ಏಕೆ ಮದುವೆಯಾದೆ...?" ಅದಕ್ಕೆ ತರುಣ ಹೇಳಿದ, "ನಾನು ಮದುವೆಯಾಗುವಾಗ ಆಕೆ ಸುಂದರವಾಗಿದ್ದಳು" ಎಂದನು. ಆ ತರುಣ ಆ ಯುವತಿಯನ್ನು ತಾನೇ ಇಷ್ಟಪಟ್ಟು ಮೆಚ್ಚಿ ಮದುವೆಯಾಗಿದ್ದನು. ಸಾಕ್ರೆಟಿಸ್ ಹೇಳಿದ "ಹಾಗಾದರೆ ಕುರುಪಾಗಿರುವುದು ನಿನ್ನ ಪತ್ನಿ ಅಲ್ಲ, ನಿನ್ನ ಕಣ್ಣು ಕುರೂಪವಾಗಿದೆ. ಮದುವೆಯಾಗುವಾಗ ಯಾವ ಕಣ್ಣಿನಿಂದ ನೋಡಿದ್ದೀಯೋ, ಅದೇ ಕಣ್ಣಿನಿಂದ ನೋಡು. ಸುಂದರವಾಗಿರುತ್ತಾಳೆ. ಬದಲಾಗಿರುವುದು ನಿನ್ನ ದೃಷ್ಟಿ. ನಿನ್ನ ಪತ್ನಿಗೂ ನಿನ್ನ ಹಾಗೆ ಆಗಿದೆ. ಆದರೆ ಆಕೆ ನನ್ನ ಹತ್ತಿರ ಬಂದಿಲ್ಲ. ಅಷ್ಟೇ ಅಲ್ಲ ಇನ್ನು 70 ವರ್ಷಕ್ಕೆ ನೀನೇನು ಆಗುತ್ತೀಯ....?" ಎಂದು ಪ್ರಶ್ನಿಸಿದ. ಮದುವೆಯಾಗುವಾಗ ಬಣ್ಣ, ರೂಪ ನೋಡುವುದು. ಆಮೇಲೆ ಬಣ್ಣ ರೂಪ ನೋಡಬಾರದು. ಮನಸ್ಸು ನೋಡಬೇಕು. ಅವರು ಮಾಡುವ ಒಳ್ಳೆಯ ಕೆಲಸ ನೋಡಬೇಕು. ದಿನೇ ದಿನೇ ನಮ್ಮ ರೂಪ, ಬಣ್ಣ, ಸಾಮರ್ಥ್ಯ ಬದಲಾಗುತ್ತದೆ. ಆಗಿನಂತೆ ಇರಬೇಕೆಂದರೆ ಸಾಧ್ಯವಿಲ್ಲ. ಒಳ್ಳೆಯದನ್ನು ನೋಡುವ ಕಲೆ ಬಂದರೆ ಜೀವನ ಅದ್ಭುತ, ಸುಂದರ. ಆ ಕಲೆಯನ್ನು ಬೆಳೆಸಿಕೊ ಎಂದ. ಈ ಮಾತನ್ನು ಕೇಳಿ ತರುಣನ ಮನ ಪರಿವರ್ತನೆಯಾಗಿತ್ತು. ಹೀಗೆಲ್ಲಾ ನಾವು ನೋಡುತ್ತಿದ್ದೇವೆ. ಒಂದು ಹೆಣ್ಣು ಮಗು ಜನಿಸಿದರೆ, ಎಲ್ಲರ ಮುಖದಲ್ಲಿ ಸಂತೋಷವೂ ಹೊರಟು ಹೋಗುತ್ತೆ. ಆ ಮಗುವನ್ನು ಸಾಕ್ಷಾತ್ ಲಕ್ಷ್ಮೀದೇವಿ ರೀತಿ, ಸಾಕ್ಷಾತ್ ಪಾರ್ವತಿ ದೇವಿ ರೀತಿ ನೋಡಿದರೆ ಎಷ್ಟು ಆನಂದವಾಗುತ್ತದೆ....? ಒಂದು ವೇಳೆ ಮಕ್ಕಳೇ ಇಲ್ಲ ಎಂದರೆ ದಾರಿಯಲ್ಲಿ ಓಡಾಡುವ ಮಕ್ಕಳನ್ನು ಕರೆದು ಉಣಿಸಿ, ತಿನಿಸಿ ಎಷ್ಟು ಆನಂದ ಪಡಬಹುದು. ನೋಡುವ ದೃಷ್ಟಿ ಬೇಕಾಗಿದೆ. ಹೀಗೆ ನೋಡಿದರೆ ಬಹಳಷ್ಟು ವಿವಾಹ ವಿಚ್ಛೇದನ ಪ್ರಕರಣಗಳಾಗುತ್ತಿವೆ, ಕ್ಷುಲ್ಲಕ ವಿಚಾರಗಳಿಗೆ ವಿವಾಹ ವಿಚ್ಛೇದನವಾಗುತ್ತಿದೆ. ಅಂತವರಿಗೆ ಈ ಕಥೆ ಉಪಯುಕ್ತ.
ಕುಟುಂಬದ ಸದಸ್ಯರ ನಡುವೆ ಹೋಲಿಕೆ, ಸ್ಪರ್ಧೆ ಇರಬಾರದು. ಭಿನ್ನಾಭಿಪ್ರಾಯಗಳು ಸಹಜ. ತಪ್ಪನ್ನು ತಿಳಿ ಹೇಳಬೇಕು ವಿನಹ, ಹೀಗೆ ಇರಬೇಕೆಂದು ನಿರ್ಧಾರ ಒಳ್ಳೆಯದಲ್ಲ. ತಿಳಿ ಹೇಳುವುದು ನಮ್ಮ ಧರ್ಮ. ತಿಳಿದು ತಮ್ಮ ಜೀವನ ಬದಲಾಯಿಸಿಕೊಂಡರೆ ಬಹಳ ಸಂತೋಷ. ಒಂದು ವೇಳೆ ತಿಳಿದುಕೊಳ್ಳದಿದ್ದರೆ, ನಾವೇ ನಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಬೇಕು. ಪ್ರತಿಯೊಬ್ಬರೂ ವೈಶಿಷ್ಟ್ಯವೇ. ಜ್ಞಾನ, ತಿಳುವಳಿಕೆ, ಭಾವನೆ ಭಿನ್ನ-ಭಿನ್ನ. ಹಾಗಾಗಿ ಭಿನ್ನತೆಯನ್ನು ಒಪ್ಪಿಕೊಳ್ಳಬೇಕು. ಜಗತ್ತೇ ಪರಿವರ್ತನೆ ಹೊಂದುತ್ತದೆ. ನಮ್ಮಲ್ಲೂ ದಿನಾ ಬದಲಾವಣೆಯಾಗುತ್ತದೆ. ಹಾಗಿರುವಾಗ ಯಾವುದು ಸ್ಥಿರವಾಗಿರುವುದಿಲ್ಲ. ಬದಲಾವಣೆ ಒಪ್ಪಿಕೊಳ್ಳಬೇಕು. ಹೇಗಿದ್ಯೋ ಹಾಗೆ ಒಪ್ಪಿಕೊಂಡರೆ, ಕೋಪ ತಾಪವಿಲ್ಲ. ಜಗತ್ತಿನ ಬದಲಾವಣೆ ಮತ್ತು ನಮ್ಮ ಬದಲಾವಣೆ ಅರಿತರೆ, ಯಾವುದು ಸ್ಥಿರವಲ್ಲ ಎಂಬುದನ್ನು ಅರಿತರೆ, ಬದಲಾವಣೆ ಒಪ್ಪಿಕೊಂಡರೆ ಅದೇ ಸ್ವರ್ಗ.
ಬಹಳಷ್ಟು ಮಕ್ಕಳು ತಮ್ಮ ವಯೋವೃದ್ದ ತಂದೆ ತಾಯಿಯರನ್ನು ವೃದ್ಧಾಶ್ರಮದಲ್ಲಿ ಬಿಟ್ಟಿರುತ್ತಾರೆ. ಇನ್ನು ಕೆಲವು ತಂದೆ ತಾಯಂದಿರು ಮನೆಯಲ್ಲಿ ಒಂಟಿಯಾಗಿ ಪ್ರತ್ಯೇಕವಾಗಿರುತ್ತಾರೆ. ಅವರು ಹೊಂದಿಕೊಳ್ಳುವುದಿಲ್ಲ ಎಂದು ದೂರುತ್ತಾರೆ. ನಾವು ಅವರ ಹೃದಯ ನೋಡುತ್ತಿಲ್ಲ. ಅವರ ಅನುಭವ ನೋಡುತ್ತಿಲ್ಲ. ಇದಕ್ಕೆ ಇಂದಿನ ವಿದ್ಯಾಭ್ಯಾಸವೇ ಒಂದು ರೀತಿ ಕಾರಣ. ನಾವು ನಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯದೆ, ಬೇರೆ ಭಾಷೆಯಲ್ಲಿ ಕಲಿಯುತ್ತಿದ್ದೇವೆ. ಅದು ಅರ್ಥವಾಗದಿದ್ದರೆ ತಲೆಕೆಡಿಸಿ ಕೊಳ್ಳುವುದಿಲ್ಲ.
ಬಾಯಿ ಪಾಠ ಮಾಡಿ ಅಂಕ ಪಡೆಯುತ್ತಿದ್ದೇವೆ. ಅಂಕಗಳ ಹಿಂದೆ ಬಿದ್ದಿದ್ದೇವೆ. ಜ್ಞಾನ ಎಂದರೆ ಜಗತ್ತಿನ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅರ್ಥ ಮಾಡಿಕೊಳ್ಳುವುದು, ಎನ್ನುವುದನ್ನು ಬಿಟ್ಟು , ಅಂಕ ಪಡೆಯುವುದೇ ಜ್ಞಾನ ಎಂದೆನಿಸಿದೆ. ಸುಂದರ ಜೀವನಕ್ಕೆ ಬೇಕಾದ ಜ್ಞಾನವನ್ನು ಅರ್ಥ ಮಾಡಿಕೊಳ್ಳದೆ, ಕಂಠಪಾಠ ಮಾಡಿ, ಅಂಕ ಪಡೆಯುವ ಮನಸ್ಥಿತಿಯಿರುವಾಗ ವೃದ್ಧ ತಂದೆ ತಾಯಿಯ ಮನಸ್ಸನ್ನು ಮತ್ತು ಹೃದಯವನ್ನು ನೋಡುವುದಾದರೂ ಹೇಗೆ....? ಅವರ ಅನುಭವ ಗುರುತಿಸುವುದಾದರೂ ಹೇಗೆ...? ಅವರ ಒಳ್ಳೆಯ ಆಲೋಚನೆ ಮತ್ತು ಕೆಲಸ ಗುರುತಿಸುವುದಾದರೂ ಹೇಗೆ.....? ಇದಕ್ಕೆಲ್ಲ ಪರಿಹಾರ ಜ್ಞಾನವನ್ನು ತಿಳಿದುಕೊಂಡು ಅರ್ಥೈಸಿಕೊಳ್ಳುವುದು. ಅಂಕ ಕಡಿಮೆಯಾದರೂ ಚಿಂತೆ ಇಲ್ಲ. ಹೀಗೆ ಅರ್ಥ ಮಾಡಿಕೊಳ್ಳುವುದನ್ನು ಕಲಿತರೆ ಒಳ್ಳೆಯದು.
ಒಳ್ಳೆಯದನ್ನು ನೋಡುವುದನ್ನು ಕಲಿತರೆ, ಸುಂದರ ಮನಸ್ಸು, ಮಧುರ ಭಾವ ಮೂಡಿಸಿಕೊಂಡರೆ, ಪ್ರತಿ ಕುಟುಂಬ ಸುಂದರ ಸ್ವರ್ಗದ ತಾಣವಾಗುವುದು. ಸ್ವರ್ಗ ನಿರ್ಮಾಣ ಮಾಡುವುದು ಸುಂದರ ಮಾತು. ಒಡವೆ, ವಸ್ತ್ರ, ಸಂಪತ್ತುಗಳು ಸ್ವರ್ಗ ನಿರ್ಮಾಣ ಮಾಡುವುದಿಲ್ಲ. ಸುಂದರ ಮಾತು ಬರುವುದು. ಸುಂದರ ಮನಸ್ಸಿನಿಂದ. ಸುಂದರ ಭಾವನೆ ಮತ್ತು ಜ್ಞಾನದಿಂದ ಇಂತಹ ಸ್ವರ್ಗದ ಕುಟುಂಬ ನಮ್ಮದಾಗಲಿ ಅಲ್ಲವೇ ಮಕ್ಕಳೇ.....
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************