ಅಕ್ಕನ ಪತ್ರ - 40ಕ್ಕೆ : ಮಕ್ಕಳ ಉತ್ತರ : ಸಂಚಿಕೆ -1
Sunday, January 8, 2023
Edit
ಅಕ್ಕನ ಪತ್ರ - 40ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1
ಜಗಲಿಯ ಪ್ರೀತಿಯ ಅಕ್ಕನಿಗೆ ಭವ್ಯಶ್ರೀ ಮಾಡುವ ನಮಸ್ಕಾರಗಳು...
ನಾನು ಕ್ಷೇಮ ನೀವು ಕ್ಷೇಮ ಅಲ್ವಾ....?
2023.... ಅಬ್ಬಾ! ದಿನಗಳು ಅರಿವಿಲ್ಲದೆ ಸರಿದು ಹೋಗುತ್ತಿವೆ. ಬಾಲ್ಯದ ದಿನಗಳು ಎಲ್ಲಿ ಕಳೆದು ಹೋಗುವುದು ಎಂದು ಭಯವಾಗುತ್ತಿದೆ..
ಕ್ಯಾಲೆಂಡರ್ ನಲ್ಲಿ ವರ್ಷ ಬದಲಾವಣೆಯಾಗಿದೆ. ಶುಭಾಶಯ ಕೋರಿದ್ದೀರಿ.... ಧನ್ಯವಾದಗಳು...
ನಿಮಗೂ 2023ರ ನವ ಶುಭಾಶಯಗಳು. ಅಕ್ಕ.... ನನಗಂತೂ ಜಗಲಿಯಲ್ಲಿ ನಾನು ಹೊಸ ಹೊಸ ವಿಷಯಗಳನ್ನು ಕಲಿಯುತ್ತಿರುವುದೇ ನನಗೊಂದು ಹೊಸತನದ ಹರುಷ.
ಇದರ ನಡುವೆ ಕೊರೊನಾವು ಮತ್ತೆ ಆವರಿಸುತ್ತಿದೆ. ಎರಡು ವರ್ಷಗಳ ಸುಧೀರ್ಘ ಅವಧಿಯಲ್ಲಿ ದೇಶಕ್ಕೆ ವಕ್ಕರಿಸಿಕೊಂಡಿದ್ದ ಹೆಮ್ಮಾರಿ ಮತ್ತೆ ಬಂದಿದೆ... ಆದರೂ ಅದರ ಜೊತೆ ಹೋರಾಡುವುದರಲ್ಲಿ ನಮ್ಮ ದೇಶದ ವಿಜ್ಞಾನಿಗಳು ಔಷಧಿ ತಯಾರು ಮಾಡಿ ಯಶಸ್ಸನ್ನು ಗಳಿಸಿದ್ದಾರೆ.... ಹಾಗಾಗಿ ಈಗ ಜನರಲ್ಲಿ ಹೆಚ್ಚಿನ ಆತಂಕವು ಕಡಿಮೆಯಾಗಿದೆ.
ಈ ಸಲವೂ ಕೊರೋನಾ ಶಿಕ್ಷಣಕ್ಕೆ ಅಡ್ಡಿ ಮಾಡುವುದೋ ಎಂಬ ಆತಂಕ ಎಲ್ಲಾ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ.
ಕೊರೋನಾ ಕುರಿತಾದ ವದಂತಿಗಳನ್ನು ಕೇಳಿ ಆತಂಕ ಪಟ್ಟುಕೊಳ್ಳುವುದು ಒಳಿತಲ್ಲ. ನಮ್ಮ ಸರ್ಕಾರವು ಸದಾ ಕಾಲಕ್ಕೂ ನಮ್ಮ ಜೊತೆಗೆ ಕೈಜೋಡಿಸುತ್ತದೆ. ನಾವು ಲಸಿಕೆ ಪಡೆದುಕೊಂಡಿದ್ದರಿಂದ ಇಂದು ಕೊರೋನಾವು ಆದಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ.
ಸರಕಾರ ಹೇಳಿದ ಮುಂಜಾಗ್ರತಾ ಕ್ರಮಗಳನ್ನು ಪ್ರಾಮಾಣಿಕವಾಗಿ ಪಾಲಿಸಿದಾಗ ಮಾತ್ರ ಕೊರೋನಾದ ವಿರುದ್ಧ ಜಯಗಳಿಸಲು ಸಾಧ್ಯ.
ಪರೀಕ್ಷೆಯು ಹತ್ತಿರ ಬರುತ್ತಿದೆ ಜಗಲಿಯ ನನ್ನೆಲ್ಲ ಬಳಗದವರೂ ಪರೀಕ್ಷೆಗೆ ಓದಿ ಚೆನ್ನಾಗಿ ತಯಾರಾಗಿ ಉತ್ತಮ ಅಂಕದೊಂದಿಗೆ ಜಯಗಳಿಸಿ ಉಜ್ವಲ ಭವಿಷ್ಯಕ್ಕೆ ಹೆಜ್ಜೆ ಇಡಿ...
ಇನ್ನು ನನ್ನ ನಿಮ್ಮ ಭೇಟಿ ಮುಂದಿನ ಪತ್ರದಲ್ಲಿ.... ಅಲ್ಲಿಯವರೆಗೂ ನಮಸ್ಕಾರಗಳು....
ಪ್ರಥಮ ಪಿಯುಸಿ
ಸರಕಾರಿ ಪದವಿ ಪೂರ್ವ ಕಾಲೇಜು, ಕೊಣಾಲು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************
ನಮಸ್ತೆ ಅಕ್ಕ ನಾನು ಕ್ಷೇಮವಾಗಿದ್ದೇನೆ. ನೀವು ಕೂಡ ಕ್ಷೇಮವಾಗಿದ್ದೇವೆ ಎಂದು ಭಾವಿಸುತ್ತೇನೆ. ನಿಮ್ಮ ಪ್ರೀತಿಯ ಪತ್ರ ನನಗೆ ತಲುಪಿತು. ಮೊದಲನೆಯದಾಗಿ ಹೊಸ ವರ್ಷದ ಶುಭಾಶಯಗಳು ಅಕ್ಕ. ನೋಡ್ತ ನೋಡುತ್ತ ಒಂದು ವರ್ಷವೇ ಕಳೆದೋಯ್ತು. ನಾನು ಹೊಸ ವರ್ಷಕ್ಕೆ ಕಾಲಿಡುವ ಕ್ಷಣದಲ್ಲಿ ನನ್ನ ಮನೆಯಲ್ಲಿ ಒಂದು ಹೂವಿನ ಗಿಡವನ್ನು ನೆಟ್ಟಿದ್ದೇನೆ . 2023ರಲ್ಲಿ ಮೆದುಳು ಜ್ವರ ಆರೋಗ್ಯ ಇತ್ಯಾದಿ ತೊಂದರೆಗಳು ಬರಬಾರದು ಎಂಬುದು ನನ್ನ ಬಯಕೆ. ನನಗೆ ಅನಿಸುತ್ತದೆ ಸವಿ ಸವಿ ನೆನಪಿನೊಂದಿಗೆ ಹೊಸ ವರುಷ ಇರಬೇಕು. ನನಗೆ ತುಂಬಾ ಸಂತೋಷವಾಗುತ್ತಿದೆ. ಮತ್ತೊಂದು ಕಡೆಯಿಂದ ಸ್ವಲ್ಪ ಸ್ವಲ್ಪ ಬೇಜಾರಾಗುತ್ತಿದೆ ಏಕೆಂದರೆ ಇನ್ನು ನನ್ನ ಶಾಲೆಯಲ್ಲಿ ನಾನು ಎರಡು ತಿಂಗಳು ಮಾತ್ರ ಇರುತ್ತೇನೆಂದು. ಮತ್ತೆ ಬೇರೆ ಶಾಲೆಗೆ ಹೋಗುವೆ. ಮಾತನಾಡುತ್ತಾ ಹೊತ್ತು ಹೋದದ್ದೇ ನನಗೆ ಗೊತ್ತಾಗಲಿಲ್ಲ. ಮುಂದಿನ ಪತ್ರದಲ್ಲಿ ಸಿಗೋಣ ಅಲ್ಲಿವರೆಗೆ ಪ್ರೀತಿಯ ತಂಗಿ ಸಿಂಚನಾಳ ನಮನಗಳು ಧನ್ಯವಾದಗಳು.
5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೇಡಿಗುಳಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಅಕ್ಕನ ಪತ್ರ 40ಕ್ಕೆ ಶಿಶಿರನ ಉತ್ತರ
ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ಪ್ರೀತಿ ಹಾಗೂ ಗೌರವದ ನಮಸ್ಕಾರಗಳು. ನಿಮಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.2022ರಲ್ಲಿ ಅನುಭವಿಸಿದ ಸವಿನೆನಪುಗಳನ್ನು ನನ್ನ ನೆನಪಿನ ಜೋಳಿಗೆಗೆ ಹಾಕಿ ಹೊಸ ಹುಮ್ಮಸ್ಸಿನಲ್ಲಿ 2023ರಕ್ಕೆ ಕಾಲಿಡುತ್ತಿದ್ದೇನೆ. ನಿಮ್ಮ ಪತ್ರ ಓದಿದಾಗ ನನಗೆ ಕೋವಿಡ್ ಬಂಧನದ ದಿನಗಳಲ್ಲಿ ನಾವು ಅನುಭವಿಸಿದ ಸಿಹಿಕಹಿ, ಖುಷಿ ಹಾಗು ದುಖಃದ ಸಂಗತಿಗಳು ನೆನಪಾದವು. ನಾನಾಗ 7ನೇ ತರಗತಿಯಲ್ಲಿದ್ದೆ. ಲಾಕ್ ಡೌನ್ ನಿಂದಾಗಿ ಶಿಕ್ಷಣ ಸ್ಥಗಿತವಾಯಿತು. ಶಿಕ್ಷಕರ ಹಾಗೂ ಸಹಪಾಠಿಗಳ ಸಂಪರ್ಕವಿಲ್ಲದೆ ತುಂಬಾ ಬೇಸರದಲ್ಲಿದ್ದ ನನಗೇ ಆನ್ ಲೈನ್ ತರಗತಿಗಳ ಮೂಲಕ ಮನೆಯಲ್ಲಿಯೇ ತರಗತಿಗಳು ಪುನರಾರಂಭವಾದದ್ದು ಒಂದು ವರದಾನವಾಯಿತು. ಆ ಮೂಲಕ ನಮ್ಮ ಪ್ರೀತಿಯ ಶಿಕ್ಷಕ - ಶಿಕ್ಷಕಿಯರೊಂದಿಗೆ ಸಂಪರ್ಕವೇರ್ಪಟ್ಟಿತು. ಆಗ ಮಳೆಗಾಲವಾದುದರಿಂದ ಅಂತರ್ಜಾಲದ ಸಂಪರ್ಕದ ಕೊರೆತೆಯು ಅನೇಕ ಹಾಸ್ಯ ಪ್ರಸಂಗಗಳಿಗೆ ಕಾರಣವಾಯಿತು.
ಮನೆಯಲ್ಲಿಯೇ ಇರಬೇಕಾದ್ದರಿಂದ ಸಂಬಂಧಿಕರ ಮನೆಗೆ ಹೋಗುವಂತಿಲ್ಲ, ಗೆಳೆಯರ ಜೊತೆ ಬೆರೆಯುವಂತಿಲ್ಲದೇ ತುಂಬಾ ನಿರಾಸೆಯಲ್ಲಿದ್ದರೂ ಅಪ್ಪ , ಅಮ್ಮ, ಅಣ್ಣನೊಂದಿಗೆ ಸಂತೋಷದಿಂದ ಸಮಯ ಕಳೆಯುವ ಸದಾವಕಾಶ ದೊರೆಯಿತು. ಅಣ್ಣ ಮನೆಗೆ ಎರಡು ಪಾರಿವಾಳಗಳ ಜೋಡಿಗಳನ್ನು ತಂದ. ಅದಕ್ಕೆ ಆಹಾರ ನೀಡುತ್ತಾ , ಅದರ ಚಲನವಲನಗಳನ್ನು ಗಮನಿಸುತ್ತಾ ಸಮಯ ಕಳೆಯುತ್ತಿದ್ದೆ. ಸದಾ ಕೆಲಸದ ಒತ್ತಡದಲ್ಲಿರುತ್ತಿದ್ದ ಅಪ್ಪನ ಜೊತೆಗೆ ಸಂಜೆ ಹೊತ್ತಿನಲ್ಲಿ ಆಟ್ಟವಾಡ್ಡಿದು, ಪುಸ್ತಕಗಳನ್ನು ಓದಿದ್ದು, ಅಮ್ಮನಿಗೆ ಮನೆ ಕೆಲಸಗಳಲ್ಲಿ ಜೊತೆಯಾದದ್ದು ಇವೆಲ್ಲ ಲಾಕ್ ಡೌನ್ ನಮಗೆ ಒದಗಿಸಿದ ಸುಂದರ ಕ್ಷಣಗಳು.
ಅದೇ ಸಮಯದಲ್ಲಿ ಕೆಲವೊಂದು ಸಂಸ್ಥೆಗಳು ಆನ್ ಲೈನ್ ಸ್ಪರ್ಧೆಗಳನ್ನು ನಡೆಸುತ್ತಿತ್ತು. ಚಿತ್ರಕಲೆ, ಸಂಗೀತ, ಕಥೆ ಹೇಳುವಂತಹ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿದೆ. ಲಾಕ್ ಡೌನ್ ನಲ್ಲಿ ನಾನು , ನನ್ನ ಸಹಪಾಠಿಗಳೆಲ್ಲಾ ಸೇರಿ ಒಂದು ಆನ್ ಲೈನ್ ಗ್ರೂಪ್ ಮಾಡಿ ಅದರಲ್ಲಿ ನಾವೇ ಕೆಲವೊಂದು ಸ್ಪರ್ಧೆ, ಚರ್ಚಾಕೂಟಗಳನ್ನು ಏರ್ಪಡಿಸಿ ಸಂಭ್ರಮಿಸಿದೆವು. ಮನೆ ಮತ್ತು ತರಗತಿ ಕೋಣೆಯ ಹೊರತಾಗಿ ಹೊರ ಜಗತ್ತಿನೊಂದಿಗೆ ನಮ್ಮನ್ನು ಬೆಸೆದ ನಮ್ಮದೇ ಮಕ್ಕಳ ಜಗಲಿಯ ಸಂಪರ್ಕವಾದದ್ದು ಅದೇ ಸಮಯದಲ್ಲಿ. ಕೊರೊನ ಕಾಲ ಘಟ್ಟದಲ್ಲಿ ಎಷ್ಟೇ ನಕಾರಾತ್ಮಕ ಸಂಗತಿಗಳು ನಮ್ಮ ಕಿವಿಗೆ ಬೀಳುತ್ತಿದ್ದರೂ ಅದಕ್ಕೆಲ್ಲ ಕಿವಿಗೊಡದೆ ಸದಾ ಚಟುವಟಿಕೆಯಿಂದ ಸಕಾರಾತ್ಮಕವಾಗಿರಲು ಪ್ರಯತ್ನಿಸಿದೆವು.
ಕಳೆದ ಎರಡು ವರ್ಷಗಳಲ್ಲಿ (2020& 2021) ಜನರು ನಡೆಸಿದ ಕರಾಳ ಜೀವನ ಹಾಗೂ ಅನುಭವಿಸಿದ ಕತ್ತಲೆಯ ಕ್ಷಣಗಳು ಮತ್ತೆ ಬಾರದಿರಲಿ. 2023 ಹೊಸ ವರ್ಷ ನಮ್ಮೆಲ್ಲರಿಗೂ ಒಳಿತನ್ನೇ ನೀಡಲಿ ಎಂದು ಆಶಿಸುತ್ತಾ ನನ್ನ ಪತ್ರ ಕೊನೆಗೊಳಿಸುತ್ತೇನೆ. "ಹ್ಯಾಪಿ ನ್ಯೂ ಇಯರ್"
10ನೇ ತರಗತಿ
ಎಸ್.ಎಲ್. ಎನ್. ಪಿ. ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕಾ.... ನಾನು ನಿಭಾ. ನಿಮ್ಮ ಪತ್ರ ಓದಿ ತುಂಬಾ ಸಂತೋಷವಾಯಿತು. ನೀವು ಹೇಳಿದಂತೆ ಹೊಸದನ್ನು ಪ್ರಾರಂಭಿಸಲು ಹೊಸವರ್ಷವೇ ಆಗಬೇಕೆಂದೇನಿಲ್ಲ. ಪ್ರತಿದಿನವನ್ನೂ ಹೊಸದಿನವಾಗಿಟ್ಟುಕೊಂಡು ಹೊಸದನ್ನು ಆರಂಭಿಸೋಣ... ನೀವು ಹೇಳಿದಂತೆ ಕರೋನ ಈಗ ಮತ್ತೆ ಆವರಿಸುತ್ತಿದೆ. ಈಗ ಇನ್ನಷ್ಟು ಎಚ್ಚತುಕೊಳ್ಳಬೇಕಾಗಿದೆ. ಲಸಿಕೆಯನ್ನು ಕಾಲಕಾಲಕ್ಕೆ ಪಡೆದುಕೊಂಡವರಿಗೆ ಈ ಭಯ ಸ್ವಲ್ಪ ಕಡಿಮೆ ಇರುತ್ತದೆ. ಆದರೆ ಅಂದು ಕೊರೋನ ಹೋಯಿತು. ಎಂದು ನಿರ್ಲಕ್ಷಿಸಿದವರು ಈಗ ಮತ್ತೆ ಲಸಿಕೆಗಾಗಿ ಅಲೆಯಬೇಕಾಗಿದೆ. ಹೇಳಬೇಕೆಂದರೆ ಲಸಿಕೆ ಬೇಕಾಗಿರುವುದು ನಮ್ಮ ದೇಹಕ್ಕೆ ಮಾತ್ರವಲ್ಲ. ನಮ್ಮ ಮನಸ್ಸಿಗೂ ಕೂಡ. ಅದು ಎಂಥಹದೆ ಸಂದರ್ಭದಲ್ಲೂ ಕೂಡ ನಾವು ಧೈರ್ಯ ಕೆಡಬಾರದು. ಜೊತೆಗೆ ಭಯ ಪಡಬಾರದು. ನಮ್ಮ ಆತ್ಮಸ್ಥೈರ್ಯ ಕಳೆದು ಕೊಳ್ಳಬಾರದು. ಆತ್ಮವಿಶ್ವಾಸ ಒಂದಿದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳುತ್ತಾರೆ. ಅಂತಹದರಲ್ಲಿ ಈ ಕೊರೊನವನ್ನು ಎದುರಿಸಲಾಗದೆ?
ಯಾವತ್ತಿಗೂ ಧೈರ್ಯ ಕಳೆದುಕೊಳ್ಳಬೇಡಿ ಎಂದು ಹೇಳುತ್ತಾ ಮುಂದಿನ ಪತ್ರದಲ್ಲಿ ಮತ್ತೆ ಸಿಗೋಣ.
ಧನ್ಯವಾದಗಳು
9ನೇ ತರಗತಿ
ಸ. ಪ. ಪೂ. ಕಾಲೇಜು ಕೊಂಬೆಟ್ಟು
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೇ ಅಕ್ಕಾ,
ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು. ಇಲ್ಲಿ ನಾವೆಲ್ಲರೂ ಕ್ಷೇಮದಿಂದ ಇರುವೆವು. ನೀವೂ ಕೂಡ ಕ್ಷೇಮವೆಂದು ಭಾವಿಸುತ್ತೇನೆ.
ನಮ್ಮೆಲ್ಲರ ಮೆಚ್ಚಿನ ಮಕ್ಕಳ ಜಗಲಿಯಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಅಣ್ಣ ತಮ್ಮಂದಿರು ಹಾಗೂ ಅಕ್ಕ ತಂಗಿಯರಿಗೆ ನಮ್ಮೆಲ್ಲರ ಪರವಾಗಿ ಶುಭಾಶಯಗಳು.
ಕಳೆದು ಹೋದ ಸಮಯ ಮರಳಿ ಸಿಗಲಾರದು ನಾವು ಅದನ್ನು ಅರಿತುಕೊಂಡು ಮುಂದೆ ಬರುವ ಪ್ರತಿಯೊಂದು ಕ್ಷಣವೂ ಹೊಸತೇ ಎಂದು ಹೊಸ ಹೊಸ ಯೋಚನೆ ಯೋಜನೆಗಳನ್ನು ಮಾಡೋಣ. ಪ್ರತಿಯೊಬ್ಬ ಪ್ರಜೆಯೂ ಕೂಡ ಪ್ರಜ್ಞಾವಂತರಾಗಿ ಈಗಿನಿಂದಲೇ ಎಚ್ಚೆತ್ತು ಸರಕಾರವು ಹೇಳಿದ ಕ್ರಮಗಳಿಗೆ ಸ್ಪಂದಿಸಿದರೆ ಒಳಿತು. ಇಲ್ಲವಾದಲ್ಲಿ ಎಲ್ಲಿಯೋ ದೂರದ ಊರಿನಲ್ಲಿ ಬಂದಿದೆ ಅಷ್ಟೇ ಎಂದು ಸುಮ್ಮನೆ ಕುಳಿತರೆ ಮುಂದೆ ಕಳೆದ ಕೊರೋನ ಸಮಯದಲ್ಲಿ ಅನುಭವಿಸಿದ ಕಷ್ಟವನ್ನು ಅನುಭವಿಸ ಬೇಕಾದೀತು. ಆವತ್ತು ಜನರು ಅನುಭವಿಸಿದ ಕಷ್ಟವನ್ನೇ ಇನ್ನೂ ಕೂಡ ಮರೆಯಲು ಸಾಧ್ಯವೇ ಆಗುತ್ತಿಲ್ಲ. ನೀವು ಹೇಳಿದಂತೆ ನಮಗಿರುವ ಸಾಮಾಜಿಕ ಜವಾಬ್ದಾರಿಗಳಿಗೆ ಎಲ್ಲರೂ ಕೈ ಜೋಡಿಸೋಣ.
ಧನ್ಯವಾದಗಳು ಅಕ್ಕಾ.....
8ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************
ಮಕ್ಕಳ ಜಗಲಿ... ಅಕ್ಕನ ಪತ್ರ--40
ಪ್ರೀತಿಯ ಅಕ್ಕ... ನಿಮ್ಮ ಪ್ರೀತಿಯ ಲಹರಿಯು ಮಾಡುವ ನಮಸ್ಕಾರಗಳು... ಪತ್ರ ಬರೆಯುವಾಗ ಸ್ವಲ್ಪ ತಡೆಯವಾಯಿತು... ಕ್ಷಮಿಸಿ ಅಕ್ಕ.. ನೀವು ತಿಳಿಸಿದ ವಿಚಾರಗಳು ಖಂಡಿತವಾಗಿಯೂ ಸತ್ಯ. ಕೊರೋನದ ದಿನಗಳನ್ನು ನೆನೆಯುವಾಗ ಈಗಲೂ ಭಯವೆನಿಸುವುದು... ನಾವು ಶಾಲೆ, ಪುಸ್ತಕ ಎಲ್ಲವನ್ನು ಮರೆತು ಮನೆಯೊಳಗೆ ಬಂದಿಯಾಗಿದ್ದೆವು.. ಆಟವಿಲ್ಲ, ಪಾಠವಿಲ್ಲ, ಗೆಳೆಯರೊಂದಿಗೆ ಒಡನಾಟವಿಲ್ಲ... ಎಲ್ಲರೊಂದಿಗೆ ಹೊರಗಡೆ ಪ್ರವಾಸ ಹೋಗುವಂತಿಲ್ಲ... ತುಂಬಾ ಬೋರ್ ಹೊಡೆಸಿತ್ತು ಕರೋನಾ ದಿನಗಳು... ಇನ್ನಂತೂ ಆ ದಿನಗಳು ಬೇಡವೇ ಬೇಡ... ನಿಮ್ಮ ಕಾಳಜಿ ತುಂಬಿದ ಮಾತುಗಳಿಗೆ ತುಂಬಾ ಧನ್ಯವಾದಗಳು ಅಕ್ಕ.. ನೀವು ಹೇಳಿದಂತೆ ನಿಜವಾಗಿಯೂ ಎಲ್ಲರೂ ಇದರ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ... ಮರೆತೇ ಬಿಟ್ಟಿದ್ದೆ... ಅಕ್ಕ ನಿಮಗೂ ಹಾಗೂ ಜಗಲಿಯ ಎಲ್ಲಾ ಪ್ರೀತಿಯ ಬಂಧುಗಳಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.. ಹೊಸ ವರ್ಷ ಎಲ್ಲರಲ್ಲೂ ಸಂತೋಷ ಸೌಭಾಗ್ಯವನ್ನು ತುಂಬಲಿ ಎಂದು ದೇವರಲ್ಲಿ ಪ್ರಾರ್ಥಿಸುವೆನು.. ನಾನು ಮೂಡಬಿದಿರೆಯಲ್ಲಿ ನಡೆದ ಜಾಂಬೂರಿ ಸಾಂಸ್ಕೃತಿಕ ಉತ್ಸವಕ್ಕೆ ಹೋಗಿದ್ದೆ.. ಅಲ್ಲಿ ನಾನು ಹೊಸ ಪ್ರಪಂಚವನ್ನೇ ನೋಡಿದ್ದೆ... ಅಲ್ಲಿ ಮಕ್ಕಳ ಜಗಲಿಯ ತಾರನಾಥ ಸರ್ ಅವರನ್ನು ಭೇಟಿಯಾಗಲು ಇಷ್ಟಪಟ್ಟಿದ್ದೆ... ಆದರೆ ಕಾರಣಾಂತರಗಳಿಂದ ಆಗಲಿಲ್ಲ... ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುವೆನು ಅಕ್ಕ... ಇಂತಿ ನಿಮ್ಮ ಪ್ರೀತಿಯ ಲಹರಿ.
8ನೇ ತರಗತಿ
ತುಂಬೆ ಇಂಗ್ಲಿಷ್ ಮೀಡಿಯಂ ಸ್ಕೂಲ್ ತುಂಬೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಎಲ್ಲರಿಗೂ ನಮಸ್ಕಾರಗಳು. ನಾನು ಪ್ರಣಮ್ಯ. ಅಕ್ಕ ಈ ವಾರ ನಮಗಾಗಿ ಬರೆದ ಪತ್ರ ಬಹಳ ಚೆನ್ನಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ತನ್ನ ಅಟ್ಟಹಾಸದಿಂದ ಭೂಮಿಯನ್ನು ನಡುಗಿಸಿ, ಜನರನ್ನು ತನ್ನ ಕಪಿಮುಷ್ಟಿಯಲ್ಲಿ ಸಿಲುಕಿಸಿ, ನರಳಾಡುವಂತೆ ಹಿಂಸಿಸಿದ ಕೊರೋನಾ ಎಂಬ ಮಹಾಮಾರಿಯಿಂದ ನಮಗೆಲ್ಲಾ ಹೇಗೋ ಬಿಡುಗಡೆ ಸಿಕ್ಕಿತು ... ! ಎಂದು ಸಂಭ್ರಮಿಸುತ್ತಿದ್ದ ಬೆನ್ನಲ್ಲೇ, ಇದೀಗ ಮತ್ತೆ ಹೊಸ ಅವತಾರವನ್ನು ತಾಳಿ, ನಮ್ಮತ್ತ ವೇಗವಾಗಿ ಧಾವಿಸುತ್ತಿರುವ ಕೊರೋನಾದ ಬಲೆಗೆ ನಾವು ಬೀಳಬಾರದು. ಕೊರೋನಾದ ತಡೆಗೆ ಸರ್ಕಾರ ಕೈಗೊಳ್ಳುವ ನಿಯಮಗಳನ್ನು ನಾವೆಲ್ಲಾ ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ. ದೇಶದ ಹಿತ ರಕ್ಷಣೆಗಾಗಿ ನಾವೆಲ್ಲರೂ ಕೈಜೋಡಿಸಬೇಕು. ಆದ್ದರಿಂದ ಕೊರೋನಾ ನಿರ್ಮೂಲನೆಗಾಗಿ ಕೊಡಲ್ಪಡುವ ಲಸಿಕೆಗಳನ್ನು ನಾವು ಯಾವುದೇ ರೀತಿಯ ಭಯ, ನಕಾರಾತ್ಮಕ ಭಾವನೆಗಳಿಲ್ಲದೆ ತೆಗೆದುಕೊಳ್ಳುವುದು ಅನಿವಾರ್ಯ ಎಂಬುವುದು ನನ್ನ ಅನಿಸಿಕೆ.
10 ನೇ ತರಗತಿ
ಸಂತಜಾರ್ಜ್ ಆಂಗ್ಲಮಾಧ್ಯಮ
ಪ್ರೌಢಶಾಲೆ ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************