-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 40

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 40

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 40

ನಮಸ್ತೆ ಮಕ್ಕಳೇ,
      ಹೇಗಿದ್ದೀರಿ? ಚಳಿ ಕಡಿಮೆ ಇರುವ ಚಳಿಗಾಲದ ಜೊತೆ ವರ್ತಮಾನದ ಆಗುಹೋಗುಗಳಿಗೆ ಮೂಕ ಸಾಕ್ಷಿ ಗಳಾಗುತ್ತಿದ್ದೇವೆ ಅಲ್ವಾ?
ಕ್ಯಾಲೆಂಡರ್ ನಲ್ಲಿ ವರ್ಷ ಬದಲಾಗಿದೆ. ಹೊಸ ವರ್ಷವೆಂದರೆ ವಿಶೇಷ ಪುಳಕ. ಶುಭಾಶಯಗಳು ನಿಮಗೆಲ್ಲರಿಗೂ. ಬದಲಾವಣೆ ಬಯಸುವವರು ಹೊಸ ವರ್ಷಕ್ಕಾಗಿ ಕಾಯುವುದಿಲ್ಲ. ಪ್ರತಿ ಬೆಳಗೂ ಹೊಸತೇ.... ರಾತ್ರಿಯಾಯಿತೆಂದರೆ, ಆ ದಿನ ಬದುಕಿನ ಇತಿಹಾಸದ ಪುಟ ಸೇರಿಯಾಯಿತು. ಇದು ಅಂಥದೇ ಬೆಳಗು. ಯೋಚನೆ ಯೋಜನೆಗಳನ್ನು ಕಾರ್ಯಗತ ಮಾಡಬೇಕೆಂದಿದ್ದರೆ ಆರಂಭಿಸಿ. ವರುಷ ತುಂಬಾ ನವೋಲ್ಲಾಸ ತುಂಬಿರಲಿ. ಶುಭವಾಗಲಿ ಎಲ್ಲರಿಗೂ.
      ಈ ನಡುವೆ ನಮ್ಮನ್ನು ಎರಡು ವರ್ಷಗಳ ಕಾಲ ಬಂಧನದಲ್ಲಿರಿಸಿ ಅಟ್ಟಹಾಸ ಮೆರೆದು ಜಗತ್ತನ್ನು ತಲ್ಲಣಗೊಳಿಸಿದ ಕೊರೋನಾ ಮತ್ತೆ ಆವರಿಸುವ ಮುನ್ಸೂಚನೆ....! ಜಾಗೃತಗೊಳ್ಳುವ ಕಾಳಜಿಗಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ನಮ್ಮ ಮುಂದಿದೆ.
        ವೈಜ್ಞಾನಿಕ ಲೋಕಕ್ಕೆ ಸವಾಲಾಗಿ ಕಾಡಿದ ಕೊರೋನಾ ಸಾಂಕ್ರಾಮಿಕ ದ ವಿರುದ್ಧ ಹೋರಾಟ ಮಾಡಿದ ಲಸಿಕೆ ಜಯಗಳಿಸಿದೆ.... ಆ ಕಾರಣಕ್ಕಾಗಿ ನಾವೀಗ ಒಂದಷ್ಟು ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ. ಜನರು ಲಸಿಕೆಗಳನ್ನು ಪಡೆಯಲು ಆರೋಗ್ಯ ಇಲಾಖೆ ಪಟ್ಟ ಶ್ರಮ, ಪ್ರಜ್ಞಾವಂತರಿಗೆ ಪಾಠವಾಗಬೇಕು. ಅನಾವಶ್ಯಕ ಗೊಂದಲಗಳನ್ನು ಸೃಷ್ಟಿಸಿಕೊಂಡು ಭಯಭೀತರಾದ ಜನರು ನಮ್ಮ ನಡುವಿದ್ದಾರೆ. ನಮ್ಮದೇ ಮನೆಗಳಲ್ಲಿ ಹಿರಿಯರಿದ್ದಾರೆ. ರೋಗ ಉಲ್ಬಣದ ಮೂಲ ಈ ಭಯ.
ಎರಡು ಡೋಸ್ ಗಳನ್ನು ಪಡೆದುಕೊಂಡವರಿಗೆ ಬೂಸ್ಟರ್ ಡೋಸ್ ಗಳನ್ನು ಪಡೆಯುವ ಅವಕಾಶವಿದೆ. ಈ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಮುಂದಿನ‌ ಖುಷಿಯ ದಿನಗಳು ನಮ್ಮದಾಗುತ್ತವೆ. ಈಗಾಗಲೇ ಲಸಿಕೆಗಳನ್ನು ಪಡೆದಿರುವುದರಿಂದ ನಮ್ಮ ದೇಶಕ್ಕೆ ಅಪಾಯ ಕಡಿಮೆ ಎನ್ನುವ ಶುಭಸುದ್ದಿ ಸತ್ಯವಾಗಬೇಕಾದರೆ, ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸುವ ಅನಿವಾರ್ಯತೆ ಇದೆ.
       ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ ಅಲ್ವಾ? ಸರಕಾರಗಳು ಸೂಚಿಸುವ ನಿಯಂತ್ರಣ ಕ್ರಮಗಳಿಗೆ ಜವಾಬ್ದಾರಿ ಯಿಂದ ಸ್ಪಂದಿಸದಿದ್ದರೆ ಮತ್ತೊಂದು ಬಂಧನದ ಭಯ ಖಂಡಿತವಾಗಿಯೂ ನಿಜವಾಗಬಹುದು. ಎಲ್ಲ ಚಟುವಟಿಕೆಗಳನ್ನೂ ನಿಯಂತ್ರಿಸಿ ಬದುಕಿನ ಸ್ವಾತಂತ್ರ್ಯವನ್ನೇ ಕಸಿದುಕೊಂಡ ಈ ಮಹಾಮಾರಿಯ ವಿರುದ್ಧದ ಸಂಘಟಿತ ಹೋರಾಟಕ್ಕಾಗಿ ನಮ್ಮ ನಡುವೆ ಮಾಹಿತಿ ಕೊರತೆಯಿಂದ ಅಥವಾ ಇನ್ಯಾವುದೋ ಅನಾವಶ್ಯಕ ಭಯದಿಂದ ದೂರ ಸರಿಯುವವರ ನಡುವೆ ಭರವಸೆಯ ಎಳೆಯನ್ನು ಬೆಸೆಯಬೇಕಿದೆ. ಗೆಳೆಯ ಗೆಳತಿಯರೇ, ಶಾಲೆಗೆ ಹೋಗುತ್ತಿದ್ದೇವೆ ಎಂದಾದರೆ ವಿದ್ಯಾವಂತರು ನಾವು... ನಮಗಿರುವ ಸಾಮಾಜಿಕ ಜವಾಬ್ದಾರಿಗಳನ್ನು ನಾವೇ ಪಟ್ಟಿಮಾಡಿಕೊಂಡು ಪ್ರಜ್ಞಾವಂತಿಕೆಯನ್ನು ಮೆರೆಯೋಣ. ನಮ್ಮೆಲ್ಲರ ಮನೆ ಮನಗಳು ಸ್ವಸ್ಥವಾಗಲಿ. ಜೊತೆಯಾಗ್ತೀರಿ ಅಲ್ವಾ?
      ಜಗಲಿಯಲ್ಲಿ ನಮ್ಮ ಮಾತುಕತೆ ಜ್ಞಾನ ಮಾಹಿತಿ ಅನುಭವಗಳ ಕೊಡುಕೊಳ್ಳುವಿಕೆಯ ಮೂಲಕ ಬದುಕಿನ ಪಾಠವಾಗುತ್ತಿದೆ ಎನ್ನುವುದನ್ನು ಅನಾವರಣಗೊಳಿಸುತ್ತಿರುವುದು ನಿಮ್ಮ ಪತ್ರಗಳು. ಅರುಣಿಮಾ ಸಿನ್ಹಾರಂತೆ ಬದುಕಿನ‌ ಕಷ್ಟಗಳನ್ನು ಜಯಿಸಿದ ಸಾಧಕರ ಕಥೆಗಳನ್ನು ಹಂಚಿಕೊಂಡ ಪ್ರೌಢ ಪತ್ರಗಳನ್ನು ಬರೆದ ಭವ್ಯಶ್ರೀ , ಶಿಶಿರ್ ಎಸ್, ಸಿಂಚನಾ ಶೆಟ್ಟಿ, ಶ್ರಾವ್ಯ, ಸಾತ್ವಿಕ್ ಗಣೇಶ್ ನಿಮಗೆ ವಿಶೇಷ ವಾದ ವಂದನೆಗಳು. ಜಗಲಿಯ ಎಲ್ಲ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಗೆಳಯ ಗೆಳತಿಯರೂ ನಿಮ್ಮ ಅನಿಸಿಕೆಗಳನ್ನು ಪತ್ರಗಳ ಮೂಲಕ ತಿಳಿಸಬಹುದು.  
     ಈ ಸಲದ ವಿಚಾರದ ಕುರಿತು ಏನನ್ನಿಸಿತು? ಕೋವಿಡ್ ಬಂಧನದ ದಿನಗಳಲ್ಲಿನ ನಿಮ್ಮ ಅನುಭವಗಳು ಮತ್ತು ಇನ್ನು ಮುಂದಿನ ಜವಾಬ್ದಾರಿ ಗಳ ಕುರಿತು ಅಭಿಪ್ರಾಯಗಳನ್ನು ಬರೆದು ಕಳಿಸ್ತೀರಲ್ಲಾ....?
    ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************

Ads on article

Advertise in articles 1

advertising articles 2

Advertise under the article