-->
ಪ್ರೀತಿಯ ಪುಸ್ತಕ : ಸಂಚಿಕೆ - 43

ಪ್ರೀತಿಯ ಪುಸ್ತಕ : ಸಂಚಿಕೆ - 43

ಪ್ರೀತಿಯ ಪುಸ್ತಕ
ಸಂಚಿಕೆ - 43

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

                                        ಭೀಲರ ಒಂದು ಕಥೆ              ಪ್ರೀತಿಯ ಮಕ್ಕಳೇ..... ಈ ಪುಸ್ತಕದ ಬಗ್ಗೆ ನಿಮಗೆ ಹೇಳುವಾಗ ಕಥೆಗಿಂತ ಮೊದಲು ಇದರಲ್ಲಿರುವ ಚಿತ್ರಗಳ ಬಗ್ಗೆಯೇ ಹೇಳಬೇಕು. ಅಷ್ಟು ವಿಶೇಷವಾಗಿ ಇವೆ ಇದರ ಚಿತ್ರಗಳು. ದಟ್ಟವಾದ ಬಣ್ಣಗಳು, ಚುಕ್ಕೆ ಚುಕ್ಕೆ ತುಂಬಿದ ಚಿತ್ರಗಳು. ನೋಡಿದಷ್ಟೂ ನೋಡುವ ಹಾಗೆ ಇವೆ. ಇವು ಮಧ್ಯಪ್ರದೇಶದ ಬುಡಕಟ್ಟು ಜನಾಂಗದವರ ಬದುಕಿನ ಒಂದು ಚಿತ್ರಣವನ್ನು ಕೊಡುತ್ತದೆ. ಬಣ್ಣದ ಚಿತ್ರ ಬರೆಯುವುದು ಇವರಿಗೆ ಪ್ರಾರ್ಥನೆ ಇದ್ದಂತೆ. ಅವರು ತಮ್ಮ ದಿನನಿತ್ಯದ ಬದುಕಿನ ಭಾಗಗಳಾದ ಮರಗಳ, ಪ್ರಾಣಿಗಳ, ಪೌರಾಣಿಕ ಚಿತ್ರಗಳ, ಹಬ್ಬಗಳ ಚಿತ್ರಗಳನ್ನು ಬರೆಯುತ್ತಾರೆ. ಹಬ್ಬಗಳ ಮುಂಚೆ ತಮ್ಮ ಮನೆಗಳ ಗೋಡೆಗಳ ಮೇಲೆ ಚಿತ್ರ ಬರೆಯುವ ಸಂಪ್ರದಾಯವೂ ಇದೆ. ಈ ಪುಸ್ತಕದಲ್ಲಿ ಒಂದು ಪುಟ್ಟ ಕಥೆ ಇದೆ. ಬಡ ಹುಂಜಕ್ಕೆ ಗಂಟಲು ಒಣಗಿ ಹೋಗಿದೆ; ಕೊ ಕ್ಕೋ ಅಂತ ಕೂಗಬೇಕಾದರೆ ಧ್ವನಿ ಬರದೆ ‘ಕುಕ್ ಕುಕ್‘ ಅಂತ ಆಗುತ್ತಿದೆ. ಹಳ್ಳಿಯ ಕೆರೆಯಲ್ಲಿ ಒಂದು ಹನಿ ನೀರಿಲ್ಲ. ಈಗ ಮಳೆ ತರಿಸುವುದು ಹೇಗೆ? ಎಂಬುದು ಪ್ರಶ್ನೆ. ದೇವರನ್ನು ಮಳೆ ತರಿಸುವಂತೆ ಕೇಳಿಕೊಳ್ಳಬೇಕು.. ಯಾರು ಕೇಳುವುದು? ಹೇಗೆ ಕೇಳುವುದು? ಓದಿ ನೋಡಿ.. ಆಮೇಲೆ ಈ ರೀತಿಯ ಚಿತ್ರಗಳನ್ನೂ ಮಾಡಲು ಹೊರಡಿ. ನಾನು ಮತ್ತು ನನ್ನ ಪುಟ್ಟ ಸ್ನೇಹಿತರಾದ ದಕ್ಷ, ಜಾಜಿ ಈ ಪುಸ್ತಕ ಓದಿದ ಮೇಲೆ ಇಂತಹ ಚಿತ್ರಗಳನ್ನು ಬಿಡಿಸಿದೆವು. ಪುಸ್ತಕದಷ್ಟು ಚಂದ ಆಗಲಿಲ್ಲ; ಆದರೂ ಖುಶಿಪಟ್ಟೆವು. 
ಲೇಖಕರು: ಶೇರ್ ಸಿಂಹ್ ಭೀಲ್ ಮತ್ತು ನೀನಾ ಸಬ್ನಾನಿ
ಅನುವಾದ: ಲೀಲಾ ಗರಡಿ
ಚಿತ್ರಗಳು: ಶೇರ್ ಸಿಂಹ್ ಭೀಲ್ ಮತ್ತು ನೀನಾ ಸಬ್ನಾನಿ
ಪ್ರಕಾಶಕರು: ತುಲಿಕಾ 
ಬೆಲೆ: ರೂ.175
5+ ವಯಸ್ಸಿವರಿಗಾಗಿ ಇದೆ. ಚಿತ್ರಗಳನ್ನು ಚಿಕ್ಕವರೂ ದೊಡ್ಡವರೂ ಆನಂದಿಸುವ ಹಾಗೆ ಇವೆ
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

     

Ads on article

Advertise in articles 1

advertising articles 2

Advertise under the article