-->
ಪ್ರತಿಫಲನ : ಸಂಚಿಕೆ - 12

ಪ್ರತಿಫಲನ : ಸಂಚಿಕೆ - 12

ಪ್ರತಿಫಲನ : ಸಂಚಿಕೆ - 12
ಮಕ್ಕಳಿಗಾಗಿ ಲೇಖನ ಸರಣಿ

           

       ಜನವರಿ  ಬಂತೆಂದರೆ ಪರೀಕ್ಷೆಯ ಹವಾ… ಪ್ರೌಢಶಾಲೆಗಳಲ್ಲಂತೂ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳಿಗೆ ಪೂರ್ವಭಾವಿಯಾಗಿ ಪೂರ್ವ ಸಿದ್ಧತಾ ಪರೀಕ್ಷೆಗಳು ತಾಲೂಕು,  ಜಿಲ್ಲೆ ಮತ್ತು ರಾಜ್ಯ ಹಂತಗಳಲ್ಲಿ ನೆರವೇರುತ್ತವೆ. ಎಲ್ಲಾ ಪಾಠಗಳನ್ನು ಮುಗಿಸಿದ ಶಿಕ್ಷಕರು ಪ್ರಶ್ನೋತ್ತರಗಳು, ಪುನರ್ಮನನ, ಸಂಭಾವ್ಯ  ಪ್ರಶ್ನೆಗಳ ಪಟ್ಟಿಗಳು, ಅವುಗಳಿಗೆ ಉತ್ತರಗಳು, ಅತಿ ಹೆಚ್ಚು ಬಾರಿ ಪುನರಾವರ್ತಿತಗೊಂಡ ಪ್ರಶ್ನೆಗಳು ಹೀಗೆ ಬೇರೆ ಬೇರೆ ರೀತಿಯಲ್ಲಿ ತಮ್ಮ ತಮ್ಮ ವಿಷಯಗಳನ್ನು ಸಬಲಗೊಳಿಸಲು ಸಾಕಷ್ಟು  ಪಾಡು ಪಡುತ್ತಾರೆ.
     ವಿದ್ಯಾರ್ಥಿಗಳಾದ ನಿಮಗಾದರೋ  ಯಾವ ವಿಷಯ ಕಲಿಯಲಿ ಯಾವ ವಿಷಯ ಬಿಡಲಿ...?  ಅದು ಮುಖ್ಯವೇ, ಇದು ಮುಖ್ಯವೇ,  ಕಲಿತದ್ದನ್ನು ಹೇಗೆ ನೆನಪಿಟ್ಟುಕೊಳ್ಳಲಿ,‌ ನೆನಪಿಟ್ಟದ್ದನ್ನು ಹೇಗೆ ಬರೆಯಲಿ,  ಬರೆದದ್ದು  ಸರಿಯಾಗದಿದ್ದರೆ ಗುರುಗಳ ಬೇಸರಕ್ಕೆ ಏನೆಂದು ಉತ್ತರಿಸಲಿ, ಮನೆಯವರ ನಿರೀಕ್ಷೆಗೆ ಹೇಗೆ ಪ್ರತಿಕ್ರಿಯಿಸಲಿ ಎಂಬೆಲ್ಲಾ ಗೊಂದಲಗಳು ಸಹಜವಾಗಿಯೇ ಕಾಡುತ್ತವೆ. 
   ‌   ಅಷ್ಟು ಮಾತ್ರವಲ್ಲ ಕಲಿಕೆ ಏಕತಾನತೆಗೊಳಗಾದಾಗ ಬೇಸರ, ಜಡತೆ, ನಿರಾಶೆಗಳು ಜತೆಯಾಗುತ್ತವೆ.  ಇಂತಹ ಗೊಂದಲಮಯ ಸನ್ನಿವೇಶಕ್ಕೆ ಸಾಧ್ಯವಾದಷ್ಟು ಪರಿಹಾರ ಹುಡುಕುವ ಪ್ರಯತ್ನ ಮಾಡೋಣವೇ. ಬನ್ನಿ ನನ್ನ ಜೊತೆ…
      CHANGE OF A WORK IS A LEISURE  ಎಂಬ ಮಾತಿದೆ. ಅದರಂತೆ ವಿವಿಧ ವಿಷಯಗಳನ್ನು ಓದುವ ಮುನ್ನ  ಒಂದಷ್ಟು ವಿರಾಮವನ್ನು ಪಡೆಯಬೇಕು ಅಥವಾ ಒಂದು ವಿಷಯದ ಬಗ್ಗೆ ಪರೀಕ್ಷೆಗಾಗಿ ನಿರಂತರ ಓದುತ್ತಾ ಸಾಗಿದಾಗ ಸಹಜವಾಗಿಯೇ ಮರೆವು ಏಕತಾನತೆ ನಿರುತ್ಸಾಹ ನಿಮ್ಮನ್ನು ಕಾಡುತ್ತದೆ. ಅದು ತಪ್ಪಲ್ಲ.‌ ಏಕೆಂದರೆ ಸಾಧಾರಣ 40 ರಿಂದ 45 ನಿಮಿಷಗಳ ಕಾಲ ಮಾತ್ರ ನಮ್ಮ ಮೆದುಳು ಒಂದು ವಿಷಯವನ್ನು ಕೇಂದ್ರೀಕರಿಸಿರುತ್ತದೆ, ನಂತರ ಸಹಜವಾಗಿಯೇ ಅದು ತನ್ನ ಯೋಚನೆಯನ್ನು ಬೇರೆಡೆಗೆ ಹರಿಸುವ ಮೂಲಕ ನಮ್ಮಲ್ಲಿ ಉದಾಸೀನ ಭಾವವನ್ನು ಉಂಟುಮಾಡುತ್ತದೆ.
      ಅದಕ್ಕಾಗಿ ಒಂದಷ್ಟು ಆಟಗಳ ಮೂಲಕ ನಮ್ಮ ಮೆದುಳನ್ನು ಕ್ರಿಯಾಶೀಲಗೊಳಿಸಬಹುದು.  ಮಾತ್ರವಲ್ಲದೆ ಚುರುಕುಗೊಳಿಸಬಹುದು ಹೇಗೆನ್ನುವಿರಾ….   ಕೆಲವು ದೈಹಿಕ ಮಾನಸಿಕ ವ್ಯಾಯಾಮಗಳನ್ನು ರೂಢಿಸಿಕೊಳ್ಳೋಣ.
▪️ ನೀವು ನಿಂತಲ್ಲಿಂದ 20 ಹೆಜ್ಜೆಗಳಷ್ಟು ಹಿಂದಕ್ಕೆ ನಡೆಯಲು ಪ್ರಯತ್ನಿಸಿ.
▪️ ತಾರಸಿಯ ಅಂತಸ್ತಿನ ಮೆಟ್ಟಿಲುಗಳನ್ನು ಹಿಮ್ಮುಖವಾಗಿ  ಹತ್ತಲು ಪ್ರಯತ್ನಿಸಿ. ಹೆಚ್ಚಿನ ಜಾಗರೂಕತೆ  ಅವಶ್ಯ ನೆನಪಿಡಿ.
▪️ ಒಂದರಿಂದ ನೂರರವರೆಗಿನ ಅಂಕೆಗಳನ್ನು ಇಳಿಕೆಯ ಕ್ರಮದಲ್ಲಿ  ವೇಗವಾಗಿ‌ ಹೇಳೋಣ.
▪️ ಒಂದು ಚೌಕಾಕಾರದ ಬಿಳಿಯ ಖಾಲಿ ಹಾಳೆಯನ್ನು ತೆಗೆದುಕೊಳ್ಳಿ ಅದನ್ನು ಮಧ್ಯಭಾಗಕ್ಕೆ ಬರುವಂತೆ ನಾಲ್ಕು ಭಾಗಗಳಾಗಿ ಮಡಚಿ ಮತ್ತೆ ಮತ್ತೆ ಅತ್ಯಂತ ಸಣ್ಣದಾಗುವವರೆಗೂ ಮಡಚುತ್ತಾ ಸಾಗಿ.  ಈಗ ಕಾಗದವನ್ನು ಬಿಡಿಸಿಕೊಳ್ಳಿ.  ಆ ಕಾಗದದಲ್ಲಿ ಮೂಡಿರುವ ಗೆರೆಗಳ ಮೇಲೆ ಪೆನ್ನಿನಿಂದ ಜಾಗರೂಕತೆಯಿಂದ ಗೆರೆಗಳನ್ನು ಎಳೆಯಿರಿ.. 
▪️ ಅಮ್ಮ ಚಪಾತಿ ಮಾಡುವಾಗ ಒಂದಷ್ಟು ಹಿಟ್ಟನ್ನು ತೆಗೆದುಕೊಳ್ಳಿ ಅದನ್ನು ಮತ್ತೆ ಮತ್ತೆ ನಾದಿಕೊಳ್ಳಿ. ಆ ಹಿಟ್ಟಿನಿಂದ ನಿಮಗೆ ಬೇಕಾದ ಕೆಲವು ಆಕಾರಗಳನ್ನು ಮಾಡಿ ಮತ್ತೆ ಹಿಟ್ಟನ್ನು ಮೊದಲ ರೂಪಕ್ಕೆ ತನ್ನಿ ಮತ್ತೆ ವಿವಿಧ ಆಕೃತಿಗಳು ಮೂಡಲಿ. ಈ ಎಲ್ಲ ಕೆಲಸ ಉತ್ತಮ ಬರವಣಿಗೆಗೂ ಪೂರಕ ನೆನಪಿಡಿ.
▪️ ಕಾಗದವೊಂದರಲ್ಲಿ ಭಾರತದ ನಕ್ಷೆಯನ್ನು ಬಿಡಿಸಿಕೊಂಡು ಅದನ್ನು ಎಂಟು ತುಂಡುಗಳನ್ನಾಗಿ  ಹರಿಯಿರಿ ಮತ್ತೆ ಅದನ್ನು ಜೋಡಿಸಿರಿ.
▪️ ಬೇರೆ ಬೇರೆ  ನೆನಪಿನ ಆಟಗಳನ್ನಾಡಿರಿ. ಒಂದಷ್ಟು ಹೂವುಗಳ ಹೆಸರು ಅಥವಾ ತಿಂಡಿಗಳ ಹೆಸರುಗಳನ್ನು  ವೇಗವಾಗಿ ಒಂದೇ ಉಸಿರಿನಲ್ಲಿ ಹೇಳುತ್ತಾ ಸಾಗುವುದು ಹೀಗೆ…
▪️ ಒಂದಷ್ಟು  ಕಲ್ಲುಗಳನ್ನು ಆರಿಸಿಕೊಳ್ಳಿ ಅವುಗಳಲ್ಲಿ ದೊಡ್ಡ ಕಲ್ಲನ್ನು ಕೆಳಭಾಗದಲ್ಲಿಟ್ಟು  ಸಣ್ಣ ಸಣ್ಣ ಕಲ್ಲುಗಳನ್ನು ಅದರ ಮೇಲೆ  ಜೋಡಿಸುತ್ತಾ ಬನ್ನಿ. ಈಗ ಸಣ್ಣ ಕಲ್ಲನ್ನು ಕೆಳಗಿಟ್ಟು ಅದರ ಮೇಲೆ ದೊಡ್ಡ ಕಲ್ಲುಗಳನ್ನು ಜತನದಿಂದ  ಜೋಡಿಸುತ್ತಾ ಸಾಗಿ. ಈ ಚಟುವಟಿಕೆನಗಳನ್ನು ಮಾಡುತ್ತಾ ಸಾಗಿದಾಗ ನಿಮ್ಮ ಮನಸ್ಸು ಹಗುರಾಗಿ ಮೆದುಳು ಪೂರ್ಣ ಕ್ರಿಯಾಶೀಲಗೊಂಡು ಇಮ್ಮಡಿ ಉತ್ಸಾಹದಿಂದ ಕಲಿಕೆಗೆ  ಸಿಧ್ಧಗೊಳ್ಳುತ್ತದೆ.
      ಓದುವ ಸಂದರ್ಭದಲ್ಲಿ ಸಹಜವಾಗಿಯೇ  ದೇಹವು ಬಿಸಿಯಾಗುತ್ತದೆ. ಜ್ವರವೆಂದು ಹೆದರದಿರಿ.  ಸಾಕಷ್ಟು ನೀರು ಕುಡಿಯಿರಿ. ರಾತ್ರಿಗೆ ಮಿತ ಆಹಾರವನ್ನು ಸೇವಿಸಿ. ಬೆಳಗ್ಗೆ ಬೇಗನೆ ಎದ್ದು ಶೌಚಕ್ರಿಯಾದಿಗಳನ್ನು ಮುಗಿಸಿ ಓದಲು ಕುಳಿತುಕೊಳ್ಳಿ. ನಿಮ್ಮ ಕಲಿಕೆ ದಿನದಿಂದ ದಿನಕ್ಕೆ ಉತ್ತಮಗೊಳ್ಳಲಿ.  ಶುಭವಾಗಲಿ
................................................ ಪುಷ್ಪಲತಾ ಎಂ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob :  99009 00456

*******************************************


Ads on article

Advertise in articles 1

advertising articles 2

Advertise under the article