-->
ಪ್ರೀತಿಯ ಪುಸ್ತಕ : ಸಂಚಿಕೆ - 40

ಪ್ರೀತಿಯ ಪುಸ್ತಕ : ಸಂಚಿಕೆ - 40

ಪ್ರೀತಿಯ ಪುಸ್ತಕ
ಸಂಚಿಕೆ - 40

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ..... ವಾಣಿ ಪೆರಿಯೋಡಿ 

                             ಪವಾಡ ಮಾಡಿ ನೋಡು
            ಪ್ರೀತಿಯ ಮಕ್ಕಳೇ, ‘ಅಲ್ಲೊಬ್ಬರು ಬರಿಗೈಯಲ್ಲಿ ಬೂದಿ ಸೃಷ್ಟಿಸುತ್ತಾರಂತೆ, ಇಲ್ಲೊಬ್ಬರು ಮುಳ್ಳಿನ ಹಾಸಿಗೆ ಮೇಲೆ ನಡೀತಾರಂತೆ, ಮತ್ತೊಬ್ಬರ ಕಣ್ಣು ಬಿಟ್ಟು ಜೋರಾಗಿ ನೋಡಿದರೆ ಬೆಂಕಿ ಹತ್ತಿಕೊಳ್ಳುವುದಂತೆ’ – ಇಂತಹ ಸುದ್ದಿಗಳು ನಮಗೆ ಎಷ್ಟು ರೋಮಾಂಚಕಾರ ಅನಿಸುತ್ತದೆ ಅಲ್ಲವೆ? ಮಕ್ಕಳಿಗೆ ದೊಡ್ಡವರಿಗೆ ಎಲ್ಲರಿಗೂ ಇದೊಂದು ಆಕರ್ಷಕ ವಿಷಯವೇ ಸರಿ. ಇಂತಹವನ್ನು ನಾವು ಪವಾಡ ಅಂತ ಕರೀತೇವೆ. ಅವೆಲ್ಲಾ ನಿಜವಾಗಿಯೂ ಏನೋ ವಿಶೇಷ ಶಕ್ತಿ, ಮಾಂತ್ರಿಕ ಶಕ್ತಿ ಅಂತ ಬಲವಾಗಿ ನಂಬಿಕೊಂಡೂ ಇರುತ್ತಾರೆ. ಇಂತಹ ವಿದ್ಯೆಗಳನ್ನು ಪ್ರದರ್ಶನ ಮಾಡಿ ಹಣಕಾಸು ಮಾಡುವವರಿದ್ದಾರೆ; ಮೋಸ ವಂಚನೆ ಮಾಡುವವರೂ ಇದ್ದಾರೆ. “ನಿಜವಾಗಿಯೂ ಹೀಗೆಲ್ಲಾ ಮಾಡಲು ಸಾಧ್ಯವಾಗುವುದು ವಿಶೇಷ ಶಕ್ತಿಯಿಂದ ಅಲ್ಲ, ಬೆಂಕಿ, ಶಾಖ, ಗಾಳಿ, ನೀರು ಮುಂತಾದ ವಸ್ತುಗಳ ಗುಣ-ಸ್ವಭಾವಗಳು ಮತ್ತು ಪ್ರಕೃತಿ ವಿಜ್ಞಾನದ ಸರಳ ನಿಯಮಗಳನ್ನು ಅರಿತುಕೊಂಡರೆ ಸಾಕು. ಇಂತಹ ಪವಾಡಗಳನ್ನು ಯಾರಾದರೂ ಮಾಡಬಹುದು – ಎಂಬ ವಿಚಾರವನ್ನು ಮಕ್ಕಳಿಗೆ, ಜನರಿಗೆ ಅರ್ಥಮಾಡಿಸುವಕ್ಕಾಗಿ ಈ ಪುಸ್ತಕವನ್ನು ಹೊರತಂದಿದ್ದಾರೆ. ಇದರಲ್ಲಿ ‘ಹಾಲು ಕುಡಿವ ಗಣಪತಿ’, ‘ಕೆಂಡದ ಮೇಲೆ ನಡೆಯುವುದು’, ‘ಫೋಟೋದಿಂದ ವಿಭೂತಿ’ ಮುಂತಾದ ಹೆಸರಿನಲ್ಲಿ 24 ಕಿರು ಲೇಖನಗಳಿವೆ. ಈ ಎಲ್ಲಾ ಪವಾಡಗಳ ಹಿಂದೆ ಇರುವ ವೈಜ್ಞಾನಿಕ ಸತ್ಯವನ್ನು ಇವು ವಿವರಿಸುತ್ತವೆ. ಸ್ಪಷ್ಟವಾಗಿ ಅರ್ಥಮಾಡಿಕೊಂಡರೆ ಕೆಲವನ್ನೂ ನೀವೂ ಪ್ರಯೋಗ ಮಾಡಿ ನೋಡಬಹುದು. ಪವಾಡ ಮಾಡುವವರ ಹಾಗೆ ನೀವು ಕೂಡಾ ಅಂಗೈಯಲ್ಲಿ ಕರ್ಪೂರ ಹಚ್ಚಿಕೊಂಡು ಮಂಗಳಾರತಿ ಮಾಡಬಹುದು. ಗುಜ್ಜಾರಪ್ಪನವರ ಚಿತ್ರಗಳು ಪುಸ್ತಕದ ಸೊಗಸನ್ನು ಹೆಚ್ಚಿಸಿವೆ. ನೀವೂ ಓದಿ ನೋಡುವಿರಾ? ಮಾಡಿ ನೋಡುವಿರಾ? 
ಲೇಖಕರು: ವಿವಿಧ ಲೇಖಕರು
ಚಿತ್ರಗಳು: ಗುಜ್ಜಾರಪ್ಪಾ ಬಿ.ಜಿ. 
ಪ್ರಕಾಶಕರು: ಭಾರತ ಜ್ಞಾನ ವಿಜ್ಞಾನ ಸಮಿತಿ-ಕರ್ನಾಟಕ (ಈ ಪುಸ್ತಕಗಳು ಬೇಕಾದಲ್ಲಿ ನೀವು ಇವರನ್ನು ಸಂಪರ್ಕಿಸಬಹುದು – ಶ್ರೀನಿವಾಸ್ - 9611447102
ಬೆಲೆ: ರೂ.60
ಐದು ಆರನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article