-->
ಬದಲಾಗೋಣವೇ ಪ್ಲೀಸ್ - 79

ಬದಲಾಗೋಣವೇ ಪ್ಲೀಸ್ - 79

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
         ನಾವು ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ವಿಚಾರದಲ್ಲಿ 3 ವಿಭಾಗಗಳನ್ನು ಕಾಣಬಹುದು.  ಸಾಮಾನ್ಯವಾದ ಸರಳ ಸಮಸ್ಯೆಗಳಿಗೆ ವೈದ್ಯರ ಸೂಕ್ತ ಮಾರ್ಗದರ್ಶನದ ಮೇಲೆ ಚಿಕಿತ್ಸೆ ಪಡೆಯುವ ಹೊರರೋಗಿ ವಿಭಾಗ ಇದೆ. ಮಧ್ಯಮ ಹಂತದ ಸಮಸ್ಯೆಗಳಿಗೆ ವೈದ್ಯರ ಮಾರ್ಗದರ್ಶನ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಭಾಗಶಃ ಆರೈಕೆಯಲ್ಲಿ ಚಿಕಿತ್ಸೆ ಪಡೆಯುವ ಒಳರೋಗಿ ವಿಭಾಗವಿದೆ. ತೀವ್ರತರವಾದ ಸಮಸ್ಯೆಗಳಿಗೆ ವೈದ್ಯರು ಹಾಗೂ ಸಿಬ್ಬಂದಿಗಳ ಪೂರ್ಣಪ್ರಮಾಣದ ಆರೈಕೆಯ ICU ವಿಭಾಗವಿದೆ. ಹೊರ ರೋಗಿ ವಿಭಾಗದಲ್ಲಿ ನಾವು ಸ್ವತಂತ್ರರಾಗಿರುತ್ತೇವೆ. ಒಳರೋಗಿ ವಿಭಾಗದಲ್ಲಿ ಅರೆ ಸ್ವತಂತ್ರವಾಗಿರುತ್ತೇವೆ. ICU ನಲ್ಲಿ ನಾವು ತುರ್ತು ನಿಗಾವಲಂಬಿಯಾಗಿರುತ್ತೇವೆ. ಏಕೆಂದರೆ ಅಲ್ಲಿ ಕ್ಷಣ ಕ್ಷಣಕ್ಕೂ ನಮ್ಮ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಲಾಗುತ್ತದೆ. ಅಲ್ಲಿ ಎಲ್ಲಾ ಸೌಲಭ್ಯಗಳಿರುತ್ತದೆ. ಹೊರಗಿನಿಂದ ಯಾವುದೇ ಅಡೆತಡೆಗಳಿರುವುದಿಲ್ಲ. ಅಲ್ಲಿನ ಸೂಕ್ತ ಚಿಕ್ಸಿತೆಗೆ ನಾವು ಸ್ಪಂದಿಸಿದರೆ ಶೀಘ್ರ ಗುಣಮುಖರಾಗಿ ಹೊರ ಜಗತ್ತಿಗೆ ಬರಬಹುದು. ಅಲ್ಲಿ ನಮ್ಮ ಸ್ಪಂದನೆ ತುಂಬಾ ಮುಖ್ಯ. ನಮ್ಮ ಆರೋಗ್ಯ ಸ್ಥಿತಿ ಸುಧಾರಿಸಿದ ಮೇಲೆ ನಮ್ಮನ್ನು ಅಲ್ಲಿಂದ ಹೊರಜಗತ್ತಿಗೆ ಕಳುಹಿಸುತ್ತಾರೆ. ನಾವು ಕೂಡಾ ಐಸಿಯುನಲ್ಲಿಯೇ  ನಿಲ್ಲಲ್ಲು ಬಯಸುತ್ತೇವೆಯೋ?  ಇಲ್ಲ ತಾನೆ.. ಅಲ್ಲಿಂದ ಗುಣಮುಖರಾಗಿ ಹೊರಜಗತ್ತಿಗೆ ಬಂದು ಮತ್ತೆ ಸ್ವತಂತ್ರರಾಗಿ ಬದುಕುತ್ತೇವೆ.
       ಮೇಲಿನ ಅಂಶಗಳನ್ನು ಪೋಷಕತ್ವ ಹಾಗೂ ಮಕ್ಕಳ ಜೀವನ ನಿರ್ವಹಣೆ ವಿಚಾರಕ್ಕೂ ಅನ್ವಯಿಸಬಹುದಾಗಿದೆ. ಪೋಷಕರಾದ ನಾವು ಮಕ್ಕಳನ್ನು ಅವರವರ ಪರಿಸ್ಥಿತಿಗನುಗುಣವಾಗಿ ನಮ್ಮ ಮಾರ್ಗದರ್ಶನದಲ್ಲಿ ಅವರ ಜೀವನ ನಿರ್ವಹಣೆ ಕಲಿಕೆಗಾಗಿ ನಮ್ಮ ಕಣ್ಗಾವಲಿನಲ್ಲಿ ಸ್ಟತಂತ್ರವಿರುವ ಪರಿಸರವನ್ನು ಒದಗಿಸಬೇಕು. ಕೆಲವೊಮ್ಮೆ ಅವರ ಪರಿಸ್ಥಿತಿ ಸುಧಾರಿಸುವ ವರೆಗೆ ಭಾಗಶಃ ಆರೈಕೆಯ ಮಧ್ಯಮ ಪರಿಸರ ಒದಗಿಸಬೇಕು. ಅನಿವಾರ್ಯ ವಾದಾಗ ICU ಪರಿಸರದಲ್ಲೂ ಇಟ್ಟು ಸಾಮರ್ಥ್ಯ ಬಂದಾಗ ಮತ್ತೆ ಸ್ವತಂತ್ರರಾಗಿ ಬದುಕಲು ಬಿಡಬೇಕು. ಮತ್ತೆ ಅವರು ತನ್ನತನವನ್ನು ಅನುಭವಿಸಲು ಬಿಡಬೇಕು. ಆದರೆ ಹೆಚ್ಚಿನ ಪಾಲಕರು ತಮ್ಮ ಮಕ್ಕಳಿಗೆ ಸ್ವ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ನೀಡದೆ ಮಕ್ಕಳನ್ನು ICU ನಲ್ಲಿಟ್ಟು ಹೊರಜಗತ್ತಿಗೆ ಬಾರದಂತೆ ಮಾಡುತ್ತಿದ್ದಾರೆ. ಅವರಿಗೆ ಸಾಮರ್ಥ್ಯವಿದ್ದರೂ ತಮ್ಮ ನಿಗಾದಲ್ಲಿ ಬದುಕಬೇಕೆಂದು ಬಯಸುತ್ತಾರೆ. ಹೊರ ಜಗತ್ತಿಗೆ ತೆರೆದುಕೊಳ್ಳಲು ಬಿಡುವುದಿಲ್ಲ. ತನ್ನ ಕಲ್ಪನೆಯಂತೆ ಮಗುವನ್ನು ಬೆಳೆಸುತ್ತಾರೆ ಹೊರತು ಮಗುವಿನ ಸಾಮರ್ಥ್ಯ ಗುರುತಿಸಿ ಬೆಳೆಸುತ್ತಿಲ್ಲ. ಮಗುವಿನ ಮೇಲೆ ಮಿತಿ ಮೀರಿದ  ನಿಗಾ ವಹಿಸಿ ಅವರ ಮೇಲೆ ಸಾಧನೆಯ ಅತೀವ ಒತ್ತಡ ಹೇರಿ ಪರಾವಲಂಬಿಯಾಗಿ ಬದುಕುವಂತೆ ಮಾಡುತ್ತಿದ್ದಾರೆ. ಮಗುವಿನ ತನ್ನ ಸಾಮರ್ಥ್ಯ ತೋರಿಸಲು ಅಥವಾ ತನ್ನತನವನ್ನು ಅನುಭವಿಸಲು ಅವಕಾಶವೇ ಇಲ್ಲದಂತಾಗುತ್ತದೆ. ಒಂಥರಾ ಪಂಜರದ ಪಕ್ಷಿಯಂತೆ ಜೀವನ. ಇತ್ತೀಚೆಗೆ ಈ ತರಹದ ಪಾಲಕತ್ವ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ
      ಒಮೊಮ್ಮೆ ನಾವು ಕೂಡಾ ನಮ್ಮ ಜೀವನ ಶೈಲಿಯ ಕಾರ್ಯದ ಒತ್ತಡದಿಂದಾಗಿ ತುಂಬಾ ಕಿರಿಕಿರಿ ಅಥವಾ ಸಮಸ್ಯೆಗಳಿಗೆ ಒಳಗಾಗುತ್ತೇವೆ. ಆಗ ಅದನ್ನು ಎದುರಿಸಲು ಆಗದಿದ್ದಾಗ ನಿಷ್ಕ್ರೀಯರಾಗುತ್ತೇವೆ. ನಿರುತ್ಸಾಹಿಗಳಾಗುತ್ತೇವೆ. ಯಾವುದರ ಮೇಲೂ ಏಕಾಗ್ರತೆ ನೀಡಲಾಗದೆ ಕ್ರಿಯಾ ಶೂನ್ಯರಾಗುತ್ತೇವೆ. ಆಗ ಒಮೊಮ್ಮೆ ICU ನಲ್ಲಿ ದಾಖಲಾದಂತೆ ಭಾಸವಾಗುತ್ತದೆ. ಆದರೆ ಎಷ್ಟು ದಿನ ಅಂತಾ ICU ನಲ್ಲಿಯೇ ಇರಲಾಗುತ್ತದೆ. ಅಲ್ಲಿ ಬಂದಿರುವ ಸಮಸ್ಯೆಗಳಿಗೆ ಮೂಲವನ್ನು ಹುಡುಕಿ ಅದರ ಪರಿಹಾರಕ್ಕೆ ತುರ್ತಾಗಿ   ಸ್ಪಂದಿಸುತ್ತಾ ಹೋದರೆ ಮತ್ತೆ ICU ನಿಂದ ಹೊರಬಂದು ಮರಳಿ ಹಿಂದಿನ ಸ್ಥಿತಿಗೆ ಬರಬಹುದು. ನಮ್ಮ ಸಮಸ್ಯೆಗಳಿಗೆ ಪರಿಹಾರ ಚಿಂತಿಸುತ್ತಾ ಹೋದರೆ ಗುಣಮುಖರಾಗಬಹುದು. ಸಮಸ್ಯೆಗಳ ಬಗ್ಗೆಯೇ ಚಿಂತಿಸುತ್ತಾ ಹೋದರೆ ಪರಿಹಾರ ಕಾಣಲು ಸಾಧ್ಯವಿಲ್ಲ.
      ಹೀಗೆ ICU ಕಥೆಯನ್ನು ಅರ್ಥ್ಯೆಸುತ್ತಾ ಹೋದಂತೆ ಸ್ವತಂತ್ರರಾಗಿ  ಸ್ಪಸಾಮರ್ಥ್ಯದಿಂದ ಬದುಕುವ ದಾರಿ ತಿಳಿಯಬಹುದು. ಅನಿವಾರ್ಯವಾಗಿ ICU ಪರಿಸ್ಥಿತಿ ಬಂದರೂ ಅಲ್ಲಿಂದ ಅತ್ಯಂತ ವೇಗವಾಗಿ  ಆದಷ್ಟೂ ಬೇಗನೇ  ಹೊರ ಜಗತ್ತಿಗೆ ಬರುವುದನ್ನು ಕಲಿಯೋಣ. ಇದಕ್ಕಾಗಿ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************



Ads on article

Advertise in articles 1

advertising articles 2

Advertise under the article