-->
ಪ್ರತಿಫಲನ : ಸಂಚಿಕೆ - 10

ಪ್ರತಿಫಲನ : ಸಂಚಿಕೆ - 10

ಪ್ರತಿಫಲನ : ಸಂಚಿಕೆ - 10
ಮಕ್ಕಳಿಗಾಗಿ ಲೇಖನ ಸರಣಿ
               
          ವಿದ್ಯಾರ್ಥಿ ಮಿತ್ರರೇ, ಓದುವ ಮುನ್ನ ನಮ್ಮ ತಯಾರಿ ಹೀಗಿರಲಿ 
     ▪️ ಉತ್ತಮ ಗುಣಮಟ್ಟದ ಸಾಕಷ್ಟು ಅಗಲವುಳ್ಳ ಮೇಜೊಂದಿರಲಿ.
      ▪️ಆ ಮೇಜು ಸಾಕಷ್ಟು ಗಾಳಿ ಬೆಳಕು ಬರುವ ಕೋಣೆಯೊಳಗಿರಲಿ.
      ▪️ ಆ ಮೇಜಿನ ಹಿಂದೆ ಜೋಡಿಸಿದಂತೆ ಕುರ್ಚಿಯೊಂದಿರಲಿ. 
       ▪️ ಕುರ್ಚಿಯಲ್ಲಿ ನೀವು ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವಂತಿರಲಿ. 
        ▪️ ಕುರ್ಚಿಯಲ್ಲಿ ಕುಳಿತಾಗ ನಿಮ್ಮ ಪಾದಗಳು ನೆಲವನ್ನು ತಾಕುವಂತಿರಲಿ. ‌ ▪️ ಮೇಜಿನ ಬಲ ಮತ್ತು ಎಡ ಮುಂಭಾಗಗಳಲ್ಲಿ ಪುಸ್ತಕಗಳು ಅಂದವಾಗಿ ಜೋಡಿಸಲ್ಪಟ್ಟಿರಲಿ.
      ▪️ ಬರೆಯಲು ಓದಲು ಅನುಕೂಲ ವಾಗುವಂತೆ ಮೇಜಿನ ಮಧ್ಯ ಭಾಗ ಖಾಲಿಯಾಗಿರಲಿ.
      ▪️ ಪೆನ್ನು, ಪೆನ್ಸಿಲು ಸ್ಕೇಲ್ ಮೊದಲಾದ ಪರಿಕರಗಳನ್ನು ಹಾಕಲು ಒಂದು pen mart ಅಥವಾ ಪ್ಲಾಸ್ಟಿಕ್ ಡಬ್ಬ ಮೇಜಿನ ಬಲಭಾಗದಲ್ಲಿರಲಿ. 
       ▪️ ಅದರೊಳಗೆ ಸುಂದರವೂ ಸುಲಲಿತವೂ ಆಗಿ ಬರೆಯುವ ಉತ್ತಮ ಗುಣಮಟ್ಟದ ಪೆನ್ನುಗಳು ಸಾಕಷ್ಟು ಇರಲಿ.
       ▪️ ಚೂಪಾದ ಮೊನೆಯ ಪೆನ್ಸಿಲ್, ರಬ್ಬರ್ ಸ್ಕೇಲ್ ಹೈ ಲೈಟರ್ ಇತ್ಯಾದಿಗಳು ಪೆನ್ ಮಾರ್ಟ್ ನೊಳಗಿರಲಿ.
       ▪️ ನೀರು ತುಂಬಿದ ಬಾಟ್ಲಿ ಮೇಜಿನ ಎಡ ಅಥವಾ ಕೆಳಭಾಗದಲ್ಲಿರಲಿ.
       ▪️ಓದುವ ನಿಮ್ಮ ಕೊಠಡಿಯೊಳಗೆ ಬೆಕ್ಕು ನಾಯಿ ಮುಂತಾದ ಸಾಕುಪ್ರಾಣಿಗಳು ಬಾರದಿರಲಿ.
      ▪️ ಕುರುಕುರೆಗಳೇ ಮೊದಲಾದ ಪ್ಯಾಕೆಟ್ ತಿಂಡಿಗಳು, ಕರಿದ ತಿಂಡಿಗಳು ನಿಮ್ಮ ಮೇಜಿನ ಬಳಿ ಸುಳಿಯದಿರಲಿ.
      ▪️ ಚಪ್ಪಲಿ ಶೂ ಚೂರಿ ಕತ್ತಿ ಮೊದಲಾದ ಸಾಧನಗಳು ಹಳೆಯ ಉಪಯೋಗಕ್ಕೆ ಬಾರದ ಇಲೆಕ್ಟ್ರಾನಿಕ್ ಸಾಧನಗಳು ಬಲೆತೆಗೆಯುವ ಕೋಲು ಹಿಡಿಸೂಡಿ ನೆಲ ಒರೆಸುವ ಬಟ್ಟೆಗಳು ಖಾಲಿ ಬಕೆಟ್ ಮಗ್ ಮೊದಲಾದ ವಸ್ತುಗಳು ಕೋಣೆಯೊಳಹೊಕ್ಕದಿರಲಿ. 
      ▪️ ಮೊಬೈಲ್ ಫೋನ್ ಸಹವಾಸದಿಂದ ನಿಮ್ಮ ಓದುವ ಕೊಠಡಿ ಮುಕ್ತವಾಗಿರಲಿ.
      ▪️ ಪ್ರಗತಿಯ ಸಂಕೇತವಾದ ಸಮಯ ಸೂಚಕ ಗಡಿಯಾರವೊಂದು ನಿಮ್ಮ ಮುಂಭಾಗದ ಗೋಡೆಯ ಮೇಲಿರಲಿ.
‌‌ ‌‌ ▪️ ತಕ್ಷಣ ವಿದ್ಯುತ್ ಹೋದಾಗ ಸಹಾಯ ಮಾಡಲು ಚಾರ್ಜರ್ ಲೈಟ್ ಇದ್ದರೆ ಉತ್ತಮ. 
      ▪️ ಸ್ವತಂತ್ರವಾದ ಓದುವ ಕೊಠಡಿ ಅಲಭ್ಯವೇ… ಚಿಂತಿಸದಿರಿ. ಇರುವ ಕೊಠಡಿಗಳಲ್ಲೇ ಸಾಕಷ್ಟು ಗಾಳಿ ಬೆಳಕಿರುವ ಜಾಗದಲ್ಲಿ ನಿಮ್ಮ ಮೇಜನ್ನು ಜೋಡಿಸಿಕೊಳ್ಳಿರಿ. ‌‌
     ▪️ ಪ್ರತಿದಿನ ಶೈಕ್ಷಣಿಕ ಚಟುವಟಿಕೆಗಳಿಂದ ವಿರಮಿಸುವ ಮುನ್ನ ನಿಮ್ಮೀ ಓದಿನರಮನೆಯನ್ನು ಸ್ವಚ್ಛವಾಗಿಯೂ ಓರಣವಾಗಿಯೂ ಇರುವಂತೆ ನೋಡಿಕೊಳ್ಳಿರಿ.
      ವಿದ್ಯಾರ್ಥಿ ಮಿತ್ರರೇ, ಕಲಿಕೆಗೆ ಮುನ್ನ ಕಲಿಕಾ ವಾತಾವರಣವೂ ಉತ್ತಮವಾಗಿರುವುದು ಅತ್ಯಗತ್ಯ. ಅದಕ್ಕಾಗಿ ನಿಮ್ಮ ಅಧ್ಯಯನ ಸಂದರ್ಭದಲ್ಲಿ ದೂರದರ್ಶನದಿಂದ ದೂರವಿರಲು ಮನೆಯವರನ್ನು ವಿನಂತಿಸಿ. ಕಲಿಕಾರಂಭಕ್ಕೂ ಮುನ್ನ ನೀವು ನಡೆಸುವ ಈ ಸಿಧ್ಧತೆಗಳು ಓದುವ ಹಾದಿಯನ್ನು ಸುಗಮಗೊಳಿಸುತ್ತದೆ ಎಂಬ ನೆನಪಿರಲಿ. ಕಲಿಕಾ ಪರ್ವದಲ್ಲಿ ಸಾಧನೆಯ ಪ್ರತಿಫಲನ ನಿಮ್ಮದಾಗಲಿ. ಕಲಿಕೆ ಹೇಗೆ ಸಾಗಬೇಕೆಂಬ ವಿಷಯ ಮುಂದಿನ ಸಂಚಿಕೆಯಲ್ಲಿ ಆಗದೇ…….. ಶುಭವಾಗಲಿ.. 
.......................................... ಪುಷ್ಪಲತಾ ಎಂ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************

Ads on article

Advertise in articles 1

advertising articles 2

Advertise under the article