-->
ಬದಲಾಗೋಣವೇ ಪ್ಲೀಸ್ - 80

ಬದಲಾಗೋಣವೇ ಪ್ಲೀಸ್ - 80

ಬದಲಾಗೋಣವೇ ಪ್ಲೀಸ್ - 80

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
     
         ಮೊಳಕೆಯೊಡೆದು ಹೊರಬಂದ ಚಿಗುರು ಕ್ರಮೇಣ ಆರೋಗ್ಯವಂತ ಗಿಡವಾಗಿ ಬೆಳೆದು ಹೊಸ ಫಲ-ಪುಷ್ಪಗಳನ್ನು ಕೊಡಬೇಕಾದರೆ ಅದಕ್ಕೆ ಕಾಲಕಾಲಕ್ಕೆ ಅಗತ್ಯವಾದ ನೀರು, ಗೊಬ್ಬರ , ಮಣ್ಣಿನ ಸಾರ, ಸೂರ್ಯನ ಬಿಸಿಲು ಲಭಿಸಬೇಕಾಗುತ್ತದೆ. ಇದೆಲ್ಲವೂ ಕಾಲಕ್ಕನುಗುಣವಾಗಿ ಲಭಿಸಿದರೆ ಫಸಲು ಚೆನ್ನಾಗಿ ಸಿಗಬಹುದು. ಇಲ್ಲವಾದರೆ ಫಸಲು ನಿರೀಕ್ಷಿತ ಮಟ್ಟದಲ್ಲಿ ಸಿಗಲು ಸಾಧ್ಯವಿಲ್ಲ. ಇವುಗಳು ಕಡಿಮೆಯಾದರೂ ಅಥವಾ ಅತಿಯಾದರೂ ಸಸ್ಯದ ಬೆಳವಣಿಗೆಗೆ ಕಂಟಕ. ನೀರು ಅಲಭ್ಯವಾದರೆ ಸಾಯಬಹುದು. ನೀರು ಕಡಿಮೆಯಾದರೆ ನ್ಯೂನ ಬೆಳವಣಿಗೆ ಯಾಗಬಹುದು. ನೀರು ಹೆಚ್ಚಾದರೆ ಬೇರು ಕೊಳೆತು ಸಾಯಬಹುದು. ಅದರ ಅವಶ್ಯಕತೆಗನುಗುಣವಾಗಿ ಹಾಗೂ ಸಂದರ್ಭಕ್ಕನುಗುಣವಾಗಿ ಲಭಿಸಿದರೆ ಮಾತ್ರ ಬೆಳವಣಿಗೆ ಪಕ್ಕಾ. ಅದೇ ರೀತಿ ಸೂರ್ಯನ ಬಿಸಿಲು ಹೆಚ್ಚಾದರೂ ಅಥವಾ ಕಡಿಮೆಯಾದರೂ ಗಿಡ ಬಾಡಬಹುದು. ಗೊಬ್ಬರ ಹೆಚ್ಚಾದರೂ ಖಾರ (ಉಷ್ಣತೆ) ಹೆಚ್ಚಾಗಿ ಸಾಯಬಹುದು. ಕಡಿಮೆಯಾದರೆ ಪೋಷಣೆ ಆಗದೆ ಸಾಯಬಹುದು.
       ಆಹಾ ಎಷ್ಟೊಂದು ಸರಳ ನಿದರ್ಶನ. ನಮ್ಮ ಮಕ್ಕಳ ಬೆಳವಣಿಗೆಯು ಕೂಡಾ ಇದೇ ರೀತಿ ತಾನೆ. ಅವರ ಬೆಳವಣಿಗೆ ಕೂಡಾ ಕಾಲಕಾಲಕ್ಕನುಗುಣವಾಗಿ ಸಿಗುವ ಧನಾತ್ಮಕ ಭಾವ, ಪ್ರೋತ್ಸಾಹದ ಮಾತುಗಳು, ಭಾವನಾತ್ಮಕ ಬಂಧುತ್ವದ ಭಾವ, ರಕ್ಷಣಾ ಭಾವ, ನಮ್ಮವರೆಂಬ ಭಾವ ಹೀಗೆ ಎಲ್ಲವೂ ಲಭಿಸಿದರೆ ಮಕ್ಕಳು ಕೂಡಾ ಆರೋಗ್ಯಯುತರಾಗಿ ಬೆಳೆಯುತ್ತಾರೆ. ಮಕ್ಕಳನ್ನು ಮುದ್ದಿಸುವುದೆಂದರೆ ಸಸಿಗೆ ನೀರು ಎರೆದಂತೆ. ಮುದ್ದು ಕಡಿಮೆಯಾದರೂ ಅಥವಾ ಹೆಚ್ಚಾದರೂ ಬೆಳವಣಿಗೆ ನಾಶವಾಗುವುದು ಖಂಡಿತಾ. ಹಾಗಾಗಿ ಸಮಯ ಸಂದರ್ಭವನ್ನು ಅರಿತು ಮುದ್ದಿಸಿದರೆ ಸಹಜ ಬೆಳವಣಿಗೆ ಸಾಧ್ಯ. ಮಕ್ಕಳ ಚಿಕ್ಕ ಚಿಕ್ಕ ಕೆಲಸಗಳಲ್ಲೂ ತಪ್ಪು-ಒಪ್ಪುಗಳನ್ನು ಗುರುತಿಸಿ ಧನಾತ್ಮಕವಾಗಿ ಪ್ರತಿಕ್ರಿಯಿಸಿ ಪ್ರತಿ ಹಂತದಲ್ಲೂ ನೀಡುವ ಧೈರ್ಯ, ಪ್ರೋತ್ಸಾಹದ ಮಾತು ಹಾಗೂ ಮಾರ್ಗದರ್ಶನಗಳು ಗೊಬ್ಬರದಂತೆ ಕೆಲಸ ಮಾಡುತ್ತದೆ. ಮಕ್ಕಳ ಪ್ರತಿಭೆ ಹಾಗೂ ಬೆಳವಣಿಗೆ ಬಗೆಗಿನ ನಿರಂತರ ಗಮನವು ಸೂರ್ಯನ ಬಿಸಿಲಿನಂತೆ ಕೆಲಸ ಮಾಡುತ್ತದೆ. ಮಗುವಿಗೆ ಸ್ವತಂತ್ರ ಭರಿತ ಸಂತಸ - ಸ್ವವೇಗ - ಸ್ವಸಾಮರ್ಥ್ಯ ಭರಿತ ಕಲಿಕೆಗೆ ಸೂಕ್ತ ಪರಿಸರವು ಮಣ್ಣಿನಂತೆ ಪೂರಕವಾಗಿದೆ. ಹೀಗೆ ನಾವು ಮಕ್ಕಳ ಬಗ್ಗೆ ಅರಿಯತೊಡಗಿದರೆ ಸದೃಢ ಆರೋಗ್ಯವಂತ ಸಮಾಜದ ಫಸಲನ್ನು ಪಡೆಯಬಹುದು. ಬನ್ನಿ ಮಕ್ಕಳನ್ನು ಮಕ್ಕಳಾಗಿಯೇ ಕಾಣುವ ಬದಲಾವಣೆಗೆ ಬದಲಾಗೋಣ. ಚಿಕ್ಕ ಮಕ್ಕಳಿಂದ ದೊಡ್ಡವರ ಸಾಧನೆಯನ್ನು ನಿರೀಕ್ಷಿಸುವುದು ಅವರ ಬಾಲ್ಯವನ್ನು ಕಸಿದಂತೆ. ಅವರು ಸಹಜ ಬಾಲ್ಯವನ್ನು ಹೊಂದಲಿ.... ಸಂಭ್ರಮಿಸಲಿ... ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article