-->
ಮಕ್ಕಳಲ್ಲಿ ಅಪ್ರಾಮಾಣಿಕತೆ ಬೆಳೆಸುವ ಪ್ರಾಜೆಕ್ಟ್ ವರ್ಕ್ಸ್‌ಗಳು...!

ಮಕ್ಕಳಲ್ಲಿ ಅಪ್ರಾಮಾಣಿಕತೆ ಬೆಳೆಸುವ ಪ್ರಾಜೆಕ್ಟ್ ವರ್ಕ್ಸ್‌ಗಳು...!

ಲೇಖಕರು : ಇಸ್ಮತ್ ಪಜೀರ್

              ನನ್ನ ಮಗಳು ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಎಲ್.ಕೆ.ಜಿ ಯಂತೂ ಕೋವಿಡ್‌ನಲ್ಲಿ ಮುಗಿಯಿತು. ಯು.ಕೆ.ಜಿ.ಯಲ್ಲಿ ಒಂದಷ್ಟು ತರಗತಿಗಳು ನಡೆದವು. ಮಧ್ಯಾವಧಿ ರಜೆಯಿರಲಿ, ಕ್ರಿಸ್ಮಸ್ ರಜೆಯಿರಲಿ, ಇನ್ನು ಜೋರು ಮಳೆ ಬಂದು ಎರಡು ದಿನ ರಜೆ ಸಿಗಲಿ ಮಕ್ಕಳನ್ನು ಒಂದಿನಿತೂ ಅವರಷ್ಟಕ್ಕೆ ಆಡಲು, ಅವರ ಬಾಲ್ಯವನ್ನು ಆನಂದಿಸಲು, ಅವರ ಸಹಜ ಚಟುವಟಿಕೆಗಳನ್ನು ಮಾಡಲು ಇಂದಿನ ಶಿಕ್ಷಣ ಪದ್ಧತಿಗಳು ಅವಕಾಶವೇ ನೀಡುತ್ತಿಲ್ಲ. ನಾವಂತೂ ನಮ್ಮ ಬಾಲ್ಯದ ರಜಾದಿನಗಳಲ್ಲಿ ಬಹುತೇಕ ಹೊತ್ತನ್ನು ಆಟದ ಮೈದಾನದಲ್ಲಿ, ಬೀದಿಗಳಲ್ಲಿ, ಕಾಡಿನಲ್ಲಿ, ತೋಟದಲ್ಲಿ, ನೀರಿನಲ್ಲಿ, ಯಾರದೋ ಮರಕ್ಕೆ ಕಲ್ಲು ಹೊಡೆಯುವುದರಲ್ಲಿ ಕಳೆದವರು. ಈಗಿನ ಮಕ್ಕಳು ಮೊದಲೇ ಟಿವಿ, ಮೊಬೈಲ್, ಕಂಪ್ಯೂಟರ್‌ಗಳನ್ನೇ ಜಗತ್ತು ಎಂದು ತಿಳಿದವರು. ಅವರಾಗಿ ಮೊದಲೇ ಮನೆಯಿಂದ ಹೊರಗಿಳಿಯುವುದಿಲ್ಲ. ಇನ್ನು ಟೀಚರ್ಸ್‌ಗಳೇ ಈ ಹೋಮ್‌ವರ್ಕ್, ಪ್ರಾಜೆಕ್ಟ್ ವರ್ಕ್‌ ನೆಪದಲ್ಲಿ ಮಕ್ಕಳಿಗೆ ಪರೋಕ್ಷ ಗೃಹಬಂಧನ ವಿಧಿಸುತ್ತಾರೆ. ಈ ರೀತಿಯ ಅತಿಯಾದ ಹೋಮ್‌ವರ್ಕ್, ಪ್ರಾಜೆಕ್ಟ್ ವರ್ಕ್‌ಗಳು ಮಕ್ಕಳನ್ನು ಎಳೆಯ ವಯಸ್ಸಿನಲ್ಲೇ ಮಾನಸಿಕ ಒತ್ತಡಕ್ಕೆ ನೂಕುತ್ತವೆ ಎಂದು ಈ ಶಿಕ್ಷಣ ಪದ್ಧತಿಯ ನಿರೂಪಕರು ಯೋಚಿಸಿದ್ದಿದೆಯೇ..? 
       ನನ್ನ ಮಗಳ ಯು.ಕೆ.ಜಿ.ಯಿಂದ ನಾನು ಅವಳಿಗೆ ಟೀಚರ್ಸ್ ಕೊಡುವ ಪ್ರಾಜೆಕ್ಟ್ ವರ್ಕ್‌ಗಳನ್ನು ಆಗಾಗ ಗಮನಿಸುತ್ತಾ ಬಂದಿರುವೆ. ಬಹುತೇಕ ಪ್ರಾಜೆಕ್ಟ್‌ಗಳೆಲ್ಲವೂ ಅವಳ ವಯಸ್ಸಿಗೆ, ಅವಳ ಶಕ್ತಿಗೆ, ಅವಳ ಬುದ್ಧಿಗೆ ಮೀರಿದಂತವುಗಳು. ಅವೆಲ್ಲವೂ ಮಕ್ಕಳಲ್ಲಿ ಅಪ್ರಾಮಾಣಿಕತೆಯನ್ನು ಬೆಳೆಸುವಂತವುಗಳು. ಉದಾಹರಣೆಗೆ : ಅರು ಏಳರ ಹರೆಯದ ಮಕ್ಕಳಲ್ಲಿ ಕತೆ ಬರೆದು ಅದಕ್ಕೊಪ್ಪುವ ಚಿತ್ರವನ್ನು ಅಂಟಿಸಿ ತನ್ನಿ ಎಂದರೆ ಮಕ್ಕಳು ಸ್ವತಂತ್ರವಾಗಿ ಕತೆ ಬರೆಯಲು ಸಾಧ್ಯವೇ..? ಮಕ್ಕಳು ಹೆತ್ತವರು ಅಂತರ್ಜಾಲದಿಂದಲೋ, ಮಕ್ಕಳ ಕತೆ ಪುಸ್ತಕಗಳಿಂದಲೂ ಕತೆಗಳನ್ನು ಕಾಪಿ ಪೇಸ್ಟ್ ಮಾಡಿ ಗೂಗಲ್‌ನಿಂದ ಯಾವುದಾದರೂ ಪಟವನ್ನು ಎಗರಿಸಿ ಕತೆ ಮತ್ತು ಸಂಬಂಧಿತ ಚಿತ್ರ ಅಂಟಿಸಿಕೊಡುತ್ತಾರೆ. ಮಕ್ಕಳು ಅವನ್ನು ಶಾಲೆಗೆ ತಂದು ತಮ್ಮದೇ ವರ್ಕ್ ಎಂದು ಸಬ್ಮಿಟ್ ಮಾಡ್ತಾರೆ.
        ಒಂದನೇ ಕ್ಲಾಸಿನ ಮಕ್ಕಳಿಗೆ A to Z ವರೆಗಿನ ಇಂಗ್ಲಿಷ್ ಅಲ್ಫಾಬೆಟ್ಸ್‌ಗಳಿಗೆ ಮೂರಕ್ಷರದ್ದೋ, ನಾಲ್ಕಕ್ಷರದ್ದೋ ಪದಗಳನ್ನು ಬರೆದು ತನ್ನಿ ಎಂದರೆ ಒಂದಿಷ್ಟು ಅಲ್ಫಾಬೆಟ್ಸ್‌ಗಳಿಗೆ ಮಕ್ಕಳು ಕಷ್ಟಪಟ್ಟು ಯೋಚಿಸಿ ಬರೆಯಬಹುದು. ಉಳಿದವುಗಳನ್ನು ಹೆತ್ತವರೇ ಯೋಚಿಸಿ ಅಥವಾ ಅಂತರ್ಜಾಲದ ಸಹಾಯ ಪಡೆದು ಬರೆದು ಕೊಡುತ್ತಾರೆ. ಮಕ್ಕಳು ಅವನ್ನು ಸಬ್ಮಿಟ್ ಮಾಡಿ ಪ್ರಶಂಸೆ ಗಳಿಸುತ್ತಾರೆ.
        ಇಂತಹ ಪ್ರಾಜೆಕ್ಟ್ ವರ್ಕ್‌ಗಳಿಗೆ ಚಂದದ ಮುಖಪುಟ ರಚಿಸಿ, ಅಲಂಕಾರಿಕ ಪದಗಳಿಂದ ಬರೆದು ತರಬೇಕೆಂದು ಟೀಚರ್ಸ್ ಹೇಳಿರುತ್ತಾರೆ. ಅದರಲ್ಲಿ ಯಾವುದು ಹೆಚ್ಚು ಚಂದವಿರುತ್ತೋ ಅವುಗಳಿಗೆಲ್ಲಾ ಹೆಚ್ಚೆಚ್ಚು ಅಂಕ ಸಿಗುತ್ತವೆ. ಪುಟಾಣಿ ಮಕ್ಕಳು ತಮ್ಮದೇ ಕಲ್ಪನೆಯಲ್ಲಿ, ತಮ್ಮದೇ ಸ್ವಂತ ಮುಖಪುಟ ರಚಿಸಲು ಅವರ ವಯಸ್ಸಿಗೆ ಸಾಧ್ಯವಾಗುವುದಿಲ್ಲ. ಸಹಜವಾಗಿಯೇ ಹೆತ್ತವರು ಅವುಗಳನ್ನು ಸಿದ್ಧಪಡಿಸಿ ಕೊಡುತ್ತಾರೆ. ಅವನ್ನು ಮಕ್ಕಳು ಸಬ್ಮಿಟ್ ಮಾಡುತ್ತಾರೆ. ಟೀಚರ್ಸ್‌ಗಳಿಗೆ ಇವು ಯಾವುವೂ ಮಕ್ಕಳ ಸ್ವಂತ ಕೆಲಸಗಳಲ್ಲ ಎಂದು ಗೊತ್ತಿರುತ್ತವೆ. ಅದಾಗ್ಯೂ ಹೆಚ್ಚು ಚಂದದವುಗಳಿಗೆ ಹೆಚ್ಚು ಅಂಕಗಳನ್ನು ನೀಡುತ್ತಾರೆ. ವಾಸ್ತವದಲ್ಲಿ ಟೀಚರ್ಸ್ ನೀಡುವ ಅಂಕಗಳು ಮಕ್ಕಳಿಗಲ್ಲ, ಅವು ಮಕ್ಕಳ ಹೆತ್ತವರಿಗೆ. ನೀವು ಕಲಿಸಬೇಕಾದುದು, ಪ್ರಾಜೆಕ್ಟ್ ವರ್ಕ್ ಕೊಡಬೇಕಾದುದು ಮಕ್ಕಳಿಗೋ ಅವರ ಹೆತ್ತವರಿಗೋ..? ಇಂತಹ ಅಪ್ರಾಮಾಣಿಕತೆಗಳನ್ನು ಮಕ್ಕಳಲ್ಲಿ ಬೆಳೆಸುವುದೇ ಅಧ್ಯಾಪಕರು ಎಂದರೆ ತಪ್ಪಾಗದು. ತಮಗೆ ಹೆಚ್ಚು ಅಂಕ ಸಿಗಬೇಕು, ತಮ್ಮದು ಇತರರಿಗಿಂತ ಚಂದ ಆಗ್ಬೇಕು ಎಂದು ಮಕ್ಕಳು ತಮ್ಮ ಹೆತ್ತವರಿಂದಲೇ ಎಲ್ಲವನ್ನೂ ಅಥವಾ ಬಹುತೇಕ ಕೆಲಸವನ್ನು ಮಾಡಿಸುತ್ತಾರೆ.
ಇಂತಹ ಶಿಕ್ಷಣ ಪದ್ಧತಿಯಿಂದ ನಾವು ನಮ್ಮ ಮಕ್ಕಳಿಗೆ ಏನನ್ನು ಕಲಿಸಲು, ಏನನ್ನು ಕೊಡಲು ಸಾಧ್ಯ ಎಂದು ಕೆಲಕ್ಷಣ ಯೋಚಿಸಿ ನೋಡಿ. ಇದಕ್ಕಿಂತ ಮಕ್ಕಳನ್ನು ಅವರಷ್ಟಕ್ಕೆ ಆಡಿ, ಕುಣಿದು, ಚೇಷ್ಟೆ ಮಾಡುತ್ತಾ ಮಕ್ಕಳಾಗಿಯೇ ಬೆಳೆಯಬಿಟ್ಟರೆ ಮಕ್ಕಳಲ್ಲಿ ಮಗುತನ ಸಹಜವಾಗಿಯೇ ಉಳಿಯುತ್ತದೆ. ಸಹಜವಾಗಿಯೇ ಅವರಲ್ಲಿ ಅಡಗಿರುವ ಪ್ರತಿಭೆ ಅರಳುತ್ತವೆ. ಮಕ್ಕಳು ಕುಂಡದಲ್ಲಿ ಬೆಳೆಸುವ ಗಿಡವಾಗದಿರಲಿ, ಕಾಡು ಮರಗಳಾಗಲಿ. ಕುಂಡದ ಗಿಡಗಳಿಗೆ ಸದಾ ನಾವೇ ರಕ್ಷಣೆ ಕೊಡಬೇಕು. ಕಾಡು ಮರಗಳು ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲೂ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಮರ್ಥವಿರುತ್ತವೆ.
....................................... ಇಸ್ಮತ್ ಪಜೀರ್ ಪೆರ್ನಪಾಡಿ ಮನೆ , ಪಜೀರು ಅಂಚೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 98808 42203
*******************************************

Ads on article

Advertise in articles 1

advertising articles 2

Advertise under the article