-->
ಹಕ್ಕಿ ಕಥೆ : ಸಂಚಿಕೆ - 77

ಹಕ್ಕಿ ಕಥೆ : ಸಂಚಿಕೆ - 77

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
                 
              ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಸುಮಾರು ಹತ್ತು ವರ್ಷಗಳ ಹಿಂದೆ ಅರಣ್ಯ ಇಲಾಖೆ ನಡೆಸುವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ಗಣತಿಯಲ್ಲಿ ಸ್ವಯಂಸೇವಕನಾಗಿ ನಾನು ಭಾಗವಹಿಸಿದ್ದೆ. ಕುದುರೆಮುಖದ ಕಾಡಿನಲ್ಲಿ ಗಣತಿ ಕೆಲಸ ನಡೆಯಬೇಕಿತ್ತು. ಸುಮಾರು ಹತ್ತು ತಂಡಗಳು ಕಾಡಿನ ಬೇರೆಬೇರೆ ಭಾಗಗಳಲ್ಲಿ ಗಣತಿ ಕೆಲಸ ನಿರ್ವಹಿಸಬೇಕಿತ್ತು. ಪ್ರತಿ ತಂಡದಲ್ಲಿ ಫಾರೆಸ್ಟ್ ಗಾರ್ಡ್ ಅಥವಾ ವಾಚರ್ ಮತ್ತು ಅವರಿಗೆ ಸಹಾಯಕರಾಗಿ ಸ್ವಯಂಸೇವಕರಾದ ನಾವು ಕೆಲಸ ನಿರ್ವಹಿಸಬೇಕಿತ್ತು. ನಮ್ಮ ಕೆಲಸ ಏನು, ನಾವು ಹೇಗೆ ಮಾಹಿತಿ ಸಂಗ್ರಹಿಸಬೇಕು, ನಮ್ಮ ಉಡುಗೆ ತೊಡುಗೆ ಹೇಗಿರಬೇಕು, ಏನೆಲ್ಲ ಮುಂಜಾಗರೂಕತೆ ತೆಗೆದುಕೊಳ್ಳಬೇಕು, ಎಲ್ಲ ಮಾಹಿತಿ ನೀಡಿದ್ದರು. 
        ನನಗೆ ಪಾರೆಸ್ಟ್ ಗಾರ್ಡ್ ರಾಮಚಂದ್ರ ನಾಯಕ್ ತಂಡದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ರಾಮ್ ನನಗೆ ಮೊದಲೇ ಪರಿಚಯ ಇದ್ದುದರಿಂದ ಬಹಳ ಸಂತೋಷವೇ ಆಯ್ತು. ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ನಾವು ನಮ್ಮ ಪ್ರದೇಶದಲ್ಲಿ ಇದ್ದು ಗಣತಿ ಕೆಲಸ ಮಾಡಬೇಕಿತ್ತು. ಹೀಗೇ ಒಂದು ದಿನ ಗಣತಿ ಕೆಲಸ ಮುಗಿಸಿ ಮರದ ಕೆಳಗೆ ಕುಳಿತು ಬುತ್ತಿ ಬಿಚ್ಚಿ ತಿಂಡಿ ತಿನ್ನುತ್ತಿದ್ದೆವು. ಆಗಲೇ ಸುಮಾರು ಹತ್ತೂವರೆ ಗಂಟೆ ಆಗಿತ್ತು. ಗುಡ್ಡಗಳ ಹಿಂದೆ ಎಲ್ಲಿಂದಲೋ ಒಂದು ಹಕ್ಕಿ ಹಾರಿ ಬಂತು. ಸುಟ್ಟ ಇಟ್ಟಿಗೆಯ ಮೈಬಣ್ಣ, ತಲೆ ಸ್ವಲ್ಪ ಬೂದು ಬಣ್ಣ, ಬೀಸಣಿಗೆಯಂತಹ ಬಾಲ ಮೈಮೇಲೆಲ್ಲ ಕಂದು ಬಣ್ಣದ ಚುಕ್ಕೆಗಳು. ವೇಗವಾಗಿ ಹಾರಿ ಬಂದರೂ ಆಕಾಶದ ನಡುವೆ ಒಮ್ಮೆಲೇ ಯಾವುದೇ ಆಧಾರ ಇಲ್ಲದೇ ಒಂದೇ ಜಾಗದಲ್ಲಿ ರೆಕ್ಕೆಗಳನ್ನು ಬಡಿಯುತ್ತಾ ಹೆಲಿಕಾಪ್ಟರ್ ನಂತೆ ನಿಂತುಬಿಟ್ಟಿತು. ತನ್ನ ತಲೆಯನ್ನು ಕೆಳಗೆ ಬಗ್ಗಿಸಿ ತದೇಕಚಿತ್ತದಿಂದ ಏನನ್ನೋ ನೋಡುತ್ತಿತ್ತು, ರೆಕ್ಕೆಗಳು ಬಡಿದುಕೊಳ್ಳುತ್ತಿದ್ದವು. ಬಾಂಬ್ ಹಾಕಲು ಕಾಯುತ್ತಿದ್ದ ಯುದ್ಧ ವಿಮಾನದಂತೆ ಒಮ್ಮೆಲೇ ಕೆಳಗೆ ಡೈವ್ ಹೊಡೆದು ಪುಟಾಣಿ ಇಲಿಯಂತಹ ಏನೋ ಒಂದನ್ನು ಹಿಡಿದುಕೊಂಡು ಹಾರಿ ಹೋಯಿತು. ನೋಡುತ್ತಿದ್ದ ವಿಡಿಯೋವನ್ನು ಒಮ್ಮೆಲೇ ನಿಲ್ಲಿಸಿದಂತೆ ಹಕ್ಕಿ ಆಕಾಶದಲ್ಲಿ ನಿಂತ ಚಿತ್ರ ಮಾತ್ರ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು.
       ಬಹಳ ಕುತೂಹಲದಿಂದಲೇ ನಮ್ಮ ವಸತಿಗೆ ಹಿಂದಿರುಗಿ ಹಕ್ಕಿಯ ಪುಸ್ತಕ ತೆಗೆದು ಹುಡುಕಿದೆವು. ಆಗಲೇ ತಿಳಿದದ್ದು ಈ ಹಕ್ಕಿ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳ ಖಾಯಂ ನಿವಾಸಿ ಎಂದು.  ಚಳಿಗಾಲದಲ್ಲಿ ದೇಶದ ಇತರ ಭಾಗಗಳಿಗೆ ವಲಸೆ ಹೋಗುವ ಪಾರಿವಾಳ ಗಾತ್ರದ ಈ ಹಕ್ಕಿಯನ್ನು ಈಗ ಚಳಿಗಾಲದಲ್ಲಿ ಭಾರತದಾದ್ಯಂತ ನೋಡಬಹುದು. ಇಲಿ, ಹಲ್ಲಿ ಮತ್ತು ಕೀಟಗಳೇ ಇದರ ಮುಖ್ಯ ಆಹಾರ. ಎಪ್ರಿಲ್ ನಿಂದ ಜೂನ್ ತಿಂಗಳ ನಡುವೆ ಮರದ ಮೇಲೆ ಕಡ್ಡಿಗಳಿಂದ ಮಾಡಿದ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ ಎಂದು ಅಧ್ಯಯನಕಾರರು ಹೇಳುತ್ತಾರೆ. ಹಗಲಿನ ಬಿಸಿಲಿನಲ್ಲಿ ಹಾರಾಡುತ್ತ ಆಕಾಶದಲ್ಲಿ ಗಕ್ಕನೇ ನಿಂತುಬಿಡುವ ಜಾಣ ಹಕ್ಕಿ ನಿಮ್ಮ ಊರಲ್ಲೂ ನೋಡಲು ಸಿಗಬಹುದು. 
ಕನ್ನಡ ಹೆಸರು: ಚೋರೆ ಚಾಣ
ಇಂಗ್ಲೀಷ್ ಹೆಸರು: Common Kestrel
ವೈಜ್ಞಾನಿಕ ಹೆಸರು: Falco tinnunculus
ಚಿತ್ರ ಕೃಪೆ : ಆಶೀಶ್
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article