-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
               ಹೊಂದಾಣಿಕೆ ಅಥವಾ ‘Adjustment’ ಎಲ್ಲರಿಗೂ ಪರಿಚಿತ ಪದ. ನಮ್ಮ ಜೀವನದಲ್ಲಿ ಹೊಂದಾಣಿಕೆಯಿರದೇ ಹೋದರೆ ಜೀವನವೇ ವ್ಯರ್ಥವಾಗುತ್ತದೆ. ಹೊಂದಾಣಿಕೆಯು ಮನುಷ್ಯರೊಳಗೆ, ಪ್ರಾಣಿ ಪಕ್ಷಿಗಳೊಡನೆ, ಪರಿಸರದೊಡನೆ ಇರಲೇಬೇಕಾದ ಮನೋಗುಣವದು. ಪ್ರತಿಯೊಬ್ಬರಿಗೂ ವೈಯಕ್ತಿಕ ಬದುಕು, ಔದ್ಯೋಗಿಕ ಬದುಕು ಮತ್ತು ಸಾಮಾಜಿಕ ಬದುಕು ಇದ್ದೇ ಇರುತ್ತದೆ. ಹೊಂದಾಣಿಕೆ ರಹಿತವಾದರೆ ಈ ಬದುಕು ಶೂನ್ಯ. ವೈಯಕ್ತಿಕ ಬದುಕಿನಲ್ಲಿ ಭಾವನೆ ಮತ್ತು ಅಂತಃಕರಣ ಪ್ರಧಾನ ಭೂಮಿಕೆ ಪಡೆದಿದೆ. ಮನೆಯೊಳಗೆ ಕೆಲವರು ಟ.ವಿ. ವೀಕ್ಷಣೆಯಲ್ಲಿದ್ದಾರೆಂದಿರಲಿ. ನಿಮಗೆ ಮೊಬೈಲ್ ಕರೆ ಬಂದಾಗ ಅಲ್ಲೇ ಕುಳಿತು ಮಾತನಾಡುವುದಿಲ್ಲ. ಟಿ.ವಿ ನೋಡುವವರಿಗೆ ಕಿರಿ ಕಿರಿ ಬೇಡವೆಂದೋ, ಟಿ.ವಿ. ಧ್ವನಿ ಮಾತುಕತೆಗೆ ಭಂಗವಾಗ ಬಹುದೆಂದೋ ಸ್ವಲ್ಪ ದೂರ ಹೋಗಿ ಮಾತನಾಡುವಿರಿ. ಇದು ವೈಯಕ್ತಿಕ ಹೊಂದಾಣಿಕೆ. 
        ನಮ್ಮ ಸಹೋದರ ಸಹೋದರಿಯರಲ್ಲಿ ಯಾರೋ ಗಟ್ಟಿಯಾಗಿ ಓದುತ್ತಾರೆ. ನಾವೂ ಅಲ್ಲೇ ಕುಳಿತು ಓದಿದರೆ ನಮಗೂ ಹಾನಿ, ಅವರಿಗೂ ಸಮಸ್ಯೆ. ದೂರದಲ್ಲಿ ಬೇರೆ ಸ್ಥಳವನ್ನು ಅರಸುತ್ತೇವೆ. ಇಲ್ಲಿಯೂ ವೈಯಕ್ತಿಕ ಹೊಂದಾಣಿಕೆಯಿದ್ದರೆ ಮನಸ್ತಾಪ ಬಾರದು. ಪರಸ್ಪರರ ನಡುವೆ ಅನ್ಯೋನ್ಯತೆ ಮತ್ತು ಗೌರವ ಬಲಗೊಳ್ಳುತ್ತದೆ. ಸುಮಧುರ ಸಂಬಂಧ, ಪ್ರೇಮದ ಬಂಧ ಬಲಗೊಳ್ಳುತ್ತದೆ. ಇದರ ಬದಲಾಗಿ ಟಿ.ವಿ. ಆಫ್ ಮಾಡಿದರೆ, ಸಹೋದರ ಅಥವಾ ಸಹೋದರಿಯನ್ನು ದೂರ ಹೋಗಿ ಓದಿ ಎಂದರೆ ಅದೊಂದು ಯುದ್ಧ ಭೂಮಿಯಾಗಿ ಬದಲಾಗುವುದು ಖಂಡಿತ. ವೈಯಕ್ತಿಕ ಹೊಂದಾಣಿಕೆ ಸೃಷ್ಠಿ ಮತ್ತು ಸ್ಥಿತಿಗಳಿಗೆ ಪೂರಕ. ಕಚೇರಿಯೊಳಗೆ ಹೊಂದಾಣಿಕೆಯಿರದೇ ಇದ್ದರೆ ಸಮಾಜಕ್ಕೆ ದ್ರೋಹಮಾಡಿದಂತಾಗುತ್ತದೆ. ಉಂಡ ಮನೆಗೆ ಎರಡು ಬಗೆವ ಪಾಪ ಕೃತ್ಯವದು. ಪ್ರತಿಯೊಂದು ಕಚೇರಿಯಲ್ಲೂ ಕೆಲಸಗಳ ಹಂಚೋಣವಿರುತ್ತದೆ. ಕೆಲಸಗಳು ನೆರವುಗಳ ಕೊಡು ಕೊಳ್ಳುವಿಕೆಗಳ ಮೂಲಕ ನಡೆಯಲೇ ಬೇಕಾಗುತ್ತದೆ. ಕಾಲೆಳೆಯುವ ಜಾಯಮಾನದವರು ಒಬ್ಬರಿದ್ದರೂ ಹಾಲಿಗೆ ಹುಳಿ ಹಿಂಡಿದಂತೆಯೇ ವಿಷಮವಾಗುತ್ತದೆ. ತನಗೆ ಮುನಿಸಿರುವವನಿಗೆ ಪಾಠ ಕಲಿಸಲು ಕಚೇರಿ ಕೆಲಸದಲ್ಲಿ ಆಟವಾಡಲು ಹೊರಟರೆ ಮುಂದಿನವರ ಎಲ್ಲ ಕೆಲಸಗಳು ತಡೆಯಲ್ಪಡುತ್ತವೆ ಮತ್ತು ಪ್ರಜೆಗಳಿಗೆ ಕಷ್ಟ ನಷ್ಟಗಳಾಗುತ್ತವೆ. ಸಾಮಾಜಿಕ ಹೊಂದಾಣಿಕೆಯಿಂದ ಸಮಾಜಕ್ಕೆ ಒಳಿತಾಗುತ್ತದೆ.
       ನಮ್ಮ ದೇಹದ ಅಂಗಗಳು ನಮಗೆ ಹೊಂದಾಣಿಕೆಯ ಪಾಠವನ್ನು ಕಲಿಸುತ್ತವೆ. ತಿನ್ನುವ ಆಹಾರ ತಟ್ಟೆಯಿಂದ ಕೈ ಬಾಯಿಗಳ ಮೂಲಕ ಹೊರಟು ಜಠರವನ್ನು ಸೇರಿ, ಪಚನಾ ನಂತರ ಗುದ ದ್ವಾರದ ಮೂಲಕ ಹೊರ ಬರುವ ತನಕದ ಜೀರ್ಣಾಂಗ ವ್ಯವಸ್ಥೆಯ ಎಲ್ಲ ಅಂಗಗಳೂ ತಮ್ಮ ಪಾಲಿನ ಕೆಲಸವನ್ನು ಬಹಳ ಹೊಂದಾಣಿಕೆಯಿಂದ ಮಾಡುತ್ತವೆಯಲ್ಲವೇ? “ನಾನು ಹೊಂದಾಣಿಕೆಯಿಂದ ಕೆಲಸ ಮಾಡುವುದಿಲ್ಲ” ಎಂದು ‘ಗಂಟಲು’ ಬಿಗುಮಾನ ತೋರಿಸಿದರೆ ಆರೋಗ್ಯವೇ ನಶಿಸುತ್ತದೆ. ಹೊಂದಾಣಿಕೆಯ ಕೊರತೆ ನಾಶಕ್ಕೆ ಕಾರಣ ಎಂಬುದು ನಿಶ್ಚಿತ. ಇಂದು ಸಂಬಂಧಗಳ ಕೊಂಡಿಗಳು ಕಳಚುವುದು ಹೆಚ್ಚು. ಸಂಬಂಧಗಳನ್ನು ಉಳಿಸಿ ಮುಂದುವರಿಸಲು ವ್ಯಕ್ತಿಗತ ಪ್ರತಿಷ್ಠೆಯೇ ತಡೆಗೋಡೆಗಳು. ವೇತನ, ಪದವಿ, ಅಧಿಕಾರಗಳು ಶಾಶ್ವತವಲ್ಲ. ಇವುಗಳ ಬಗ್ಗೆ ಬೀಗುವವರು ಕೆಲವು ದಿನಗಳಾದರೂ ಸ್ಮಶಾನದಲ್ಲಿ ವಾಸಿಸಬೇಕು. ಅಲ್ಲಿಗೆ ಅರಸನಿಂದ ತೊಡಗಿ ಆಳಿನ ತನಕ ಅನೇಕ ರೀತಿಯ ಶರೀರಗಳು ಬರುತ್ತವೆ. ಆ ಶರೀರಗಳಿಗೆ ತೋಡುವ ಗುಂಡಿಯ ಗಾತ್ರ ಒಂದೇ. ಮರಣದಲ್ಲಿ ನಮ್ಮ ಹಣ, ಹುದ್ದೆ, ಅಧಿಕಾರಗಳು ನೆರವಿಗೆ ಬರುವುದಿಲ್ಲ. ಸಂಬಂಧಗಳೇ ನೆರವಿಗೆ ಬರುತ್ತವೆ. ಸಂಬಂಧಗಳ ಉಳಿವಿಗೆ ಹೊಂದಾಣಿಕೆಯೇ ಪ್ರಬಲ ಮಾರ್ಗ.
     ದೇಹ ಮತ್ತು ಮನಸ್ಸುಗಳ ಹೊಂದಾಣಿಕೆಯೂ ಅತ್ಯಗತ್ಯ. ನಾವು ಬಹಳ ವೇಗದ ಓಟಗಾರನಾಗಲು ಮನಸ್ಸಿನಲ್ಲಿ ನಿರ್ಧಾರ ಮಾಡುತ್ತೇವೆ. ಮನಸ್ಸಿನ ನಿರ್ಧಾರವನ್ನು ದೇಹವೂ ಬೆಂಬಲಿಸಬೇಕು. ದೇಹ ಬೆಳಗ್ಗೆ ಬೇಗನೇ ಏಳಬೇಕು. ಓಟಕ್ಕೆ ಕೈ ಕಾಲುಗಳನ್ನು ಸಕ್ರಿಯಗೊಳಿಸಬೇಕು. ಕೈ ಕಾಲುಗಳ ಚಲನೆಗೆ ಪೂರಕವಾಗಿ ದೇಹದ ಎಲ್ಲ ಅವಯವಗಳೂ ಚಲನ ವಲನಗಳನ್ನು ಮಾಡಬೇಕು. ದೇಹ ಲವಲವಿಕೆಯನ್ನು ತೋರಬೇಕು. ಹೀಗೆ ಮನಸ್ಸು ದೇಹಗಳು ಹೊಂದಾಣಿಕೆಯಿಂದ ಸಾಗಿದಾಗ ನಮ್ಮ ಮನಸ್ಸಿನ ಕನಸು ನನಸಾಗುತ್ತದೆ. ಕೇವಲ ಓಟ ಮಾತ್ರವಲ್ಲ, ಎಲ್ಲ ಕೆಲಸಗಳಿಗೂ ದೇಹ-ಮನಸ್ಸುಗಳೊಳಗಿನ ಹೊಂದಾಣಿಕೆ, ನಿಕಟವರ್ತಿಗಳೊಡನೆ ಹೊಂದಾಣಿಕೆ, ಪರಿಸರದೊಂದಿಗೆ ಹೊಂದಾಣಿಕೆ..... ಹೀಗೆ ಎಲ್ಲ ರೀತಿಯ ಹೊಂದಾಣಿಕೆಗಳು ಬೇಕೇ ಬೇಕು. ಹೊಂದಿ ಬಾಳು, ನೊಂದು ಬಾಳಬೇಡ. ಈ ಲೋಕ ಆ ನಾಕವಾಗಲು ಹೊಂದಾಣಿಕೆಯ ಬಾಳ್ವೆಯೇ ರಾಜರಸ್ತೆ. ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************


Ads on article

Advertise in articles 1

advertising articles 2

Advertise under the article