-->
ಜೀವನ ಸಂಭ್ರಮ : ಸಂಚಿಕೆ - 65

ಜೀವನ ಸಂಭ್ರಮ : ಸಂಚಿಕೆ - 65

ಜೀವನ ಸಂಭ್ರಮ : ಸಂಚಿಕೆ - 65
                    
                  
         ಮಕ್ಕಳೇ, ನಮ್ಮ ಜೀವನದಲ್ಲಿ ಉತ್ಸಾಹ ಬಹಳ ಮುಖ್ಯ. ನಾನು ವಿದ್ಯಾರ್ಥಿ ಜೀವನದಲ್ಲಿ ಓದಿದ ಮತ್ತು ನನಗೆ ಪ್ರೇರಣೆ ನೀಡಿದ ಕಥೆ. ಇದನ್ನು ಓದಿ.
ಒಂದು ಊರಿನಲ್ಲಿ ಒಬ್ಬ ರಾಜನಿದ್ದನು. ಜನಾನುರಾಗಿ ಆಗಿದ್ದನು. ರಾಜ ಸಂತೋಷವಾಗಿ ರಾಜ್ಯಭಾರ ಮಾಡುತ್ತಿದ್ದನು. ಹೀಗಿರಬೇಕಾದರೆ ಪಕ್ಕದ ದೇಶದ ರಾಜ ಬಲಿಷ್ಠ ಸೇನೆಯೊಂದಿಗೆ ಈ ರಾಜ್ಯದ ಮೇಲೆ ಆಕ್ರಮಣ ಮಾಡಿದನು. ಈತನ ಸೈನ್ಯ ಅಷ್ಟು ಬಲಿಷ್ಠವಾಗಿರಲಿಲ್ಲ, ಹಾಗಾಗಿ ಸೋತು ಹೋದನು. ಪಕ್ಕದ ರಾಜನು ಅರಮನೆ ಸೇರಿದಂತೆ ಎಲ್ಲವನ್ನು ವಶಕ್ಕೆ ಪಡೆದನು. ಆಗ ಸೋತ ರಾಜ ತಪ್ಪಿಸಿಕೊಂಡು ಅರಣ್ಯಕ್ಕೆ ಹೋದನು. ಇವನನ್ನು ಹಿಂಬಾಲಿಸಿಕೊಂಡು ಪಕ್ಕದ ರಾಜ್ಯದ ಸೈನ್ಯ ಬಂದಿತು. ಆಗ ಆತನಿಗೆ ದಾರಿ ಕಾಣದೆ, ಕಲ್ಲಿನ ಗವಿಯಲ್ಲಿ ಅಡಗಿ ಕುಳಿತನು, ಹೆದರಿದ್ದನು. ಮನಸ್ಸಿನಲ್ಲಿ ತೀರ್ಮಾನ ಮಾಡಿದ. ಪಕ್ಕದ ರಾಜ್ಯದ ಸೈನಿಕರು ಬಂದೇ ಬರುತ್ತಾರೆ, ಪತ್ತೆ ಹಚ್ಚುತ್ತಾರೆ. ಇನ್ನೇನು ಮಾಡೋದು? ಶರಣಾಗುವುದು, ಎಂದು ತೀರ್ಮಾನಿಸಿದ್ದನು. ಆ ಗವಿ ಜೇಡರ ಬಲೆಯಿಂದ ತುಂಬಿಹೋಗಿತ್ತು. ಒಂದು ಜೇಡ ಬಲೆಯಲ್ಲಿ ಮೇಲಕ್ಕೆ ಹತ್ತಲು ಪ್ರಯತ್ನಿಸುತ್ತಿತ್ತು. ಆದರೆ ಜಾರಿ ಕೆಳಕ್ಕೆ ಬೀಳುತ್ತಿತ್ತು. ರಾಜನಿಗೆ ಕುತೂಹಲ ಬಂದು, ನೋಡಲು ಶುರು ಮಾಡಿದ. ಆ ಜೇಡ ಮೇಲಕ್ಕೆ ಹತ್ತಲು ಪ್ರಯತ್ನಿಸಿ, ಮೇಲಕ್ಕೆ ಸ್ವಲ್ಪ ದೂರ ಹೋಗುತ್ತಿತ್ತು, ಕೆಳಗೆ ಬೀಳುತ್ತಿತ್ತು. ಬಿದ್ದರೆ ಸುಮ್ಮನೆ ಇರುತಿರಲಿಲ್ಲ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಿದ್ದನು. ಹೀಗೆ ಸುಮಾರು 100 ಬಾರಿ ಮಾಡಿರಬಹುದು. ಕೊನೆಗೆ ಗುರಿ ಮುಟ್ಟಿತು. ಸೋಲಿನಿಂದ ಕೆಂಗಟ್ಟಿದ್ದ ರಾಜನಿಗೆ, ಒಂದು ಒಳ್ಳೆಯ ಸಂದೇಶ ಸಿಕ್ಕಿತ್ತು. ನಾನು ಈ ಸೋಲಿಗೆ ಹೆದರಿ, ಹೀಗೆ ಕುಳಿತರೆ ಆಗುವುದಿಲ್ಲ. ಆ ಜೇಡ ಅಷ್ಟು ಸಾರಿ ಸೋತರು, ಕೊನೆಗೆ ಗೆದ್ದಿರುವಾಗ, ನಾನೇಕೆ ಪ್ರಯತ್ನ ಮಾಡಬಾರದೆಂದು ಯೋಚಿಸಿ, ಮಾರು ವೇಷದಲ್ಲಿ ಪಕ್ಕದ ಊರಿಗೆ ಹೋಗಿ, ಸೈನ್ಯ ತಯಾರು ನಡೆಸಿ, ಪುನಃ ರಾಜ್ಯ ವಶಪಡಿಸಿಕೊಳ್ಳಲು ತಯಾರಿ ನಡೆಸಿದನು. ರಾಜನ ಮೇಲೆ ಯುದ್ಧ ಸಾರಿ, ಜಯಸಿ, ತನ್ನ ರಾಜ್ಯದ ಜೊತೆ ಪಕ್ಕದ ರಾಜ್ಯವನ್ನು ಪಡೆದಿದ್ದನು. ಈ ಕಥೆಯಲ್ಲಿ ರಾಜನು ಜೇಡನಿಂದ ಜೀವನೋತ್ಸಾಹದ ಪಾಠ ಕಲಿತಿದ್ದನು.
       ಇನ್ನೊಂದು ಕಥೆ ಎರಡು ಗೆಳೆಯ ಕಪ್ಪೆಗಳು ನಗೆಯುತ್ತ ನಗೆಯುತ್ತ ಒಂದು ಮನೆಯ ಒಳಗೆ ಪ್ರವೇಶ ಮಾಡಿದವು. ಮನೆಯೊಳಗಡೆ ಒಂದು ಕತ್ತು ಕಿರಿದಾದ ಪಾತ್ರೆಯಲ್ಲಿ ಹಾಲನ್ನು ಕಾಯಿಸಿ ಹೆಪ್ಪು ಹಾಕಿ ಇಟ್ಟಿದ್ದರು. ಹಾಲು ಕತ್ತಿನಿಂದ ಸುಮಾರು ಕೆಳಗೆ ಇತ್ತು, ಈ ಎರಡು ಕಪ್ಪೆಗಳು ನೆಗದು ಹಾಲಿನೊಳಕ್ಕೆ ಬಿದ್ದವು. ಸವಿ ಸವಿಯಾದ ಹಾಲನ್ನು ಕುಡಿದವು. ಹಾಲು ಕುಡಿದ ನಂತರ ಹೊರಗೆ ತೆಗೆಯಲು ಪ್ರಯತ್ನಿಸಿದವು. ಜಿಗಿಯಲು ಆಗುತ್ತಿಲ್ಲ. ಕಾಲಿಗೆ ಗಟ್ಟಿಯಾದ ವಸ್ತು ಸಿಕ್ಕಿದ್ದರೆ ಜಿಗಿಯಬಹುದು. ಹಾಲು ದ್ರವ ಪದಾರ್ಥ ವಾದುದರಿಂದ ಕಾಲಿಗೆ ಆಧಾರ ಸಿಗುತ್ತಿಲ್ಲ. ಮೇಲೆ ಜಿಗಿಯಲು ಆಗುತ್ತಿಲ್ಲ. ಆಗ ಒಂದು ಕಪ್ಪೆ ಹೇಳಿತು. ಗೆಳೆಯ, ನಮ್ಮ ಜೀವನ ಮುಗೀತು. ನಾಳೆ ಮನೆಯ ಯಜಮಾನ ನಮ್ಮನ್ನು ನೋಡಿದರೆ, ನಮ್ಮನ್ನು ಹೊಡೆದು ಸಾಯಿಸುತ್ತಾನೆ. ನಾಳೆ ಆತ ಬಡಿಯುವ ಏಟನ್ನು ನೆನೆಸಿಕೊಂಡರೆ, "ಅಬ್ಬಾ" ಭಯವಾಗುತ್ತದೆ. ಏಟು ತಿಂದು ಸಾಯೋದಕ್ಕಿಂತ, ಇಂದೇ ಈ ಹಾಲಿನಲ್ಲಿ ಮುಳುಗಿ ಸಾಯುವುದು ಒಳಿತು ಅಂದಿತು. ಅದಕ್ಕೆ ಇನ್ನೊಂದು ಕಪ್ಪೆ ಹೇಳಿತು. ನಮಗೆ ಇನ್ನೂ 12 ಗಂಟೆ ಸಮಯವಿದೆ. ಹಾಗೆಲ್ಲ ಚಿಂತಿಸಬೇಡ. ಸುಮ್ಮನಿರು ಗೆಳೆಯ ಎಂದಿತು. ಆ ಕಪ್ಪೆ ಹೇಳಿದ್ದು , "ನೀನು ಏನು ಬೇಕಾದರೂ ಮಾಡಿಕೋ. ನಾನು ಇಂದೇ ಸಾಯುತ್ತೇನೆ..!? ಎಂದು ಮುಳುಗೇ ಬಿಟ್ಟಿತು, ಪ್ರಾಣ ಕಳೆದುಕೊಂಡಿತು. ಇನ್ನೊಂದು ಕಪ್ಪೆ ಚಿಂತಿಸಿತು. ಬೆಳಗಾಗಲು ಇನ್ನೂ 12 ಗಂಟೆ ಇದೆ. ಬೆಳಿಗ್ಗೆ ಹೇಗಿದ್ದರೂ ಸಾಯಬೇಕು. ಅಲ್ಲಿಯವರೆಗೂ ಸಂತೋಷದಿಂದ ಇರಬೇಕೆಂದು ತೀರ್ಮಾನಿಸಿ, ಆನಂದದಿಂದ ಓಡಾಡಿತು. ಆ ಸಂತೋಷದಿಂದ ಓಡಾಡುತ್ತಿರಬೇಕಾದರೆ, ಹಾಲು ಕಡೆದಂತೆ ಆಗಿ ಬೆಣ್ಣೆ ರೂಪುಗೊಳ್ಳಲು ಪ್ರಾರಂಭಿಸಿತು. ಆ ಓಡಾಟಕ್ಕೆ ಬೆಣ್ಣೆ ಒಂದು ಕಡೆ ಬಂದು ಸೇರಿತು. ಬೆಣ್ಣೆ ಗಟ್ಟಿಯಾಯಿತು. ಬೆಣ್ಣೆಯ ಮೇಲೆ ಗೊತ್ತಿಲ್ಲದೆ ಕಾಲಿಟ್ಟಿತ್ತು. ಕಾಲಿಗೆ ಆಸರೆ ಸಿಕ್ಕಿತು. ಹಾಲಿನ ಪಾತ್ರೆಯಿಂದ ಹೊರ ಜಿಗಿದಿತ್ತು .ಅದರ ಸಂತೋಷಕ್ಕೆ ಮಿತಿ ಇಲ್ಲದಂತದ ಆಗಿತ್ತು. ಜೀವ ಉಳಿದು, ಕುಣಿದು ಕುಪ್ಪಳಿಸಿ ,ಜೀವಂತವಾಗಿ ಹೊರಗೆ ಬಂದಿತ್ತು. ಈ ಕಥೆಯಲ್ಲಿ ಕಪ್ಪೆ ಸಂತೋಷ ಪಡಲು ತನ್ನ ಕಾಲನ್ನು ಬಳಸಿ ಓಡಾಡಿತ್ತು .ಅಂದರೆ ಇಲ್ಲಿ ಕಪ್ಪೆಯ ಕಾರ್ಯೋತ್ಸಾಹ ಗುರುತಿಸಬಹುದು.
ಮಕ್ಕಳೆ, ಈ ಕಥೆಯಲ್ಲಿ ಕಂಡು ಬರುವುದೇನೆಂದರೆ, ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು, ಅಪಾಯಗಳು, ಅಪಾಯದ ಸಂದರ್ಭಗಳು ಬರುತ್ತವೆ. ಆಗ ಧೃತಿಗೆಟ್ಟರೆ ಜೀವನಕ್ಕೆ ಅಪಾಯ. ಜೀವನೋತ್ಸಾಹ ಮತ್ತು ಕಾರ್ಯಯೋತ್ಸಾಹದಿಂದ ಪ್ರಯತ್ನಿಸಿದರೆ ಯಾವುದಾದರೂ ಒಂದು ಆಸರೆ, ಮಾರ್ಗ ದೊರೆಕೇ ದೊರಕುತ್ತದೆ. ಅದು ನಮಗೆ ಅರಿವಿಲ್ಲದಂತೆ ಆಸರೆ ಸಿಕ್ಕೇ ಸಿಗುತ್ತದೆ. ಆದುದರಿಂದ ಜೀವನದ ಉದ್ದಕ್ಕೂ, ಜೀವನೋತ್ಸಾಹ ಮತ್ತು ಕಾರ್ಯ ಉತ್ಸಾಹದಿಂದ ಬದುಕೋಣ. ಎಂತಹ ಸಂದರ್ಭದಲ್ಲಿಯೂ ಉತ್ಸಾಹ ಕಳೆದುಕೊಳ್ಳಬಾರದು.
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article