ಹಕ್ಕಿ ಕಥೆ : ಸಂಚಿಕೆ - 79
Tuesday, December 27, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಕೊರೊನಾ ಲಾಕ್ ಡೌನ್ ಆಗಿದ್ದ ಕಾಲ. ಎಲ್ಲಿಗೂ ಹೋಗುವುದು ಸಾಧ್ಯ ಇರಲಿಲ್ಲ. ಮನೆಯ ಆಸುಪಾಸಿನಲ್ಲೇ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಹೋಗಿ ಬರುತ್ತಿದ್ದೆ. ಅವತ್ತು ಒಂದು ದಿನ ಪಕ್ಕದ ಹಳ್ಳಿಗೆ ಹೋಗುವ ಮಾರ್ಗದಲ್ಲಿ ಎರಡು ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ಹಿಂದೆ ಬರುತ್ತಿದ್ದೆ. ಜನಸಂಚಾರ ಹೆಚ್ಚಾಗಿ ಇಲ್ಲದ ರಸ್ತೆ. ನನ್ನ ಮುಂದೆ ಹಕ್ಕಿಯೊಂದು ಹಾರಿ ರಸ್ತೆಯ ಇನ್ನೊಂದು ಬದಿಯ ಪೊದೆಗಳಲ್ಲಿ ಹೋಗಿ ಕುಳಿತುಕೊಂಡಿತು. ಬೈನಾಕುಲರ್ ನಿಂದ ನೋಡಲು ಪ್ರಯತ್ನಿಸಿದೆ. ಆದರೆ ಪೊದೆಗಳ ಸಂದಿಯಲ್ಲಿ ಕಾಣುತ್ತಿರಲಿಲ್ಲ. ಹಕ್ಕಿ ತುಸು ಆಕರ್ಷಕವಾಗಿತ್ತು. ಆದ್ದರಿಂದ ಅದನ್ನು ಸರಿಯಾಗಿ ನೋಡದೆ ಮುಂದೆ ಹೋಗಲು ಮನಸ್ಸು ಕೇಳಲಿಲ್ಲ. ಆ ಕಡೆಗೆ ಸಣ್ಣ ಕಾಲುದಾರಿಯೂ ಇತ್ತು. ನಿಧಾನವಾಗಿ ಆ ದಾರಿಯಲ್ಲಿ ಹೆಜ್ಜೆ ಹಾಕಿದೆ. ಮುಂದೆ ಒಂದು ಸಣ್ಣ ನೀರ ಹರಿವಿನ ಕಡೆಗೆ ಆ ದಾರಿ ಹೋಗುತ್ತಿತ್ತು. ಅಲ್ಲೇ ಹೋಗಿ ಒಂದು ಕಲ್ಲಿನ ಮೇಲೆ ಕುಳಿತುಕೊಂಡು ಈ ಹಕ್ಕಿ ಕಾಣುತ್ತದೆಯೇ ಎಂದು ಹುಡುಕಿದೆ. ಒಂದಷ್ಟು ದೂರದಲ್ಲಿ ತರಗೆಲೆಗಳ ಮಧ್ಯೆ ಏನೋ ಓಡಾಡಿದ್ದು ಕಾಣಿಸಿತು. ಹೌದು ಅದೇ ಆಕರ್ಷಕ ಕೇಸರಿ ಮಿಶ್ರಿತ ಕಂದು ಬಣ್ಣದ ಹಕ್ಕಿ. ತಿಳಿನೀಲಿ ಮಿಶ್ರಿತ ಬೂದು ಬಣ್ಣದ ರೆಕ್ಕೆ, ಕಣ್ಣಿನ ಕೆಳಗೆ ಮತ್ತು ಕತ್ತಿನ ಭಾಗದಲ್ಲಿ ತಿಳಿ ಬಿಳಿ ಬಣ್ಣದ ನಡುವೆ ಎರಡು ಪಟ್ಟಿಗಳು, ಕಂದು ಬಣ್ಣದ ಕಾಲು. ಕುಪ್ಪಳಿಸುತ್ತಾ ತರಗೆಲೆಗಳ ನಡುವೆ ಹುಳು ಹುಪ್ಪಟೆಗಳನ್ನು, ಎರೆಹುಳುಗಳನ್ನು ಹುಡುಕಿ ತಿನ್ನುತ್ತಿತ್ತು.
ಆ ನಂತರ ಹಲವು ಬಾರಿ ಈ ಹಕ್ಕಿಯನ್ನು ನೋಡಿದ್ದೇನೆ. ಒಂದು ಬಾರಿ ಬೇಸಗೆಯಲ್ಲಿ ಮತ್ತೆ ಅದೇ ಜಾಗದಲ್ಲಿ ಯಾವುದೋ ಹಕ್ಕಿ ಬೇರೆಬೇರೆ ಧ್ವನಿಗಳನ್ನು ಹೊರಡಿಸುತ್ತಾ ನಿರಂತರವಾಗಿ ಹಾಡುವುದು ಕೇಳಿಸಿತು. ಹುಡುಕುತ್ತಾ ಹೋದರೆ ಈ ಬಾರಿ ಮರದ ಮೇಲೆ ತುಸು ಎತ್ತರದಲ್ಲಿ ಬಹಳ ಅಚ್ಚುಕಟ್ಟಾದ ಜಾಗದಲ್ಲಿ ಹುಳಿತು ನಿರಂತರವಾಗಿ ಹಾಡುತ್ತಿತ್ತು. ಸುಮಾರು ಆರು ಬಗೆಯ ಹಕ್ಕಿಗಳ ಧ್ವನಿಯನ್ನು ಅನುಕರಿಸುತ್ತಿತ್ತು. ನಾನು ಅಲ್ಲೇ ಕುಳಿತು ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಅದರ ಹಾಡು ಕೇಳಿದೆ. ಆಮೇಲೂ ಕೇಳುವ ಮನಸಿದ್ದರೂ ಸೊಳ್ಳೆಗಳ ಕಾಟದಿಂದ ಅಲ್ಲಿ ಕೂರಲಾರದೆ ಹೊರಟೆ. ಕುರುಚಲು ಕಾಡು, ಪೊದೆ, ತೋಟ ಇರುವ ಕಡೆಗೆ ಈ ಹಕ್ಕಿ ಸಾಮಾನ್ಯವಾಗಿ ಕಾಣಲು ಸಿಗುತ್ತದೆ. ಎಪ್ರಿಲ್ ನಿಂದ ಜೂನ್ ತಿಂಗಳಿನ ನಡುವೆ ಇದರ ಸಂತಾನಾಭಿವೃದ್ಧಿ ಕಾಲ. ಮರದ ಮೇಲೆ ಮೂರುನಾಲ್ಕು ಕೊಂಬೆಗಳು ಇರುವಲ್ಲಿ ಹುಲ್ಲು, ಮಣ್ಣು ಮೊದಲಾದ ವಸ್ತುಗಳನ್ನು ಬಳಸಿ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ ಎಂದು ಅಧ್ಯಯನಕಾರರು ಹೇಳುತ್ತಾರೆ. ನಿಮ್ಮ ಆಸುಪಾಸಿನಲ್ಲೂ ಈ ಹಕ್ಕಿ ಇರಬಹುದು.
ಕನ್ನಡ ಹೆಸರು: ಕಂದುತಲೆ ನೆಲಸಿಳ್ಳಾರ
ಇಂಗ್ಲೀಷ್ ಹೆಸರು: Orange-headed Thrush
ವೈಜ್ಞಾನಿಕ ಹೆಸರು: Zoothera citrina
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************