-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
  
         ಮಕ್ಕಳೇ.... ಚಂಚಲ ಅಥವಾ ಚಂಚಲ್ ಎಂಬ ಹೆಸರುಗಳನ್ನು ನೀವು ಕೇಳಿರಲೂ ಬಹುದು. ಚಲ ಎಂದರೆ ಚಲನೆಯಿರುವ ಎಂದರ್ಥ. ಗಾಳಿ, ನೀರು, ಬೆಂಕಿ ಇವು ಒಂದೇ ಕಡೆ ನಿಂತಿರದು. ಚಲನಶೀಲವಾಗಿರವುದೇ ಅವುಗಳ ಗುಣ. ಪ್ರಾಣಿಗಳು, ಪಕ್ಷಿಗಳು, ವಾಹನಗಳು, ಜಲಚರಗಳು ಒಂದೇ ಕಡೆ ನಿಲ್ಲಲೂ ಬಲ್ಲವು, ಅಗತ್ಯ ಬಂದಾಗ ಚಲನೆಯನ್ನೂ ಮಾಡಬಲ್ಲವು. ನೀರನ್ನು ತಡೆಯೊಡ್ಡಿ ಮುಂದೆ ಮತ್ತು ಕೆಳಮುಖವಾಗಿ ಚಲಿಸದಂತೆ ನಿಲ್ಲಿಸಬಲ್ಲೆವಾದರೂ ಅದು ಮೇಲ್ಮುಖವಾಗಿ ಆವಿಯಾಗಿ ಚಲಿಸುವುದನ್ನು ನಿಲ್ಲಿಸಲು ಬಹಳ ಕಷ್ಟ. ಮರಗಿಡಗಳಿಗೆ, ಪೊದರು ಬಳ್ಳಿಗಳಿಗೆ ಕೂಡಾ ಬೆಳವಣಿಗೆಯ ಚಲನೆ ಇದೆ. ಕಟ್ಟಡಗಳು, ಬಂಡೆಗಳು ಚಲಿಸಲಾರವು. ಹಾಗಾದರೆ ಚಂಚಲ ಎಂಬ ಹೆಸರುಳ್ಳವರು ಚಲಿಸುತ್ತಲೇ ಇರುವರೇ? ಇಲ್ಲ. ಅವರು ಚಲಿಸುತ್ತಲೇ ಇರುವುದಿಲ್ಲ. ಆದರೆ ಅವರ ಮನಸ್ಸು ಒಂದೇ ಕಡೆ ನಿಲ್ಲವುದಿಲ್ಲ. ಸಮುದ್ರದ ತೆರೆಯಂತೆ ಚಲಿಸುತ್ತಲೇ ಇರುತ್ತದೆ. ಚಂಚಲ ಎಂಬ ಹೆಸರಿನವರಿಗೆ ಮಾತ್ರ ಚಂಚಲತೆ ಸೀಮಿತವಲ್ಲ. ಎಲ್ಲ ಹೆಸರಿನವರಲ್ಲೂ ಚಂಚಲತೆ ಸಾಮಾನ್ಯ. 
       ಚಂಚಲ ಮನಸ್ಸು, ಚಂಚಲತೆ, ಚಂಚಲ ಚಿತ್ತ, ಚಂಚಲವಾದ... ಹೀಗೆ ನೀವೂ ಬರವಣಿಗೆ ಮತ್ತು ಮಾತುಗಳಲ್ಲಿ ಬಳಸಿರುವಿರಿ. Instability ಎಂದು ಇಂಗ್ಲಿಷಿನಲ್ಲಿ ಪರ್ಯಾಯ ಪದವಿದೆ. ಗೊಂದಲಗಳಿಗೆ ಒಳಗಾದಾಗ ಮನಸ್ಸು ಚಂಚಲವಾಗುತ್ತದೆ. ಅತ್ಯಂತ ಸಣ್ಣ ವಿಷಯದಿಂದ ಬೃಹತ್ ವಿಚಾರದ ತನಕ ಚಂಚಲತೆಗೊಳಗಾಗುವುದು ಮನುಜ ಸಹಜ ಗುಣ. ಚಂಚಲ ಮನಸ್ಸಿನವರ ನಿರ್ಧಾರಗಳು ಅಸ್ಥಿರವಾಗಿರುತ್ತವೆ. ಒಬ್ಬನಿಗೆ ವ್ಯಾಪಾರ ಮಾಡಲು ಅಂಗಡಿ ತೆರೆಯಬೇಕೆಂಬ ಮನಸ್ಸಾಯಿತು. ಬಾಡಿಗೆ ಕಟ್ಟಡ ಪಡೆದುಕೊಂಡ. ಮುಂಗಡ ಬಾಡಿಗೆ ರೂ ಇಪ್ಪತ್ತು ಸಾವಿರ, ಠೇವಣಿ ರೂ ಎರಡು ಲಕ್ಷ ಕಟ್ಟಡ ಮಾಲಕನಿಗೆ ಪಾವತಿಸಿದ. ದಿನಸಿ ಸಾಮಾನುಗಳನ್ನು ತರಿಸಿದ. ನಿರೀಕ್ಷೆಯ ವ್ಯಾಪಾರವಾಗಲಿಲ್ಲವೆಂದು ಒಂದೆರಡು ದಿನದಲ್ಲೇ ವ್ಯಾಪಾರವನ್ನು ಕೈಬಿಡಲು ಹೊರಟ. ಬೇರೆ ಯಾರೋ ಒಬ್ಬರು ಆ ಅಂಗಡಿಯನ್ನು ಸಾಮಗ್ರಿ ಸಮೇತ ವಹಿಸಿಕೊಂಡರು. ಆದರೆ ಸಾಮಗ್ರಿಗಳ ಬಾಬತ್ತಿನಲ್ಲಿ ಅರ್ಧದಷ್ಠೂ ಹಣ ಪಡೆಯಲಾಗಲಿಲ್ಲ. ಮುಂಗಡ ನೀಡಿದ ಬಾಡಿಗೆ ಹಣ ಕೈತಪ್ಪಿತು. ರೂಪಾಯಿ ಎರಡು ಲಕ್ಷದ ನಿಬಡ್ಡಿ ಠೇವಣಿ ಹಿಂತಿರುಗಿ ಸಿಗಲು ಕರಾರಿನಂತೆ ಹತ್ತು ವರ್ಷ ಕಾಯಬೇಕಾಯಿತು. ಚಂಚಲ ಮನಸ್ಸು ಎಷ್ಟೊಂದು ನಷ್ಟಗಳಿಗೆ ಕಾರಣವಾಯಿತಲ್ಲವೇ? ಚಂಚಲತೆಯು ನಕಾರಾತ್ಮಕ ವ್ಯಕ್ತಿತ್ವ. ತನ್ನ ಜ್ಞಾನದಲ್ಲಿ ನಿರ್ದಿಷ್ಟತೆಯಿರದವರಿಗೆ ಚಂಚಲತೆ ಹೆಚ್ಚು. ಪರೀಕ್ಷೆಗೆ ಉತ್ತರ ಬರೆದು ತಾನು ಬರೆದುದು ತಪ್ಪಾಗಿರಬಹುದೆಂದು ಮನಸ್ಸು ಚಂಚಲಗೊಂಡು ಅದನ್ನು ತಿದ್ದಿ ಬರೆದು, ತಾನು ಮೊದಲು ಬರೆದುದೇ ಸರಿಯಾಗಿತ್ತೆಂದು ತಿಳಿದಾಗ, ಅಯ್ಯೋ ಎನ್ನುವವರನ್ನು ಕಂಡಿರುವಿರಲ್ಲವೇ? ಚಾಡಿ ಮಾತಿಗೆ ಚಂಚಲಗೊಳ್ಳುವವರೂ ಇದ್ದಾರೆ. ಮದುವೆಯ ದಿನಾಂಕ ನಿಗದಿಯಾಗಿ, ಯಾರೋ ಹೇಳಿದ ಸುಳ್ಳುಗಳಿಗೆ ಮನಸ್ಸು ಅಸ್ಥಿರಗೊಂಡು ಮದುವೆ ನಿಂತು ಹೋದ ಉದಾಹರಣೆಗಳು ಅನೇಕ ಇವೆ. 
ಮನೆ ಕಟ್ಟುವಾಗ ಚಂಚಲ ಮನಸ್ಸಿನವರು ಬಹಳ ಜಾಗರೂಕರಿರಬೇಕು. ನಿರ್ಮಾಣ ಹಂತದಲ್ಲಿ ಕಾಮಗಾರಿಯನ್ನು ವೀಕ್ಷಿಸಲು ಬಂದವರು ‘ಪುಕ್ಕಟೆ ಸಲಹೆ’ ಕೊಡುವುದುಂಟು. ಅವರೆಲ್ಲರ ಸಲಹೆಗಳಂತೆ ನಾವು ಕೆಲಸದ ದಿಕ್ಕು ಬದಲಿಸುತ್ತಾ ಹೋದರೆ ಅದು ಒಳ್ಳೆಯ ಮನೆಯಾಗದೆ ಯಾವುದೇ ರೂಪವಿರದ ಕಟ್ಟಡವಾಗಬಹುದು, ಆಗಾಗ ಮಾಡುವ ಬದಲಾವಣೆಗಳು ಆರ್ಥಿಕವಾಗಿ ನಷ್ಟವನ್ನೇ ಉಂಟುಮಾಡುತ್ತವೆ.
        ಕಾಗೆಯೊಂದು ರೊಟ್ಟಿಯನ್ನು ಕಚ್ಚಿಕೊಂಡು ಕೊಂಬೆಯಲ್ಲಿ ಕುಳಿತಿತ್ತು. ಇದನ್ನು ನೋಡಿದ ನರಿಗೆ ಆ ರೊಟ್ಟಿಯ ಮೇಲೆ ಆಸೆಯಾಯಿತು. ಕಾಗೆಯೊಡನೆ ರೊಟ್ಟಿ ಕೊಡೆಂದು ಕೇಳಿತು. ನನಗೇ ಬೇಕು. ಕೊಡಲಾರೆನೆಂದಿತು ಕಾಗೆ. ಜಾಣ ನರಿ ಕಾಗೆಯನ್ನು ಹೊಗಳ ತೊಡಗಿತು. ನಿನ್ನ ರೆಕ್ಕೆ ಅಂದ, ರೂಪ ಅಂದ, ಕೊಕ್ಕು ಅಂದ, ಕಾಲು ಅಂದ, ಮಾತು ಅಂದ, ಹಾಡು ಅಂದ ಎನ್ನುತ್ತಾ ಹೊಗಳುತ್ತಿದ್ದಂತೆ ಕಾಗೆಗೆ ಬಿಂಕ ಬಂತು, ಮನಸ್ಸು ಚಂಚಲವಾಯಿತು. ಕೊಕ್ಕಿನೆಡೆಯಲ್ಲಿ ರೊಟ್ಟಿಯಿದೆಯೆಂಬುದನ್ನು ಮರೆತು ಹಾಡತೊಡಗಿತು. ರೊಟ್ಟಿಯು ನರಿಯ ಪಾಲಾಯಿತು. ಮನಸನ್ನು ಚಂಚಲಗೊಳಿಸಿದುದರ ಪರಿಣಾಮ ಕಾಗೆಗೆ ರೊಟ್ಟಿ ನಷ್ಟ. 
        ನಮ್ಮನ್ನು ಚಂಚಲಗೊಳಿಸುವವರ ಬಗ್ಗೆಯೂ ನಾವು ಜಾಗರೂಕರಾಗಿರಬೇಕು.
ನಮ್ಮ ಯೋಚನೆ ಮತ್ತು ನಿರ್ಧಾರಗಳು ಸ್ಥಿರವಾಗಿರಬೇಕು. ಮನಸ್ಸನ್ನು ಗಾಳಿ ಬಂದೆಡೆಗೆ ತೂರಲು ಬಿಡಬಾರದು. ನಾವು ಮಾಡಿದ ನಿರ್ಧಾರವನ್ನು ಬದಲಿಸಲೇ ಬಾರದೆಂದಲ್ಲ. ಸೂಕ್ತ ಕಾರಣಗಳಿದ್ದರೆ ಮಾತ್ರ ಬದಲಾವಣೆ ಮಾಡಬೇಕು. ಕಾರಣಗಳು ಜಳ್ಳಾಗಿದ್ದಾಗ ನಿರ್ಧಾರಗಳನ್ನು ಬದಲಿಸುತ್ತಾ ಹೋದರೆ ವೈಯಕ್ತಿಕವಾಗಿಯೂ, ಕೌಟುಂಬಿಕವಾಗಿಯೂ, ಸಾಮಾಜಿಕವಾಗಿಯೂ ದೊಡ್ಡ ನಷ್ಟ ಖಚಿತ. ಚಂಚಲ ಮನಸ್ಸಿನವರು ಅಧಿಕಾರ ಸ್ಥಾನಗಳಲ್ಲಿರುವುದೂ ಅಪಾಯಕಾರಿ. ದೃಢ ಮನವು ಯಶಸ್ಸಿಗೆ ತಾರಕ.
ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************


Ads on article

Advertise in articles 1

advertising articles 2

Advertise under the article