-->
ಜೀವನ ಸಂಭ್ರಮ : ಸಂಚಿಕೆ - 62

ಜೀವನ ಸಂಭ್ರಮ : ಸಂಚಿಕೆ - 62

ಜೀವನ ಸಂಭ್ರಮ : ಸಂಚಿಕೆ - 62
                    
                  
          ಮಕ್ಕಳೇ...... ಇದೊಂದು ಸುಂದರ ಕಥೆ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ ಕಥೆ. ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆ ರಾಜ ಜನಾನುರಾಗಿ. ಜನರಿಗೂ ಅಚ್ಚು ಮೆಚ್ಚು. ಹೀಗಿರಬೇಕಾದರೆ ಒಮ್ಮೆ ಕಾಯಿಲೆ ಬಿದ್ದ. ದಿನೇ ದಿನೇ ಹಾಸಿಗೆ ಹಿಡಿದ. ದೇಹ ತುಂಬಾ ಬಡವಾಯಿತು. ರಾಜ್ಯದ ಬೇರೆ ಬೇರೆ ವೈದ್ಯರನ್ನು ರಾಣಿ ಕರೆಸಿ ಪರೀಕ್ಷಿಸಿದಳು. ಯಾರಿಗೂ ಏನು ಕಾಯಿಲೆ ಎಂಬುದು ತಿಳಿಯಲಿಲ್ಲ. ಒಮ್ಮೆ ಒಬ್ಬ ಸಂತ ಬಂದನು. ಬಂದು ಪರೀಕ್ಷಿಸಿ ಹೇಳಿದ, ಈ ರೋಗಕ್ಕೆ ನನ್ನಲ್ಲಿ ಔಷಧಿವಿದೆ. ಅಷ್ಟು ಮಾಡಿದರೆ ಸಾಕು ಎಂದನು. ಏನು ಔಷದ ಎಂದು ಮಂತ್ರಿ ಕೇಳಿದ. ಅದಕ್ಕೆ ಸಂತ ಹೇಳಿದ, "ನಿಮ್ಮ ರಾಜ್ಯದಲ್ಲಿ ಸಂತೋಷದಿಂದ ಇರುವ ವ್ಯಕ್ತಿಯ ಅಂಗಿ ತರಿಸಿ ತೊಡಿಸಿದರೆ ಸಾಕು, ಕಾಯಿಲೆ ವಾಸಿಯಾಗುತ್ತದೆ" ಎಂದು ಹೇಳುತ್ತಾನೆ. ಅದಕ್ಕೆ ಮಂತ್ರಿ ಹೇಳಿದ, ನಮ್ಮ ರಾಜ್ಯದಲ್ಲಿ ಅದಕ್ಕೇನು ಬರ..? ಎಷ್ಟು ಜನ ಸಂತೋಷವಾಗಿದ್ದಾರೆ..? ಎಂದವನೇ ರಾಜಸೇವಕರನ್ನು ಕರೆಸಿ, ಆಜ್ಞೆ ಹೊರಡಿಸಿದ. ನಮ್ಮ ರಾಜ್ಯದಲ್ಲಿ ಎಷ್ಟು ಜನ ಸಂತೋಷವಾಗಿದ್ದಾರೋ ಅವರಿಂದ ಅಂಗಿ ತನ್ನಿ. ರಾಜಸೇವಕರು ರಾಜ್ಯದಲ್ಲಿದ್ದ ಅನೇಕ ಸಿರಿವಂತರ ಮನೆಗೆ ಹೋಗಿ ಕೇಳಿದರು. ಪ್ರತಿಯೊಬ್ಬರಿಗೂ ಒಂದೊಂದು ಕೊರತೆ ಹೇಳಿದರೆ ವಿನಹ ಸಂತೋಷವಿದೆ ಎಂದು ಹೇಳಲೇ ಇಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಕೊರತೆ ಇತ್ತು. ಅಧಿಕಾರದ ಕೊರತೆ, ಸಂಪತ್ತಿನ ಕೊರತೆ, ಸನ್ಮಾನದ ಕೊರತೆ ಮತ್ತು ಗೌರವದ ಕೊರತೆ ಹೀಗೆ ಪ್ರತಿಯೊಬ್ಬರಲ್ಲೂ ಒಂದೊಂದು ಕೊರತೆ ಇತ್ತು ವಿನಹ ಸಂತೋಷವಿರಲಿಲ್ಲ. ರಾಜ ಸೇವಕರಿಗೆ ಏನು ತೋಚಲಿಲ್ಲ. ಇಂತಹ ಸಿರಿವಂತರಿಗೆ ಸಂತೋಷವಿಲ್ಲ ಎಂದ ಮೇಲೆ ಬೇರೆ ಯಾರನ್ನು ಕೇಳುವುದು ತಿಳಿಯದೆ ಅರಮನೆಗೆ ವಾಪಸು ಬಂದರು. ಮಂತ್ರಿಗೆ, ರಾಣಿಗೆ ಚಿಂತೆ ಶುರುವಾಯಿತು. ಕೊನೆಗೆ ಮಂತ್ರಿಯೆ ತಾನೇ ಹುಡುಕುವುದಾಗಿ ತೀರ್ಮಾನಿಸಿದ. ರಸ್ತೆಯಲ್ಲಿ ನಡೆಯತೊಡಗಿದ. ಹೀಗೆ ರಸ್ತೆಯಲ್ಲಿ ಹೋಗುತ್ತಿರಬೇಕಾದರೆ ದೂರದಿಂದ ಒಂದು ಮಧುರ ಗಾನ ಕೇಳಿ ಬಂತು. ಮಧುರ ಗಾನ ಬಂದ ಕಡೆಗೆ ಮಂತ್ರಿ ನಡೆದ. ಅಲ್ಲಿ ಒಬ್ಬ ತರುಣ ಗಟ್ಟಿಮುಟ್ಟಾಗಿದ್ದ, ಗುಡಿಸಲ ಮುಂದೆ ಕುಳಿತು, ಹಾಡು ಹೇಳುವುದರಲ್ಲಿ ತಲ್ಲೀನನಾಗಿದ್ದ. ಮೈ ಮೇಲೆ ಬಟ್ಟೆ ಇರಲಿಲ್ಲ. ಒಂದು ಕಚ್ಚೆ ಮಾತ್ರ ಇತ್ತು. ಮಂತ್ರಿ ಬಂದು ತರುಣನನ್ನು ಕೇಳಿದ. ತರುಣನೇ ಹೇಗಿದ್ದೀಯಾ ಎಂದ. ಅದಕ್ಕೆ ತರುಣ, "ನಾನು ಬಹಳ ಸಂತೋಷವಾಗಿದ್ದೇನೆ" ಎಂದನು. ಮಂತ್ರಿಗೆ ಬಹಳ ಸಂತೋಷವಾಗಿ, ಸಂತ ನೀಡಿದ ಸಲಹೆಯನ್ನು ತರುಣನ ಮುಂದೆ ಹೇಳಿದ, ಅಂಗಿ ನೀಡುವಂತೆ ಮಂತ್ರಿ ವಿನಂತಿಸಿದ. ಅದಕ್ಕೆ ತರುಣ ಹೇಳಿದ, "ನನ್ನ ಬಳಿ ಅಂಗಿ ಇಲ್ಲ" ಎಂದ. ಮಂತ್ರಿ ಕೇಳಿದ ಮತ್ತೆ, "ಬಹಳ ಸಂತೋಷವಾಗಿದ್ದೀನಿ ಎಂದು ಹೇಳಿದೆಯಲ್ಲ ಹೇಗೆ?" ಎಂದ. ಅದಕ್ಕೆ ತರುಣ ಹೇಳಿದ "ಸಂತೋಷಪಡಲು ಅಂಗಿ ಏಕೆ ಬೇಕು" ಮಂತ್ರಿ ಹೇಳಿದ, "ಹಾಗಾದರೆ ನೀನು ಹೇಗೆ ಸಂತೋಷವಾಗಿದ್ದಿಯ?" ಅದಕ್ಕೆ ತರುಣ ಹೇಳಿದ, ನನ್ನ ದೇಹದಲ್ಲಿ ಶಕ್ತಿ ತುಂಬಿದೆ. ದಿನವೆಲ್ಲಾ ಸಂತೋಷವಾಗಿ ದುಡಿಯುತ್ತೇನೆ. ಹಣ್ಣು, ಹಂಪಲ, ಕಾಯಿ, ಪಲ್ಯ ಬಳಸಿ ಅಡುಗೆ ಮಾಡುತ್ತೇನೆ. ನಂತರ ಇಲ್ಲಿ ಕುಳಿತು ಆನಂದವಾಗಿ ಹಾಡುತ್ತೇನೆ. ಮಂತ್ರಿಗೆ ಚಿಂತೆ ಶುರುವಾಯಿತು. ಸಿರಿವಂತರಲ್ಲಿ ಅಂಗೀ ಇದೆ, ಸಂತೋಷವಿಲ್ಲ. ಇವನಲ್ಲಿ ಅಂಗಿ ಇಲ್ಲ, ಸಂತೋಷವಿದೆ. ಏನೂ ತೋಚದೆ ಅರಮನೆಗೆ ಬಂದು, ರಾಜನಲ್ಲಿ, ತಾನು ಅನುಭವಿಸಿದ್ದನ್ನು ಮಂತ್ರಿ ನಿವೇದಿಸಿಕೊಂಡ. ಆಗ ರಾಜ ಮಲಗಿದ್ದವನೇ ತಕ್ಷಣ ಎದ್ದು, ನನಗೆ ಔಷದ ಸಿಕ್ಕಿತು, ನಡಿ ಅಲ್ಲಿಗೆ ಹೋಗೋಣ ಎಂದವನೇ ಮಂತ್ರಿ ಜೊತೆಗೆ ತರುಣನ ಗುಡಿಸಲಿನ ಹತ್ತಿರ ಬಂದನು. ಮಂತ್ರಿ ತರುಣನಿಗೆ ರಾಜನನ್ನು ಪರಿಚಯಿಸಿದ. ರಾಜನಿಗೆ ತರುಣ ಸಂತೋಷದಿಂದ ಇರುವುದನ್ನು ಕಂಡು ಖುಷಿ ಪಟ್ಟ. ಆಗ ತರುಣ ಹೇಳಿದ ಮಹಾರಾಜರೇ, "ನೀವು ಸಂತೋಷದಿಂದ ಇರಬೇಕಾದರೆ, ನೀವು ಅರಮನೆ, ರಾಜ ಮತ್ತು ಪದವಿ ಎಲ್ಲ ಮರೆತು, ಇಲ್ಲಿ ಇರಿ. ನನ್ನ ಪಕ್ಕದಲ್ಲಿ ಗುಡಿಸಲು ಹಾಕಿ ಕೊಡುತ್ತೇನೆ. ತರಕಾರಿ, ಕಾಯಿಪಲ್ಲೆ ಬಳಸಿ ಸುಂದರವಾದ, ಮಧುರ ಅಡುಗೆ ಮಾಡಿಕೊಡುತ್ತೇನೆ. ನಂತರ ನಾನು ಹಾಡುತ್ತೇನೆ. ನೀವು ಆನಂದವಾಗಿ ಕೇಳುತ್ತಾ ಇರಿ ಎಂದ. ರಾಜನು ರೋಗ ಪೀಡಿತನಾಗಿದ್ದಕ್ಕೆ ಕಾರಣ, ತನ್ನ ಅಕ್ಕಪಕ್ಕದ ರಾಜರು ಬಲಿಷ್ಠರಾಗಿದ್ದರು. ಅವರು ದಾಳಿ ಮಾಡುತ್ತಿರುವ ಮುನ್ಸೂಚನೆ ಸಿಕ್ಕಿತ್ತು. ತನ್ನ ಸೈನ್ಯ ಅಷ್ಟು ಪ್ರಬಲವಾಗಿರಲಿಲ್ಲ. ಹೇಗೆ ರಾಜ್ಯ ರಕ್ಷಿಸಿಕೊಳ್ಳುವುದು ಎಂಬ ಚಿಂತೆ ಕಾಡುತ್ತಿತ್ತು. ಇದನ್ನು ಸಂತ ಕಂಡು ಈ ಔಷದ ಹೇಳಿದ್ದ. ರಾಜನಿಗೆ ಸತ್ಯದ ಅರಿವಾಗಿತ್ತು. ರಾಜ್ಯ, ರಾಜ ಪದವಿ, ಸಂಪತ್ತು ನಮಗೆ ಸುಖ ನೀಡುವುದಿಲ್ಲ ಎಂಬ ಅರಿವು ಉಂಟಾಗಿತ್ತು. ಇದು ನಶ್ವರ ಶಾಶ್ವತವಾಗಿ ಇರುವುದಿಲ್ಲ ಎಂಬ ಅರಿವು ಉಂಟಾಗಿತ್ತು. ಈ ಕಥೆಯಿಂದ ತಿಳಿದುಬರುವ ನೀತಿ ಏನೆಂದರೆ, ನಾವು ಈ ಜಗತ್ತಿಗೆ ಬಂದಿರುವುದು ಏತಕ್ಕೆ? ಜೀವನದ ಉದ್ದೇಶವೇನು? ಎಂದರೆ ಮೂರು ಉದ್ದೇಶಗಳು.
1. ಜಗತ್ತನ್ನು ತಿಳಿದುಕೊಳ್ಳುವುದು ಅಂದರೆ ಜಗತ್ತಿನ ಜ್ಞಾನ ಪಡೆಯುವುದು. ಜಗತ್ತು ವೈವಿಧ್ಯಮಯವಾಗಿದೆ, ವೈಭವವಾಗಿದೆ ಎಂಬುದನ್ನು ಅರಿಯುವುದು.
2. ಸಂತೋಷವಾಗುವಂತೆ ಸದಾ ಕೆಲಸದಲ್ಲಿ ತಲ್ಲೀನರಾಗುವುದು.
3. ಸಂತೋಷದಿಂದ ನಗುನಗುತ್ತಾ, ಶಾಂತವಾಗಿ ಮತ್ತು ಸಮಾಧಾನದಿಂದ ಬಾಳುವುದು ಅಗತ್ಯವಾಗಿದೆ. ಜೀವನದಲ್ಲಿ ಏನು ಗಳಿಸುತ್ತೇವೆ? ಎಷ್ಟು ಗಳಿಸುತ್ತೇವೆ ? ಎನ್ನುವುದು ಮುಖ್ಯವಲ್ಲ. ಹೇಗೆ ಬದುಕಿದ್ದೇವೆ ? ಎಷ್ಟು ಸಂತೋಷವಾಗಿದ್ದೇವೆ ? ಎನ್ನುವುದು ಮುಖ್ಯ. ಅಲ್ಲವೇ ಮಕ್ಕಳೇ.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article