ಹಕ್ಕಿ ಕಥೆ : ಸಂಚಿಕೆ - 76
Wednesday, December 7, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಈಗ ಡಿಸೆಂಬರ್ ತಿಂಗಳು. ಚಳಿಗಾಲ ಇರಬೇಕಿತ್ತು. ಆದರೆ ಹವಾಮಾನದ ಬದಲಾವಣೆಯಿಂದಾಗಿ ಮೋಡಕವಿದ ವಾತಾವರಣ, ಸೆಖೆ ಮತ್ತು ಮಳೆಯೂ ಬರುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಮಾನವ. ನಾವು ಅಭಿವೃದ್ಧಿಯ ಹೆಸರಿನಲ್ಲಿ ಮಾಡುತ್ತಿರುವ ಅರಣ್ಯನಾಶ, ಗಣಿಗಾರಿಕೆ ಮತ್ತು ಅತಿಯಾದ ಪಳೆಯುಳಿಕೆ ಇಂಧನಗಳ ಬಳಕೆ ಅಂತ ವಿಜ್ಞಾನಿಗಳು ಆಗಾಗ ಎಚ್ಚರಿಸುತ್ತಾರೆ. ಅದಕ್ಕಾಗಿಯೇ ಹೆಚ್ಚು ಮರುಬಳಕೆ ಮಾಡುವ ಇಂಧನಗಳನ್ನು ನಾವು ಬಳಸಬೇಕು, ಆದಷ್ಟು ಸುಸ್ಥಿರ ಕೃಷಿ ಪದ್ಧತಿಯನ್ನು ಅನುಸರಿಸಬೇಕು ಎಂದೆಲ್ಲ ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ. ಹಕ್ಕಿ ಕಥೆ ಹೇಳಬೇಕಾದವನು ಬುದ್ಧಿವಾದ ಹೇಳುತ್ತಿದ್ದಾನೆ ಅಂದುಕೊಳ್ಳಬೇಡಿ. ಹಕ್ಕಿಕಥೆ ಬರೆಯಲು ಕುಳಿತಾಗ ಕಾಡಿದ ಸೆಖೆಯ ವಾತಾವರಣ ಇದನ್ನು ಬರೆಯುವಂತೆ ಮಾಡಿತು.
ಸುಮಾರು ಆರುವರ್ಷದ ಹಿಂದೆ ಡಿಸೆಂಬರ್ ನಲ್ಲಿ ಮೈಸೂರಿನ ಗೆಳೆಯ ಡಾ.ಅಭಿಜಿತ್ ಅವರ ಮನೆಗೆ ಹೋಗಿದ್ದೆ. ಡಿಸೆಂಬರ್ ನಿಂದ ಫೆಬ್ರವರಿ ವಲಸೆ ಹಕ್ಕಿಗಳು ಕಾಣಸಿಗುವ ಕಾಲ. ಮೈಸೂರು ಬಸ್ ನಿಲ್ದಾಣದಿಂದ ಅವರ ಹಳ್ಳಿಗೆ ಹೋಗುವ ಬಸ್ ಹತ್ತಿ ಕೊನೆಯ ಸ್ಟಾಪ್ ನಲ್ಲಿ ಇಳಿದು ಅಲ್ಲಿಂದ ಸ್ವಲ್ಪದೂರ ಅವರ ತೋಟದ ಮನೆಗೆ ನಡೆದುಕೊಂಡು ಹೋಗಬೇಕಿತ್ತು. ಬಸ್ ಇಳಿದು ಬೆಳಗಿನ ಚಳಿಯಲ್ಲಿ ನಿಧಾನವಾಗಿ ನಡೆಯುತ್ತಾ ಹೋಗುತ್ತಿದ್ದೆ. ಅಷ್ಟರಲ್ಲಿ ಆ ಕಡೆಯಿಂದ ಅಭಿಜಿತ್ ಕರೆ ಮಾಡಿದರು. ಬಸ್ ಇಳಿದು ನಡೆದು ಬರುತ್ತಿದ್ದೇನೆ ಎಂದೆ. ಸರಿ ನಾನು ಈ ಕಡೆಯಿಂದ ಸ್ಕೂಟರ್ ತಗೊಂಡು ಬರ್ತೇನೆ ಎಂದು ಹೇಳಿದರು. ದಾರಿ ಬದಿಯಲ್ಲಿ ಒಂದು ಕೆರೆ ಇತ್ತು. ಕೆರೆಯ ಏರಿ ಬಳಿ ತಲುಪುವ ಹೊತ್ತಿಗೆ ಅಭಿಜಿತ್ ಕೂಡ ಅಲ್ಲೇ ಸಿಕ್ಕಿದರು. ಮಾಷ್ಟ್ರೇ ಓ ಅಲ್ಲಿ ನೋಡಿ ಕೆರೆಯ ಆ ಬದಿಯಲ್ಲಿರುವ ಬೋಳು ಮರದ ಮೇಲೆ ಕೂತಿದೆ ಅಂದರು. ನಾನು ನನ್ನ ಬೈನಾಕುಲರ್ ಹೊರತೆಗೆದು ನೋಡಿದರೆ ಆಷ್ಚರ್ಯ ಕಾದಿತ್ತು. ನಾನು ಅದುವರೆಗೂ ಚಿತ್ರದಲ್ಲಿ ಮಾತ್ರ ನೋಡಿದ್ದ ಡೇಗೆ ಹಕ್ಕಿ ಮೊದಲ ಬಾರಿಗೆ ನೋಡುವ ಅವಕಾಶ ಸಿಕ್ಕಿತ್ತು.
ಪ್ರತಿ ವರ್ಷ ಚಳಿಗಾಲದಲ್ಲಿ ಯುರೋಪ್ ಖಂಡದ ಶೀತ ಪ್ರದೇಶಗಳಿಂದ ಭಾರತಕ್ಕೆ ಈ ಹಕ್ಕಿ ವಲಸೆ ಬರುತ್ತದೆ. ನದಿ, ಕೆರೆ, ಸರೋವರ, ಸಮುದ್ರದ ಬದಿ ಮತ್ತು ಹಿನ್ನೀರಿನ ಪ್ರದೇಶಗಳಲ್ಲಿ ಈ ಹಕ್ಕಿ ಕಾಣಲು ಸಿಗುತ್ತದೆ. ಬೆನ್ನು ಮತ್ತು ರೆಕ್ಕೆಗಳು ಕಡುಕಂದು ಬಣ್ಣ, ತಲೆ ಮತ್ತು ಹೊಟ್ಟೆಯ ಭಾಗಗಳು ಬಿಳೀ ಬಣ್ಣ, ಕಣ್ಣಿನಿಂದ ಹಿಂಭಾಗ ಬೆನ್ನಿನ ಕಡೆ ಸಾಗುವ ಸುಂದರವಾದ ಪಟ್ಟಿ, ಚೂಪಾದ ಕೊಕ್ಕು, ಉದ್ದವಾದ ಮತ್ತು ಬಲವಾದ ಕಾಲುಗಳು, ಹಾರುವಾಗ ಕೊಂಚ ಬಾಗಿದಂತೆ ಕಾಣುವ ರೆಕ್ಕೆಗಳು ಈ ಹಕ್ಕಿಯ ಗುರುತು. ನೀರಿನ ಮೇಲೆ ಹಾರುತ್ತಾ ತನ್ನ ಬೇಟೆಯಾದ ಮೀನು ಮೇಲ್ಗಡೆ ಬರುವುದನ್ನೇ ಗಮನಿಸಿ, ನೇರವಾಗಿ ನೀರಿಗೆ ಡೈವ್ ಹೊಡೆದು, ತನ್ನ ಕಾಲುಗಳಿಂದ ಮೀನನ್ನು ಹಿಡಿಯುವ ಅದ್ಭುತ ಬೇಟೆಗಾರ ಇದು. ಮೀನನ್ನು ಹಿಡಿಯಲು ನೀರಿಗೇ ಧುಮುಕಿದರೂ ಮತ್ತೆ ಹಿಡಿದ ಮೀನನ್ನು ತನ್ನ ಪಂಜದೊಳಗೆ ಎತ್ತಿಕೊಂಡು ನೀರಿನಿಂದಲೇ ಎದ್ದು ಹಾರುವ ಇದರ ಸಾಮರ್ಥ್ಯ ಅದ್ಭುತವಾದದ್ದು.
ನಿಮ್ಮ ಆಸುಪಾಸಿನಲ್ಲಿ ಕೆರೆ, ಸರೋವರ, ನದಿ, ಅಣೆಕಟ್ಟೆ ಅಥವಾ ಸಮುದ್ರದ ಹಿನ್ನೀರು ಪ್ರದೇಶಗಳಲ್ಲಿ ಈ ಹಕ್ಕಿ ನೋಡಲು ಸಿಗಬಹುದು.
ಕನ್ನಡ ಹೆಸರು: ಡೇಗೆ ಹಕ್ಕಿ
ಇಂಗ್ಲೀಷ್ ಹೆಸರು: Osprey
ವೈಜ್ಞಾನಿಕ ಹೆಸರು: Pandion haliaetus
ಚಿತ್ರ ಕೃಪೆ : ಜೀವಂಧರ್ ಕುಮಾರ್
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************