-->
ನಮ್ಮಮಕ್ಕಳು : ಒಂದು ಚಿಂತನೆ

ನಮ್ಮಮಕ್ಕಳು : ಒಂದು ಚಿಂತನೆ

ಲೇಖಕರು : ನಾರಾಯಣ ರೈ ಕುಕ್ಕುವಳ್ಳಿ
ನಿವೃತ್ತ ಪದವೀಧರ ಶಿಕ್ಷಕರು.
ಮಧುಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕ ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

     
     ತಾನು ಎಲ್ಲಾ ಕಡೆ ಇರಲಾಗುವುದಿಲ್ಲ ಎಂದು ದೇವರು ಮಕ್ಕಳನ್ನು ಸೃಷ್ಟಿಸುತ್ತಾನೆ ಎಂಬ ಮಾತಿದೆ. ಹೌದು ಮಕ್ಕಳು ದೇವರಿಗೆ ಸಮಾನ. ಏನೂ ಅರಿಯದ ನಿಷ್ಕಲ್ಮಶ ಮನಸ್ಸು ಅವರದು. ಮಗು ಜನಿಸಿದಾಗ ತಂದೆ ತಾಯಿ ಮನೆಮಂದಿಗೆಲ್ಲ ಅದೇನೋ ಸಂಭ್ರಮ. ಹೊಸ ಬಟ್ಟೆಬರೆ ವಿಧವಿಧ ಆಟಿಕೆಗಳನ್ನು ತೆಗೆದುಕೊಡುತ್ತಾರೆ. ಹುಟ್ಟುಹಬ್ಬ ಆಚರಿಸಿ ನೆಂಟರಿಷ್ಟರಿಗೆ ಔತಣಕೂಟ ಏರ್ಪಡಿಸುತ್ತಾರೆ. ಬಾಲ್ಯದಲ್ಲಿ ಮಕ್ಕಳನ್ನು ಒಳ್ಳೆಯ ರೀತಿಯಿಂದ ಪ್ರೀತಿಯಿಂದ ಸಾಕುತ್ತಾರೆ. ಎಲ್ಲಾ ಸರಿ ಆದರೆ ಬೆಳೆಯುತ್ತಾ ಹೋದಂತೆ ಮಕ್ಕಳ ವರ್ತನೆಯಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತವೆ. ಸಾಧಕ ಬಾಧಕಗಳು ಜೊತೆ - ಜೊತೆಗೇ ಸಾಗುತ್ತವೆ.
      ಚಾಣಕ್ಯ ಒಂದು ಕಡೆ ಹೇಳಿದಂತೆ ಮಕ್ಕಳಿಗೆ ಆರು ವರ್ಷ ಸರಿಯಾದ ಬುದ್ಧಿ ಮನೆಯಲ್ಲಿ ತಂದೆ ತಾಯಿ ಹೇಳಿಕೊಡಬೇಕಾಗುತ್ತದೆ. ಅದಕ್ಕೇ ಹೇಳುವುದು ಆರು ವರ್ಷದ ಬುದ್ಧಿ ನೂರು ವರ್ಷದ ತನಕವೆಂದು. ನಮ್ಮ ನಡೆ ನುಡಿ ಹೇಗಿರಬೇಕು. ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂಬಿತ್ಯಾದಿ ವಿಷಯಗಳನ್ನು ಮಕ್ಕಳಿಗೆ ಅರ್ಥವಾಗುವಂತೆ ತಿಳಿಸಿಕೊಡಬೇಕು. ಬಾಲ್ಯದಲ್ಲಿ ಈ ಕೆಲಸ ಮಾಡದೇ ಹೋದರೆ ಮುಂದೆ ದೊಡ್ಡವರಾದಂತೆ ತಂದೆ ತಾಯಿಯವರ ಕಣ್ಣು ತಪ್ಪಿಸಿ ಕೆಟ್ಟ ದಾರಿ ಹಿಡಿಯುವ ಸಂಭವವಿದೆ. ಇಂಥ ಅನೇಕ ವಿಚಾರಗಳನ್ನು ನಾವು ಬೇರೆ ಬೇರೆ ಮಾಧ್ಯಮಗಳಲ್ಲಿ ಆಗಾಗ ಓದುತ್ತೇವೆ ಕೇಳುತ್ತೇವೆ. ಈ ವಿಚಾರಗಳನ್ನು ನಾವು ಮನೆಯಲ್ಲಿ ಮಕ್ಕಳ ಮುಂದೆ ಹೇಳಲೇ ಬಾರದು. ಹೇಳಿ ಕೇಳಿ ಇಂದು ಮಾಧ್ಯಮ ತಂತ್ರಜ್ಞಾನ ಯುಗ. ಇಂದು ಎಲ್ಲವೂ ಅಂಗೈಯಲ್ಲೇ ಅಡಗಿರುತ್ತದೆ.
      ಒಂದು ಘಟನೆ ಹೀಗಿದೆ. ಮನೆಯ ಹೆತ್ತವರಿಗೆ ಈ ಮೊಬೈಲ್ ಕಂಪ್ಯೂಟರ್ ಅಂದರೆ ಏನೆಂಬುದೇ ಗೊತ್ತಿರುವುದಿಲ್ಲ. ಒಬ್ಬ ತಂದೆ ತನ್ನ ಮಗನ ಮೊಬೈಲ್ ಕೆಲಸ ಮಾಡುವುದಿಲ್ಲ ಎಂದು ತನ್ನ ಪರಿಚಯಸ್ಥರಲ್ಲಿ ತೋರಿಸಿದಾಗ ಅವರಿಗೇ ದಿಗಿಲಾಗುತ್ತದೆ. ಅದೆಷ್ಟೋ ಏಪ್ ಗಳಿಂದ ಅದು ತುಂಬಿರುತ್ತದೆ. ಎಲ್ಲವೂ ಮನ ಕೆರಳಿಸುವ ವಿಷಯಗಳೇ. ಆ ಪರಿಚಯಸ್ಥರು ನಿಮ್ಮ ಮಗ ಎಷ್ಟನೇ ತರಗತಿ ಎಂದು ಕೇಳಿದಾಗ ಐದನೇ ತರಗತಿ ಎಂದು ಗೊತ್ತಾಗುತ್ತದೆ‌. ಅವರು ಆ ಬಾಲಕನ ತಂದೆಯವರಿಗೆ ಕೆಲವು ಜಾಗೃತಿಯ ವಿಷಯ ಹೇಳಿ ಬೇಕಾದ ಏಪ್ ಗಳನ್ನು ಉಳಿಸಿ ಮೊಬೈಲ್ ಸರಿಮಾಡಿ ಕೊಡುತ್ತಾರೆ. ಇಲ್ಲಿ ಮಾಧ್ಯಮಗಳ ತಪ್ಪಲ್ಲ ಉಪಯೋಗಿಸುವ ನಮ್ಮ ಹಾಗೂ ಮಕ್ಕಳ ತಪ್ಪು. ಈ ಕುರಿತು ಮಾಧ್ಯಮ ವ್ಯವಸ್ಥಾಪಕರೂ ಆಲೋಚಿಸಬೇಕಾಗಿದೆ. ಇಂದು ಮಾಧ್ಯಮಗಳಲ್ಲಿ ಶಿಕ್ಷಣಕ್ಕೆ ಬೇಕಾದ ಅದೆಷ್ಟೋ ವಿಚಾರಗಳಿವೆ. ಅವುಗಳ ಮಹತ್ವ ತಿಳಿಸಿಕೊಡುವುದು ಅಗತ್ಯ. ನಾವೆಲ್ಲ ತಂತ್ರಜ್ಞಾನಗಳ ಇತಿಮಿತಿಗಳ ಬಗ್ಗೆ ಅರಿವು ಹೊಂದಿರಬೇಕು. ಶಾಲಾ ಕಾಲೇಜುಗಳಲ್ಲಿ ಈ ಕುರಿತು ಜಾಗೃತಿ ಶಿಬಿರಗಳನ್ನು ಏರ್ಪಡಿಸಿ ಮಾನವೀಯ ಮೌಲ್ಯಗಳ ಕುರಿತು ಅರಿವು ಮೂಡಿಸಬೇಕು. ಮಕ್ಕಳ ಯುವಜನತೆಯ ಭವಿಷ್ಯದ ಕುರಿತು ನಾವು ಚಿಂತಿಸದೇ ಹೋದರೆ ಮುಂದೆ ಗಂಭೀರ ಪರಿಣಾಮ ಎದುರಿಸ ಬೇಕಾಗುತ್ತದೆ. ನಾವು ಇಡುವ ಹೆಜ್ಜೆಯ ಮೇಲೆ ನಮ್ಮ ಭವಿಷ್ಯ ಅಡಗಿದೆ. ಸಕಾರಾತ್ಮಕ ಮನೋಭಾವನೆಯೊಂದಿಗೆ ಹೆಜ್ಜೆ ಹಾಕೋಣ. ದೇಶದ ಕೀರ್ತಿ ಬೆಳಗಿಸುವ ಯೋಗ್ಯ ನಾಗರಿಕರನ್ನಾಗಿ ನಮ್ಮ ಮಕ್ಕಳನ್ನು ಬೆಳೆಸೋಣ. ಜೈ ಹಿಂದ್‌.
............................ ನಾರಾಯಣ ರೈ ಕುಕ್ಕುವಳ್ಳಿ
ನಿವೃತ್ತ ಪದವೀಧರ ಶಿಕ್ಷಕರು.
ಮಧುಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕ ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 90719 64152
*******************************************




Ads on article

Advertise in articles 1

advertising articles 2

Advertise under the article