ಬದಲಾಗೋಣವೇ ಪ್ಲೀಸ್.....! ಸಂಚಿಕೆ - 75
Thursday, December 8, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
"ಬದುಕು ತುಂಬಾ ಸರಳ. ನಮ್ಮ ಮಿತಿ ಮೀರಿದ ಆಲೋಚನೆಗಳು ಮತ್ತು ಭಾವನೆಗಳು ಇದನ್ನು ಸಂಕೀರ್ಣಗೊಳಿಸುತ್ತದೆ. ಹಾಗಾಗಿ ನಿನ್ನ ಆಲೋಚನೆ ಮತ್ತು ಭಾವನೆಗಳು ಮಿತಿ ಮೀರದಿರಲಿ ಮಗಾ" ಇದು ಹತಾಶೆಯಲ್ಲಿದ್ದ ನಂದನ್ ಗೆ ರಾಮಚಂದ್ರ ಹೇಳಿದ ಮಾತು. ದೋಣಿ ನೀರಿನ ಮೇಲಿರಬೇಕೇ ಹೊರತು ನೀರು ದೋಣಿಯ ಮೇಲಿರಬಾರದು. ಹಾಗೇನಾದರೂ ಆದರೆ ದೋಣಿ ಗುರಿ ತಲುಪದೆ ಮುಳುಗುವುದು ನಿಶ್ಚಿತ.
ಇಂದು ಮಾನವನ ಸರಾಸರಿ ಜೀವಿತಾವಧಿ ಅಂದಾಜು 70 ವರುಷ ಆಗಿದೆ. ಈ 70 ವರುಷಗಳ ಬದುಕಿನಲ್ಲಿ ಹಲವಾರು ವರುಷಗಳನ್ನು ನೋವು ಅಥವಾ ನಲಿವಿನಿಂದ ಈಗಾಗಲೇ ಕಳೆದುಕೊಂಡಿದ್ದೇವೆ. ಉಳಿದಿರುವ ಕೆಲವೇ ಕೆಲವು ವರುಷಗಳನ್ನು ನೋವು ರಹಿತವಾಗಿ ಕೇವಲ ನಗುಮೊಗದ ನಲಿವಿನ ಮೂಲಕ ನೆಮ್ಮದಿಯಿಂದ ಬದುಕುವತ್ತ ಮುಂದಡಿ ಇಡಬೇಕಾಗಿದೆ.
ನಾವೆಲ್ಲರೂ ಮಿತಿಮೀರಿ ಆಲೋಚಿಸದೆ ನಮ್ಮ ಮನಸ್ಸಿನ ಸಂತೃಪ್ತಿಗೋಸ್ಕರ ಸಣ್ಣ - ಪುಟ್ಟ ಒಳ್ಳೆಯ ಕೆಲಸಗಳನ್ನು ಮಾಡುತ್ತಿರಬೇಕು. ನಾವು ತಿಂದು ಉಳಿದ ಹಲಸಿನ ಬೀಜ - ಮಾವಿನ ಬೀಜ ಇತ್ಯಾದಿಗಳನ್ನು ನಾವು ಪಯಣಿಸುವ ದಾರಿಯಲ್ಲಿ ಸಿಗುವ ಖಾಲಿ ಜಾಗದಲ್ಲಿ ಬಿಸಾಡುವುದು, ಅಸಹಾಯಕರಿಗೆ ನಮ್ಮಿಂದಾಗುವ ಸಹಾಯ ಮಾಡುವುದು, ಪ್ರಾಣಿ- ಪಕ್ಷಿಗಳಿಗೆ ಆಹಾರ - ನೀರು ಒದಗಿಸುವುದು, ಅಬಲರಿಗೆ ಬಲ ತುಂಬುವುದು, ದಾರಿಬದಿಯಲ್ಲಿ ಸ್ವಯಂ ಸ್ವಚ್ಛತೆ ಮಾಡುವುದು, ಹಿರಿಯರ ಜತೆ ಸಂಪರ್ಕ ಇಟ್ಟುಕೊಳ್ಳುವುದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು..... ಹೀಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದರ ಮೂಲಕ ನಮ್ಮನ್ನು ನಾವು ಕ್ರಿಯಾಶೀಲರಾಗಿಸಿ ಬದುಕಿದರೆ ಆತ್ಮ ತೃಪ್ತಿಯಿಂದ ಸಂತಸವಾಗಿ ಬದುಕಬಹುದು. ಹಾಗಾಗಿ ಇಂಥಹ ಸಣ್ಣಪುಟ್ಟ ಕೆಲಸಗಳಿಂದ ಸಂತೃಪ್ತರಾಗುವುದನ್ನು ಕಲಿಯೋಣ. ನಮ್ಮ ಸುತ್ತಲಿರುವ ಜನರು ಅದನ್ನು ಗುರುತಿಸುತ್ತಾರೊ ಇಲ್ಲವೋ ಎಂಬುದರ ಕಡೆಗೆ ಗಮನ ಕೊಡಬಾರದು. ಏಕೆಂದರೆ ದೋಷ ಹುಡುಕಲೆಂದೇ ಹುಟ್ಟಿಕೊಂಡ ಜನರು ಮಹಾತ್ಮರಲ್ಲೂ ದೇವರಲ್ಲೂ ಸಹ ದೋಷವನ್ನು ಹುಡುಕುತ್ತಾರೆ. ಇನ್ನೂ ನಮ್ಮಂತಹ ಮನುಷ್ಯರು ಯಾವ ಲೆಕ್ಕ ? ಆದರೆ ಅವರು ನಮ್ಮಲ್ಲಿ ಹುಡುಕಿದ ದೋಷದ ನೈಜತೆ ಹಾಗೂ ಸುಳ್ಳಿನ ಬಗ್ಗೆ ಆಲೋಚಿಸಿ ನಿಜಾಂಶವಿದ್ದಲ್ಲಿ ಸರಿಪಡಿಸಿ ಸುಳ್ಳಿನಾಂಶವಿದ್ದಲ್ಲಿ ನಿರ್ಲಕ್ಷಿಸಿ ಧನಾತ್ಮಕವಾಗಿ ಮುಂದುವರಿಯಬೇಕು.
ಭೌತಿಕ ವಸ್ತುಗಳಿಂದಾಗಲಿ - ಐಷಾರಾಮಿ ಸೌಲಭ್ಯಗಳಿಂದಾಗಲಿ ನಮಗೆ ಶಾಶ್ವತ ನೆಮ್ಮದಿ ಸಿಗದು. ಅದೇನಿದ್ದರೂ ಕ್ಷಣಿಕ ಮಾತ್ರ. ಅದರಿಂದ ನಾವೇ ಕಲ್ಪಿಸಿದ ಕುರುಡು ಕಲ್ಪನೆಯ ತೃಪ್ತಿ ಸಿಗಬಹುದು. ಆದರೆ ಶಾಶ್ವತ ನೆಮ್ಮದಿ ಸಿಗಲಾರದು. ಆ ತೃಪ್ತಿಯು ಒಂಥರಾ ನೀರ ಮೇಲಣ ಗುಳ್ಳೆಯಂತೆ. ಯಾವಾಗ - ಯಾವ ಕ್ಷಣದಲ್ಲಿ ಒಡೆಯುತ್ತದೆ ಎಂದು ತಿಳಿಯದು. ಇದು ನಿಸರ್ಗದತ್ತ ಲಭಿಸಿದ ಸರಳ ಬದುಕನ್ನು ಮತ್ತಷ್ಟೂ ಸಂಕೀರ್ಣಗೊಳಿಸುತ್ತದೆ. ಏಕೆಂದರೆ ವಸ್ತುಗಳ ನೆಮ್ಮದಿಯು ವಸ್ತು ಇರುವರೆಗೆ ಮಾತ್ರ. ಭಾವದ ನೆಮ್ಮದಿಯು ಭಾವನೆ ಇರುವವರೆಗೆ ಮಾತ್ರ. ನಮ್ಮ ಬದುಕನ್ನು ಸರಳಗೊಳಿಸಿದಷ್ಟೂ ಜೀವನ ನೆಮ್ಮದಿಯೂ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಸರಳ ಜೀವನದ ಪ್ರೀತಿಯೂ ಸದಾ ಇರಲಿ. ಸರಳ ಜೀವನ ಪ್ರೀತಿಯ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?.
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************