-->
ಸಂಚಾರಿಯ ಡೈರಿ : ಸಂಚಿಕೆ - 22

ಸಂಚಾರಿಯ ಡೈರಿ : ಸಂಚಿಕೆ - 22

ಸಂಚಾರಿಯ ಡೈರಿ : ಸಂಚಿಕೆ - 22

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
               
      ಮಂಗಳೂರು ನಗರದ ಪ್ರವಾಸಿ ತಾಣಗಳ ಒಂದು ರೌಂಡ್ ಹೊಡೆಯೋ ಯೋಜನೆ ಹಾಕಿದರೆ ಅದರಲ್ಲಿ ಸಮುದ್ರ ತೀರ, ದೇವಾಲಯಗಳು, ಪ್ರಸಿದ್ಧ ಹೋಟೆಲ್ ಎಂದೆಲ್ಲಾ ಸೇರಿಸಿಕೊಳ್ಳುತ್ತೇವೆ. ಆದರೆ ಇವೆಲ್ಲದರ ಜತೆ ಇನ್ನೊಂದು ಅಷ್ಟೊಂದು ಚಿರಪರಿಚಿತವಲ್ಲದ, ಆದರೂ ಒಳ ಹೊಕ್ಕು ಕಂಡಾಗ ಅತ್ಯದ್ಭುತ ಸಾರವೇ ಕಾಣಸಿಗುವ ಸ್ಥಳವೊಂದಕ್ಕೆ ಭೇಟಿ ನೀಡಲೇಬೇಕು. ಅದೇ 'ಶ್ರೀಮಂತಿ ಬಾಯಿ ಸರ್ಕಾರಿ ವಸ್ತುಸಂಗ್ರಹಾಲಯ'. 
       ಮಂಗಳೂರಿನ ಅತ್ಯಂತ ಪ್ರಾಚೀನ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದೆ. ಮಂಗಳೂರಿನ ಬಿಜೈನಲ್ಲಿರುವ ಈ ತಾಣಕ್ಕೆ‌ ಅಷ್ಟಾಗಿ ಪ್ರವಾಸಿಗರ ದಟ್ಟಣೆ ಇರುವುದಿಲ್ಲ.1960 ರಂದು ಈ ಸಂಗ್ರಹಾಲಯದ ಸ್ಥಾಪನೆಯಾಯಿತು. ಇಲ್ಲಿಯ ಬಹುತೇಕ ಸಂಗ್ರಹಗಳನ್ನು ಮಾಡಿದವರು ವಿ‌.ಆರ್.ಮಿರಾಜ್‌ಕರ್. ಎರಡನೇ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷ್ ಸೇನೆಯಲ್ಲಿ ವೈದ್ಯಾಧಿಕಾರಿಯಾಗಿದ್ದರು. ನಿಜಾರ್ಥದಲ್ಲಿ ಇದು ಮಿರಾಜ್‌ಕರ್‌ರ ಮನೆಯೇ ಆಗಿತ್ತು. ಇಟೆಲಿಯ ಮಿಲನ್ ಕಟ್ಟಡದ ಶೈಲಿಯಲ್ಲಿ ನಿರ್ಮಿತವಾದ ಈ ಭವನ, ಹಡಗಿನ ಆಕಾರ ಹೋಲುತ್ತದೆ. ತದನಂತರ ಈ ಮನೆಯನ್ನು ಸರ್ಕಾರಕ್ಕೆ ದಾನಮಾಡಿ, ವಸ್ತುಸಂಗ್ರಹಾಲಯದ ರೀತಿಯಲ್ಲಿ ಅಭಿವೃದ್ಧಿಪಡಿಸಿದರು. ಮಿರಾಜ್‌ಕರ್ ರ ತಾಯಿಯ ನೆನಪಿನಲ್ಲಿ ಶ್ರೀಮಂತಿ ಬಾಯಿ ಎಂಬ ಹೆಸರಿಟ್ಟರು..
       ತುಳುನಾಡಿನ ಭೂತಾರಾಧನೆ, ಶಿಲಾ ಶಾಸನಗಳು, ವಿವಿಧ ದೇಶಗಳ ಕುಸುರಿ ಕೆತ್ತನೆಯ ವಸ್ತುಗಳು, ಬೆಲೆಬಾಳುವ ಕಲ್ಲುಗಳು, ದಿರಿಸುಗಳು, ನಾಣ್ಯಗಳು, ಪ್ರಾಚೀನ ಪಾತ್ರೆ-ಪರಡಿಗಳು, ಗಾಂಧಿಸ್ಮೃತಿ ಲೇಖನಗಳು, ಚಿತ್ರಗಳು ಹೀಗೆ ನೂರಾರು ಚಿತ್ರವಿಚಿತ್ರ, ಇತಿಹಾಸ, ಮಾನವಶಾಸ್ತ್ರ , ಪುರಾಣ, ಸಂಸ್ಕೃತಿಗಳಿಗೆ ಸೇರಿದ ವಸ್ತುಗಳ ಮಹಾಭಂಡಾರವೇ ಇದೆ..
      ಐದಾರು ವರ್ಷಗಳ ಹಿಂದೆ‌ ಬರೀ ಎರಡು ರೂಪಾಯಿ ಪ್ರವೇಶ ಶುಲ್ಕವಿತ್ತು. ಆದರೆ ಈಗ ಇಪ್ಪತ್ತು ರೂಪಾಯಿ ಇದೆ. ಮಂಗಳೂರು ನಗರದಲ್ಲಿ ಇರೋ ಒಂದು ಬೆಲೆಕಟ್ಟಲಾಗದ ಜಾಗ ಇದು. ಸಂದರ್ಶಿಸಲು ಮರೆಯಬೇಡಿ!
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************

Ads on article

Advertise in articles 1

advertising articles 2

Advertise under the article