ಪ್ರತಿಫಲನ : ಸಂಚಿಕೆ - 8
Saturday, December 24, 2022
Edit
ಪ್ರತಿಫಲನ : ಸಂಚಿಕೆ - 8
ಮಕ್ಕಳಿಗಾಗಿ ಲೇಖನ ಸರಣಿ
ಹಸಿದ ನಾಯಿಯೊಂದು ಆಹಾರ ಹುಡುಕುತ್ತಾ ಊರು ತುಂಬಾ ಅಲೆಯುತ್ತಿತ್ತು. ಎಷ್ಟು ಹುಡಿಕಿದರೂ ಆಹಾರ ಸಿಕ್ಕಲೇ ಇಲ್ಲ. ಕಳ್ಳತನದಿಂದ ಒಂದು ಮನೆಯೊಳಗೆ ಹೊಕ್ಕು ಆಹಾರಕ್ಕಾಗಿ ಹುಡುಕಿತು. ಆದರೆ ಅಲ್ಲಿಂದಲೂ ಓಡಿಸಲ್ಪಟ್ಟಿತು. ಕೊನೆಗೆ ಹೋಟೆಲಿನ ಬದಿಯಲ್ಲಿ ಅದಕ್ಕೊಂದು ಒಣಗಿದ ಎಲುಬು ತುಂಡು ಸಿಕ್ಕಿತು. ಅದನ್ನೆತ್ತಿಕೊಂಡ ನಾಯಿಯು ತನ್ನ ಮನೆ ಕಡೆಗೆ ಓಡತೊಡಗಿತು. ದಾರಿ ಮಧ್ಯೆ ತೊರೆಯೊಂದನ್ನು ಕಂಡಿತು. ಆ ತೊರೆಯನ್ನು ಪುಟ್ಟದಾದ ಸೇತುವೆಯ ಮೇಲೆ ದಾಟುತ್ತ ಮುಂದೆ ಹೋಗುತ್ತಿದ್ದಾಗ ಅಚಾನಕ್ಕಾಗಿ ನಾಯಿಯ ದೃಷ್ಟಿ ಸೇತುವೆಯ ಕೆಳಗೆ ಬಿತ್ತು. ಹರಿವ ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ಕಂಡಂತಹ ನಾಯಿ ಅಯ್ಯೋ ನನ್ನ ಆಹಾರವನ್ನು ಇನ್ನಾವುದೋ ನಾಯಿ ಕಚ್ಚಿಕೊಂಡಿದೆ ಎಂದು ತಿಳಿದು ಅದನ್ನು ಜೋರು ಮಾಡಲು ಬೊಗಳಬೇಕೆಂದು ಬಾಯಿ ತೆರೆಯಿತು. ಆಗ ನಾಯಿಯ ಬಾಯಲ್ಲಿದ್ದ ಎಲುಬು ತುಂಡು ನೀರಿಗೆ ಬಿದ್ದು ಕೊಚ್ಚಿಹೋಯಿತು. ತನ್ನ ಭ್ರಮೆಯನ್ನು ಶಪಿಸುತ್ತಾ ನಿರಾಸೆಗೊಂಡ ನಾಯಿ ಮತ್ತೆ ಆಹಾರವನ್ನು ಹುಡುಕುತ್ತಾ ಅಲೆಯ ತೊಡಗಿತ್ತು.
ವಿದ್ಯಾರ್ಥಿ ಮಿತ್ರರೇ ನಿಮ್ಮ ಕಲಿಕಾ ದಿನಗಳಲ್ಲೂ ಇಂತಹ ಅನಿವಾರ್ಯ ಅಸಹಾಯಕ ಸಂದರ್ಭಗಳು ಎದುರಾದರೆ ಆಶ್ಚರ್ಯವಿಲ್ಲ. ಪ್ರೀತಿ, ದಯೆ, ಕ್ಷಮೆ, ಸಹಕಾರ ಮನೋಭಾವ ಮುಂತಾದ ಗುಣಗಳು ನಮ್ಮಲ್ಲಿರಬಹುದಾದರೂ ಇತರರಿಂದ ಅದನ್ನು ನಿರೀಕ್ಷಿಸಬೇಕಾಗಿಲ್ಲ. ಗೆಳೆತನದ ಸಂದರ್ಭದಲ್ಲಿ ಅದೆಷ್ಟು ಮಂದಿ ಪ್ರಾಮಾಣಿಕತೆ ಪ್ರದರ್ಶಿಸಿದರೂ ಹಲವು ಬಾರಿ ಅದರೊಳಗೆ ಕಪಟತೆ ಅಡಗಿದೆ ಎಂಬುದನ್ನರಿಯದೆ ಮೋಸ ಹೋಗುವುದಿದೆ. ಒಂದು ಬಾರಿ ಹತ್ತನೇ ತರಗತಿಯ ಹುಡುಗನೊಬ್ಬ ತನ್ನ ಅಭ್ಯಾಸ ಪುಸ್ತಕವನ್ನು ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದಿದ್ದ ಗೆಳೆಯನಿಗೆ ನೀಡಿದ. ಆತನಾದರೂ ಬರೆದು ಆ ಪುಸ್ತಕವನ್ನು ಮರಳಿ ಹಿಂತಿರುಗಿಸಬೇಕಿತ್ತು, ಆದರೆ ಕೆಲವು ದಿನಗಳವರೆಗೂ ಆ ಹುಡುಗ ಶಾಲೆಗೆ ಬರಲೇ ಇಲ್ಲ. ಪುಸ್ತಕ ಕೊಟ್ಟ ಹುಡುಗನಿಗಾದರೋ ಇನ್ನಿಲ್ಲದ ಚಿಂತೆ. ಅಭ್ಯಾಸ ಪುಸ್ತಕವನ್ನು ಹೇಗೆ ಮರಳಿ ಪಡೆಯಲಿ ಎನ್ನುತ್ತಾ ಅಳಲಾರಂಭಿಸಿದ. ಪರೀಕ್ಷೆಯ ಬಗ್ಗೆ ಭಯ, ಮತ್ತೊಮ್ಮೆ ಬರೆಯಲು ಸಮಯದ ಕೊರತೆ ಹೀಗೆ ವಿದ್ಯಾರ್ಥಿ ಅಸಹಾಯಕನಾದ. ಶಿಕ್ಷಕರ ಪ್ರಯತ್ನದಿಂದ ಕೊನೆಗೂ ಪುಸ್ತಕ ಸಿಕ್ಕಿತೆನ್ನಿ .
ಇಂತಹ ಸಂದರ್ಭ ಸಹಕರಿಸಲು ಹೋಗುವ ನಮ್ಮ ಬದುಕು ನಾಯಿಪಾಡಾಗುತ್ತದೆ. ಎಲ್ಲರೂ ಗೆಳೆಯರೆಂಬ ಭ್ರಮೆ ಹುಂಬ ಧೈರ್ಯ ನಮ್ಮನ್ನು ಪೇಚಿಗೀಡುಮಾಡುತ್ತದೆ. ತನ್ನ ಪ್ರತಿಬಿಂಬವೇ ನೀರಲ್ಲಿದೆ ಎಂಬುದನ್ನು ತಿಳಿಯದ ನಾಯಿ ಭ್ರಮೆಗೆ ಬಿದ್ದು ಬೊಗಳಲು ಹೋಗಿ ಆಹಾರವನ್ನು ಕಳೆದುಕೊಂಡಿತು. ಮಾನವರಾದ ನಾವು ಇಂತಹ ತಪ್ಪು ಮಾಡಬಾರದು. ನಮ್ಮ ಸಹಪಾಠಿಗಳ ಸತ್ಯನಿಷ್ಟೆ ಪ್ರಾಮಾಣಿಕತೆಗಳನ್ನು ವಿವಿಧ ಆಯಾಮಗಳಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಹಲವು ಸಂದರ್ಭಗಳ ಸೂಕ್ಷ್ಮ ಅವಲೋಕನವು ಅಂತರಾಳದ ಸತ್ಯತೆಯ ಪ್ರತಿಫಲನ ನೀಡಬಹುದು.
ಮಕ್ಕಳೇ ಮುಂದಿನ ದಿನಗಳಲ್ಲಿ ನೀವು ಬದುಕು ಕಟ್ಟಿಕೊಂಡು ಈ ಸಮಾಜದಲ್ಲಿ ಬಾಳಬೇಕಾದವರು. ಬಹಳಷ್ಟು ಜವಾಬ್ದಾರಿಯಿಂದ ಜೀವನ ನಡೆಸುವ ಅಗತ್ಯವಿದೆ. ಕಣ್ಣಾರೆ ಕಂಡ ಸತ್ಯಗಳಾದರೂ ಪರಾಂಬರಿಸಿ ನೋಡಿ ಎನ್ನುತ್ತದೆ ಶಾಸ್ತ್ರ ವಚನ.
ಇಕ್ಕೆಲಗಳಲ್ಲಿ ನೀರುಕ್ಕಿ ಹರಿಯುತ್ತಿದ್ದರೂ ಅದನ್ನು ಗಮನಿಸದೆ ನೇರವಾಗಿ ತದೇಕಚಿತ್ತದಿಂದ ಸೇತುವೆಯನ್ನು ಮಾತ್ರ ನೋಡಿದ್ದರೆ ನಾಯಿ ಮನೆ ಸೇರಬಹುದಿತ್ತಲ್ಲವೇ. ಅಂತೆಯೇ ಗೆಳೆಯನ ಹುಳುಕನ್ನರಿಯದೆ ಸಹಕಾರಕ್ಕೆ ಹೋಗಿ ಪೇಚಿಗೆ ಬೀಳುವ ಸಂದರ್ಭವೂ ವಿದ್ಯಾರ್ಥಿಗೆ ಒದಗುತ್ತಿರಲಿಲ್ಲ ಅಲ್ಲವೇ. ಮಿತ್ರರೇ ಗುರಿಯೆಡೆಗೆ ಸಾಗುವ ಪ್ರಯತ್ನದಲ್ಲಿ ಅಚಲರಾಗಿರಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಅತ್ಯಂತ ನಿಖರ ನಿರ್ಧಾರ ನಿಮ್ಮದಾಗಬೇಕು. ಆಗ ಮಾತ್ರ ಅಸಹಾಯಕತೆಯ ದಾಸರಾಗಬೇಕಾಗಿಲ್ಲ. ಎಲ್ಲರಿಗೂ ಶುಭವಾಗಲಿ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************