-->
ಅಕ್ಕನ ಪತ್ರ - 39 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 39 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 39 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


         ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........

ಜಗಲಿಯ ನನ್ನ ಪ್ರೀತಿಯ ಅಕ್ಕನಿಗೆ ಗೌರವ ಪೂರ್ವಕ ನಮಸ್ಕಾರಗಳು....
      ನಾನು ತಮ್ಮ ಪ್ರೀತಿಯ ಭವ್ಯಶ್ರೀ...  ನಾನು ಕ್ಷೇಮ, ನೀವು ಕ್ಷೇಮ ಎಂದು ಭಾವಿಸುವೆ.
      ಈ ಸಲದ ನಿಮ್ಮ ಪತ್ರವು ಓರ್ವ ಸಾಹಸಿ ವನಿತೆಯ ಕುರಿತಾಗಿತ್ತು. ಅರುಣಿಮ ಸಿನ್ಹಾ ಅವರಿಗೆ ಆದ ಗಾಯಗಳನ್ನು ಓದುತ್ತಾ ಹೋದಾಗಲೇ ಬೆಚ್ಚಿಬಿದ್ದೆನು. ಆದರೂ ಅವರ ಸಾಧನೆಯು ಜಗತ್ತು ಎಂದಿಗೂ ಮರೆಯದಂತೆ ಸದಾ ಅಮರವಾಗಿರುತ್ತದೆ. ಈ ಘಟನೆಯನ್ನು ಓದಿದಾಗ 10ನೇ ತರಗತಿಯಲ್ಲಿ ಆಂಗ್ಲ ಭಾಷಾ ಪಠ್ಯಪುಸ್ತಕದ ಘಟನೆ ನೆನಪಾಗುತ್ತದೆ.
ಸತೀಶ್ ಗುಜರಾಲ್....... ಇವರು ಅತ್ಯುತ್ತಮವಾದ Artist ಆಗಿದ್ದಾರೆ. ಇವರು ಸಹ ತನ್ನ ಎಳೆಯ ವಯಸ್ಸಿನಲ್ಲೇ ಅನಾರೋಗ್ಯ ಪೀಡಿತರಾಗುತ್ತಾರೆ. ಓದಿ ಉನ್ನತ ಹುದ್ದೆ ಏರಬೇಕೆಂಬ ಅಪ್ಪನ ಕನಸು ನನಸಾಗುವುದಿಲ್ಲ. ಅನಾರೋಗ್ಯದಿಂದ ಮನೆಯಲ್ಲಿ ಉಳಿದ ಇವರು ಮನೆಯ ಸಮೀಪದ ಗಿಡದಲ್ಲಿ ಕೂತಿದ್ದ ಹಕ್ಕಿಯನ್ನು ನೋಡುತ್ತಾ ಅದನ್ನೇ ಚಿತ್ರ ಬಿಡಿಸುತ್ತಾರೆ. ತಂದೆಗೆ ಇಷ್ಟವಿಲ್ಲದಿದ್ದರೂ ಕೊನೆಗೆ ಮಗನಿಗೆ ಕಲಾಕೃತಿ ರಚಿಸಲು ಪ್ರೋತ್ಸಾಹ ನೀಡುತ್ತಾರೆ. ಈಗ ಜಗತ್ತೇ ನೋಡುವಂತ ಒಬ್ಬ ಶ್ರೇಷ್ಠ ಕಲಾಕೃತಿಕಾರ ಸತೀಶ್ ಗುಜ್ರಾಲ್. ಈ ಘಟನೆಯು ಅರುಣಿಮ ಅವರಂತೆಯೇ ಸಾಧನೀಯ ಘಟನೆ.
    ನಾವು ಏನಾದರೂ ಸಾಧಿಸಬೇಕು, ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕಾದರೆ ಅತಿಯಾದ ಶ್ರಮ ಅಗತ್ಯ. ನಮಗೆ ಯಾವುದೇ ತೊಂದರೆಗಳು ಎದುರಾದಾಗಲೂ ಎದೆಗುಂದದೆ ಧೈರ್ಯದಿಂದ ಮುಂದೆ ಸಾಗಬೇಕು ಎಂಬುದನ್ನು ಈ ಪತ್ರದ ಮೂಲಕ ನಮಗೆ ತಿಳಿಸಿಕೊಟ್ಟಿದ್ದೀರಿ ಅಕ್ಕ....
ಸಣ್ಣಪುಟ್ಟ ಸಮಸ್ಯೆಗಳಿಗೂ ಹೆದರಿ ಹಿಂದೆ ಸರಿಯುವವರಿಗೆ ಅರುಣಿಮ ಸಿನ್ಹಾ ಮಾದರಿಯಾಗಿದ್ದಾರೆ. ಮತ್ತಷ್ಟು ಅತ್ಯುತ್ತಮ ವಿಷಯಗಳೊಂದಿಗೆ ಮುಂದಿನ ಪತ್ರದಲ್ಲಿ ಭೇಟಿಯಾಗಿ ಅಕ್ಕ.... ಅಲ್ಲಿಯವರೆಗೂ ನಮಸ್ಕಾರಗಳು.
..................................... ಭವ್ಯಶೀ 
ಪ್ರಥಮ ಪಿಯುಸಿ 
ಸರಕಾರಿ ಪದವಿ ಪೂರ್ವ ಕಾಲೇಜು, ಕೊಣಾಲು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************


      ಪ್ರೀತಿಯ ಅಕ್ಕನಿಗೆ ಸಿಂಚನಶೆಟ್ಟಿ ಮಾಡುವ ನಮಸ್ಕಾರಗಳು. ನಾನು ಕ್ಷೇಮವಾಗಿದ್ದೇನೆ. ನೀವು ಕೂಡ ಕ್ಷೇಮವಾಗಿರುವಿರಿ ಎಂದು ಆಶಿಸುತ್ತೇನೆ. ನಿಮ್ಮ ಪತ್ರ ತಲುಪಿತು. ಈ ಪತ್ರದ ವಿಷಯ ನನಗೆ ತುಂಬಾ ಇಷ್ಟವಾಯಿತು ಅಕ್ಕ. ನಾವು ನಮ್ಮ ಪ್ರಯತ್ನವನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡಬೇಕು. ನಾವು ಯಾವತ್ತೂ ಧೈರ್ಯವನ್ನು ಕಳೆದುಕೊಳ್ಳಬಾರದು. ಅರುಣಿಮ ಅವರು ಉತ್ತರ ಪ್ರದೇಶದ ಅಂಬೇಡ್ಕರ್ ನಗರದವರು. ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಕೊಳ್ಳುತ್ತಾರೆ. ಹೋರಾಟದ ಕಷ್ಟದ ಹಾದಿಗಳನ್ನು ಜಯಿಸಿ ಜಗತ್ತಿನ ಅತ್ಯಂತ ಎತ್ತರದ ಪರ್ವತದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಗೆಲುವಿನ ನಗೆ ಬೀರುತ್ತಾಳೆ. ಅರುಣಿಮ ಅವರು ಆಸ್ಪತ್ರೆ ದಾಖಲಾಗುತ್ತಾರೆ ಈ ವಿಷಯ ಕೇಳಿ ನನಗೆ ದುಃಖವೆನಿಸಿತು. ಹೌದು ಅಕ್ಕ ಇವರ ಕುರಿತು ಹೆಚ್ಚಿನ ಮಾಹಿತಿಗಳನ್ನು ನಾವೆಲ್ಲರೂ ತಿಳಿದೆವು. ಅರುಣಿಮ ಅವರಿರೊಂದಿಗಿನ ಈ ಪಯಣ ತುಂಬಾ ತುಂಬಾ ಸಂತೋಷವಾಗಿತ್ತು. ನಮಗೆ ಕೂಡ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಸಿ ಅಕ್ಕ. ಮುಂದಿನ ಪತ್ರದಲ್ಲಿ ಸಿಗುವ ಅಲ್ಲಿವರೆಗಿನ ಅಲ್ಲಿವರೆಗೆ ಪ್ರೀತಿಯ ತಂಗಿ ಸಿಂಚನಾಳ ನಮನಗಳು. 
..................................... ಸಿಂಚನಾ ಶೆಟ್ಟಿ 
5ನೇ ತರಗತಿ 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೇಡಿಗುಳಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


ನಮಸ್ತೇ, ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು.
         ನಿಮ್ಮ ಪತ್ರವನ್ನು ಓದಿದೆನು. ಪ್ರತಿಯೊಂದು ಪತ್ರದಲ್ಲಿಯೂ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಹೊಸ ಹೊಸ ವಿಷಯಗಳನ್ನು ಉದಾಹರಣಾ ಸಹಿತವಾಗಿ ಒಳ್ಳೆಯ ಸಲಹೆಯನ್ನು ನಮಗೆಲ್ಲಾ ತಿಳಿಸಿಕೊಡುವುದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ.
     ಅರುಣಿಮಾ ಸಿನ್ಹ ಅವರ ವಿಷಯ ಓದುತ್ತಿದ್ದಂತೆ ತುಂಬಾ ದುಃಖವಾಯ್ತು. ಆದರೆ ಮುಂದೆ-ಮುಂದೆ ಓದುತ್ತಾ ಹೋದಂತೆ ಅವರು ಅಷ್ಟೊಂದು ನೋವನ್ನು ಅನುಭವಿಸಿದರೂ, ಕಷ್ಟ ಬಂದರೂ ಧೈರ್ಯಗೆಡದೇ ಅವರು ಮಾಡಿದ ಸಾಧನೆಯನ್ನು ನೋಡಿ ಸಂತೋಷವೂ, ಅಚ್ಚರಿಯೂ ಆಯ್ತು. ಇದರಿಂದ ಒಂದು ಒಳ್ಳೆಯ ಸಂದೇಶವು ನಮಗೆಲ್ಲಾ ದೊರೆಯಿತು. ನಾವು ಸೋತಾಗ ಅಂಜದೇ ಧ್ಯೆರ್ಯಗೆಡದೇ ಮುಂದಕ್ಕೆ ಹೆಜ್ಜೆ ಹಾಕಬೇಕು. ನಮಗೆ ಸಾಧ್ಯವಾಗದ ಕೆಲಸ ಯಾವುದೂ ಇಲ್ಲ. ನಮ್ಮಿಂದ ಎಲ್ಲವೂ ಸಾಧ್ಯ. ನಾವು ಕೂಡ ನಮಗೆ ದೊರಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಒಳ್ಳೆಯ ಸಾಧನೆಯನ್ನು ಮಾಡಬಹುದು ಎಂಬುದನ್ನು ತಿಳಿಯಬಹುದು. ಧನ್ಯವಾದಗಳು ಅಕ್ಕಾ,
..................................... ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************    



     ನಮಸ್ತೆ ಅಕ್ಕ, ಅರುಣಿಮಾ ಸಿನ್ಹಾ ಅವರ ಸಾಧನೆಯ ಕಥೆ ನಿಜಕ್ಕೂ ನಮಗೆ ಸ್ಪೂರ್ತಿ. ಚಿಕ್ಕ ನೋವನ್ನು ಸಹಿಸಲು ಸಾದ್ಯವಿಲ್ಲ ಎನ್ನುವ ಮನಸ್ಥಿತಿಯ ನಡುವೆ 49 ರೈಲುಗಳು ಕಾಲಿನ ಮೇಲೆ ಹರಿದಾಗ ಆ ನೋವು, ಆಘಾತವನ್ನು ಸಹಿಸಿ, ಮುಂದಿನ ಚಿಕಿತ್ಸೆಯಲ್ಲೂ ನೋವು ತಿಂದು ಧೈರ್ಯ ಗೆಡದೆ ಛಲದಿಂದ ಮುನ್ನುಗ್ಗಿದ ದಿಟ್ಟ ಮಹಿಳೆ. ಎಲ್ಲಾ ಸರಿ ಇದ್ದು ಏನೂ ಮಾಡದೆ ಇರುವವರ ನಡುವೆ, ಕಾಲು ಕಳೆದುಕೊಂಡರೂ, ಆರೋಗ್ಯ ಹದಗೆಟ್ಟರೂ ಸುಮ್ಮನೆ ಇರದೆ, ಏನಾದರೂ ಸಾಧಿಸಬೇಕು ಎನ್ನುವ ಅವರ ಹಠ, ಇಂದು ಅವರನ್ನು ಇಡೀ ವಿಶ್ವವೇ ಗುರುತಿಸುವಂತೆ ಮಾಡಿದೆ. ಸಾಧನೆಗೆ ಮಿತಿ ಇಲ್ಲ, ಸಾಧಕರಿಗೆ ಸಾವಿಲ್ಲ ಎನ್ನುವ ಮಾತು ಇವರಂತೆ ಸಾಧನೆಗೈದ ಅನೇಕ ಸಾಧಕರನ್ನು ನೋಡುವಾಗ ನೆನಪಾಗುತ್ತದೆ. ಆದ ನೋವನ್ನು ದೌರ್ಭಾಗ್ಯ ಎಂದು ತಿಳಿಯದೆ ಅದರಲ್ಲೇ ಹೊಸದನ್ನು ಹುಡುಕುವ, ಹೊಸದಾರಿ ಕಂಡುಕೊಳ್ಳುವ ಆಲೋಚನೆ ನಮಗೆ ಪ್ರೇರಣೆ.....  ಸದಾ ಸುವಿಚಾರ, ಸ್ಪೂರ್ತಿದಾಯಕ ವಿಚಾರ ಹಂಚಿಕೊಳ್ಳುವ ಅಕ್ಕ ನಿಮಗೆ ಹೃದಯತುಂಬಿ ಧನ್ಯವಾದ..... 
.................................................... ಶ್ರಾವ್ಯ 
ದ್ವಿತೀಯ ಪಿ.ಯು.ಸಿ
ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


ಅಕ್ಕನ ಪತ್ರ 39ಕ್ಕೆ ಶಿಶಿರನ ಉತ್ತರ              
    ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ನಮಸ್ಕಾರಗಳು. ನಾನು ಕ್ಷೇಮವಾಗಿರುವೆ. ಅರುಣಿಮಾ ಸಿನ್ಹಾ ತನ್ನ ಜೀವನದಲ್ಲಿ ಎದುರಾದ ಅನಿರೀಕ್ಷಿತ ಪರಿಸ್ಥಿತಿಯನ್ನು ಛಲ ಮತ್ತು ಪರಿಶ್ರಮದಿಂದ ಎದುರಿಸಿ ತನ್ನ ಗುರಿಯನ್ನು ಸಾಧಿಸಿದ ಪರಿಯನ್ನು ನಿಮ್ಮ ಪತ್ರದ ಮೂಲಕ ಓದುವಾಗ ನನ್ನ ಮನಸ್ಸಿನಲ್ಲಿ ಹೊಸ ಉತ್ಸಾಹ ಮೂಡಿತು. ಇದೇ ರೀತಿ ಹಲವರ ಜೀವನ ಸಂಘರ್ಷದ ಕತೆಗಳನ್ನು ಕೇಳಿದ್ದೇನೆ. ಪುಸ್ತಕಗಳಲ್ಲಿ ಓದಿದ್ದೇನೆ. ಇದರಲ್ಲಿ ನನಗೇ ತುಂಬಾ ಪ್ರಭಾವ ಬೀರಿದ ಛಲಗಾರ ಕೆರೋಲಿ ಟೆಕಾಕ್ಸ್ (Karoly Takacs) ಎಂಬ ಆಟಗಾರನ ಜೀವನ ಚರಿತ್ರೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
     ಟೆಕಾಕ್ಸ್ ಅವರು ಹಂಗೇರಿಯನ್ ಸೇನೆಯಲ್ಲಿ ಸೈನಿಕರಾಗಿದ್ದರು. ಆದರೇ ಅವರೊಬ್ಬ ಉತ್ತಮ ಕ್ರೀಡಾಪಟುವಾಗಿದ್ದರು. ಅವರ ಇಷ್ಟದ ಕ್ರೀಡೆ ಶೂಟಿಂಗ್ (23m Air Pistol). ಅವರು ಹಂಗೇರಿಯಲ್ಲಿ ನಡೆದ ಎಲ್ಲಾ ಶೂಟಿಂಗ್ ಸ್ಪರ್ಧೆಗಳಲ್ಲೂ ಚಿನ್ನದ ಪದಕ ಗೆದ್ದಿದ್ದರು. 1940ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ತನ್ನ ಮುಡಿಗೇರಿಸಿಕೊಳ್ಳಬೇಕೆಂಬುವುದು ಅವರ ಗುರಿಯಾಗಿತ್ತು. ಆದರೆ 1938ರ ಸೈನಿಕ ತರಬೇತಿಯ ಸಂದರ್ಭದಲ್ಲಿ ಅವರ ಕೈಯಲ್ಲಿ ಇದ್ದ 'ಹ್ಯಾಂಡ್ ಗ್ರಾನೇಟ್' ಸ್ಪೋಟವಾಗಿ ತಮ್ಮ ಬಲಗೈಯನ್ನು ಕಳೆದುಕೊಂಡರು. ಆದರೂ ತನ್ನ ಛಲ ಬಿಡದೆ ಪರಿಶ್ರಮದಿಂದ ಎರಡು ವರ್ಷ ತನ್ನ ಎಡಗೈಯ ಮೂಲಕ ಶೂಟಿಂಗ್ ಅಭ್ಯಾಸ ಮಾಡಿ 1939ರಲ್ಲಿ ಹಂಗೇರಿಯನ್ ನ್ಯಾಷನಲ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು . ಒಲಿಂಪಿಕ್ಸ್ ನ ಪದಕವನ್ನು ಗೆಲ್ಲಬೇಕೆಂಬ ತನ್ನ ಕನಸನ್ನು ಸಾಕಾರಗೊಳಿಸುವುದೇ ತನ್ನ ಗುರಿ ಎಂದು ಕೊಂಡಿರುವಾಗ ಎರಡನೇಯ ಮಹಾ - ಯುದ್ಧದ ಕಾರಣ 1940ರ ಒಲಿಂಪಿಕ್ಸ್ ಕ್ರೀಡಾಕೂಟ ರದ್ದು ಗೊಂಡಿತು. ನಂತರ ಅದೇ ಕಾರಣದಿಂದ 1944ರ ಒಲಿಂಪಿಕ್ಸ್ ಕೂಡ ರದ್ದುಗೊಂಡಾಗ ತಾವು ಬೇಸರಗೊಳ್ಳದೆ 1948ರ ಒಲಿಂಪಿಕ್ಸ್ ಗೆ ಸಿದ್ಧತೆ ನಡೆಸಿದರು.1948ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಇವರು ತನ್ನ ಎಡಗೈಯ ಮೂಲಕ ಶೂಟಿಂಗ್ ಮಾಡಿ ವಿಶ್ವ ದಾಖಲೆಯನ್ನು ಮುರಿದು ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಂಡರು. ತಮ್ಮ ಸಾಧನೆಯನ್ನು ಇಲ್ಲಿಗೆ ನಿಲ್ಲಿಸದೆ 1952ರ ಒಲಿಂಪಿಕ್ಸ್ ನಲ್ಲಿ ತಮ್ಮದೇ ವಿಶ್ವ ದಾಖಲೆಯನ್ನು ಮುರಿದು ಚಿನ್ನದ ಪದಕವನ್ನು ಪಡೆದರು. ಛಲ ಮತ್ತು ಪರಿಶ್ರಮದಿಂದ ನಾವು ಏನನ್ನಾದರೂ ಸಾಧಿಸಬಹುದು ಎಂಬುವುದನ್ನು ನಾನು ಕೆರೋಲಿ ಟೆಕಾಕ್ಸ್ ಅವರ ಜೀವನಗಾಥೆಯಿಂದ ತಿಳಿದೆನು.  ನಮ್ಮ ಶಾಲಾ ವಾರ್ಷಿಕೋತ್ಸವ ವಿಜ್ರಂಭಣೆಯಿಂದ ಆಚರಿಸಿದೆವು. ಇವತ್ತು ಆಳ್ವಾಸ್ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ವೈಭವವನ್ನು ವೀಕ್ಷಿಸಿದೆವು. ಇಲ್ಲಿಗೆ ನನ್ನ ಪತ್ರ ಕೊನೆಗೊಳಿಸುತ್ತೇನೆ.
.............................................. ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article