-->
ಬದಲಾಗೋಣವೇ ಪ್ಲೀಸ್ - 78

ಬದಲಾಗೋಣವೇ ಪ್ಲೀಸ್ - 78

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
                
             ಅದೊಂದು ಬಹೃತ್ ವೇದಿಕೆ. ಅಲ್ಲಿ ನೂರಾರು ಕಲಾವಿದರು ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದರು. ವಿವಿಧ ಕಲಾ ಪ್ರದರ್ಶನ ವನ್ನು ನೀಡುತ್ತಿದ್ದರು. ಆಗ ನನಗೆ ಮಹಾಂತೇಶನ ನೆನಪಾಯಿತು. ನಾನು ಅಗತ್ಯ ಕೆಲಸ ನಿಮಿತ್ತ ಬೆಂಗಳೂರಿಗೆ ರೈಲು ಪ್ರಯಾಣ ಹೊರಟ ಸಂದರ್ಭದಲ್ಲಿ ಮಾರ್ಗ ಮಧ್ಯೆ ಚೋಟುದ್ದದ 13ರ ಹರೆಯದ ಮಹಾಂತೇಶನ ಭೇಟಿ ಆಯಿತು. ಆತನು ಮುರಿದ ಸ್ಲೇಟಿನಂತಿರುವ ತೆಳು ಬಳಪದ ಕಲ್ಲುಗಳನ್ನು ಪರಸ್ಪರ ಬಡಿದು ಅದ್ಭುತವಾದ ಸ್ವರಗಳನ್ನು ಹೊಮ್ಮಿಸುತ್ತಿದ್ದ. ಆತ ತನ್ನಲ್ಲಿದ್ದ ಕಲ್ಲುಗಳನ್ನು ಬಡಿದಾಗ ಸಂಗೀತ ರಸಧಾರೆಯ ಇಂಪಾದ ಗೀತೆಗಳು ಹೊರಹೊಮ್ಮುತ್ತಿತು. ಪಯಣದ ಮಧ್ಯೆ ಅವನಲ್ಲಿ ಮಾತಾಡಿದಾಗ ಆತನ ಹೃದಯವಿದ್ರಾವಕ ಜೀವನ ಕಥೆ ಕೇಳಿ ತುಂಬಾ ಬೇಸರವಾಯಿತು. ಅವಕಾಶ ದೊರೆತರೆ ಅದ್ಭುತ ಕಲಾವಿದನಾಗುವ ಎಲ್ಲಾ ಅರ್ಹತೆ ಇತ್ತು. ಆದರೆ ಅವನಿಗೆ ಯೋಗ್ಯ ಅವಕಾಶ ದೊರೆತಿರಲಿಲ್ಲ. ಅವನ ಜತೆ ಸ್ವಲ್ಪ ಮಾತಾಡುತ್ತಿರುವಂತೆ ಮುಂದಿನ ನಿಲ್ದಾಣದಲ್ಲಿ ಆತ ಇಳಿದು ಹೋದನು. ಆದರೆ ಆತ ಇಂದಿಗೂ ನನ್ನ ಮನದಿಂದ ಇಳಿದಿಲ್ಲ. ಅವನು ಇಂದಿಗೂ ನನಗೆ ಸ್ಫೂರ್ತಿ ಆಗಿದ್ದಾನೆ.
      ಇಂದಿನ ಕೆಲವು ಪ್ರದರ್ಶನಗಳಲ್ಲಿ ಪ್ರತಿಭೆ ಇಲ್ಲದ ಪ್ರದರ್ಶನ ಕಂಡು ಬರುತ್ತದೆ. ಒಳಗೆ ವೇದಿಕೆಯಲ್ಲಿ ಪ್ರತಿಭಾ ರಹಿತರು ಪ್ರದರ್ಶನ ಮಾಡುತ್ತಿರುವ ಹೊತ್ತಿನಲ್ಲಿಯೇ ಹೊರಗಡೆ ಬೀದಿ ಬದಿಯಲ್ಲಿ ಪ್ರತಿಭಾ ವಂಚಿತರು ತಮ್ಮದೇ ಶೈಲಿಯಲ್ಲಿ ಪ್ರತಿಭಾ ಪ್ರದರ್ಶನ ಮಾಡುತ್ತಿರುತ್ತಾರೆ. ಅದಕ್ಕೆ ಹಿರಿಯರು "ಪ್ರದರ್ಶನಕ್ಕಿಲ್ಲದ ಪ್ರತಿಭೆ ವ್ಯರ್ಥ - ಪ್ರತಿಭೆ ಇಲ್ಲದ ಪ್ರದರ್ಶನ ವ್ಯರ್ಥ" ಎಂದು ಹೇಳಿದ್ದಾರೆ. ಇನ್ನು ಕೆಲವೆಡೆ ಪ್ರತಿಭೆಗಳಿದ್ದರೂ ಅವಕಾಶ ಕೊರತೆಯಿಂದ ಮೂಲೆಗುಂಪಾಗಿದ್ದಾರೆ. ಇವತ್ತು ಪೋಷಕರ - ಶಿಕ್ಷಕರ - ಸಮಾಜದ ನಿರ್ಲಕ್ಷ್ಯದಿಂದ ಹಲವಾರು ಪ್ರತಿಭೆಗಳು ಮುದುಡಿ ಹೋಗುತಿದೆ. ಕೆಲವರ ಅಂಕದ ಪ್ರೀತಿಗೆ (ಮಾರ್ಕ್ಸ್ ವಾದಿ) ಹಲವಾರು ಪ್ರತಿಭೆಗಳು ಕಮರಿ ಹೋಗುತಿದೆ. ಇಂಥವರನ್ನು ಗುರುತಿಸಿ ಅರಳಿಸುವುದಾದರೂ ಹೇಗೆ. ಈ ಬಗ್ಗೆ ಧನಾತ್ಮಕವಾಗಿ ಆಲೋಚಿಸಿ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************



Ads on article

Advertise in articles 1

advertising articles 2

Advertise under the article