ಜೀವನ ಸಂಭ್ರಮ : ಸಂಚಿಕೆ - 64
Monday, December 19, 2022
Edit
ಜೀವನ ಸಂಭ್ರಮ : ಸಂಚಿಕೆ - 64
ಒಂದು ಊರಿನಲ್ಲಿ ಸುಂದರ ತರುಣಿ ಇದ್ದಳು. ಅವಳು ತನ್ನ ಕೆಟ್ಟ ನಡುವಳಿಕೆಯಿಂದಾಗಿ, ಊರಿನವರ ಕೆಟ್ಟ ದೃಷ್ಟಿ ಬಿತ್ತು. ಇವಳಿಂದಾಗಿ ಯುವಕರು ಮತ್ತು ಗಂಡಸರು ದಿಕ್ಕು ತಪ್ಪಿದ್ದರು. ಇದರಿಂದ ಊರಿನ ಪ್ರಮುಖರು ಒಂದು ತೀರ್ಮಾನಕ್ಕೆ ಬಂದರು. ಇವಳನ್ನು ಊರ ಮುಂದಿರುವ ಚಾವಡಿ ಮುಂದೆ ಕಂಬಕ್ಕೆ ಕಟ್ಟಿ, ಊರಿನ ಜನರೆಲ್ಲ ಕಲ್ಲಿನಿಂದ ಹೊಡೆದು ಸಾಯಿಸುವುದು ಎಂದು ತೀರ್ಮಾನಿಸಿದರು. ಅದರಂತೆ ಅವಳನ್ನು ಊರ ಮುಂದಿರುವ ಚಾವಡಿಗೆ ಕರೆತಂದು, ಅಲ್ಲಿರುವ ಕಂಬಕ್ಕೆ ಹಗ್ಗದಿಂದ ಕಟ್ಟಿದರು. ಊರ ಜನರೆಲ್ಲ ಆಕೆಯನ್ನು ಕಲ್ಲುಗಳಿಂದ ಒಡೆದು ಸಾಯಿಸಲು ಕಲ್ಲುಗಳನ್ನು ಹಿಡಿದಿದ್ದರು. ಆಗ ಆ ತರುಣಿ "ಕಾಪಾಡಿ, ಕಾಪಾಡಿ" ಎಂದು ಜೋರಾಗಿ ಕೂಗತೊಡಗಿದಳು. ಆ ಸಮಯಕ್ಕೆ ಯೇಸು ಕ್ರಿಸ್ತ ಆ ದಾರಿಯಲ್ಲಿ ಬರುತ್ತಿದ್ದರು. ಈ ಕರುಣೆಯ ಧ್ವನಿ ಕೇಳಿ ಅಲ್ಲಿಗೆ ಬಂದು, "ಏನಾಗಿದೆ? ಏಕೆ ಶಿಕ್ಷೆ" ಎಂದು ವಿಚಾರಿಸಿದರು. ಆಗ ಊರಿನ ಪ್ರಮುಖರು ಹೇಳಿದರು, "ಆಕೆಯ ಗುಣ ನಡತೆ ಸರಿ ಇಲ್ಲ, ಇದರಿಂದ ಊರಿನ ಯುವಕರು ಹಾಗೂ ಗಂಡಸರು ಕೆಟ್ಟ ದಾರಿ ಹಿಡಿದಿದ್ದಾರೆ. ಆದ್ದರಿಂದ ಊರಿನ ಪ್ರಮುಖರಾದ ನಾವು ಈಕೆಯನ್ನು ಈ ಕಂಬಕ್ಕೆ ಕಟ್ಟಿ, ಊರಿನ ಎಲ್ಲರೂ ಸೇರಿ, ಕಲ್ಲಿನಿಂದ ಹೊಡೆದು ಸಾಯಿಸಲು ತೀರ್ಮಾನಿಸಿದ್ದೇವೆ" ಎಂದು ಹೇಳಿದರು. ಇದನ್ನು ಕೇಳಿದ ಏಸುಕ್ರಿಸ್ತ ಹೇಳಿದ. ಈಕೆ ನಡತೆ ಸರಿ ಇಲ್ಲ. ಇದಕ್ಕಾಗಿ ಈಕೆಗೆ ಈ ಮರಕ್ಕೆ ಕಟ್ಟಿರುವುದು ಸರಿ. ಅದೇ ರೀತಿ ಕಲ್ಲಿನಿಂದ ಹೊಡೆದು ಸಾಯಿಸಲು ಕೈಗೊಂಡಿರುವ ನಿರ್ಧಾರವೂ ಸರಿ. ಆದರೆ ಒಂದು ಷರತ್ತು, ನಿಮ್ಮಲ್ಲಿ ಯಾರು ಜೀವನದಲ್ಲಿ ಒಂದು ತಪ್ಪು ಮಾಡಿಲ್ಲವೋ, ಅವರು ಮೊದಲು ಕಲ್ಲಿನಿಂದ ಹೊಡೆಯಿರಿ. ಕಲ್ಲು ಹಿಡಿದಿದ್ದ ಎಲ್ಲರೂ ಕೆಳಗೆ ಕಲ್ಲು ಹಾಕಿದರು. ಒಬ್ಬರು ಹೊಡೆಯಲಿಲ್ಲ. ಆಗ ಆಕೆಯನ್ನು ಕಂಬದಿಂದ ಬಿಚ್ಚಿ, ಇನ್ನು ಮುಂದೆ ಇಂಥ ಕೆಟ್ಟ ಕೆಲಸ ಮಾಡಬೇಡ. ಒಳ್ಳೆಯ ರೀತಿಯಿಂದ ಬಾಳುವಂತೆ ತಿಳಿಸಿ ಕಳುಹಿಸಿದರು.
ಈ ಘಟನೆಯ ಅರ್ಥ, ನಾನು ತಪ್ಪು ಮಾಡಿದರೆ ಬೇರೆಯವರು ನನ್ನನ್ನು ಕ್ಷಮಿಸಬೇಕು. ಅದೇ ರೀತಿ ಬೇರೆಯವರು ತಪ್ಪು ಮಾಡಿದರೆ ನಾನು ಅವರನ್ನು ಕ್ಷಮಿಸಬೇಕು. ಆದರೆ ಈಗ ನಡೆಯುತ್ತಿರುವುದು ಬೇರೆ. ಅದಕ್ಕೆ ವಿರುದ್ಧವಾಗಿ. ನನ್ನ ತಪ್ಪನ್ನು ಸಮಾಜ ಕ್ಷಮಿಸಬೇಕು. ಬೇರೆಯವರ ತಪ್ಪನ್ನು ನಾನು ಕ್ಷಮಿಸಬಾರದು. ಇದು ಸಾಧ್ಯವೇ?.
ಇನ್ನೊಂದು ಘಟನೆ ಬುದ್ಧನ ಶಿಷ್ಯ ಉಪಗುಪ್ತನ ಜೀವನ ಚರಿತ್ರೆಯಲ್ಲಿ ಬರುತ್ತದೆ. ಒಂದು ರಾಜ್ಯದಲ್ಲಿ ಒಬ್ಬಳು ಸುಂದರ ನರ್ತಕಿಯಿದ್ದಳು. ಅವಳು ತನ್ನ ಸೌಂದರ್ಯ ಮತ್ತು ಧ್ವನಿ ಹಾಗೂ ಹಾಡಿನಿಂದಾಗಿ ರಾಜ್ಯದ ಯುವಕರು, ಅಧಿಕಾರಿಗಳು ಮಾರು ಹೋಗಿದ್ದರು. ಅವಳನ್ನು ನೋಡಲು ಅವಳ ಗಾಯನ ಕೇಳಲು ಹಾತೊರೆಯುತ್ತಿದ್ದರು. ಒಮ್ಮೆ ಉಪಗುಪ್ತನು ಭಿಕ್ಷೆ ಬೇಡುತ್ತಾ, ಆಕೆಯ ಮನೆ ಮುಂದೆ ಬಂದನು. ಭಿಕ್ಷೆ ನೀಡಲು ಬಂದ ನರ್ತಕಿ, ಉಪಗುಪ್ತನ ಸೌಂದರ್ಯಕ್ಕೆ ಮನಸೋತು, ಹೇಳುತ್ತಾಳೆ. "ಭಿಕ್ಷೆ ಯಾಕೆ?. ಇಲ್ಲಿರುವ ವಸ್ತು, ನಾನು ಎಲ್ಲ ನಿನ್ನವೆ ತೆಗೆದುಕೋ ಎನ್ನುತ್ತಾಳೆ. ಆಗ ಉಪಗುಪ್ತ ಹೇಳುತ್ತಾನೆ. "ಸಮಯ ಬಂದಾಗ ನಾನೇ ಬಂದು ಪಡೆಯುತ್ತೇನೆ" ಎಂದು ಹೇಳಿ ಹೊರಟು ಹೋಗುತ್ತಾನೆ. ನಂತರ ಹಾಗೆ ಸಾಕಷ್ಟು ವರ್ಷ ಆತನ ನಿರೀಕ್ಷೆಯಲ್ಲಿ ಕಾಯುತ್ತಾಳೆ. ನರ್ತಕಿಗೆ ವಯಸ್ಸಾಗುತ್ತದೆ. ಮುಖದಲ್ಲಿ ಕುರೂಪ ಕಾಣಿಸುತ್ತದೆ. ಕಾಯಿಲೆಗಳು ಉಂಟಾಗುತ್ತದೆ. ಆಗ ತರುಣರು ಊರಿನವರೆಲ್ಲ ಆಕೆಯನ್ನ ಊರಿನಿಂದ ಹೊರದಬ್ಬುತ್ತಾರೆ. ಆಕೆಯಲ್ಲಿದ್ದ ಹಣ, ಆಸ್ತಿ ಮತ್ತು ಮನೆಯನೆಲ್ಲ ಕಿತ್ತುಕೊಳ್ಳುತ್ತಾರೆ. ಹಾಗೆ ಆ ನರ್ತಕಿ ಸ್ಮಶಾನದಲ್ಲಿ ಅಳುತ್ತಾ ಕುಳಿತಿರುತ್ತಾಳೆ. ಆಗ ಅಲ್ಲಿಗೆ ಉಪಗುಪ್ತ ಬರುತ್ತಾನೆ. ಈಗ ನಿನ್ನನ್ನು ಕೊಡು ಎಂದು ಕೇಳುತ್ತಾನೆ. ಆಗ ಆಕೆ ಹೇಳುತ್ತಾಳೆ. "ಈಗ ನನ್ನಲ್ಲಿ ಏನು ಇಲ್ಲ. ಸೌಂದರ್ಯವಿಲ್ಲ, ಹಣ, ಆಸ್ತಿ ಏನೂ ಇಲ್ಲ, ನಾನೇನು." ಎನ್ನುತ್ತಾಳೆ. ಆಗ ಉಪಗುಪ್ತ ಹೇಳುತ್ತಾನೆ. "ಈಗ ಹೋಗಿದೆಯಲ್ಲ ಅದು ಯಾವುದು ನಿನ್ನದಲ್ಲ. ರೂಪ, ಯೌವ್ವನ, ಹಣ, ಆಸ್ತಿ, ಸಂಪತ್ತು ನಿನ್ನದಲ್ಲ. ಈಗ ನಿನ್ನಲ್ಲಿ ಏನು ಉಳಿದಿದೆಯೋ...? ಅದು ನೀನು. ಅದನ್ನು ಕೊಡು" ಎಂದು ಹೇಳುತ್ತಾನೆ. ಆಗ ಆಕೆ ತಲೆಬಾಗಿ ಉಪಗುಪ್ತನ ಶಿಷ್ಯಳಾಗುತ್ತಾಳೆ. ಇದುವರೆಗೆ ಏನಾಗಿದೆಯೋ ಅದನ್ನೆಲ್ಲ ಮರೆತು ಯಾರು ನಿನ್ನನ್ನು ಈ ಸ್ಥಿತಿಗೆ ತಳ್ಳಿದರೋ ಅವರನ್ನು ಕ್ಷಮಿಸಿ ಬಿಡು. ಕ್ಷಮಿಸಿ ಬಿಡು ಎಂದರೆ ಮರೆತು ಬಿಡು. ತಲೆಯಿಂದ ತೆಗೆದು ಹಾಕು. ಅವರನ್ನ ದ್ವೇಷಿಸಬೇಡ. ಇನ್ನು ಮುಂದೆ ಶಾಂತಿ ಕುರಿತು ಚಿಂತಿಸು. ನಿನ್ನ ಜೀವನ ಸುಂದರವಾಗುತ್ತದೆ" ಎಂದು ಹೇಳಿ ಹೊರಡುತ್ತಾನೆ. ತದನಂತರ ಆ ನರ್ತಕಿ ಶಾಂತಿಯನ್ನು ಕುರಿತು ಚಿಂತಿಸುತ್ತಾ ಇರುತ್ತಾಳೆ. ಯಾವಾಗ ಮನಸ್ಸಿಗೆ ಶಾಂತಿ ಬಂತು, ದೇಹದ ಕಾಯಿಲೆಯೆಲ್ಲಾ ವಾಸಿಯಾಗಿತ್ತು. ಮುಖದ ಸೌಂದರ್ಯ ಸುಧಾರಿಸಿತ್ತು. ತದನಂತರ ಯಾರೆಲ್ಲ ಹೊರ ಹಾಕಿದ್ದರೋ ಅವರು ಈಕೆ ಬಳಿ ಬಂದರು. ಆಕೆ ಹೇಳಿದ್ದು ಬುದ್ಧಂ, ಶರಣಂ, ಗಚ್ಛಾಮಿ ಎಂದು.
ಮಕ್ಕಳೇ, ಈ ಎರಡು ಘಟನೆಯಿಂದ ತಿಳಿದು ಬರುವುದೇನೆಂದರೆ, ನಮ್ಮ ತಪ್ಪನ್ನು ಬೇರೆಯವರು ಕ್ಷಮಿಸಿದಂತೆ, ಬೇರೆಯವರ ತಪ್ಪನ್ನು ನಾವು ಕ್ಷಮಿಸಬೇಕು. ಕ್ಷಮೆ ಎಂದರೆ ಎದುರು ಕರೆದು ಕ್ಷಮೆ ಕೇಳುವುದಲ್ಲ. ಮನಸ್ಸಿನಿಂದ ತೆಗೆದು ಹಾಕುವುದು ಹಾಗು ಮರೆಯುವುದೇ ಕ್ಷಮೆ ಅಲ್ಲವೇ..? ಒಬ್ಬ ದುಷ್ಟ ವ್ಯಕ್ತಿ ಇದ್ದಾನೆ ಎಂದರೆ ಅವನಿಗೆ ಪ್ರೋತ್ಸಾಹ ನೀಡಬಾರದು. ಪ್ರೋತ್ಸಾಹಿಸಿದರೆ ಮತ್ತಷ್ಟು ದುಷ್ಟ ಕೆಲಸ ಮಾಡುತ್ತಾನೆ. ಅವನನ್ನು ದ್ವೇಷಿಸಲು ಬಾರದು. ದ್ವೇಷಿಸಿದರೆ ನಮಗೆ ತೊಂದರೆ ನೀಡುತ್ತಾನೆ. ಅವನು ಅವನನ್ನು ಮನಸ್ಸಿನಿಂದ ತೆಗೆಯುವುದೇ ಕ್ಷಮಾ ಗುಣ. ಅವನನ್ನು ಪ್ರೋತ್ಸಾಹಿದಂತೆಯೂ ಇಲ್ಲ, ದ್ವೇಷಿಸಿದಂತೆಯೂ ಇಲ್ಲ. ಅವನು ನಮ್ಮ ಮನಸ್ಸಿನಲ್ಲಿ ಇಲ್ಲ. ಇದೇ ಸರಿಯಾದ ದಾರಿ ಅಲ್ಲವೇ ಮಕ್ಕಳೇ...
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************