ಅಕ್ಕನ ಪತ್ರ : ಸಂಚಿಕೆ - 39
Saturday, December 17, 2022
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 39
ಹೇಗಿದ್ದೀರಿ? ನಿಮ್ಮ ಲವಲವಿಕೆಯೇ ಪತ್ರಕ್ಕೆ ನಿತ್ಯ ಸ್ಫೂರ್ತಿ. ಅನುದಿನವೂ ಕಲಿಕೆಯಾಗುವ ಜಗಲಿ, ಸಂಭ್ರಮಿಸುವ ವಿಶಾಲ ವೇದಿಕೆ. ಜಗಲಿಯಾಚೆಗೂ ವಿಸ್ತರಿಸುತ್ತಿರುವ ಬಾಂಧವ್ಯ ಜಗಲಿ ಬಳಗದ ಆಸ್ತಿ.
ಹಿತವಾದ ಬೆಳಗು. ಈ ದಿನ ನನ್ನ ಓದಿನ ದಾರಿಯಲ್ಲಿ ಸಿಕ್ಕಿದ ಛಲಗಾತಿಯ ಬಗ್ಗೆ ನಿಮ್ಮಲ್ಲಿ ಮಾತನಾಡಬೇಕು. ಆಕೆ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ. ತಂದೆಯಂತೆಯೇ ಸೇನೆಗೆ ಸೇರಬೇಕೆಂಬ ಕನಸಿದ್ದರೂ ಅವಳು ಆಯ್ಕೆಯಾಗಲಿಲ್ಲ. ಕೊನೆಗೆ ದೆಹಲಿ C S I F ನಿಂದ ಕೆಲಸಕ್ಕಾಗಿ ಕರೆ ಬಂತು. ಆದರೆ ಆ ಪತ್ರದಲ್ಲಿ ಜನ್ಮ ದಿನಾಂಕ ತಪ್ಪಾಗಿ ನಮೂದಾಗಿತ್ತು. ಸರಿಪಡಿಸಲೆಂದು ದೆಹಲಿಗೆ ಹೊರಟಿದ್ದಳು. ಪದ್ಮಾವತಿ ಎಕ್ಸ್‌ಪ್ರೆಸ್ ರೈಲು ಯಾವುದರ ಪರಿವೆಯೂ ಇಲ್ಲದೆ ಒಂದೇ ಸಮನೆ ಓಡುತಿತ್ತು. ಇದ್ದಕ್ಕಿದ್ದ ಹಾಗೆ ದರೋಡೆಕೋರರು ರೈಲಿನೊಳಗೆ ನುಗ್ಗಿ ಅವಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡರು. ಅವಳ ತೀವ್ರ ಪ್ರತಿಭಟನೆಯನ್ನೂ ಲೆಕ್ಕಿಸದೆ, ಸರವನ್ನು ಎಳೆದುಕೊಂಡು ಆಕೆಯನ್ನು ರೈಲಿನಿಂದ ಹೊರಗೆಸೆದರು. ಬರೇಲಿಯ ಇನ್ನೊಂದು ಹಳಿಗೆ ಬಿದ್ದ ಅವಳ ಕಾಲಿನ ಮೇಲೆ ಇನ್ನೊಂದು ರೈಲು ಹಾದು ಹೋಯಿತು. ಕಾಲು ತುಂಡಾಯಿತು. ಎರಡು ರೈಲು ಹಳಿಗಳ ನಡುವೆ ಅನಾಥವಾಗಿ ಬಿದ್ದಿದ್ದಳು. ಒಂದೆರಡಲ್ಲ...
49 ರೈಲುಗಳು...! ಅದೇ ಕಾಲಿನ ಮೇಲೆ....! ತುಂಡಾದ ಕಾಲುಗಳ ಮೇಲೆ ಇಲಿಗಳು ಕಚ್ಚುತ್ತಿದ್ದವಂತೆ...! ಅಬ್ಬಾ... ಆ ಹೆಣ್ಣುಮಗಳು ಬದುಕಿದ್ದೇ ಪವಾಡ...! ನೋವಿನ ನರಳಾಟಕ್ಕೆ ಬಹಳ ತಡವಾಗಿ ಪಕ್ಕದ ಗ್ರಾಮಸ್ಥರು ಸ್ಪಂದಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಕಾಲಿಗೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು. ಅನಸ್ತೇಷಿಯಾ ಕೊಡುವ ವೈದ್ಯರಿರಲಿಲ್ಲ. ಅವಳೇ ಧೈರ್ಯ ತುಂಬಿದಳು ಆಸ್ಪತ್ರೆಯ ವೈದ್ಯರಿಗೆ. ಯಾವುದೇ ಅರಿವಳಿಕೆ ಮದ್ದು ನೀಡದೆ ಕಾಲಿಗೆ ಶಸ್ತ್ರಚಿಕಿತ್ಸೆ...! ಅವಳನ್ನು ನೋಡಲು ಬಂದವರೆಲ್ಲಾ ಆತ್ಮಹತ್ಯೆಯ ಪ್ರಯತ್ನ ಎಂದು ಸುದ್ದಿ ಹಬ್ಬಿಸಿದರು. ಮಾಧ್ಯಮಗಳೂ ಇದನ್ನೇ ಬಿತ್ತರಿಸಿದವು. ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಪವಾದಗಳು ಛಲವನ್ನು ಕಟ್ಟಿಕೊಟ್ಟವು. ಬದುಕಿನ ಮೇಲೆ ತನಗಿದ್ದ ಅದಮ್ಯ ಪ್ರೀತಿಯನ್ನು ಜಗತ್ತಿಗೆ ತೋರಿಸಬೇಕಿತ್ತು. ಎರಡು ವರ್ಷಗಳ ಚೇತರಿಕೆಯ ನಂತರ ಕೃತಕ ಕಾಲುಗಳೊಂದಿಗೆ ಆಸ್ಪತ್ರೆಯಿಂದ ತೆರಳಿದ ಈ ದಿಟ್ಟೆ ಮನೆಗೆ ಹೋಗಲಿಲ್ಲ. ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಬಚೇಂದ್ರಿ ಪಾಲ್ ನ್ನು ಭೇಟಿಯಾದಳು.
ನೆಹರೂ ಇನ್ಸ್ಟಿಟ್ಯೂಟ್ ಆಫ್ ಮೌಂಟೆನೇರಿಂಗ್ ನಲ್ಲಿ ತರಬೇತಿ ಪಡೆದಳು. ಎವರೆಸ್ಟ್ ಏರುವ ಹಾದಿ ಅತ್ಯಂತ ಭೀಕರವಾಗಿತ್ತು. ಸಾವಿನಂಚಿಗೂ ತೆರಳಿದ್ದಳು. ಕೃತಕ ಕಾಲು ಸಹಕರಿಸಲಿಲ್ಲ. ಆಮ್ಲಜನಕದ ಕೊರತೆ ಉಂಟಾಯಿತು. ಹೋರಾಟದ ಕಠಿಣ ಹಾದಿಗಳನ್ನು ಜಯಿಸಿದ ಧೀರೆ ಜಗತ್ತಿನ ಅತ್ಯಂತ ಎತ್ತರದ ಪರ್ವತ ದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿ ಗೆಲುವಿನ ನಗೆ ಬೀರಿದಳು. ಪರ್ವತವನ್ನು ಇಳಿವ ದಾರಿಯೂ ಅತ್ಯಂತ ಪ್ರಯಾಸದಾಯಕವಾಗಿತ್ತು. ನಿಶ್ಚಲ ಗುರಿ ಸಾಧನೆಗೆ ಕಾರಣವಾಯಿತು.
ಅರುಣಿಮಾ ಸಿನ್ಹಾ.....! ಉತ್ತರ ಪ್ರದೇಶದ ಅಂಬೇಡ್ಕರ್ ನಗರದವರು. ಇವರು ಬದುಕಿನ ಅದ್ಭುತ! ಮೌಂಟ್ ಎವರೆಸ್ಟ್ ಏರಿದ ಮೊದಲ ವಿಕಲಾಂಗ ಮಹಿಳೆ..! ಸಾಧನೆಗಳನ್ನು ತನ್ನ ಹೆಸರಲ್ಲಿ ದಾಖಲಿಸುತ್ತಾ, ದೇಶ ನೀಡುವ ಅತ್ಯುನ್ನತ ಪ್ರಶಸ್ತಿಗಳಾದ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಗಳಿಗೆ ಭಾಜನರಾದರು. ಲಿಮ್ಕಾ ಬುಕ್ ಆಫ್ ರೆಕಾರ್ಡ್ ಲ್ಲಿ ಸೇರಿಕೊಂಡರು.
ಮೌಂಟ್ ಎವರೆಸ್ಟ್ ಗೆ ನಿಲ್ಲಿಸಲಿಲ್ಲ. ಆಫ್ರಿಕಾದ ಕಿಲಿಮಂಜಾರೋ, ರಷ್ಯಾದ ಮೌಂಟ್ ಎಲ್ಬ್ರಸ್ ಸೇರಿದಂತೆ ಸುಮಾರು 6 ಪರ್ವತಗಳ ತುತ್ತ ತುದಿಯಲ್ಲಿ ಯಶಸ್ವಿ ಹೆಜ್ಜೆಯೂರಿದ್ದಾರೆ. ಈಕೆಯ ಕುರಿತಾದ ಕಥೆ ಹೇಳಿದಷ್ಟೂ ಮುಗಿಯದು...!
ಬದುಕಿನ ಸಣ್ಣ ಕಷ್ಟಗಳಿಗೆ ಹೆದರಿ, ಸಮಸ್ಯೆಗಳನ್ನು ಎದುರಿಸಲಾಗದೆ ಹಿಂದೆ ಸರಿಯುವ ಮನಸ್ಸು ಗಳಿಗೆ ಅತ್ಯಂತ ದೊಡ್ಡ ಸ್ಫೂರ್ತಿ ಅರುಣಿಮಾ ಸಿನ್ಹಾ...!
ಇವರ ಕುರಿತು ಹೆಚ್ಚಿನ ಮಾಹಿತಿಗಳನ್ನು ಓದಿನ ಮೂಲಕ ತಿಳಿದುಕೊಳ್ತೀರಿ ಅಲ್ವಾ...? ಅಕ್ಕಾ... ಚಂದದ ಕಥೆ ಹೇಳಿ ಅಂತಾ ಮೊನ್ನೆ ಲಹರಿ ಹೇಳಿದ್ದು ನೆನಪಾಯಿತು. ಕಳೆದ ಬಾರಿಯ ಪತ್ರಕ್ಕೆ ಉತ್ತರಿಸಿದ ವೈಷ್ಣವಿ ಕಾಮತ್, ಭವ್ಯಶ್ರೀ, ಧನ್ಯಶ್ರೀ,
ಶಿಶಿರ್, ಪೂಜಾ, ಧನ್ವಿ ರೈ, ಸಾನ್ವಿ ಸಿ.ಎಸ್, ಪ್ರಣಮ್ಯ, ಸಿಂಚನಾ ರೈ, ನಿಭಾ... ಎಲ್ಲರಿಗೂ ನನ್ನ ಪ್ರೀತಿಯ ವಂದನೆಗಳು.
ಅರುಣಿಮಾ ಅವರೊಂದಿಗಿನ ಈ ದಿನದ ಪಯಣ ಹೇಗನ್ನಿಸಿತು? ಬರೆದು ಕಳಿಸ್ತೀರಲ್ಲಾ..?
ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************